ಅಮೆರಿಕಾದಲ್ಲಿ ಡಾ. ವಿದ್ಯಾಭೂಷಣರ ಸಂಗೀತ ಸುಧೆ – ಸಾಧನೆಗೆ ಐವತ್ತರ ಮೆರುಗು~ ಶ್ರೀವತ್ಸ ಬಲ್ಲಾಳ

ವಿದ್ಯಾಭೂಷಣರಿಗೆ ವಿದ್ಯಾಭೂಷಣರೇ ಸಾಟಿ ಎನ್ನುವ ಮಾತಿಗೆ ಜುಲೈ ಎಂಟರಂದು ನ್ಯೂ ಜೆರ್ಸಿಯ ಶ್ರೀ ಕೃಷ್ಣ ವೃಂದಾವನದಲ್ಲಿ ನಡೆದ ಸಂಗೀತ ಸುಧೆಗೆ ಕಿಕ್ಕಿರಿದು ಸೇರಿದ್ದ ಶ್ರೋತೃ ವರ್ಗದ ಕಣ್ಣಾಲಿಗಳಲ್ಲಿ ಅನಾಯಾಸವಾಗಿ ಹೊರಹೊಮ್ಮಿದ ಭಾಷ್ಪವೇ  ಸಾಕ್ಷಿ. ಒಂದೆಡೆ, ದಾಸ ಸಾಹಿತ್ಯ ಮತ್ತದರ ಶ್ರೇಷ್ಠ ಪರಂಪರೆಯೇ ನೆರೆದ ಶ್ರೋತೃ ವರ್ಗವನ್ನು ಮಾನಸಿಕವಾಗಿ ನೇರ ವೈಕುಂಠ ಲೋಕಕ್ಕೇ ಕರೆದೊಯ್ಯುವ ಅಸಾಧಾರಣ  ಸಾಮರ್ಥ್ಯವುಳ್ಳದ್ದಾದರೆ ಇನ್ನೊಂದೆಡೆ ವಿದ್ಯಾಭೂಷಣರ ಭಕ್ತಿ-ಭಾವ ತುಂಬಿದ ಅಸಾಧಾರಣ ಸಂಗೀತ  ಮತ್ತು ಹರಿ-ಗುರು ಚರಣಗಳಲ್ಲಿ ಅವರಿಡುವ ಅನನ್ಯ ಭಕ್ತಿ  ಎಂಥಾ ನಾಸ್ತಿಕನ ಮನಸ್ಸನ್ನೂ ಬೆಣ್ಣೆಯಂತೆ ಕರಗಿಸುವ ಅಪೂರ್ವ ಶಕ್ತಿಯುಳ್ಳದ್ದು.

ಇಂಥಾ ಸುಕೋಮಲ ಮುಗ್ದ ಮೃದು ಮನಸಿನ ವಿದ್ಯಾಭೂಷಣರ ಸಂಗೀತ ಸಾಧನೆಗೆ ಐವತ್ತು ತುಂಬಿದೆ ಎನ್ನುವ ವಿಷಯವೇ  ಅವರ ಅಭಿಮಾನಿಗಳಿಗೆ, ಸಂಗೀತಾಸಕ್ತರಿಗೆ ಮತ್ತು ಸಮಸ್ತ ಭಾರತೀಯರಿಗೆ ಹೆಮ್ಮೆ ಸಂತೋಷ ಅಭಿಮಾನಗಳನೆಲ್ಲ ಏಕಕಾಲಕ್ಕೆ ಉಂಟು ಮಾಡುವಂಥಾದ್ದು. ಅಷ್ಟೇಕೆ, ವಿದ್ಯಾಭೂಷಣರ ಸಾಧನೆಗೆ ಕಳಶಪ್ರಾಯ ವೆಂಬಂತೆ ಭಾರತೀಯ ಪರಂಪರೆ, ಸಂಸ್ಕೃತಿ, ದಾಸ ಸಾಹಿತ್ಯ, ಸಂಗೀತ, ಭಕ್ತಿ-ಭಾವ ಇವೆಲ್ಲವೂ ತೀರಾ ಅಪರಿಚಿತ ವೆಂದೇ ಹೇಳಬಹುದಾದ  ವಿಸ್ಕಾನ್ಸಿನ್ ರಾಜ್ಯದ ಬ್ರೂಕ್ ಫೀಲ್ಡ್ ಎನ್ನುವ  ಪುಟ್ಟ ನಗರದ ಮೇಯರ್ ಓರ್ವರು ಇನ್ನು ಮುಂದೆ ಜುಲೈ 3ನೇ ದಿನವನ್ನು “ವಿದ್ಯಾಭೂಷಣ ಸಂಗೀತ ದಿವಸ”ವೆಂದು (Vidyabhushana Music Day) ಘೋಷಣೆ ಮಾಡಿ ಸಭೆಯ ಅಂತ್ಯದಲ್ಲಿ ಮಾನಪತ್ರ ನೀಡಿ ವಿದ್ಯಾಭೂಷಣರನ್ನು ಸಮ್ಮಾನಿಸಿದಾಗ ಇಡೀ ಸಭೆಯೇ ಮಾತ್ರವಲ್ಲ, ಜಗತ್ತಿನುದ್ದಗಲಕ್ಕೂ ಹರಡಿರುವ ವಿದ್ಯಾಭೂಷಣರ ಅಭಿಮಾನಿಗಳೆಲ್ಲ ತಾವೇ ಸಂಮಾನಪಟ್ಟವರಂತೆ ಸಂತಸಪಟ್ಟದ್ದು ಅಂದಿನ ಅವಿಸ್ಮರಣೀಯ ಘಟನೆಗೆ ಸಾಕ್ಷಿಯಾಯಿತು.

ಹಿಂದೊಮ್ಮೆ ಜರ್ಮನಿಯ ಪ್ರಜೆಯೊಬ್ಬರು ಕೇವಲ ವಿದ್ಯಾಭೂಷಣರ ಹಾಡಿನ ಧಾಟಿಗೆ ಮನಸೋತು ಅವರನ್ನು ಜಗದ್ದುದಗಲಕ್ಕೂ ಹುಡುಕಿಕೊಂಡು ಹೋಗಿ, ನಡುವೆ ಇದೋರ್ವ ಬಾಂಗ್ಲಾದೇಶಿ ಹಾಡುಗಾರನಿರಬೇಕು ಎಂದು ತಪ್ಪಾಗಿ ಗ್ರಹಿಸಿ ಕೊನೆಗೆ ವಿದ್ಯಾಭೂಷಣರ ಸಂಪರ್ಕಕ್ಕೆ ಬಂದದ್ದೂ ಒಂದು ರೀತಿಯಲ್ಲಿ ಅವರ ದೇಶ-ಭಾಷೆ-ಗಡಿ-ಸಂಸ್ಕೃತಿಗಳನ್ನು ಮೀರಿದ ಸಂಗೀತ ಸಾಧನೆಗೆ ಹಿಡಿದ ಕನ್ನಡಿ. ಅದೇ ಸಾಧನೆಯೇ ಇಂದು ಅಮೆರಿಕಾದ ಒಂದು ರಾಜ್ಯದಲ್ಲಿರುವ ನಗರದ ಮೇಯರ್ ಅವರಿಂದ ಸಂದ ಗೌರವಕ್ಕೂ ಕಾರಣವಾಯಿತು ಎನ್ನುವುದೇ ಒಂದು ಹೆಮ್ಮೆ.      

ವಿದ್ಯಾಭೂಷಣರ ನೆನಪೇ ಸಂಗೀತ ಎನ್ನುವ ಬರಹ ರೂಪದಲ್ಲಿ ಹೊರಬಂದ ಅವರ ಆತ್ಮಕಥನದಲ್ಲಿ, ಬಾಲ್ಯದಿಂದಲೇ ವಿದ್ಯಾಭೂಷಣರು ಸಂಗೀತ ಸಾಧನೆಗೆ ಮೊದಲಾದದ್ದು, ವೇದ, ಪುರಾಣ, ಉಪನಿಷತ್ತು ಮತ್ತಿನ್ನಿತರ ಶಾಸ್ತ್ರಾಧ್ಯಯನದ ಒತ್ತಡದ ನಡುವೆಯೂ ಹೇಗೆ ಅವರ ಸಂಗೀತದ ಒಲವು, ಅದರ ಅದಮ್ಯ ಸೆಳೆತ  ಅವರನ್ನು ಕರ್ನಾಟಕ ಸಂಗೀತ ಕ್ಷೇತ್ರ ಅದರಲ್ಲೂ ದಾಸ ಸಾಹಿತ್ಯದ ಬಗ್ಗೆ ವಿಶೇಷ ಸಾಧನೆ ಮಾಡಿದ ಆಧುನಿಕ ಹರಿಕಾರನನ್ನಾಗಿಸಿತು ಎನ್ನುವುದರ ಬಗ್ಗೆ ಅನೇಕ ಸುಂದರ ಒಳನೋಟಗಳಿರುವ ತುಣುಕುಗಳು ಕಾಣಸಿಗುತ್ತವೆ.

ಒಂದು ನೋಟದಲ್ಲಿ ವಿದ್ಯಾಭೂಷಣರು ಅವರ ಬದುಕನ್ನೇ ಮುಡಿಪಾಗಿಟ್ಟಿರುವುದು ಹರಿದಾಸ ಸಾಹಿತ್ಯದ ಹರಿಕಾರ ನಾಗಲಿಕ್ಕೆ ಮತ್ತು ದಾಸ ಸಾಹಿತ್ಯವನ್ನು ಇನ್ನಷ್ಟೂ ಮತ್ತಷ್ಟೂ ಜನರಿಗೆ ಹತ್ತಿರವಾಗಿಸುವಲಿಕ್ಕೆ ಎನ್ನುವುದು ಅವರ ಆ ನಿಟ್ಟಿನಲ್ಲಿ ನಡೆಯುವ ನಿರಂತರವಾದ ಪ್ರಯತ್ನ ಎತ್ತಿ ತೋರಿಸುತ್ತದೆ. ಅವರ ನೆನಪೇ ಸಂಗೀತದ ಕೊನೆಯ ಭಾಗದಲ್ಲಿ ಸೋದೆಯ ಗುರುಗಳಾದ  ವಾದಿರಾಜರ ಮಾತಿನಲ್ಲಿ ಹೊರಬಂದ ಕಥೆಯೊಂದನ್ನು ವಿದ್ಯಾಭೂಷಣರು ಪ್ರಸ್ತಾಪಿಸುವಾಗ  ಆ ಹರಿಯ ಮೇಲಿನ ಅವರ ಅನನ್ಯ ಭಕ್ತಿ, ನಿಶ್ಶರ್ತ ಪ್ರೀತಿ  ಮತ್ತು ಭಗವಂತನ ಕಾರುಣ್ಯದ ಮುಂದೆ ತಾನೊಂದು ಯಾವ ಸಮಾನವೂ ಅಲ್ಲ ಎನ್ನುವ ಅವರ ಅತ್ಯಂತ ಭಾವುಕ ಸಂವೇದನೆ ನಿಚ್ಚಳವಾಗುತ್ತದೆ.

ಹರಿದಾಸರು ಬರೆದ ಪ್ರತಿಯೊಂದು ಪದದ ಅಂತಃಸತ್ವವನ್ನು ಅರಿತು ಅದೇ ಮಾರ್ಗದಲ್ಲಿ, ಪಥದಲ್ಲಿ ಭಕ್ತಿ-ವಿರಕ್ತಿಗಳೆರಡೂ ಸೇರಿದಂತೆ ಪ್ರತೀ ಕ್ಷಣವನ್ನೂ ಹರಿಯ ಸೇವಕನಾಗಿ ನಡೆಯುವ, ನಡೆದುಕೊಳ್ಳುವ ವಿದ್ಯಾಭೂಷಣರಿಗೆ ವಿದ್ಯಾಭೂಷಣರೇ ಸಾಟಿ ಎಂದು ಇದಕ್ಕೇ ಅಂದದ್ದು.  ನಿನ್ನೆಯ ಸನ್ಮಾನವನ್ನು ಸ್ವೀಕರಿಸಿದಾಗಲೂ ವಿದ್ಯಾಭೂಷಣರ ಭಕ್ತಿ-ವಿರಕ್ತಿ ಹಾಗೂ ವಿನಯತೆ-ಸಹೃದಯತೆ ಇವೆರಡೂ ಅವರ ಮಾತಿನಲ್ಲಿ ವ್ಯಕ್ತವಾದದ್ದು  ಕಿಕ್ಕಿರಿದ ಶ್ರೋತೃವರ್ಗವನ್ನು ಮೂಕವಿಸ್ಮಿತ ರನ್ನಾಗಿಸಿದ್ದೂ ಸುಳ್ಳಲ್ಲ.

ಓರ್ವ ಭಕ್ತನಿಗೆ ಈ ಮಾನಪತ್ರ, ಬಿರುದು-ಬಾವಲಿಗಳಾವುದೂ ಇರಬಾರದು, ಅವನಿಗೆ ಹರಿಸೇವೆ ಯೊಂದೇ ಮುಖ್ಯ ಗುರಿಯಾಗಿರಬೇಕು. ಆದರೆ ಈ ದೇಶದ ಸರಕಾರದ, ಜನರ ಪ್ರೀತಿಗೆ ತನ್ನ ಕೃತಜ್ಞತೆಯನ್ನು ಸಲ್ಲಿ ಸುತ್ತಾ ಅತ್ಯಂತ ವಿನಯಪೂರ್ವಕವಾಗಿ ಮೇಯರ್ ಓರ್ವರು ಕೊಡಮಾಡಿದ ಗೌರವವನ್ನು ಸ್ವೀಕರಿಸಿದಾಗ ಇಡೀ ಸಭಾಂಗಣವೇ ಎದ್ದುನಿಂತು ವಿದ್ಯಾಭೂಷಣರಿಗೆ ಸಂದ ಗೌರವಕ್ಕೆ ಸಾಕ್ಷಿಯಾಯಿತು.  

ಸಂಗೀತ ಸುಧೆ: ವಿದ್ಯಾಭೂಷಣರ ಸಂಗೀತ ಸಾಧನೆಗೆ ಇದೀಗ ಐವತ್ತು ತುಂಬಿ ಐವತ್ತೊಂದರ ಹೊಸಿಲಲ್ಲಿ ನಿಂತಿರುವ ಸಂಭ್ರಮ. ಉಡುಪಿಯ ಕೃಷ್ಣನ ಸೇವೆಗೆಂದು ರೆಕಾರ್ಡ್ ಮಾಡಿದ “ಉದಯರಾಗ”ದಿಂದ ಮೊದಲ್ಗೊಂಡ ಅವರ ಅಂದಿನ ಸಂಗೀತ ಸಾಧನೆಯ ಪಯಣ ಮುಂದೆ ಅವರದೇ ಅತ್ಯಂತ ಜನಪ್ರಿಯವಾದ “ನಮ್ಮಮ್ಮ ಶಾರದೆ”, “ಪಿಳ್ಳಂಗೋವಿಯ” ಹಾಡಿನ ರೆಕಾರ್ಡುಗಳಿಂದ ಕರ್ನಾಟಕದ್ದುದ್ದಗಲಕ್ಕೂ ಮತ್ತು ದೇಶ-ವಿದೇಶಗಳಲ್ಲಿ, ಮನೆ-ಮನೆಗಳಲ್ಲಿ, ಜನಮಾನಸದಲ್ಲಿ ಅವರನ್ನು ಚಿರಪರಿಚಿತರನ್ನಾಗಿಸಿದ್ದು ಇಂದು ಇತಿಹಾಸ.

ಆರಂಭದಲ್ಲಿ ವಿಘ್ನರಾಜನಿಗೆ ವಂದಿಸುತ್ತಾ ವಿದ್ಯಾಭೂಷಣರ ಸ್ವರದಲ್ಲಿ ಹಂಸಧ್ವನಿ ರಾಗದಲ್ಲಿ  ಮೂಡಿಬಂದ “ಕಡುಕರುಣಿ ನೀನೆಂದರಿದು ಹೇ- ರೊಡಲ ನಮಿಸುವೆ ನಿನ್ನಡಿಗೆ” ಎನ್ನುವ ಜಗನ್ನಾಥದಾಸರ ಚಿರಪರಿಚಿತ ರಚನೆ ಮುಂದಿನ ಮೂರು ಘಂಟೆಗಳ ಅವಧಿಯ ವಿಶಿಷ್ಟ ಸಂಗೀತ ಸುಧೆಗೆ, ಅವರ ಸಂಗೀತ ಸಾಧನೆಯ ಐವತ್ತು ವರುಷಗಳ ಸಂಭ್ರಮಕ್ಕೆ ಅತ್ಯಂತ ಸೂಕ್ತವಾದ ಆರಂಭವನ್ನು ನೀಡಿತ್ತು.  ಮುಂದಿನದ್ದು ಒಂದು ವಿಶಿಷ್ಟ ವಾದ್ಯ ಸಂಗೀತ ಪ್ರದರ್ಶನ.

ಅಂದು ವಿದ್ಯಾಭೂಷಣರನ್ನು ಜನಪ್ರಿಯತೆಯ ತುತ್ತ ತುದಿಗೇರಿಸಿದ್ದ “ನಮ್ಮಮ್ಮ ಶಾರದೆ”ಯ ಸ್ವರವನ್ನು ಸಿತಾರ್, ವಯೊಲಿನ್, ಕೊಳಲು, ಕೀಬೋರ್ಡ್, ತಬಲಾ ಮತ್ತು ರಿಥಮ್ ಪ್ಯಾಡ್ ಒಳಗೊಂಡ ಸಿಂಫೊನಿ ಮಾದರಿಯಲ್ಲಿ ಕೇಳಿದಾಗ ಇಡೀ ಸಭಾಂಗಣವೇ ರೋಮಾಂಚನಗೊಂಡು ಮೂಕವಿಸ್ಮಿತವಾಗಿತ್ತು. ಇಂಗ್ಲೀಷಿನಲ್ಲಿ ಬರೆಯುವುದಾದರೆ “an electrifying performance” ಎಂದು ಸೂಕ್ತವಾಗಿ ಹೇಳಬಹುದು. ಸಿಂಫೊನಿ ಮುಗಿದು ಕಲ್ಯಾಣಿ ರಾಗದಲ್ಲಿ ಧನ್ಯತೆಯ ಮೇರುಸಾಲಿನಲ್ಲಿ ನಿಂತಿರುವ ಪುರಂದರ ದಾಸರ ಕೃತಿ “ದಯಮಾಡೋ ರಂಗಾ”  ಬಂದಾಗ ಅನೇಕರ ಕಣ್ಣಂಚಿನಲ್ಲಿ ನೀರು ಆಗಲೇ ಜಿನುಗಲಾರಂಭಿಸಿತ್ತು.

