ಸತತ ಅಧ್ಯಯನದಿಂದ ಜ್ಞಾನ ವೃದ್ಧಿ: ಅದಮಾರು ಶ್ರೀಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು

ಉಡುಪಿ: ಅಧ್ಯಾಪಕರು ನಿರಂತರ ಅಧ್ಯಯನ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಅಧ್ಯಯನದಿಂದ ಜ್ಞಾನ ವೃದ್ಧಿ ಯಾಗುತ್ತದೆ. ಹೀಗೆ ಗಳಿಸಿದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವುದರೊಂದಿಗೆ ಬರವಣಿಗೆ ಮೂಲಕ ಸಮಾಜಕ್ಕೂ ತಲುಪಿಸಬೇಕು ಎಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಅವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ಮಾರ್ಗದರ್ಶನದಲ್ಲಿ ಆಯೋಜಿಸಲಾದ ಕೃತಿಗಳ ಬಿಡುಗಡೆ ಹಾಗೂ ಸಂಪನ್ಮೂಲ ವ್ಯಕ್ತಿ ಪ್ರವೀಣ್ ಗುಡಿಯವರ ಶಿಕ್ಷಕ ತರಬೇತಿ ಕಾರ್ಯ ಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. 
ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಶ್ರೀಕಾಂತ್ ಸಿದ್ದಾಪುರ ಅವರ ಮುನ್ನೆಚ್ಚರಿಕೆಯೇ ಮೊದಲ ಮದ್ದು (ನಾಟಕ), ಅಜ್ಜಿ ಮತ್ತು ಮೊಮ್ಮಗಳು (ಕಾದಂಬರಿ) ಹಾಗೂ ಅಂತಿಮ ಬಿ.ಎ. ವಿದ್ಯಾರ್ಥಿ  ಶಿವರಾಜಕುಮಾರ್ ಬರೆದ ಕನ್ನಡ ಗೂಡು (ಕನ್ನಡ ಶಾಲೆಗಳ ಸಮೀಕ್ಷೆ) ಕೃತಿಗಳನ್ನು ಶ್ರೀಪಾದರು ಬಿಡುಗಡೆಗೊಳಿಸಿದರು.
ಕಾಲೇಜಿನ ಗೌರವ ಕೋಶಾಧಿಕಾರಿ  ಪ್ರದೀಪ್ ಕುಮಾರ್ ಕೃತಿಗಳ ಕುರಿತು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ..ಎ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕ ಡಾ.ಪ್ರಕಾಶ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
 ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗದಲ್ಲಿ ಸೇವೆ ಸಲ್ಲಿಸಿದ ಶ್ರೀ ಮಂಜುನಾಥ ಕರಬ ಹಾಗೂ ವಿದ್ಯಾರ್ಥಿ ಶಿವರಾಜ ಕುಮಾರನನ್ನು ಶ್ರೀಗಳು ಸಮ್ಮಾನಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸಿದ್ದಾಪುರ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಡಾ. ಪ್ರಜ್ಞ ಮಾರ್ಪಳ್ಳಿ ಕಾರ್ಯಕ್ರಮ ನಿರೂಪಿಸಿದರು.
 
 
 
 
 
 
 
 
 
 
 

Leave a Reply