ಮಕ್ಕಳ ಪ್ರಾರ್ಥನೆಯಿಂದ ಆರೋಗ್ಯವೃದ್ಧಿ-ಶಿಕ್ಷಕರ ಸೇವೆ ಅವಿಸ್ಮರಣೀಯ – ರೆ.ಫಾ.ಚಾರ್ಲ್ಸ್ ಮಿನೇಜಸ್

ಉಡುಪಿ:-ಮಕ್ಕಳ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಅವರ ಶ್ರೇಯೋಭಿವೃದ್ಧಿಗೆ ಪ್ರೀತಿಯಿಂದ ಶ್ರಮಿಸುವ ಶಿಕ್ಷಕರು ಸದಾ ಮಕ್ಕಳ ಸ್ಮೃತಿಪಟಲದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಸೇವೆಗೆ ಕೊನೆಯಿಲ್ಲ. ಪಠ್ಯಪುಸ್ತಕದ ಮಿತಿಯನ್ನು ಮೀರಿ ಮಾಡುವ ಕೆಲಸವೇ ವಿಶೇಷವಾದ ಸೇವೆ.ಶಿಕ್ಷಕರ ಸೇವೆ ಅವಿಸ್ಮರಣೀಯವಾಗಿದ್ದು, ಮಕ್ಕಳ ಪ್ರಾರ್ಥನೆಯಿಂದ ಆರೋಗ್ಯವೂ ವೃದ್ದಿಯಾಗುತ್ತದೆ ಎಂದು ಉಡುಪಿ ಚರ್ಚ್ನ ಧರ್ಮಗುರುಗಳಾದ ರೆ.ಫಾ.ಚಾರ್ಲ್ಸ್ ಮಿನೇಜಸ್ ನುಡಿದರು.

ಅವರು ಶನಿವಾರ ಉಡುಪಿ ಸಂತಮೇರಿ ಶಾಲಾ ವಠಾರದಲ್ಲಿ ಉಡುಪಿ ಜಿಲ್ಲಾ ಅನುದಾನಿತ ಶಾಲಾ ಶಿಕ್ಷಕರ ಸಂಘ, ಉಡುಪಿ ತಾಲೂಕು ಘಟಕದ ವತಿಯಿಂದ ಫೆ.28 ರವಿವಾರ ವಯೋನಿವೃತ್ತಿ ಹೊಂದುತ್ತಿರುವ ಸಂಘದ ಕಾರ್ಯದರ್ಶಿ ಹಾಗೂ ಸಂತ ಮೇರಿ ಶಾಲಾ ಮುಖ್ಯ ಶಿಕ್ಷಕ ಹೆರಾಲ್ಡ್ ಆರ್.ಡಿಸೋಜರವರನ್ನು ಸಂಘದ ವತಿಯಿಂದ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ೪೧ವಷಗಳ ಕಾಲ ಸುಧೀರ್ಘ ಸೇವೆಸಲ್ಲಿಸಿ ನಿವೃತ್ತಿಯಾದ ಶಿಕ್ಷಕ್ಷರ ಬಹುಮುಖದ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷ ಅರುಣ್‌ಕುಮಾರ್ ಶೆಟ್ಟಿ ಪೆರ್ಡೂರು ಮಾತನಾಡಿ, ಹೆರಾಲ್ಡ್ರವರು ಶಾಲಾ ಕರ್ತವ್ಯದ ಜೊತೆಯಲ್ಲಿ ತಾಲೂಕು ಅನುದಾನಿತ ಶಿಕ್ಷಕರ ಆಶೋತ್ತರಗಳಿಗೆ ಸ್ಪಂದಿಸಿ ನೀಡಿದ ಸಹಾಯವನ್ನು ಸ್ಮರಿಸಿದರು. ಅನುದಾನಿತ ಶಾಲಾ ಶಿಕ್ಷಕರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆ ಹಾಗೂ ಪರಿಹರಿಸುವ ನಿಟ್ಟಿನಲ್ಲಿ ಸಂಘದ ಹೋರಾಟದ ಬಗ್ಗೆ ಗಮನಸೆಳೆದರು.

 
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಶಿರ್ವ, ತಾಲೂಕು ಸಂಘದ ನಿಕಟಪೂರ್ವ ಅಧ್ಯಕ್ಷ ವಿವೇಕಾನಂದ ಶೆಟ್ಟಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಚಂದ್ರಹಾಸ ಪ್ರಭು ಮುದರಂಗಡಿ ಸನ್ಮಾನ ವಾಚಿಸಿದರು. ಸನ್ಮಾನ ಸ್ವೀಕರಿಸಿದ ಹೆರಾಲ್ಡ್ ಡಿಸೋಜ ಸೇವಾನುಭವದ ನುಡಿಗಳೊಂದಿಗೆ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.  ಶಿಕ್ಷಕಿ ಮರಿಯಾ ಕ್ರಾಸ್ತಾ ನಿರೂಪಿಸಿದರು. ತಾಲೂಕು ಸಂಘದ ಕೋಶಾಧಿಕಾರಿ ಐರನ್ ಡಿಸೋಜ ಧನ್ಯವಾದವಿತ್ತರು. ತಾಲೂಕಿನ ಅನುದಾನಿತ ಶಾಲಾ ಶಿಕ್ಷಕ/ಶಿಕ್ಷಕಿಯರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply