ಬೆಂಗಳೂರು: ಕರೊನಾ ಸೋಂಕಿತರ ಪಾಲಿಗೆ ವರದಾನ ಎಂದೇ ಬಿಂಬಿಸಲಾಗುವ ಪ್ಲಾಸ್ಮಾ ಅನ್ನು ಜೀರೋ ಟ್ರಾಫಿಕ್ ಮೂಲಕ ಬೆಂಗಳೂರಿನಿಂದ ಚೆನ್ನೈ ಆಸ್ಪತ್ರೆಗೆ ಯಶಸ್ವಿಯಾಗಿ ಸಾಗಿಸಲಾಗಿದೆ.
ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಯನ್ನು ಅಲ್ಲಿಯ ವೈದ್ಯರು ಸಂಪರ್ಕಿಸಿದ್ದಾರೆ. ಸಂಜೆ 5 ಗಂಟೆಗೆ ಬೆಂಗಳೂರು ನಗರ ಪೊಲೀಸರ ಸಹಾಯದಿಂದ ಗ್ರೀನ್ ಕಾರಿಡಾರ್ ವ್ಯವಸ್ಥೆ ಮೂಲಕ ಎಚ್‌ಸಿಜಿ ಆಸ್ಪತ್ರೆ ತಂಡವು ಹೊಸೂರುವರೆಗೂ ಪ್ಲಾಸ್ಮಾ ತಲುಪಿಸಿದೆ. ಬಳಿಕ ಚೆನ್ನೈನ ಖಾಸಗಿ ಆಸ್ಪತ್ರೆಯವರು ಪ್ಲಾಸ್ಮಾ ಪಡೆದಿದ್ದು, ರಾತ್ರಿ 9.30ಕ್ಕೆ ಆಸ್ಪತ್ರೆಗೆ ಪ್ಲಾಸ್ಮಾ ತಲುಪಿದೆ.
ಅಂಗಾಂಗಗಳ ಸಾಗಣೆಗೆ ಗ್ರೀನ್ ಕಾರಿಡಾರ್ ಬಳಕೆ ಮಾಡಲಾಗಿತ್ತು. ಅಂತರ್ ರಾಜ್ಯಕ್ಕೆ ಪ್ಲಾಸ್ಮಾ ಸಾಗಣೆ ಮಾಡಲು ಗ್ರೀನ್ ಕಾರಿಡಾರ್ ಬಳಕೆ ಮಾಡಿದ್ದು ದೇಶದಲ್ಲಿ ಇದೇ ಮೊದಲು ಎಂದಿದ್ದಾರೆ ಎಚ್‌ಸಿಜಿ ಆಸ್ಪತ್ರೆ ಕ್ಯಾನ್ಸರ್ ತಜ್ಞ ಡಾ.ವಿಶಾಲ್ ರಾವ್, ಪ್ಲಾಸ್ಮಾ ಥೆರಪಿಗೆ ದಿನದಿಂದ ದಿನಕ್ಕೆ ಬೇಡಿಕೆ ಜಾಸ್ತಿಯಾಗುತ್ತಿದ್ದು, ಪ್ಲಾಸ್ಮಾ ಕೊರತೆ ಕಾಡುತ್ತಿದೆ.
ಹೀಗಾಗಿ ಸೋಂಕಿನಿಂದ ಗುಣಮುಖರಾದವರು ಪ್ಲಾಸ್ಮಾ ಬ್ಯಾಂಕ್‌ಗೆ ಪ್ಲಾಸ್ಮಾ ದಾನ ಮಾಡಬೇಕು ಎಂದು ಅವರು ಕೇಳಿಕೊಂಡರು. ಕರೊನಾ ಸೋಂಕಿನಿಂದ ಗುಣಮುಖರಾದವರಿಂದ ಪ್ಲಾಸ್ಮಾವನ್ನು ಪಡೆಯಬಹುದಾಗಿದೆ.






