ಅಮ್ಮನ ಸೀರೆಯ ಸೆರಗು….~✍️ ಕ್ಷಮಾ ರಘುರಾಮ್ 

ಅಮ್ಮನೇ ಮೊದಲ ಗುರು. ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಅಳುವೊಂದನ್ನು ಬಿಟ್ಟರೆ ಬೇರೇನೂ ಅರಿಯದ ಹಸುಗೂಸೆಂಬ ಮಾಂಸ ಮುದ್ದೆಯನ್ನು ಸಮಾಜದ ಒಬ್ಬ ಸದಸ್ಯನನ್ನಾ ಗಿಸುವ ಅವಳ ಮಡಿಲು ಮೊದಲ ಪಾಠ ಶಾಲೆ. ಅಮ್ಮಾ ಎಂಬ ಎರಡಕ್ಷರದ ನುಡಿಯಿಂದ ತೊಡಗುವ ಕಲಿಕೆ ಮುಂದೆ ವಿದ್ಯಾಭ್ಯಾಸಕ್ಕೆ ಮೆಟ್ಟಿಲು.

ಅಮ್ಮನ ನೆನೆದರೆ ಹೃದಯದಲ್ಲಿ ಬೆಚ್ಚನೆಯ ಅನುಭೂತಿ ಉಂಟಾಗುತ್ತದೆ . ಅಮ್ಮ ನಿನ್ನ ಎದೆ ಯಾಳದಲ್ಲಿ…. ಹಾಡು ಕೇಳುತ್ತಿದ್ದಂತೆ ಅಮ್ಮನ ನೆನಪಿನ ಮುಂದೆ ಅವಳ ಸೀರೆಯ ಜೊತೆಗಿನ ಬಿಡಿಸಲಾಗದ ನಂಟು ಸಹ ಎದೆಯನ್ನು ಮೀಟುತ್ತದೆ.

ಅಪ್ಪ ಇಪ್ಪತ್ತು ವರ್ಷದ ಹಿಂದೆ ಕಾಣದ ಲೋಕಕ್ಕೆ ಸಾಗಿದರೆ ಅಮ್ಮ ತವರಿನಲ್ಲಿ ತನ್ನ ಮಕ್ಕಳು ಮೊಮ್ಮಕ್ಕಳೊಂದಿಗೆ ಸಂತೋಷವಾಗಿದ್ದಾರೆ. ಆದರೇ..ಮದುವೆಯಾಗಿ ದೂರದ ಊರಿಗೆ ಬಂದ ನನಗೆ ಅಮ್ಮನ ಪ್ರೀತಿಯೊಂದಿಗೆ ಅಮ್ಮನ ಸೀರೆಯ ಸೆರಗು ವಾತ್ಸಲ್ಯದಲ್ಲಿ ಬೆಸೆದುಕೊಂಡಿದೆ .

ಮಡಿಲಲ್ಲಿ ಮಗುವಾಗಿದ್ದಾಗ ಸೆರಗಿನೊಂದಿಗೆ ಆಟವಾಡುತ್ತಾ…ಹಠ ಬಂದಾಗ ಸೆರಗನ್ನೆ ಜಗ್ಗಿ ಹಿಡಿದೆಳೆದಾಗ ಆ ಸೆರಗಿನಿಂದಲೇ ಕಣ್ಣೊರೆಸಿದ್ದೂ…. ತುತ್ತು ಉಣಿಸಿದ ಮೇಲೆ ತೃಪ್ತಿಯಿಂದಲೇ ಬಾಯಿ ಒರೆಸಿದ್ದೂ……ಬಿದ್ದಾಗ ಮೊಣಕಾಲಿಗಾದ ಮಣ್ಣನ್ನು ಝಾಡಿಸಿದ್ದು ಅವಳದ್ದೆ ಸೀರೆಯ ಸೆರಗು….!! . ಮುಂದೆ ಬೆಳೆದಂತೆಲ್ಲಾ ಅವಳದ್ದೆ ಸೀರೆ ಉಟ್ಟು ತೊಡರುತ್ತಾ ನಡೆದಿದ್ದೂ… ಇದೆಲ್ಲಾ ಅಮ್ಮನ ಸೀರೆಯ ಮೋಡಿಯೇ….ತಾನೇ!!

