ಗೊಂಬೆ ಕಲಾಕೃತಿಯಲ್ಲಿ ಅರಳಿದ ಶ್ರೀ ರಾಘವೇಂದ್ರ ಚರಿತೆ

ಮೈಸೂರಿನ ಕಲಾವಿದ ರಾಘವೇಂದ್ರರ ಕೈಚಳಕ
ಅಶ್ವಯುಜ ಮಾಸ ಎಂದರೆ ಅದು ನಾಡ ಹಬ್ಬದ ಸಂಭ್ರಮದ ಮಾಸ. ಕಾರ್ತೀಕ ದೀಪೋತ್ಸವಕ್ಕೆ ಮುನ್ನುಡಿ ಬರೆಯುವ ದಿನಗಳು. ಈ ಸಂದರ್ಭ ಮನೆ  ಮನೆಗಳಲ್ಲಿ ಗೊಂಬೆ ಇಡುವುದು, ದಸರಾ ಆಚರಣೆ ಮಾಡುವುದು, ದುಷ್ಟ ಶಕ್ತಿ ಸಂಹಾರದ ಸಂಕೇತವಾದ ದೇವಿಯನ್ನು ಮನೆ- ಮಂದಿರಗಳಲ್ಲಿ ಆರಾಧಿಸುವುದು ನಮ್ಮ ಸಂಪ್ರ ದಾಯ. ಮೈಸೂರು ಸಂಸ್ಥಾನದ ಪರಂಪರೆಗೆ ಒಳಪಡುವ ಬಹುತೇಕ ಪ್ರದೇಶದಲ್ಲಿ ಗೊಂಬೆ ಇಡುವುದು ಒಂದು ಸಂಭ್ರಮವೇ ಆಗಿದೆ. 
 
ಅನೇಕಮಾತೆಯರು ತಾವು ಸಂಗ್ರಹಿಸಿದ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಪ್ರದರ್ಶನಕ್ಕೆ ಇಡುತ್ತಾರೆ. ಇದರಲ್ಲಿ ಪಟ್ಟದ ಗೊಂಬೆಗಳೂ ಸೇರಿದಂತೆ ರಾಮಾಯಣ, ಮಹಾಭಾರತ, ಭಾಗವತದ ಕತೆಗಳು ಇರುತ್ತವೆ. ಇದಲ್ಲದೇ ಹರಿದಾಸರು, ಸಾಧು ಸಂತರು, ಮಹಾ ಪುರುಷರು, ರಾಷ್ಟ್ರಪುರುಷರ ಜೀವನ ಸಾಧನೆ, ಪವಾಡ, ಮಹತ್ವ ಮತ್ತು ನೀತಿ ಸಾರುವ ಪ್ರಸಂಗಗಳು (ಸೀಕ್ವೆನ್ಸ್) ಇರುತ್ತವೆ. ಭಾರತೀಯ ಸಂಪ್ರದಾಯದ ಅನೇಕ ಆಚರಣೆಗಳನ್ನೂ ಬಿಂಬಿಸುವ ಯತ್ನ ಗೊಂಬೆ ಇಡುವ ಸಂದರ್ಭ ಮಾಡಲಾಗುತ್ತದೆ. ಎಲ್ಲವೂ ಅವರವರ ಆಸಕ್ತಿ ಮತ್ತು ಅಭಿರುಚಿ ಮೇಲೆ ನಿರ್ಧರಿತವಾಗುತ್ತವೆ.

ಗೊಂಬೆ ನೋಡಲು ನೆರೆ ಹೊರೆಯವರನ್ನು ಆಹ್ವಾನಿಸುವುದು, ಸಂಜೆ ವೇಳೆ ಪ್ರಸಾದ ಹಂಚುವುದು, ಗೊಂಬೆ ಬಾಗಿನ ನೀಡುವುದು ಇತ್ಯಾದಿ ನಮ್ಮ ಸಾಮಾಜಿಕ ಸಂಬ೦ಧಗಳನ್ನು ಗಾಢ ಮಾಡುತ್ತದೆ. ಸಾಮಾನ್ಯವಾಗಿ ಮಾತೆಯರು ಈ ಗೊಂಬೆಗಳನ್ನು ಇಡುವ ಚಟುವಟಿಕೆಯಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಆದರೆ ಮೈಸೂರಿನಲ್ಲೊಬ್ಬ ಅಪರೂಪದ ಕಲಾವಿದರು ಗೊಂಬೆಯನ್ನು ತಾವೇ ತಯಾರಿಸಿ ಅದನ್ನು ಪ್ರದರ್ಶನಕ್ಕೆ ಇಡುವ ಹವ್ಯಾಸ ರೂಢಿಸಿಕೊಂಡು ಬಂದಿರುವುದು ವಿಶೇಷದಲ್ಲಿ ವಿಶೇಷ. ಅಪರೂಪದಲ್ಲಿ ಅಪರೂಪ. ವೈವಿಧ್ಯತೆಯಲ್ಲಿ ವಿಭಿನ್ನವಾಗಿ ಗಮನ ಸೆಳೆದಿದೆ.

ಇವರೇ ಕೆ.ಎಸ್. ರಾಘವೇಂದ್ರ. 75ವರ್ಷದ `ತರುಣ ಕಲಾವಿದ’.  ವಿಜಯನಗರದ 2ನೇ ಹಂತದ ಮಹದೇಶ್ವರ ನಗರದ ತಮ್ಮ ಮನೆಯನ್ನೇ ‘ಇಂಚರ ಕಲಾಕ್ಷೇತ್ರ’ ಮಾಡಿರುವ ಇವರು ಈ ಬಾರಿ ` ಶ್ರೀನಿವಾಸ ಕಲ್ಯಾಣ’ ಮತ್ತು `ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ’ ಯನ್ನು ಮೂರ್ತ ರೂಪಕ್ಕೆ ಇಳಿಸುವ ವಿನೂತನ ಯತ್ನ ಮಾಡಿ ಜನ ಮನ್ನಣೆ ಗಳಿಸಿದ್ದಾರೆ. ಇದಕ್ಕೆ ಅವರ ಪತ್ನಿ ಗೀತಾ ಅವರು ಸಮಗ್ರ ಸಹಕಾರ ನೀಡಿ ಪತಿಯ ಕಲಾಸಕ್ತಿಗೆ ಬೆಂಬಲಿಸಿದ್ದಾರೆ.

ಪುರಾತತ್ವ ಇಲಾಖೆಯಲ್ಲಿ ಸಹಾಯಕ ಕ್ಯೂರೇಟರ್ ಆಗಿ ಸೇವೆ ಸಲ್ಲಿಸಿ ರಾಜ್ಯದ ವಿವಿಧೆಡೆ ಕೆಲಸ ನಿರ್ವಹಿಸಿದ ರಾಘವೇಂದ್ರ ಅವರು ಸಾಗರದಾಚೆಯ ಮಸ್ಕಟ್‌ನಲ್ಲಿ ಕೆಲ ವರ್ಷ ಇಂಟೀರಿಯರ್ ಡೆಕೋರೇಷನ್ ಕಂಪನಿಯಲ್ಲಿ ದುಡಿದರು. ನಂತರ ಸ್ವಂತ ಊರು ಮೈಸೂರಿಗೆ ಆಗಮಿಸಿ ಫೋಟೋಗ್ರಾಫಿ ಸ್ಕೂಲ್ ನಡೆಸಿದರು. ಇಂಚರ ವಿದ್ಯಾಲಯ ಆರಂಭಿಸಿ ಚಿಣ್ಣರ ಮನೋವಿಕಾಸಕ್ಕೆ ಶ್ರಮಿಸಿದರು. ಕಲಾವಿದ ಎಂದೂ ನಿಂತ ನೀರಾಗಬಾರದು. ಸದಾ ಏನಾದರೂ ಒಂದು ಕ್ರಿಯಾತ್ಮಕ ಚಟುವಟಿಕೆ ಮಾಡುತ್ತಿರಬೇಕು ಎಂಬುದಕ್ಕೆ ಇವರು ದೊಡ್ಡ ನಿದರ್ಶನ.