ಮುಂದೆ ಕೇಳಿ ಬಂದದ್ದು ದ್ವಾದಶ ಸ್ತೋತ್ರದ “ಪ್ರೀಣಯಾಮೋ ವಾಸುದೇವಂ” ಮತ್ತು ಬನ್ನಂಜೆ ಗೋವಿಂದಾ ಚಾರ್ಯರಿಂದ ಆದಂತಹ ಅದೇ ಕೃತಿಯ ಕನ್ನಡ ಅನುವಾದದ ಭಾಗ “ಆನಂದ ತೀರ್ಥರಿಗೆ ತುಂಬು ಸಂತಸವೆಂಬ ವರವಿತ್ತ ದೈವತವೆ ನಿನಗೆ ನಮನಂ”.  ಈ ಎರಡೂ ಕೃತಿಗಳ ಪ್ರಸ್ತುತಿ ಒಂದು ನವ್ಯ ಶೈಲಿಯ ಸಿಂಫೊನಿಯೊಂದಿಗೆ ಮೂಡಿ ಬಂದದ್ದು ಆಸ್ತಿಕ ಸಭಿಕರಿಗೆಲ್ಲ ಶ್ರೀಕೃಷ್ಣನ ದರ್ಶನ ಭಾಗ್ಯದ ಕಲ್ಪನೆಗೆ ಸೇತುವೆಯನ್ನೇ ನಿರ್ಮಿಸಿತು.

ಸಂಗೀತ ಸುಧೆ   ಮುಂದುವರೆಯುತ್ತಾ ಹಿಂದೋಳ ರಾಗದಲ್ಲಿ ಕನಕದಾಸರ ಕೃತಿ “ದಾಸ ದಾಸರ ಮನೆಯ”ಗೆ ಕಾಲಿಟ್ಟಾಗಲಂತೂ ತಲೆದೂಗದಿದ್ದವರೇ ಇರಲಿಲ್ಲ ಎನ್ನಬಹುದು. ಸಭೆಯ ಮೊದಲಾರ್ಧದ ಕೊನೆಯಲ್ಲಿ ವ್ಯಾಸತೀರ್ಥರ ರಚನೆ “ಕೃಷ್ಣಾ ನೀ ಬೇಗನೆ ಬಾರೋ” ರಾಗ ಯಮನ್ ಕಲ್ಯಾಣಿಯಲ್ಲಿ ಶುರುವಾದಾಗಲಂತೂ ನೆರೆದಿದ್ದ ಸಭಿಕರಿಗೆಲ್ಲ ಸಂತಸದ ಪರಾಕಾಷ್ಠೆಯ ಅನುಭವ. ಕಿವಿಗಡಚಿಕ್ಕುವ ಚಪ್ಪಾಳೆ. ವಿದ್ಯಾಭೂಷಣರ ಸ್ವರ ಮಾಧುರ್ಯ, ಅವರ ಸಾಧನೆಯ ಹಿಂದಿನ ಪರಿಶ್ರಮ ಕರ್ನಾಟಕ ಸಂಗೀತದ ಸ್ವರಜ್ಞಾನವಿದ್ದವರಿಗೆಲ್ಲಾ ಸೂಕ್ಷ್ಮವಾಗಿಯೇ ಅನುಭವಕ್ಕೆ ಬಂದಿರಬೇಕು.

ಅಂಥಾ ಸುಮಧುರ, ಸುದೃಢವಾದ ಸ್ವರ ಮತ್ತು ಹಾಡಿನ ಶೈಲಿಯನ್ನು ಅತ್ಯಂತ ಜೋಪಾನವಾಗಿ ಕಳೆದೈವತ್ತು ವರ್ಷಗಳಿಂದ ಇಂದಿನವರೆಗೂ  ಕಾಪಾಡಿಕೊಂಡು ಬಂದಿರುವುದು ಅವರು ಮೂರು ಘಂಟೆಗಳಷ್ಟು ಕಾಲ ಶಾಸ್ತ್ರೀಯವಾಗಿ ಸಭೆ ನಡೆಸಲು ಸಾಧ್ಯವಾಗಿರುವುದರ ಹಿಂದಿನ ರಹಸ್ಯ. ಈ ಸಲದ ಸುಮಾರು ಎರಡು ತಿಂಗಳ ಅವಧಿಯ ಅಮೇರಿಕಾ ಪ್ರವಾಸದಲ್ಲಿ ದೇಶದುದ್ದಗಲಕ್ಕೂ ಹದಿನಾರು  ಕಡೆ ಪ್ರದರ್ಶನಗಳನ್ನು ನೀಡುವುದು ಎಂಥಾ ಸಾಧಕನ ಸಾಮರ್ಥ್ಯಕ್ಕೂ ಒಂದು ಸವಾಲೇ ಸರಿ ಎಂದರೆ ವಿದ್ಯಾಭೂಷಣರ ಸಾಧನೆಯ ಹಿಂದಿನ ಪರಿಶ್ರಮ ಎಷ್ಟಿರಬೇಡ ಹೇಳಿ?

