ಮಣಿಪಾಲದ ಮಹಾನ್ ಚೇತನಗಳು- ಸ್ಮೃತಿ ದಿನದಂದು ಸಂಸ್ಮರಣೆ

ಮಣಿಪಾಲದ ಮಹಾನ್ ಚೇತನಗಳಾದ ಡಾ.ಟಿ.ಎಂ.ಎ ಪೈ ಮತ್ತು ಶ್ರೀ ಟಿ.ಎ.ಪೈವರ ಪುಣ್ಯ ಸ್ಮರಣೆಯ ಈ ದಿನ (ಮೇ 29) ಅವರ ಸಾಧನೆಗಳನ್ನು ನೆನಪಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲೇ ನಡೆಯುವ ಅವಕಾಶ ನಮಗೆ ಒದಗಿ ಬರಲಿ  ಎಂಬ ಪ್ರಾರ್ಥನೆಯೊಂದಿಗೆ ಈ ನುಡಿ ನಮನ,
ಆಧುನಿಕ ಮಣಿಪಾಲದ ಶಿಲ್ಪಿ ಡಾ. ಟಿ.ಎಂ.ಎ.ಪೈ:  ಡಾ. ಪೈಯವರು ತನ್ನ ಬಾಲ್ಯದಿಂದಲೇ ಸಾಮಾಜಿಕ ಕಳಕಳಿಯನ್ನು ಮೈಗೂಡಿಕೊಂಡು ಬೆಳೆದವರು. ತನ್ನೂರಿನ ಶಾಲೆ ಮುಚ್ಚುವ ಸ್ಥಿತಿಯಲ್ಲಿದ್ದಾಗ, ತನ್ನ ವಿದ್ಯಾಭ್ಯಾಸ ವನ್ನೇ ನಿಲ್ಲಿಸಿ, ಶಾಲೆಯ ಪುನರುಜ್ಚೀವನಕ್ಕೆ ದೇಣಿಗೆ ಸಂಗ್ರಹಿಸಿ, ಶಿಕ್ಷಕನಾಗಿ ಸೇವೆ ಸಲ್ಲಿಸಿ ಅದಕ್ಕೆ ಹೊಸ ಜೀವ ಕೊಟ್ಟವರು. ಮುಂದೆ ಡಾಕ್ಟರ್ ಆಗಿ ಉಡುಪಿಯಲ್ಲಿ ವೈದ್ಯಕೀಯ ಸೇವೆ ನಡೆಸುತ್ತಿರುವಾಗ ಬಡ ಜನರ ಬವಣೆ ಯನ್ನು ಕಣ್ಣಾರೆ ಕಂಡು ಮರುಗಿ ಇದಕ್ಕೆ ಪರಿಹಾರಕ್ಕೆ ತಾನೇನಾದರೂ ಮಾಡಬೇಕು ಎಂದು ಕನಸು ಕಂಡು ಅದನ್ನು ನನಸಾಗಿಸಿದವರು. ವೈದ್ಯರಾದ ಇವರು “ಸಾಮಾಜಿಕ ಪಿಡುಗುಗಳಿಗೆ ಚಿಕಿತ್ಸೆ ನೀಡುವ ಡಾಕ್ಟರ್” ಆದರು. 
ಬ್ಯಾಂಕ್, ವಿದ್ಯಾ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಸುತ್ತ ಮುತ್ತಲಿನ ಜನರನ್ನೇ ಬಳಸಿಕೊಂಡು ದೇಶವೇ ನೆನಪಿಸಿಕೊಳ್ಳುವ ಸಾಧನೆ ಮಾಡಿದರು.  ಮಾನವ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಡಾ. ಪೈಯವರು ಒಂದು ಜ್ವಲಂತ ನಿರ್ದೇಶನ. ಡಾ.  ಪೈಯವರ ಜೀವನ ಮತ್ತು ಸಾಧನೆ ಕಂಡು  ದಿ. ಕು.ಶಿ ಯವರ ನುಡಿ “ಕಲ್ಲರಳಿ ಹೂವಾಯಿತು” ಇದು ಡಾ.ಪೈಗಳ ಸಾಧನೆಗೆ ಹಿಡಿದ ಕನ್ನಡಿ. ಯಾರಿಗೂ ಬೇಡವಾದ ಮಣಿಪಾಲದ ಮುರ ಕಲ್ಲುಗುಡ್ಡಗಳನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಮನುಷ್ಯನ ನೆಮ್ಮದಿಯ ಜೀವನಕ್ಕೆ ಬೇಕಾದ  ಬೇಕಾಗುವ ಎಲ್ಲ ವ್ಯವಸ್ಥೆಗಳನ್ನು ಇಲ್ಲಿ ಮಾಡಿ ತೋಡಿಸಿದರು.
ಡಾ. ಪೈಯವರು ತನ್ನ ಕೆಲಸದಲ್ಲಿ ಯಾವಾಗಲೂ ಶ್ರೇಷ್ಠತೆಯನ್ನು (ಎಕ್ಸಲೆನ್ಸ್) ಕಾಯ್ದುಕೊಂಡವರು ಇದರಿಂದಾ ಗಿಯೇ ಇಂದು ಮಣಿಪಾಲದ ಎಲ್ಲ ಸಂಸ್ಥೆಗಳೂ ಜಾಗತಿಕ ಮಟ್ಟವನ್ನು ತಲುಪಲು ಸಾಧ್ಯವಾಯಿತು.  81 ವರ್ಷ ಗಳ ಸುಧೀರ್ಘ ಹಾಗೂ ಯಶಸ್ವೀ ಜೀವನವನ್ನು ನಡೆಸಿದ ಡಾ.ಪೈವರು ತನ್ನ ಕನಸುಗಳನ್ನು ಜೀವಿತ ಕಾಲದಲ್ಲೇ ನನಸಾಗಿಕೊಂಡ ಮಹಾನ್ ಚೇತನ.  ಅವರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವೇ ಆಗಿದೆ.

ಧೀಮಂತ ನಾಯಕ ಶ್ರೀ ಟಿ.ಎ.ಪೈ:  
ಉಡುಪಿ ಜಿಲ್ಲೆಯ ತೋನ್ಸೆಯಲ್ಲಿ ಹುಟ್ಟಿ, ರಾಷ್ಟ್ರದ ಸಾರ್ವಜನಿಕ ರಂಗದಲ್ಲಿ ವ್ಯಾಪಿಸಿ ಉಜ್ವಲವಾಗಿ ಬೆಳೆದ ಧೀಂತ ನಾಯಕರಲ್ಲಿ ಶ್ರೀ ಟಿ.ಎ.ಪೈ ಅಗ್ರಗಣ್ಯರು.  ಈ ಪ್ರಪಂಚದ ಚರಿತ್ರೆಯನ್ನು ನೋಡಿದರೆ ಜನ ಸಮಾನ್ಯರ ಹಿತಕ್ಕೆ ಸ್ಪಂದಿಸುವ ಉದಾರ ಹೃದಯಿಗಳು ವಿರಳ. ಆಶಯವಿದ್ದರೂ ಇನ್ನು ಸಾಧಿಸುವ ಸಾಮರ್ಥ್ಯವಿರುವವರು ಇನ್ನೂ ವಿರಳ. ಹಾಗೇ ಜನಹಿತವನ್ನು ಸಾಧಿಸಲು ತಕ್ಕ ಅವಕಾಶ ಪಡೆಯುವ ಭಾಗ್ಯಶಾಲಿಗಳು ಅಪರೂಪ. 
ಶ್ರೀ ಟಿ.ಎ.ಪೈಯವರು ಈ ಮೂರನ್ನೂ ಪಡೆದು ಜನಸೇವೆಯಲ್ಲಿ ಕೃತಾರ್ಥರಾದ ಉತ್ತುಂಗದ ವ್ಯಕ್ತಿ. ಅವರು ಹುಟ್ಟಿ ಬೆಳೆದದ್ದು ಸಾಮಾನ್ಯರಾಗಿ.  ಅಸಾಮಾನ್ಯ ಅವಕಾಶಗಳು ಅವರನ್ನು ಹುಡುಕಿ ಬಂದಾಗ ಅವನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು. “ ನೀನೊಲಿದರೆ ಕೊರಡು ಕೊನರುವುದಯ್ಯ, ಬರಡು ಹಯನಹುದಯ್ಯ: ಎಂದ  ಬಸವಣ್ಣರ ವಚನ ನೆನಪಿಸುವಂತಿತ್ತು ಅವರ ಬಾಳು.  “ದೀನ ದುರ್ಬಲರಿಗೆ ಬಲ ನೀಡಿದರು, ದಾರಿ ಕಾಣದ ವರಿಗೆ ದಾರಿ ತೋರಿದರು. ಹತಾಶರಿಗೆ ಉತ್ಸಾಹ ತುಂಬಿದರು, ಸಮಸ್ಯೆಗಳಿಗೆ ಪರಿಹಾರ ನೀಡಿದರು, ಸಂಸ್ಥೆ ಗಳನ್ನು, ಜನರನ್ನು ಉದ್ಧರಿಸಿದರು” ಟಿ.ಎ.ಪೈಗಳು. ಮನುಷ್ಯರನ್ನು ಕಟ್ಟುವ ಅವರ ಪರಿಣಿತಿ ಆಗಾಧವಾದದ್ದು. ಕೇವಲ 59 ವರ್ಷ ಬದುಕಿದ ಟಿ.ಎ.ಪೈಯವರು ತಮ್ಮ ಸಂಪರ್ಕಕ್ಕೆ ಬಂದವರ ಮೇಲೆ ಆಗಾಧ ಪರಿಣಾಮ ಬೀರುತ್ತಿದ್ದರು.
 
ಬ್ಯಾಂಕಿ0ಗ್ ಕ್ಷೇತ್ರದಲ್ಲಿ ಅವರು ಮಾಡಿದ ಕ್ರಾಂತಿಕಾರೀ ಪ್ರಯೋಗಗಳು ಇಡೀ ದೇಶದ ಆರ್ಥಿಕತೆಯನ್ನು ಪ್ರಭಾವಿಸಿದವು. ಜೀವ ವಿಮಾ ನಿಗಮದ ಅಧ್ಯಕ್ಷರಾಗಿ ಆ ಸಂಸ್ಥೆಗೆ ಹೊಸ ಆಯಾಮ ನೀಡಿದರು. ಭಾರತೀಯ ಆಹಾರ ನಿಗಮದ ಅಧ್ಯಕ್ಷರಾಗಿ ರಾಷ್ಟçದ ಆಹಾರ ಸಮಸ್ಯೆಗೆ ಪರಿಹಾರ ರೂಪವಾದ “ಹಸಿರು ಕ್ರಾಂತಿ”ಯ ನಾಂದಿಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದರು . ಕೇಂದ್ರ ಸರಕಾರದಲ್ಲಿ ಒಬ್ಬ ಪ್ರಭಾವೀ ಮಂತ್ರಿಯಾಗಿ ತಾನು ನಿರ್ವಹಿಸಿದ ಎಲ್ಲ ಖಾತೆಗಳಲ್ಲಿ ಅದ್ಭುತವನ್ನೇ ಸಾಧಿಸಿದರು.  ಇದೆಲ್ಲದರ ಜೊತೆಗೆ ಕೃಷಿ ಅಭಿವೃದ್ಧಿ, ಹೈನುಗಾರಿಕೆ, ಮತ್ತು ಸಹಕಾರಿ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದರು.  ಅವರೊಬ್ಬ ಉತ್ತಮ ನಿರ್ವಹಣಾ (ಮೇನೇಜ್‌ಮೆಂಟ್) ವ್ಯಕ್ತಿಯಾಗಿದ್ದರು.  ಅವರು ಸ್ಥಾಪಿಸಿದ ಐ.ಐ.ಎಮ್(ಬೆಂಗಳೂರು) ಮತ್ತು ಟ್ಯಾಪ್ನಿ, ಮಣಿಪಾಲ ಇಂದು ಮೇನೇಜ್‌ ಮೆಂಟ್ ಸಂಸ್ಥಳಲ್ಲಿ ಮುಂಚೂಣಿಯಲ್ಲಿರುವುದು ಎಲ್ಲರಿಗೂ ಹೆಮ್ಮೆಯ ವಿಚಾರ.
 
ಭಾರತೀಯ ವಿಕಾಸ ಟ್ರಸ್ಟ್:- ಸಾಮಾಜಿಕ ಬದಲಾವಣೆ, ಗ್ರಾಮೀಣ ಜನತೆಯ ಉದ್ಧಾರಕ್ಕಾಗಿ ಅವರು ಸ್ಥಾಪಿಸಿದ ಭಾರತೀಯ ವಿಕಾಸ ಟ್ರಸ್ಟ್ ತನ್ನ ಸಂಸ್ಥಾಪಕರ ಸಾಮಾಜಿಕ ಕಳಕಳಿ, ಜನರ ಸಂಕಷ್ಟಗಳಿಗೆ ಸ್ಪಂದಿಸುವ ಅವರ ಮನಸ್ಸು ಮತ್ತು ಚಿಂತನೆಗಳನ್ನು ಇನ್ನೂ ಜೀವಂತವಾಗಿರಿಸಿಕೊಂಡು  ಸಮಾಜ ಸೇವೆಯಲ್ಲಿ ಕಳೆದ ನಾಲ್ಕು ದಶಕ ಗಳಿಂದ ತತ್ಪರವಾಗಿದೆ.  ಇಂದು ಮಣಿಪಾಲದ ಈ ಇಬ್ಬರು ಮಹಾನ್ ಚೇತಗಳಾದ ಡಾ.ಟಿ.ಎಂ.ಎ.ಪೈ ಮತ್ತು ಶ್ರೀ ಟಿ.ಎ.ಪೈಯವರ ಸ್ಮತಿ ದಿನದಂದು ಅವರ ನೆನಪಿಗೆ ಗೌರವವನ್ನು ಸಲ್ಲಿಸುತ್ತಾ ಅವರು ಸಾಧನೆಗಳನ್ನು ಇಂದಿನ ಯುವ ಜನರು ತಿಳಿದುಕೊಂಡು ಅದರಿಂದ ಸ್ಮೂರ್ತಿ ಪಡೆಯಲಿ ಎಂಬ ಆಶಯ ನಮ್ಮದು.  ~ ಟೀಂ ಬಿವಿಟಿ
 
 
 
 
 
 
 
 
 

Leave a Reply