ಪೂರ್ಣಪ್ರಜ್ಞ ಕಾಲೇಜಿಗೆ ‘ನ್ಯಾಕ್’ನಿಂದ A+  ಗ್ರೇಡ್ ಮಾನ್ಯತೆ

ಉಡುಪಿ: ಉಡುಪಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಉಡುಪಿ ಶ್ರೀ ಅದಮಾರುಮಠ ಶಿಕ್ಷಣ ಮಂಡಳಿಯ ಆಡಳಿತಕ್ಕೆ ಒಳಪಟ್ಟ ಪೂರ್ಣಪ್ರಜ್ಞಕಾಲೇಜು ಹೊಸ ಮಾನ್ಯತಾ ಕ್ರಮದಲ್ಲಿ 3.27 ‘ಸಿಜಿಪಿಎ’ಯೊಂದಿಗೆ ಯುಜಿಸಿ ನಿರ್ದೇಶನದ ರಾಷ್ಟ್ರೀಯ ಮೌಲ್ಯಮಾಪನ/ ಮೌಲ್ಯಾಂಕನ ತಂಡದಿಂದ  A+ಗ್ರೇಡ್ ಪಡೆದಿದೆ ಎಂದು ಪ್ರಾಂಶುಪಾಲ ಡಾ. ರಾಘವೇಂದ್ರ ಎ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಸಂಸ್ಥೆಯು ತನ್ನ ಆ೦ತರಿಕ ಗುಣಮಟ್ಟ ಖಾತರಿ ಘಟಕದಿ೦ದ ನ್ಯಾಕ್‌ಗಾಗಿ ನಾಲ್ಕನೇ ಆವೃತ್ತಿಯ ಸ್ವಅಧ್ಯಯನ ವರದಿ ಮಂಡಿಸಿತ್ತು. ಅದರ ಆಧಾರದಲ್ಲಿ ಕಳೆದ ಸೆಪ್ಟಂಬರ್ 29 ಮತ್ತು 30ರಂದು ನ್ಯಾಕ್ ನಾಮಾಂಕಿತ ಮೂವರ ತಂಡವು ಕಾಲೇಜಿಗೆ ಭೇಟಿ ನೀಡಿ ಸಂಸ್ಥೆಯ ಭೌತಿಕ ಮತ್ತು ಮಾನವ ಸಂಪನ್ಮೂಲಗಳ ಬಗೆಗೆ ಪರಿಶೀಲಿಸಿ ವರದಿ ನೀಡಿತ್ತು. 
 
ಅಧ್ಯಕ್ಷೆ ಪುಣೆಯ ಸಿಂಬಯೋಸಿಸ್ ಇಂಟರ್‌ನ್ಯಾಶನಲ್ (ಡೀಮ್ಡ್ಯುನಿವರ್ಸಿಟಿ) ಇದರಡಾ. ರಜನಿ ಗುಪ್ತೆ ನೇತೃತ್ವದಲ್ಲಿ ಸಂಯೋಜಕರಾಗಿ ಕೊಡೈಕೆನಲ್‌ನ ಮದರ್‌ತೆರೆಸಾ ವಿ.ವಿ.ಯ ಇತಿಹಾಸ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ ಪ್ರೇಮಲತಾ ಪಿ.ಎನ್. ಮತ್ತು ಸದಸ್ಯರಾಗಿ ಜಾರ್ಖಂಡ್‌ ಧನ್‌ಬಾದ್‌ನ ಪಿ. ಕೆ. ರಾಯ್‌ ಕಾಲೇಜಿನ ಪ್ರಾಂಶುಪಾಲ ಡಾ. ಬ್ರಜ್‌ಕಿಶೋರ್ ಸಿನ್ಹ ಇವರನ್ನು ಒಳಗೊಂಡ ತಂಡವು ಕಾಲೇಜಿನ ಐದು ವರ್ಷಗಳ ಬೆಳವಣಿಗೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದೆ.

ಕಾಲೇಜಿನ ಪಠ್ಯಕ್ರಮ, ಶೈಕ್ಷಣಿಕ ಚಟುವಟಿಕೆ, ಸಂಶೋಧನೆ, ವಿಸ್ತರಣಾ ಕಾರ್ಯಕ್ರಮಗಳು ಮೂಲ ಸೌಕರ್ಯಗಳು, ಕಲಿಕಾ ಸಂಪನ್ಮೂಲ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ, ಆಡಳಿತ ನಾಯಕತ್ವ, ನಿರ್ವಹಣೆ ಹಾಗೂ ವ್ಯಕ್ತಿಗತ ಮೌಲ್ಯಗಳು ಮತ್ತು ಅತ್ಯುತ್ತಮ ಕಾರ್ಯಗಳನ್ನು ನ್ಯಾಕ್ ಮಾಪನ ಮಾಡಿ ಮಾನ್ಯತೆಯನ್ನು ೪ನೆಯ ಅವಧಿಗೆ ನೀಡಿದೆ. 
ಕಾಲೇಜು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದನ್ನು ಶ್ಲಾಘಿಸಿದೆ. ರಾಷ್ಟ್ರೀಯ  ಮತ್ತು ಅಂತರರಾಷ್ಟ್ರೀಯ  ಮಟ್ಟದಲ್ಲಿ ಕಾಲೇಜಿನ ಪ್ರಾಧ್ಯಾಪಕರುಗಳು ಸಂಶೋಧನೆಗೆ ನೀಡಿದ ಕೊಡುಗೆಯನ್ನು ಸಮಿತಿಯು ಪ್ರಶಂಸಿಸಿದೆ. 
 
ಕಾಲೇಜಿನಲ್ಲಿ ಸುಮಾರು 25ಕ್ಕೂ ಹೆಚ್ಚಿನ ಮೌಲ್ಯವರ್ಧಿತ ಹಾಗೂ ವೃತ್ತಿಪರ ಕೋರ್ಸುಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಹೆಚ್ಚಿನ ಉಪಯೋಗವಾಗಿದ್ದನ್ನು ಸಮಿತಿಯು ಅಭಿನಂದಿಸಿದೆ. 
 
ಪೂರ್ಣಪ್ರಜ್ಞಕಾಲೇಜು ಸುಸಜ್ಜಿತ ಒಳ ಕ್ರೀಡಾಂಗಣ, ಸಂಶೋಧನಾ ಪ್ರಯೋಗಾಲಯಗಳು, ಸೃಜನಾತ್ಮಕ ಔದ್ಯೋಗಿಕ ತರಬೇತಿ ಮತ್ತು ಪ್ಲೇಸ್‌ಮೆಂಟ್ ಸೌಲಭ್ಯಗಳನ್ನು ಹೊಂದಿರುವುದು ತ೦ಡ ಗಮನಿಸಿದೆ. ಪೂರ್ಣಪ್ರಜ್ಞ ಕಾಲೇಜು 1960ರಲ್ಲಿ ಪ್ರಾರಂಭಗೊ೦ಡಿದ್ದು, ಪ್ರಸ್ತುತ ಬಿ.ಎ., ಬಿ.ಎಸ್ಸಿ. ಬಿ.ಕಾಂ., ಹಾಗೂ ಬಿ.ಬಿ.ಎ. ಹಾಗೂ ಎಂ.ಕಾ೦. ಮತ್ತು ಎಂ.ಎಸ್ಸಿ. (ಗಣಿತಶಾಸ್ಟ್ರ) ಪದವಿಗಳನ್ನು ನೀಡುತ್ತಿದೆ. ಪ್ರಸ್ತುತ 1500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.

ಶ್ರೀ ಅದಮಾರು ಮಠದ ಹಿರಿಯ ಯತಿ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಅದಮಾರು ಮಠ ಶಿಕ್ಷಣ ಮಂಡಳಿಯ ಮಂಡಳಿ ಅಧ್ಯಕ್ಷ ಶ್ರೀ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಗೌರವ ಕಾರ್ಯದರ್ಶಿ ಡಾ ಜಿ. ಎಸ್‌ಚಂದ್ರಶೇಖರ್ ಮತ್ತು ಗೌರವ ಕೋಶಾಧಿಕಾರಿ ಶ್ರೀ ಸಿಎ. ಪ್ರಶಾಂತ ಹೊಳ್ಳ ಅವರು ಕಾಲೇಜಿನ ಈ ಗೌರವಕ್ಕೆ ಪಾತ್ರರಾದ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವೃಂದ, ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳು ಮತ್ತು ಪೋಷಕರನ್ನು ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply