2021, ಡಿಸೆಂಬರ್ 1ರ ಒಳಗಡೆ ದೇಶದ ಎಲ್ಲಾ ಜನರಿಗೂ ಲಸಿಕೆ ನೀಡುವ ಗುರಿ : ಕೇಂದ್ರ ಸರ್ಕಾರ

ನವದೆಹಲಿ : ಕೊರೋನ ಸೋಂಕಿನ ಪ್ರಮಾಣ ದಿನದಿಂದ ಹೆಚ್ಚಾಗುತ್ತಿರುವಂತೆಯೇ, ಕೇಂದ್ರ ಸರ್ಕಾರ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಿದೆ. ವರ್ಷಾಂತ್ಯದ ವೇಳೆಗೆ ಎಲ್ಲರಿಗೂ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಡಿಸೆಂಬರ್ 2021ರ ವೇಳೆಗೆ ದೇಶದ ಪ್ರತಿಯೊಬ್ಬ ಪ್ರಜೆಗೂ, ಕೊರೋನಾ ಲಸಿಕೆ ನೀಡುವ ಪ್ರಕ್ರಿಯೆ ಅಂತ್ಯಗೊಂಡಿರುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.

ದೇಶದ ಜನರಿಗೆ ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ವಿಶ್ವದಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಈವರೆಗೆ ಒಟ್ಟು 20 ಕೋಟಿ ಲಸಿಕೆ ಡೋಸ್​ಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ನೀಲಿನಕ್ಷೆಯ ಪ್ರಕಾರ ಡಿಸೆಂಬರ್ ಒಳಗೆ 108 ಕೋಟಿ ಜನರು 216 ಕೋಟಿ ಲಸಿಕೆ ಡೋಸ್​ಗಳ ಮೂಲಕ ಲಸಿಕೆ ಪಡೆಯಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ದೇಶದ 130 ಕೋಟಿ ಜನರಲ್ಲಿ ಕೇವಲ ಶೇ.3ರಷ್ಟು ಮಂದಿಗೆ ಮಾತ್ರ ಕೊರೋನಾ ವಿರುದ್ಧದ ಎರಡು ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ  ಬೆನ್ನಲ್ಲೇ ಜಾವ್ಡೇಕರ್‍ ಹೀಗೆ ಹೇಳಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, ಕೊರೋನಾ ಎರಡನೇ ಅಲೆಗೆ ಪ್ರಧಾನಿ ಮೋದಿಯೇ ನೇರ ಹೊಣೆಯಾಗಿದ್ದಾರೆ. 

ಕೋವಿಡ್‍-19ಗೆ ಲಸಿಕೆಗಳು ಮಾತ್ರ ಶಾಶ್ವತ ಪರಿಹಾರವಾಗಿದೆ, ಸಾಮಾಜಿಕ ಅಂತರ ಮತ್ತು ಮಾಸ್ಕ್ ಗಳು ತಾತ್ಕಾಲಿಕ. ಸರಿಯಾದ ವ್ಯಾಕ್ಸಿನೇಷನ್ ತಂತ್ರವಿಲ್ಲದೆ, ಭಾರತವು ಅನೇಕ ಅಲೆಗಳಿಗೆ ಸಾಕ್ಷಿಯಾಗಲಿದೆ ಎಂದು ಟೀಕಿಸಿದ್ದರು. ರಾಹುಲ್ ಗಾಂಧಿಯ ಈ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ನೀವು ಲಸಿಕಾ ಅಭಿಯಾನದ ಬಗ್ಗೆ ತಲೆಕೆಡಿಸಿಕೊಂಡಿದ್ದರೆ, ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳ ಬಗ್ಗೆ ಗಮನಹರಿಸಿ. ಅಲ್ಲಿ 18-44 ವರ್ಷ ವಯಸ್ಸಿನ ಲಸಿಕೆ ಪಡೆಯಬಹುದಾದ ಜನರೂ ಲಸಿಕೆ ಪಡೆಯುತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.

 
 
 
 
 
 
 
 
 
 
 

Leave a Reply