ಮೊನ್ನೆ ತವರಿಗೆ ಹೋದಾಗ ಅಮ್ಮ ಕೊಟ್ಟ ಹಳೆಯ ಸೀರೆ ಇಂದು ಮಾರುಕಟ್ಟೆಯಲ್ಲಿ ದೊರೆಯುವ ಆಧುನಿಕ ವಿನ್ಯಾಸದ ನವೀನ ಮಾದರಿಯ ಸೀರೆಯನ್ನು ಮೀರಿಸುವಂತದ್ದೂ….ಅಮ್ಮನ ಸೀರೆ ಯೆಂದರೆ….ಅದು ಬರೀ ಆರು ಮೊಳದ ಸೀರೆಯಲ್ಲ, ಅದರಲ್ಲಿ ಅವಳ ಉಸಿರಿದೆ. ಅವಳ ಬೆವರಿದೆ .ಮೈಯ ಘಮಲಿದೆ. ವಾತ್ಸಲ್ಯದ ಮೆರುಗಿದೆ.

ಅಮ್ಮನ ಬಗೆಗಿನ ಅಪ್ಪನ ಪ್ರೀತಿಯಿದೆ ಅಪ್ಪನ ಬೆವರಿದೆ. ಚಳಿಗಾಲ ಮಳೆಗಾಲದಲ್ಲಿ, ಹಾಸಲು, ಹೊದೆಯಲು , ಅಮ್ಮನ ಹಳೆಯ ಸೀರೆಗಳನ್ನು ಒಟ್ಟು ಗೂಡಿಸಿ ತಯಾರಿಸಿದ ಮೃದುವಾದ ಕೌದಿ ಎಲ್ಲಾ ಕಾಲಕ್ಕೂ ಅವಳ ಪ್ರೀತಿಯನ್ನೆ ತುಂಬುವಂತಿತ್ತು.

ಮಧುರವಾದ ಅನುಭೂತಿಯನ್ನು ನೀಡುತ್ತಿತ್ತು. ಯೋಚಿಸುತ್ತಾ….ಕುಳಿತ ನನಗೆ ಅವಸರವಾಗಿ ಅತ್ತೆಮ್ಮಾ…. ಎಂದು ಬಾಗಿಲು ತಟ್ಟಿದ ಶಬ್ದ… ನೋಡಿದರೆ ನೋಡಿದರೆ ಅಮ್ಮನ ಮೊಮ್ಮಗಳು ಆರುಷಿ ಸೀರೆ ಉಟ್ಟುಕೊಂಡು ಅಪ್ಪಿ ಗೊಂದಲಮೂಡಿಸಿದ್ದಳು. ಅಮ್ಮನ ಸೀರೆಯ ವ್ಯಾಮೋಹಕ್ಕೆ ಮತ್ತಷ್ಟು ಬಿಗಿ ಮುದ್ರೆ ಬಿದ್ದಂತಾಯಿತು.

ಅಮ್ಮಾ ಇನ್ನು ನಾನು ಏನು ಬರೆಯಲಿ…. ನಾನು ಹೇಳುವುದು ಇಷ್ಟೇ…!!

ಅಮ್ಮಾ ನಿನ್ನ ಹೊಟ್ಟೆಯಲ್ಲಿರುವಾಗ ನಾನು ಚೆನ್ನಾಗಿದ್ದೆ. ನೀನು ಹೋದ ಕಡೆಯೆಲ್ಲಾ ನಾನು ಜೊತೆಯಾಗಿಯೇ ಬರುತ್ತಿದ್ದೆ…. ನೀನು ತಿಂದಿದ್ದನ್ನು ನಾನು ತಿನ್ನುತ್ತಿದ್ದೆ…. ನೀನು ಉಸಿರಾಡಿ ದರೇ…ನಾನು ಉಸಿರಾಡುತ್ತಿದ್ದೆ. ನೀನು ಮರುಗಿದರೆ ನಾನು ಮರುಗುತ್ತಿದ್ದೆ.

ಆ ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಇಟ್ಟುಕೊ಼ಂಡ ಮಹಾ ತಪಸ್ವಿ ನೀನು . ನಿನ್ನನ್ನು ನೆನೆದರೆ ತಾಯಿ ನಿನ್ನ ಉಪಕಾರವನು ಮರೆಯಲೆಂತು ನಾನು…. ಎಂಬ ಗೀತೆ ನೆನಪಿಗೆ ಬರುವುದು . ಅಮ್ಮಾ ನಿನ್ನ ಸ್ಥಾನ ಜಗತ್ತಿಗೆ ದೊಡ್ಡದು… ನೀನೊಬ್ಬಳು ಶಕ್ತಿಧಾತೆ….ಸ್ಪೂರ್ತಿಧಾತೆ….!

 

 
 
 
 
 
 
 
 
 
 
 

Leave a Reply