ಮೊದಲಾರ್ಧ ಮುಗಿದು ಮುಂದಿನ ಹತ್ತು ನಿಮಿಷಗಳ ಕಾಲ ವಾದ್ಯವೃಂದದ ರಾಗಮಾಲಿಕೆಯ ಪ್ರಸ್ತುತಿ  ಇಡೀ ಸಭೆಯನ್ನು ಗಂಧರ್ವ ಲೋಕಕ್ಕೆ ಕರೆದೊಯ್ದಂತಿತ್ತು ಎಂದರೆ ಉತ್ಪ್ರೇಕ್ಷೆಯಲ್ಲ. ಅಂಥಾ ಮೈನವಿರೇಳಿಸುವ ಸಿತಾರ್-ವಯೊಲಿನ್-ಕೀ ಬೋರ್ಡ್-ಕೊಳಲು,ತಬಲಾ-ರಿಥಮ್ ಪ್ಯಾಡ್ ನಿಂದ ಒಳಗೊಂಡ ಪ್ರಸ್ತುತಿಯಾಗಿತ್ತು ಅದು. ಮ್ಯೂಸಿಕ್ ಮ್ಯಾನ್ಶನ್ ಮತ್ತು ಗ್ರಾಂಡ್ ಸಿತಾರ್ ಸಿಂಫೊನಿ ತಂಡದ ಸದಸ್ಯರ ಪ್ರಸ್ತುತಿ ವಿದ್ಯಾಭೂಷಣರ ಅಮೆರಿಕಾ ಪ್ರವಾಸದ ಅವಧಿಯ ಸರಣಿ ಸಂಗೀತ ಕಾರ್ಯಕ್ರಮಗಳನ್ನೇ ಇನ್ನೊಂದು ಸ್ತರಕ್ಕೊಯ್ಯುವಂಥಾ ಸಾಮರ್ಥ್ಯವುಳ್ಳದ್ದು.

ಈ ಎರಡೂ ತಂಡಗಳ ಸದಸ್ಯರಾದ ಸಂದೀಪ್ ವಸಿಷ್ಠ (ಕೊಳಲು, ಸ್ಯಾಕ್ಸೋಫೋನ್), ವೇಣುಗೋಪಾಲ್ (ಕೀಬೋರ್ಡ್), ಕಾರ್ತಿಕ್ ಭಟ್ (ತಬಲಾ), ಪ್ರವೀಣ್ ಷಣ್ಮುಗಂ (ರಿಥಮ್ ಪ್ಯಾಡ್), ಸುಮಾರಾಣಿ, ಶ್ರುತಿ ಕಾಮತ್, ಶ್ರೀನಿವಾಸನ್ (ಮೂವರೂ ಸಿತಾರ್ ವಾದಕರು), ರಂಜನ್ ಬೆವುರ (ವಯೊಲಿನ್) ತಮ್ಮ ಅತ್ತ್ಯುನ್ನತ ಮಟ್ಟದ ಸಂಗೀತ ಜ್ಞಾನ ಮತ್ತು ಕೌಶಲತೆಯಿಂದ ಮತ್ತು ವಿದ್ಯಾಭೂಷಣರ ಕಡೆಗಿನ ಗೌರವ-ಒಲುಮೆಯಿಂದ ನಡೆಸಿಕೊಟ್ಟ ಕಾರ್ಯಕ್ರಮದ ಗುಣಮಟ್ಟವೇ ಶ್ರೇಷ್ಠವಾದದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ.

ಎರಡನೇ ಅವಧಿಯಂತೂ ಆರಂಭವಾದದ್ದೇ ನೆರೆದವರನ್ನೆಲ್ಲ ಭಕ್ತಿಯ-ಮುಕ್ತಿಯ ಉತ್ತುಂಗಕ್ಕೆ ಏರಿಸಿದ “ಇಷ್ಟು ದಿನ ಈ ವೈಕುಂಠ” ಎನ್ನುವ ಕೃತಿಯ ಪ್ರಸ್ತುತಿಯಿಂದ. ಶುದ್ಧ ಧನ್ಯಾಸಿಯಲ್ಲಿ ಮೂಡಿ ಬಂದ ಈ ಕೃತಿ ಮುಂದೆ ದಾರಿ ಮಾಡಿ ಕೊಟ್ಟದ್ದು “ಸತ್ಯವಂತರ ಸಂಘವಿರಲು ಚಿಂತೆ ಯಾತಕೆ” ಮತ್ತು ಇನ್ನೊಂದು ಅತ್ಯಂತ ವಿಶಿಷ್ಟ ರಚನೆ ಬನ್ನಂಜೆ ಗೋವಿಂದಾಚಾರ್ಯರ “ನವಿಲ ಗರಿ ಬಣ್ಣ ಬಣ್ಣ ಇವ ನಮ್ಮ ಕಣ್ಣ”. ವಿದ್ಯಾಭೂಷಣರು ನೆರೆದಿದ್ದ ಸಭಿಕರಿಗೊಂದು ಆಶು ಪ್ರಶ್ನೆಯನ್ನು ಸಭೆಯಲ್ಲಿಯೇ ಕೇಳಿ ಬನ್ನಂಜೆಯವರ ನೆನಪನ್ನೂ ಮರುಕಳಿಸಿ ಸಭೆಗೊಂದು ಮೆರುಗನ್ನು ತಂದದ್ದು ಕೂಡ ವಿಶಿಷ್ಟವಾದ ಅನುಭವವೇ ಸರಿ.

ಈ ವರುಷ ಜುಲೈ ಎಂಟು ಟೀಕಾಚಾರ್ಯರೆಂದೇ ಹೆಸರುವಾಸಿಯಾದ ಜಯತೀರ್ಥರ ಆರಾಧನೆಯೂ ಕೂಡ. ಗುರುಗಳ ಸ್ಮರಣೆಯಲ್ಲಿ , ಗುರುಗಳ ಸಾಲಿನಲ್ಲಿ ಪ್ರಾತಃ ಸ್ಮರಣೀಯರೂ ಆದ ರಾಘವೇಂದ್ರ ರಾಯರ ಕುರಿತ “ಶರಣರ ಸುರ ಭೂಯ” ಮತ್ತು ಜಯತೀರ್ಥರ ಕುರಿತ “ಜಯತೀರ್ಥ ಗುರುರಾಯ” ಅಂದಿನ  ವಿಶೇಷ ದಿನವನ್ನು ಇನ್ನಷ್ಟೂ ವಿಶೇಷ ವನ್ನಾಗಿಸಿತು. ಮುಂದೆ ದೇಶ್ ರಾಗದಲ್ಲಿ ಮೂಡಿಬಂದ “ವಿಠಲಾ ಸಲಹೋ ಸ್ವಾಮಿ”ಯಂತೂ  ಇಡೀ ಸಭಾಂಗಣವನ್ನೇ “ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ” ಎನ್ನುವ ಧ್ವನಿಯಲ್ಲಿ ಮುಳುಗಿಸಿ ಸಂಮೋಹನ ಸ್ಥಿತಿಗೆ ಕೊಡೊಯ್ದದ್ದು  ವಿದ್ಯಾಭೂಷಣರ ಸಂಗೀತದ ಪವಾಡಕ್ಕೇ ಒಂದು ಸಾಕ್ಷಿ.

ಅನೇಕ ಸಭಿಕರು ಕಣ್ಣೀರಿನ ಧಾರೆಯಲ್ಲಿ  ಮುಳುಗಿ ಮಿಂದು ಸಾಕ್ಷಾತ್ ವಿಠ್ಠಲನ ದರ್ಶನ ವೈಕುಂಠದಲ್ಲೇ ಆದಂತೆ ಅನುಭವ ಹೊಂದಿದ್ದೂ ಅಲ್ಲಿ ನೆರೆದ ಸಭಿಕರ ಅನುಭವಕ್ಕಷ್ಟೇ ಬಂದಿರಬೇಕು. ಖಂಡಿತವಾಗಿಯೂ ಪಂಢರಾಪುರದ ಮತ್ತು ಪುತ್ತಿಗೆಯ ಆರಾಧ್ಯದೇವರಾದ ವಿಠ್ಠಲನೂ ಸಭಿಕರಲ್ಲೊಬ್ಬನಾಗಿ ಸಭೆಯ ಕುಣಿತಕ್ಕೆ ಹೆಜ್ಜೆ ಹಾಕಿದ್ದಿದ್ದರೂ ಆಶ್ಚರ್ಯವೇನಲ್ಲ. ಏಕೆಂದರೆ ಅಷ್ಟೊಂದು ಭಕ್ತಿಯ ಪರಾಕಾಷ್ಠೆಯ ಸಂಗೀತ ಸುಧೆಯನ್ನು ನಡೆಸಿಕೊಟ್ಟವರು ವಿದ್ಯಾಭೂಷಣರು ಮತ್ತವರ ವಾದ್ಯವೃಂದ.  

