ಋತುಚಕ್ರ ನೈರ್ಮಲ್ಯ ದಿನಾಚರಣೆ ಬಗ್ಗೆ ಕೆಲವೊಂದು ಉಪಯುಕ್ತ ಮಾಹಿತಿ ನೀಡಲಿದ್ದಾರೆ  ಡಾ। ರಾಜಲಕ್ಶ್ಮೀ ಸಂತೆಕಟ್ಟೆ 

ಮಾಸಿಕ ಋತುಸ್ರಾವ ಪ್ರತಿಯೊಬ್ಬ ಮಹಿಳೆಯ ಜೀವನದ ಅವಿಭಾಜ್ಯ ಅಂಗ. ಋತುಚಕ್ರದ ಆರಂಭದಿಂದ ಋತುಬಂಧದವರೆಗೆ ಪ್ರತೀ ತಿಂಗಳೂ 3-5 ದಿನ ಗರ್ಭಕೋಶದಿಂದ ರಕ್ತಸ್ರಾವ ಸ್ತ್ರೀಯರ ದೇಹದ ಸ್ವಾಭಾವಿಕ ಪ್ರಕ್ರಿಯೆ. ಆ ದಿನಗಳಲ್ಲಿನ ದೈಹಿಕ ನೈರ್ಮಲ್ಯ ಮಹಿಳೆಯ ಆರೋಗ್ಯ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಕಾಳಜಿ ಮೂಡಿಸುವ ಸಲುವಾಗಿ ಮೇ ತಿಂಗಳ 28ರಂದು ಋತುಚಕ್ರ ನೈರ್ಮಲ್ಯ ದಿನ (Menstrual Hygiene Day) ಎಂದು ಆಚರಿಸಲಾಗುತ್ತದೆ.

ಇದನ್ನು ಜರ್ಮನಿಯ  WASH United ಎಂಬ ಸಂಸ್ಥೆ 2014 ರಿಂದ ಆರಂಭಿಸಿತು. 28 ದಿನಗಳ ಋತುಚಕ್ರದಲ್ಲಿ 5 ದಿನಗಳ ಋತುಸ್ರಾವವನ್ನು ಗಮನದಲ್ಲಿಟ್ಟುಕೊಂಡು ಈ ದಿನವನ್ನು ಆಯ್ಕೆ ಮಾಡಲಾಯಿತು.  2021ನೇ ವರ್ಷದ ಈ ದಿನದ ಧ್ಯೇಯ ಹೀಗಿದೆ. We need to step up action and investment in menstrual health and hygiene ಎಂದರೆ ಋತುಚಕ್ರದ ಸಮಯದಲ್ಲಿ ಸ್ವಚ್ಛತೆ ಬಗ್ಗೆ ಅಧಿಕ ಗಮನ ನೀಡಿ ಆ ನಿಟ್ಟಿನಲ್ಲಿ ಅಗತ್ಯವಿರುವ ಪರಿಕರಗಳನ್ನು ಒದಗಿಸಿಕೊಡುವುದು.

ಹದಿಹರೆಯದ ಹೆಣ್ಣು ಮಕ್ಕಳು ಋತುಸ್ರಾವದ ಬಗೆಗೆ ಮಾತನಾಡುವುದು ಇನ್ನೂ ಗೌಪ್ಯತೆಯ ವಿಚಾರವಾಗಿರುವ ನಮ್ಮ ಸಮಾಜದಲ್ಲಿ ಶಾಲಾಕಾಲೇಜು ವಿದ್ಯಾರ್ಥಿನಿಯರಲ್ಲಿ ಈ ವಿಷಯದ ಕುರಿತು ಅರಿವು ಮೂಡಿಸುವುದು ಅತ್ಯಗತ್ಯ.

ತಮ್ಮ ಜನನಾಂಗಗಳ ಸ್ವಚ್ಛತೆಯ ಕಡೆಗೆ ಗಮನ ಹರಿಸುವುದರ ಜೊತೆಗೆ ಆ ದಿನಗಳಲ್ಲಿ ಬಳಸಬಹುದಾದ ಸ್ಯಾನಿಟರಿ ಪ್ಯಾಡ್ ಹಾಗು ಪೀರಿಯಡ್ ಕಪ್ (Menstrual cup) ಬಳಕೆಯ ಬಗೆಗೆ ಸರಿಯಾದ ಮಾಹಿತಿ ನೀಡುವುದು ಇಂದಿನ ಆದ್ಯತೆ. 