ಮಗಳ ಮದುವೆ ಸಂದರ್ಭ (2010) ಗೌರೀ ಪೂಜೆಗೆ ಮನೆಯಲ್ಲೇ ಪೇಪರ್ ಪಲ್ಪ್ ಬಳಸಿ ಒಂದು ಗೌರಿ ಮೂರ್ತಿ ತಯಾರಿಸಿದರು. ಎಲ್ಲರಿಂದ ಪ್ರಶಂಸೆ ಬಂತು. ಸರಿ ಗಣೇಶನ್ನೂ ಮಾಡಿದರು. ಆತನಿಗೆ ಪೂಜೆಯೂ ನೆರವೇರಿತು. ಲಾಕ್‌ಡೌನ್ ಸಂದರ್ಭ. ಎರಡು ವರ್ಷ ಹೊರಗೆಲ್ಲೂ ಹೋಗದ ರಾಘವೇಂದ್ರ ಅವರು ಏನಾದರೂ ಕಲಾಕೃತಿ ಮಾಡಬೇಕು ಎಂದು ಸಂಕಲ್ಪ ಮಾಡಿದರು.

ಆಗ ಅವರಿಗೆ ಕಣ್ಣೆದುರು ಬಂದದ್ದು `ಶ್ರೀನಿವಾಸ ಕಲ್ಯಾಣ’. ಸರಿ. ಪೇಪರ್ ಪಲ್ಪ್, ಫೇವಿಕಾಲ್, ಕಾರ್ನ್ ಫ್ಲೋರ್, ಸಿರಾಮಿಕ್ ಪೌಡರ್ ಹದವಾದ ಮಿಶ್ರಣದಲ್ಲಿ `ಹೋಂ ಮೇಡ್ ಕ್ಲೇ’ ಸಿದ್ಧ ಮಾಡಿಕೊಂಡರು. ಮಹಾನ್ ಯತಿ ಶ್ರೀ ವಾದಿರಾಜರು ಶ್ರೀನಿವಾಸ ಕಲ್ಯಾಣದ ಕತೆಯನ್ನು ಗೀತ ರೂಪಕದಲ್ಲಿ ಹೇಳುವ ಒಂದು ಪ್ರಸಂಗಕ್ಕೆ ಮೂರ್ತರೂಪ ನೀಡಿದರು. ಹಾಗೇ ಸೀಕ್ವೆನ್ಸ್ ಬೆಳೆಯುತ್ತಾ ಹೋಯಿತು.

ಗಂಗಾತೀರದಲ್ಲಿ ಋಷಿ ಮುನಿಗಳು ಯಜ್ಞ ಮಾಡಿ ಯಾರಿಗೆ ಹವಿಸ್ಸು ಕೊಡಬೇಕು ಎಂಬ ಚಿಂತನೆಯಲ್ಲಿದ್ದಾಗ ಭೃಗುಮುನಿಗಳು ಅಲ್ಲಿಗೆ ಬರುತ್ತಾರೆ. ನಂತರ ಅವರು ಹವಿಸ್ಸಿಗೆ ಅರ್ಹನಾದ ದೇವನನ್ನು ಹುಡುಕಿಕೊಂಡು ಸತ್ಯಲೋಕ (ಬ್ರಹ್ಮ-ಸರಸ್ವತಿ), ಕೈಲಾಸ (ಶಿವ ಪಾರ್ವತಿ) ಮತ್ತು ವೈಕುಂಠಕ್ಕೆ (ನಾರಾಯಣ- ಲಕ್ಷ್ಮೀ ) ಬರುವ ಪ್ರಸಂಗ, ಶ್ರೀನಿವಾಸನ ಅವತಾರ, ಕೊಲ್ಲಾಪುರಕ್ಕೆ ಲಕ್ಷ್ಮೀ ತೆರಳುವುದು, ಶ್ರೀನಿವಾಸ ಹುತ್ತದಲ್ಲಿ ನೆಲೆಸುವುದು, ವರಾಹದೇವರಲ್ಲಿ ಭೂಮಿ ಬೇಡುವುದು, ಬಕುಳಾದೇವಿ ಉಪಚಾರ, ಬೇಟೆ, ಆನೆ ಬೆನ್ನುಹಟ್ಟಿ ತೆರಳಿದ ನಂತರ ಪದ್ಮಾವತಿ ದರ್ಶನ, ಕೊರವಂಜಿ ವೇಶದಲ್ಲಿ ಆಕಾಶರಾಜನ ಅರಮನೆ ಪ್ರವೇಶ, ರಾಣಿ ಸಮ್ಮುಖ ಪದ್ಮಾವತಿಗೆ ಕಣಿ ಹೇಳಿವುದು, ವಿವಾಹಕ್ಕೆ ತಯಾರಿ, ಕುಬೇರನಿಂದ ಸಾಲ ಪಡೆಯುವುದು, ಸಮಸ್ತ ದೇವಾದಿದೇವತೆಗಳ, ಋಷಿ ಮುನಿಗಳ ಸಮ್ಮುಖ ಲಕ್ಷ್ಮೀ ದೇವಿಯೇ ಬಂದು ನಿಂತು ಶ್ರೀನಿವಾಸ ಕಲ್ಯಾಣ ಮಾಡಿಸುವುದು….. ಹೀಗೆ 36 ಪ್ರಸಂಗಗಳು ಅದ್ಭುತವಾಗಿ ಮೂಡಿ ಬಂದಿವೆ. ಇದನ್ನು ಒಪ್ಪ ಓರಣವಾಗಿ ಜೋಡಿಸಿಟ್ಟಿರುವ ಪರಿಯನ್ನು ಕಂಡರೆ ಇಡೀ ಶ್ರೀನಿವಾಸ ಕಲ್ಯಾಣದ ಕತೆಯನ್ನು ಗೊಂಬೆಗಳೇ ನಮಗೆ ನಿರೂಪಿಸುತ್ತವೆ.

 

ರಾಘವೇಂದ್ರ ಸ್ವಾಮಿಗಳ ಚರಿತ್ರೆ:  ಕಲಾವಿದ ರಾಘವೇಂದ್ರ ಅವರಿಗೆ ನಂತರ ಪರಿಕಲ್ಪನೆ ಬಂದದ್ದು ಕಲಿಯುಗದ ಕಾಮಧೇನು, ಕಲ್ಪವೃಕ್ಷವೆಂದೇ ಲೋಕ ಖ್ಯಾತರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ. ಶಂಕು ಕರ್ಣನಿoದ ಆರಂಭವಾಗುವ ಕತೆ ಪ್ರಹ್ಲಾದರಾಜರ ಅವತಾರ, ಹಿರಣ್ಯಕಶಪುವಿನ ಸಂಹಾರ, ನೃಸಿಂಹಾವತಾರ, ಕಲಿಯುಗದಲ್ಲಿ ವೇಂಕಟನಾಥನ ಜನನ, ಉಪನಯನ, ವಿದ್ಯಾಭ್ಯಾಸ, ವಿವಾಹ, ವೇದಜ್ಞಾನ ಸಂಪಾದನೆ, ಶ್ರೀ ಸುಧೀಂದ್ರತೀರ್ಥರ ಶಿಷ್ಯತ್ವ, ಸಂಚಾರ, ಕುಟುಂಬದ ಕಷ್ಟನಷ್ಟಗಳು, ಅಗ್ನಿ ಸೂಕ್ತದಿಂದಗ೦ಧ ತೇಯುವುದು, ಸನ್ಯಾಸ ಸ್ವೀಕಾರ, ಪತ್ನಿಗೆ ಪಿಶಾಚ ಜನ್ಮದಿಂದ ಮುಕ್ತಿ, ವೇದಾಂತ ಸಾಮ್ರಾಜ್ಯದಲ್ಲಿ ಸಾಧನೆ, ಭಕ್ತರಿಗೆ ದಿವ್ಯ ಮಂತ್ರಾಕ್ಷತೆಯಿ೦ದ ಪೀಡೆಗಳ ನಿವಾರಣೆ, ಪವಾಡ, ಅದೋನಿ ನವಾಬ (ಮುಸಲ್ಮಾನ ದೊರೆ) ಸಿದ್ದಿ ಮಸೂದ್ ಖಾನ್‌ಗೂ ಅನುಗ್ರಹ, ವಿವಿಧ ಗ್ರಂಥ ರಚನೆ, ಶಿಷ್ಯರಿಗೆ ಪಾಠ ಪ್ರವಚನ, ದೇಶ ಸಂಚಾರ, ಭಕ್ತ ಸಾಗರಕ್ಕೆ ಪರಮಾನುಗ್ರಹ, ಕಡೆಗೆ ಮಂತ್ರಾಲಯದಲ್ಲಿ ವೃಂದಾವನ ಪ್ರವೇಶ, ಪರಮಾಪ್ತ ಶಿಷ್ಯ ಅಪ್ಪಣ್ಣಾಚಾರ್ಯರಿಂದ ಶ್ರೀ ರಾಘವೇಂದ್ರ ಸ್ತೋತ್ರ ರಚನೆ, ವೃಂದಾವನದಿ೦ದ `ಸಾಕ್ಷಿ ಹಯಾಸ್ಯೋತ್ರಹೀ….’ ದಿವ್ಯ ವಾಣಿ ವರೆಗೆ ಮಹಾ ಮಹಿಮರಾದ ರಾಯರ ಸಮಗ್ರ ಜೀವನ ವೃಂತ್ತಾ೦ತ 49 ಸೀಕ್ವೆನ್ಸ್ ನೊಂದಿಗೆ ಚಿತ್ರಣಗೊಂಡಿದೆ.

ದಿನಕ್ಕೆ ೫ ಗಂಟೆ ಸಮಯ ಅರ್ಪಣೆ: ಕಲಾವಿದ ಕೆ.ಎಸ್. ರಾಘವೇಂದ್ರ ತಮಗೆ 75 ವರ್ಷವಾಯಿತು ಎಂಬುದನ್ನೂ ಮರೆತು 25ವರುಷದ ತರುಣನಂತೆ ಕಲಾಕೃತಿ ಮಾಡಲು ನಿತ್ಯವೂ ಅಣಿ ಆಗುತ್ತಾರೆ. ದಿನಕ್ಕೆ 5 ಗಂಟೆಗೂ ಹೆಚ್ಚು ಸಮಯ ಇದಕ್ಕಾಗಿ ಇಟ್ಟ ಕಾರಣ ಕೋವಿಡ್ ಸಂದರ್ಭದ 2ವರುಷ ಇವರಿಗೆ ವರವಾದವು. ಒಂದು ವರ್ಷ ಶ್ರೀನಿವಾಸ ಇನ್ನೊಂದು ವರ್ಷ ರಾಯರು ಗೊಂಬೆಗಳ ಸ್ವರೂಪದಲ್ಲಿ ಪಡಮೂಡಿದರು. ಇದಕ್ಕಾಗಿ ಸಾಕಷ್ಟು ಪೂರ್ವ ತಯಾರಿಯನ್ನೂ ರಾಘವೇಂದ್ರ ಅವರು ಮಾಡಿ ಕೊಂಡರು. ಹಲವು ಪುಸ್ತಕ ಓದಿದರು. ಹತ್ತಾರು ಪಂಡಿತರನ್ನು ಸಂದರ್ಶನ ಮಾಡಿದರು. ಮಂತ್ರಾಲಯದ ವಿದ್ವಾಂಸರಿ೦ದ ಅನೇಕ ವಿಚಾರ ತಿಳಿದುಕೊಂಡರು. 

ಪ್ರಾಜ್ಞರೊಂದಿಗೆ ಚರ್ಚಿಸಿದರು. ನಂತರ ಯಾವ ಪ್ರಸಂಗಕ್ಕೆ ಆಕಾರ ಕೊಡಬಹುದು ಎಂದು ಪರಿಕಲ್ಪನೆ ಮಾಡಿಕೊಂಡರು. ಪ್ತತೀ ಸೀನ್‌ಗೆ ಟೈಟಲ್ ಕೊಟ್ಟರು. ಕ್ಯಾರೆಕ್ಟರ್ ಚಿತ್ರಿಸಿಕೊಂಡರು. ತಂತಿಯಿ೦ದ ಆರ್ಮೆಚೂರ್ ರೆಡಿ ಮಾಡಿಕೊಂಡರು. ಅದಕ್ಕೆ ಹೋಂ ಮೇಡ್ ಕ್ಲೇ ನಿಂದ ಆಕಾರ ತುಂಬಿದರು. ಸ್ಯಾಂಡ್ ಪೇಪರ್, ಪ್ರೈಮರ್ ಬಳಸಿ ಪಾಲಿಷ್ ಮಾಡಿದರು. ಬಟ್ಟೆ, ಒಡವೆ, ವಸ್ತು, ಕೇಶ, ಶಲ್ಯ ಮತ್ತು ಕಾವಿ ಉಡುಗೆ ತೊಡುಗೆ ಹಾಕಿದರು. ಅಬ್ಬಬ್ಬಾ.. ಒಂದೇ ಎರಡೇ.. ನೂರಾರು ಕೆಲಸ. ಅದಕ್ಕೆ ಉಪಕಸುಬು, ಕುಸುರಿ ಕಾರ್ಯ.

