ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಪರಿಸರ ಜಾಗೃತಿಗಾಗಿ ಸಾಮೂಹಿಕ ವನಮಹೋತ್ಸವ

ಉಡುಪಿ: ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಿ ಗಿಡಗಳನ್ನು ನೆಡುವ ಜತೆಗೆ ಅದರ ಪೋಷಣೆ ಮಾಡಬೇಕು ಎಂದು ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೋ ಹೇಳಿದರು.
ಅವರು ಭಾನುವಾರ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್, ಉಡುಪಿ ವಲಯ ಹಾಗೂ   ಘಟಕ ಇವರ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ 51 ಘಟಕಗಳಲ್ಲಿ ಏಕಕಾಲದಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ  ಶೋಕಮಾತಾ ಚರ್ಚ್ ವಠಾರದಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪರಿಸರದಿಂದ ಮಾತ್ರ ಪ್ರಪಂಚ ಸುರಕ್ಷಿತವಾಗಿರಲು ಸಾಧ್ಯ, ಸಮಯಕ್ಕೆ ಸರಿಯಾಗಿ ಮಳೆ ಬೆಳೆ ಆರೋಗ್ಯ ಚೆನ್ನಾಗಿರಬೇಕದರೆ ಪರಿಸರ ಸ್ವಚ್ಛವಾಗಿರಬೇಕು. ಹಸಿರಿಕರಣವಾಗಿರಬೇಕು. ಪ್ರತಿಯೊಬ್ಬ ನಾಗರಿಕರೂ ಕೂಡ ಪರಿಸರ ಪ್ರೇಮಿಗಳಾಗಿ ಗಿಡ ಮರವನ್ನು ಕಾಪಾಡಿ ಸ್ವಚ್ಛ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟು ಶ್ರಮಿಸುವ ಪಣತೊಡಬೇಕು ಎಂದರು.
ನೂರಾರು ಗಿಡಗಳನ್ನು ನೆಟ್ಟು ಬೆಳೆಸುವುದೇ ವನಮಹೋತ್ಸವದ ಮುಖ್ಯ ಉದ್ಧೇಶವಾಗಿದೆ. ಪ್ರತಿಯೊಬ್ಬರು ಪರಿಸರ ರಕ್ಷ ಣೆಗೆ ಜಾಗೃತಿ ವಹಿಸಬೇಕು. ನಿತ್ಯ ವಾಹನಗಳು ಹೆಚ್ಚಾಗುತ್ತಿವೆ. ಗಿಡ ಮರಗಳು ನಾಶವಾಗುತ್ತಿವೆ, ಪ್ಲಾಸ್ಟಿಕ್ ಬಳಕೆ ಜಾಸ್ತಿಯಾಗುತ್ತಿದ್ದು, ಇದರಿಂದ ವಾಯು ಮಾಲಿನ್ಯ, ಉಷ್ಣಾಂಶ ಹೆಚ್ಚಾಗುತ್ತಿದೆ. ಮಳೆ ಬೆಳೆಗಳು ಕಡಿಮೆಯಾಗುತ್ತಿವೆ. ಕಾರಣ ಇದರ ಬಗ್ಗೆ ಸಮತೋಲನ ಕಾಪಾಡಲು ಪ್ರತಿಯೊಬ್ಬರು ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ. ಪ್ರತಿಯೊಬ್ಬರು ಪರಿಸರದ ಬಗ್ಗೆ ಅತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಸೂಚನೆಯಂತೆ ಉಡುಪಿ ಜಿಲ್ಲೆಯ 51 ಘಟಕಗಳ ನೇತೃತ್ವದಲ್ಲಿ ವನಮಹೋತ್ಸವ ಆಚರಣೆ ನಡೆಸಿದ್ದು   ಚರ್ಚುಗಳಲ್ಲಿ ಸಾಮೂಹಿಕವಾಗಿ ಸೇರಿ ಆಚರಣೆ ಮಾಡುವ ಬದಲು ಪ್ರತಿಯೊಬ್ಬರು ಗಿಡಗಳನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿ ಅದನ್ನು ಕುಟುಂಬದ ಸದಸ್ಯರೊಂದಿಗೆ ಸೇರಿ ನೆಟ್ಟು ಅದನ್ನು ಪಾಲನೆ ಮಾಡುವಂತೆ ಸೂಚನೆ ನೀಡಿದೆ. ಹತ್ತು ಅಥವಾ ಅದಕ್ಕಿಂತ ಹೆಚ್ಚು ಗಿಡಗಳನ್ನು ಈ ವರ್ಷ ನೆಟ್ಟು ಪೋಷಣೆ ಮಾಡಿದ ಕುಟುಂಬಗಳನ್ನು ನೊಂದಾಯಿಸಿಕೊಂಡು ಪ್ರತಿ ಮೂರು ತಿಂಗಳಿಗೊಮ್ಮೆ ಘಟಕ ಅಥವಾ ವಲಯದ ಪದಾಧಿಕಾರಿ ಗಿಡದ ಪೋಷಣೆಯ ವರದಿಯನ್ನು ಕೇಂದ್ರಿಯ ಸಮಿತಿಗೆ ಸಲ್ಲಿಸಲಿದ್ದು ಪ್ರಾಮಾಣಿಕವಾಗಿ ಗಿಡದ ಪೋಷಣೆ ಮಾಡಿದವರಿಗೆ ಬಹುಮಾನವನ್ನು ಕೇಂದ್ರಿಯ ಸಮಿತಿ ನೀಡಲಿದೆ.   ಅದರಂತೆ ಜಿಲ್ಲೆಯ ಎಲ್ಲಾ ಘಟಕಗಳಲ್ಲಿ ಭಾನುವಾರ ಈ ವನಮಹೋತ್ಸವ ಆಚರಣೆ ನಡೆದಿದ್ದು 3327 ಗಿಡಗಳನ್ನು ನೆಡಲಾಗಿದೆ
ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಮಾಜಿ ಅಧ್ಯಕ್ಷರಾದ ಅಲ್ಪೋನ್ಸ್ ಡಿಕೋಸ್ತಾ, ಆಲ್ವಿನ್ ಕ್ವಾಡ್ರಸ್, ವಲೇರಿಯನ್ ಫೆರ್ನಾಂಡಿಸ್, ರೋಬರ್ಟ್ ಮಿನೇಜಸ್, ನಿಯೋಜಿತ ಅಧ್ಯಕ್ಷರಾದ ರೊನಾಲ್ಡ್ ಡಿ’ಆಲ್ಮೇಡಾ, ಸಹಕೋಶಾಧಿಕಾರಿ ಲೆಸ್ಲಿ ಕರ್ನೆಲಿಯೊ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಸದಸ್ಯರಾದ  ಲೊಯ್ಸೆಟ್ ಕರ್ನೇಲಿಯೊ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply