ಆಕಾಶದಲ್ಲಿ ತೇಲುವ ಬೆಳಕಿನ ಮಾಲೆ. ಎಲ್ಲರಿಗೂ ಅಚ್ಚರಿ.

ನಿನ್ನೆ ಸಂಜೆ ಆಕಾಶದಲ್ಲಿ ತೇಲುವ ಬೆಳಕಿನ ಮಾಲೆ. ಎಲ್ಲರಿಗೂ ಅಚ್ಚರಿ.  ಇದೇನಿದು, ತೇಲುವ ತಟ್ಟೆಗಳೇ, ಅನ್ಯ ಲೋಕದಿಂದ ಯಾರಾದರೂ ಬಂದರೇ, ಧೂಮಕೇತುವೇ, ಅಥವಾ ಯುದ್ಧವೇನಾದರೂ ಪ್ರಾರಂಭವಾಯಿತೇ, ಇದೇನಿದು, ಇದೇನಿದು …?
 
ಕರಾವಳಿಯಾದ್ಯಂತ  ಎಲ್ಲರಲ್ಲೂ ಅನೇಕಾನೇಕ ಪ್ರಶ್ನೆಗಳು. ನಿನ್ನ ಸಂಜೆ ಸುಮಾರು 7.23ಕ್ಕೆ  ನೈರುತ್ಯ ಆಕಾಶದಿಂದ ಉತ್ತರಕ್ಕೆ ನಾಲ್ಕು ನಿಮಿಷ, ಹಾರಾಟವಾಡುತ್ತಾ ತೇಲುವ ಬೆಳಕಿನ ಮಾಲೆಗಳನ್ನು ನೋಡಿದರು. ಇದು ತೇಲುವ ಬೆಳಕಿನ ಮಾಲೆಯಲ್ಲ. ಹಾಗೆಯೇ  ಕಾಣುವ ಸುಮಾರು 60ಕೃತಕ ಉಪಗ್ರಹಗಳ ಸಾಲು.

ಅಲನ್ ಮಸ್ಕ್ (Elun Musk ) ರವರ ಹೊಸ ಸಾಹಸ,  ಸ್ಪೇಸ್ ಎಕ್ಸ್ (Space X)  ಕಂಪೆನಿಯ ಮೂಲಕ ಭೂಮಿಯ ಎಲ್ಲಾ ಭಾಗದವರಿಗೂ  ನೆಟ್ ವರ್ಕ್  ಸಂಪರ್ಕವನ್ನು ಕಲ್ಪಿಸಲು ಮಾಡುತ್ತಿರುವ ಹೊಸ ತಂತ್ರಜ್ಞಾನ.   ಇನ್ನು ನಾಲ್ಕುವರ್ಷಗಳಲ್ಲಿ ಆಕಾಶದಲ್ಲಿ  ಸುಮಾರು 60ಸಾವಿರ ಕೃತಕ ಉಪಗ್ರಹ ಗಳಿಂದ ಇಡೀ ಭೂಮಿಯ ಎಲ್ಲಾ ಸ್ಥಳಗಳಲ್ಲಿ ಸಂಪರ್ಕವನ್ನು ಹೊಂದಿಸಲು ಕೃತಕ ಉಪಗ್ರಹಗಳಿಂದ ಮಾಡುತ್ತಿರುವ ವ್ಯವಸ್ಥೆ ಸ್ಟಾರ್ ಲಿಂಕ್ ಸ್ಯಾಟಲೈಟ್ಸ್ (Star link satellites.)  ಇವುಗಳು ಕೆಳ ಸ್ತರದ ಕೃತಕ ಉಪಗ್ರಹಗಳು.

(Low earth  orbit satellites) ಭೂಮಿಯಿಂದ ಸುಮಾರು 550 ಕಿಮೀ ಎತ್ತರದ ಆಕಾಶದಲ್ಲಿ 60 ಕೃತಕ ಉಪಗ್ರಹ ಗಳ ಮಾಲೆ ಅತೀ ವೇಗವಾಗಿ ತೇಲುತ್ತಿದೆ. ಪ್ರತಿ ಉಪಗ್ರಹ ಸುಮಾರು 260 ಕೆಜಿಗಳಿದ್ದು ಒಂದು ಮೀಟರ್ ನಷ್ಟು ದೊಡ್ಡದಿದೆ.

ಕೃತಕ ಉಪಗ್ರಹಗಳು ಬರೇ ಕಣ್ಣಿಗೆ ಕಾಣುತ್ತವೆಯೇ~ ಇಲ್ಲ. ಆದರೆ ಅವುಗಳ ಚಲನವಲನಗಳನ್ನು ಸಂಜೆ ಮತ್ತು ಬೆಳಗಿನ ಜಾವ  ಗಮನಿಸಬಹುದು. ಸಂಜೆ  ನಮಗೆ ಕತ್ತಲಾದರೂ 550 ಕೀಮೀ  ಎತ್ತರದಲ್ಲಿರುವ ಈ ಕೃತಕ ಉಪಗ್ರಹಗಳಿಗೆ ಸೂರ್ಯನ ಬೆಳಕು ಬೀಳುತ್ತಿರುತ್ತದೆ. ಇವುಗಳಲ್ಲಿರುವ ಸೌರ ಫಲಕಗಳಿಂದ ಪ್ರತಿಫಲಿಸಿದ ಈ ಬೆಳಕು ನಮ್ಮ ಕಣ್ಣಿಗೆ ಬಿದ್ದು ಈ ಕೃತಕ ಉಪಗ್ರಹಗಳ ದರ್ಶನವಾಗುತ್ತದೆ.

ಇವುಗಳ ಉಪಯೋಗ: ಓಪ್ಟಿಕಲ್ ಫೈಬರ್ ಹಳ್ಳಿ ಹಳ್ಳಿಗೂ ಸಂಪರ್ಕ ಬಹುಕಷ್ಟ. ಆದರೆ ಈ ಕೃತಕ ಉಪಗ್ರಹಗಳಿಂದ ಅತೀ ಸುಲಭ ವೆನ್ನುತ್ತಿದ್ದಾರೆ. ಇವುಗಳಿಂದ ತೊಂದರೆ ಆಕಾಶ ನಕ್ಷತ್ರ ವೀಕ್ಷಕರಿಗೆ ಹಾಗೂ ಖಗೋಳ ವಿಜ್ಞಾನಿಗಳಿಗೆ.  ಇನ್ನು ಕೆಲ ವರ್ಷಗಲ್ಲಿ ಕಾಣುವ ಹತ್ತು ನಕ್ಷತ್ರಗಳಲ್ಲಿ ಒಂದು ಈ ಕೃತಕ ಉಪಗ್ರಹವಿರಬಹುದು. ಹಾಗೆಯೇ ಒಂದು ಆಕಾಶ ಕಾಯದ ಆಧ್ಯಯನಮಾಡುತ್ತಿರುವ  ಖಗೋಳ ವಿಜ್ಞಾನಿಗೆ ಈ ಕೃತಕ ಉಪಗ್ರಹಗಳ ಬೆಳಕು ತೊಂದರೆ ಯಾಗಬಹುದು.

ಇವತ್ತು ಡಿಸೆಂಬರ್ 21ರ ಸಂಜೆಯೂ 2.11 ಕ್ಕೆ ಪಶ್ಚಿಮೋತ್ರ ಆಕಾಶದಲ್ಲಿ ಸುಮಾರು 20 ಡಿಗ್ರಿ ಎತ್ತರದಲ್ಲಿ ಕಾಣಲಿದೆ. ನಿನ್ನೆಯಷ್ಟು ಚೆಂದವಿರುವುದಿಲ್ಲ.  ಹಾಗೆ ಡಿಸೆಂಬರ್ 24ರ ಸಂಜೆಯೂ  7.23ಕ್ಕೆ ಉತ್ತರ ಆಕಾಶದಲ್ಲಿ ಕೆಲ ನಿಮಿಷ ಕಾಣಬಹುದು.


ಖಗೋಳಾಸಕ್ತರ ಚಿಂತೆ: ಈ ವರೆಗಿನ ಸುಮಾರು 11670 ಕೃತಕ ಉಪಗ್ರಹಗಳನ್ನು ಹಾರಿಸಿಯಾಗಿದೆ. ಇವೆಲ್ಲವೂ ಸುಮಾರು 200 ಕಿಮೀ ಎತ್ತರದಿಂದ 36ಸಾವಿರ ಕಿಮೀ ಎತ್ತರದಲ್ಲಿ ಭೂಮಿಗೆ ತಿರುಗುತ್ತಿವೆ. ಇವುಗಳಲ್ಲಿ ಈಗ 4300 ಸಕ್ರಿಯವಾಗಿ ಕೆಲಸಮಾಡುತ್ತಿವೆ. ಆದರೆ ಇನ್ನು ನಾಲ್ಕು ವರ್ಷಗಳಲ್ಲಿ ಇವುಗಳ ಜೊತೆ  ಈ ಹೊಸ ಯೋಜನೆಯ  60 ಸಾವಿರ ಈ ಕೃತಕ ಉಪಗ್ರಹಗಳು  ಅದೇನು ಹೊಸ ಆಕಾಶವನ್ನು ಸೃಷ್ಟಿಸುವವೋ ಎನ್ನುವುದು ಖಗೋಳಾಸಕ್ತರ ಚಿಂತೆ. ~ ಡಾ. ಎ. ಪಿ. ಭಟ್. ಉಡುಪಿ.
 
 
 
 
 
 
 
 
 
 
 

Leave a Reply