ಸ್ಯಾನಿಟರಿ ಪ್ಯಾಡ್ ಜೈವಿಕವಾಗಿ ವಿಘಟಿತವಾಗದ ತ್ಯಾಜ್ಯವಾದುದರಿಂದ ಪರಿಸರಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಸ್ಯಾನಿಟರಿ ಪ್ಯಾಡ್ ತ್ಯಾಜ್ಯದ ವಿಲೇವಾರಿಗೆ incinerator ಗಳನ್ನು ಬಳಸಲಾಗುತ್ತಿದ್ದು, ಹಲವು ಶಾಲಾಕಾಲೇಜುಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಹಲವಾರು ಶಾಲಾಕಾಲೇಜುಗಳಲ್ಲಿ ಹದಿಹರೆಯದ ಮಕ್ಕಳಿಗೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗೆಗೆ ತಜ್ಞವೈದ್ಯರಿಂದ ಮಾಹಿತಿ ನೀಡಲಾಗುತ್ತಿದೆ

ಸಂಸಾರ ರಥವನ್ನು ಅಚ್ಚುಕಟ್ಟಾಗಿ ಮುನ್ನಡೆಸಲು ಮಹಿಳೆಯರೂ ಹೆಗಲು ನೀಡುತ್ತಿರುವ ಇತ್ತೀಚಿನ ದಿನಗಳಲ್ಲಿ ಆ ಋತುಚಕ್ರದ ದಿನಗಳಲ್ಲೂ ಆಕೆ ಕೆಲಸಕ್ಕೆ ಹಾಜರಾಗಬೇಕಾಗುತ್ತದೆ. ಕೆಲಸದ ಸ್ಥಳಗಳಲ್ಲಿ ಸ್ತ್ರೀಯರಿಗೆಂದೇ ಮೀಸಲಾದ ಸ್ವಚ್ಛ ಶೌಚಾಲಯ ಮತ್ತು ನೀರಿನ ಸೌಲಭ್ಯ ಕಲ್ಪಿಸ ಬೇಕು.

ಋತುಚಕ್ರದ ದಿನಗಳಲ್ಲಿ ಮಹಿಳೆ ನೈರ್ಮಲ್ಯವನ್ನು ಕಾಪಾಡಿಕೊಳ್ಳದಿದ್ದಲ್ಲಿ ಪದೇ ಪದೇ ಮೂತ್ರದ ಸೋಂಕು, ಬಿಳಿಸ್ರಾವ ಹಾಗೂ ಜನನೇಂದ್ರಿಯಗಳ ಶಿಲೀಂಧ್ರ ಸೋಂಕಿಗೊಳಗಾಗ ಬಹುದು ಈ ನಿಟ್ಟಿನಲ್ಲಿ ಮಾಹಿತಿ ನೀಡುವುದರ ಜೊತೆಗೆ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಬೇಕು.

ಜನನೇಂದ್ರಿಯಗಳ ಸ್ವಚ್ಛತೆಗಾಗಿ ಯೋನಿಯ ಸ್ವಚ್ಛತಾ ದ್ರಾವಣಗಳ (vaginal wash lotions) ಅತಿಯಾದ ಬಳಕೆ, ದೇಹಕ್ಕೆ ಅಗತ್ಯವಾದ/ನೈರ್ಮಲ್ಯ ಕಾಪಾಡಲು ಸಹಕಾರಿ ಯಾಗುವ ಸೂಕ್ಷ್ಮಜೀವಿಗಳನ್ನು  ನಾಶಮಾಡಿ ಸೋಂಕಿಗೆ ದಾರಿ ಮಾಡಿಕೊಡುತ್ತದೆ. ಅಂತೆಯೇ ಯೋನಿಯ ಸ್ವಚ್ಛತೆಗಾಗಿ ಯಾವುದೇ ಸಾಬೂನು, ಸುಗಂಧಿತ ಸ್ಪ್ರೇಗಳ ಬಳಕೆಯೂ ಒಳ್ಳೆಯದಲ್ಲ.

ದೈಹಿಕ ಶುಚಿತ್ವವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಉತ್ತಮ ಪೌಷ್ಟಿಕ ಆಹಾರದ ಸೇವನೆ, ಯಥೇಚ್ಛವಾಗಿ ನೀರು ಕುಡಿಯುವುದು, ಮಿತವಾದ ವ್ಯಾಯಾಮ ಹಾಗೂ ಸುರಕ್ಷಿತ ಲೈಂಗಿಕತೆಯಿಂದ ಋತುಚಕ್ರದ ಸಮಯದಲ್ಲಿನ ನೈರ್ಮಲ್ಯತೆ ಹಾಗೂ ಸುಧೃಢ ಆರೋಗ್ಯವನ್ನು ಉಳಿಸಿ ಬೆಳೆಸಿಕೊಳ್ಳಬಹುದು.

​​
 
 
 
 
 
 
 
 
 
 
 

Leave a Reply