ಕಾರ್ಯಕ್ರಮದ ಕೊನೆಯೂ ಕೂಡ ಸೂಕ್ತವಾಗಿಯೇ ದ್ವಾದಶ ಸ್ತೋತ್ರದ, ಬನ್ನಂಜೆಯವರಿಂದ ಆದಂಥ ಕನ್ನಡ ಅನುವಾದ, “ಜಗದ ಇರವು” ಮದ್ಯಮಾವತಿಯಲ್ಲಿ ಮೂಡಿ ಬಂದಾಗದಾಗಲೇ ಮೂರು ಘಂಟೆಗಳಷ್ಟು ಅವಧಿ ಕಳೆದದ್ದೇ ಅರಿವಿಗೆ ಬಂದಿರಲಿಲ್ಲ. ಸಭೆಯುದ್ದಕ್ಕೂ ಉಗಾಭೋಗ-ಸುಳಾದಿಗಳಿಂದ ಅಲಂಕೃತಗೊಂಡು ಮೂಡಿ ಬಂದ  ದಾಸರ ಕೃತಿಗಳೆಲ್ಲವೂ ನಡುನಡುವೆ ವಿದ್ಯಾಭೂಷಣರ ಅಪೂರ್ವ ವಿವರಣೆಗಳಿಂದ ಇನ್ನಷ್ಟೂ ಮೆರುಗನ್ನು ಹೊಂದಿದ್ದು ಇಡೀ ಸಭೆಯೇ ಕ್ಷಣಮಾತ್ರದಲ್ಲಿ ಮುಗಿದುಹೋಯಿತೇನೋ ಎನ್ನುವ, ಇನ್ನಷ್ಟೂ ಬೇಕಿತ್ತು, ಮುಗಿಯಲೇಬಾರದಿತ್ತು ಇಂದಿನ ಸಂಗೀತ ಸುಧೆಯ ಅನುಭವ ಎನ್ನುವ ಮಟ್ಟಿಗೂ ಕರೆದೊಯ್ದಿತ್ತು ನೆರೆದ ಸಭಿಕರನೆಲ್ಲ. ಒಟ್ಟಿನಲ್ಲಿ, ವೈಕುಂಠದಲ್ಲಿ ಭಗವಂತನ ಎದುರೇ ಗಂಧರ್ವರ ನೇತೃತ್ವದಲ್ಲಿ ನಡೆದ ಸಂಗೀತ ಸುಧೆಗೆ ಸಾಕ್ಷಿಯಾದಂತಿತ್ತು ನ್ಯೂ ಜೆರ್ಸಿ ಶ್ರೀ ಕೃಷ್ಣ ವೃಂದಾವನದ ಭಕ್ತರೆಲ್ಲಾ.

ಇನ್ನೇನು ಕಾರ್ಯಕ್ರಮದ ಮಂಗಳ ಹಾಡಬೇಕು ಎನ್ನುವಷ್ಟರಲ್ಲಿ, ವಿದ್ಯಾಭೂಷಣರ ತಂಡಕ್ಕೆ ಡಾ. ಸುಧೀಂದ್ರ ದಂಪತಿ ಗಳು ಸನ್ಮಾನಿಸಿದಾಗ ತಂಡದ ಹಿರಿಯ ಸದಸ್ಯ ಸಂದೀಪ್ ವಶಿಷ್ಠ ಹೇಗೆ ವಿದ್ಯಾಭೂಷಣರ ಹರಿದಾಸ ಸಾಹಿತ್ಯದ ಸೇವೆಯಲ್ಲಿ ತಾವೆಲ್ಲರೂ ಅಳಿಲ ಸೇವೆಯನ್ನು ಮಾಡಿ ಧನ್ಯರಾಗಿದ್ದೇವೆ ಎಂದಾಗ ನೆರೆದ ಸಭಿಕರೆಲ್ಲ ತುಂಬು ಹೃದಯn ದಿಂದ ವಂದಿಸಿದ್ದೂ ಒಂದು ಸುಂದರ ದೃಶ್ಯವೇ ಸರಿ. ಅದಕ್ಕೆ ಪ್ರತಿಯಾಗಿ ವಿದ್ಯಾಭೂಷಣರೂ ತಮ್ಮ ಸಹೃದಯತೆ-ವಿನಯತೆಯಿಂದ ವಾದ್ಯ ವೃಂದಕ್ಕೂ ವಂದಿಸಿ, ಈ ಅಮೆರಿಕಾ ಪ್ರವಾಸದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ದವರೆಲ್ಲರಿಗೂ ಮತ್ತು ವಿಶೇಷವಾಗಿ ಪುತ್ತಿಗೆ ಶ್ರೀಗಳು, ಅಮೆರಿಕಾದ್ದುದ್ದಗಲಕ್ಕೂ ಹರಡಿರುವ ಪುತ್ತಿಗೆ ಮಠದ ಶಾಖೆಗಳಿಗೆ ಮತ್ತು ಯೋಗೀನ್ದ್ರ ಭಟ್ಟರಿಗೆ ಹಾಗೆಯೇ ನ್ಯೂ ಜೆರ್ಸಿಯ ಕಾರ್ಯಕ್ರಮಕ್ಕೆ ಅವಿರತವಾಗಿ ಪ್ರಯತ್ನ ನಡೆಸಿದ ಡಾ. ಸುಧೀಂದ್ರ, ಪೂರ್ಣಿಮಾ ಸುಧೀಂದ್ರ ಮತ್ತು ಸ್ವಯಂಸೇವಕರಿಗೆಲ್ಲ  ಕೃತಜ್ಞತೆಯನ್ನು ಅರ್ಪಿಸಿದಾಗಲೇ ಸಭೆಗೆ ಮಂಗಳ ಆರಂಭವಾಗಿತ್ತು.         

ಬರಹ: ಶ್ರೀವತ್ಸ ಬಲ್ಲಾಳ, ಸ್ಥಳ: ಶ್ರೀ ಕೃಷ್ಣ ವೃಂದಾವನ, ದಿನಾಂಕ : ಜುಲೈ 9, 2023

 
 
 
 
 
 
 
 
 
 
 

Leave a Reply