ರಾಯರೇ ಶಕ್ತಿಯಾದರು: 
ನೋಡಲು ಇವೆಲ್ಲಾ ಚಂದ. ಆದರೆ ಅದರ ಹಿಂದೆ ರಾಘವೇಂದ್ರರ ಶ್ರಮಕ್ಕೆ ಸಾಕ್ಷಾತ್ ರಾಯರೇ ಶಕ್ತಿಯಾದರು. ಯುಕ್ತಿಯಾದರು. ಸ್ಫೂರ್ತಿಯಾದರು. ಸೈರಣೆ ನೀಡಿದರು. ಕಡೆಗೆ ಅನುಗ್ರಹವನ್ನೂ ನೀಡಿ ಕಲಾವಿದನಿಗೆ ಆಶೀರ್ವದಿಸಿದರು. ಇದನ್ನೆಲ್ಲಾ ವಿವರಿಸುವಾಗ ರಾಘವೇಂದ್ರರ ಕಣ್ಣಿನಲ್ಲಿ ಆನಂದ ಬಾಷ್ಪ ಹೊಮ್ಮುತ್ತದೆ. ಸಕಲ ದೇವಾನುದೇವತೆಗಳ ಸಮ್ಮುಖ ಶ್ರೀನಿವಾಸನ ಕಲ್ಯಾಣದ ಪ್ರಸಂಗ ವಿವರಿಸುವಾಗ ಅವರಿಗೆ ಎಲ್ಲಿಲ್ಲದ ಹರ್ಷ. ರಾಯರು ವೃಂದಾವನ ವಾಗುವಾಗ ಧಾರಾಕಾರ ಕಣ್ಣೀರು… ತಾನಾಗಿಯೇ ಬಂದು ಮಾತು ಮೌನವಾಗುತ್ತದೆ. ಭಾವ ಸ್ಪುರಣವಾಗುತ್ತದೆ. ಅವರ ಕಣ್ಣುಗಳೇ ಕಥೆಗೆ ವಿರಾಮ ಹೇಳುತ್ತವೆ. ಪಕ್ಕದಲ್ಲೇ ನಿಂತಿದ್ದು ಅವರ ಪತ್ನಿ ಗೀತಾ ಅವರು ಗೊಂಬೆ ವೀಕ್ಷಣೆಗೆ ಬಂದವರಿಗೆ ಸಿಹಿ ಪ್ರಸಾದ ವಿತರಿಸುವ ಪರಿ ಅದ್ಭುತ.
ಕವಿ ಹೃದಯದ ಕಲಾವಿದ: ಕವಿ ಹೃದಯದ, ಮಾತೃಭಾವದ  ಇಂಥ ಕಲಾವಿದರು ಸಿಗುವುದು ವಿರಳಾತಿವಿರಣ. ಹಾಗಾದರೆ ಬನ್ನಿ. ರಾಘವೇಂದ್ರರ ಕಲೆ ವೀಕ್ಷಿಸಿ ಅವರಿಗೆ ಒಂದು ಶುಭ ಹಾರೈಸಿ. (ಮೊಬೈಲ್ ನಂ. 98867 64542). ಸಾಧಕ ಜೀವಕ್ಕೆ ಕರೆ ಮಾಡಿ ಅಭಿನಂದಿಸಿ.  ಅಂದಹಾಗೆ ದೀಪಾವಳಿ ಅಂತ್ಯದ ವರೆಗೆ ಈ ಗೊಂಬೆಗಳ ಪ್ರದರ್ಶನ ಇರುತ್ತದೆ. ಬೆಳಗ್ಗೆ 10ರಿಂದ ರಾತ್ರಿ 8ರ ವರೆಗೆ ಉಚಿತ ವೀಕ್ಷಣೆಗೆ ಲಭ್ಯ. 
 
ನೀವೂ ಬನ್ನಿ. ವಿಳಾಸ: ಇಂಚರ ಕಲಾಕ್ಷೇತ್ರ, 150, 4ನೇ ಕ್ರಾಸ್, 3ನೇ ಮೇನ್, ಮಹದೇಶ್ವರನಗರ, 2ನೇ ಹಂತ, ವಿಜಯನಗರ, ಮೈಸೂರು-16.

ಲೇಖನ : ಕೌಸಲ್ಯಾರಾಮ

 

 
 
 
 
 
 
 
 
 
 
 

Leave a Reply