ಕರಾವಳಿ ತೀರದ ಮೇರು ಕಲೆ ಯಕ್ಷಗಾನಕ್ಕೆ ಮೊದಲ ರಾಷ್ಟ್ರಪ್ರಶಸ್ತಿಯನ್ನು ತಂದಿತ್ತ ಹಾರಾಡಿ ರಾಮಗಾಣಿಗರು .

ಉಡುಪಿ ಜಿಲ್ಲೆಯ ಬ್ರಹ್ಮಾವರದ ಬಳಿಯ ಹಾರಾಡಿಯಲ್ಲಿ 1902 ಮೇ 27 ರಂದು ಸುಬ್ಬಣ್ಣ ಗಾಣಿಗ ಮತ್ತು ಕೊಲ್ಲು ದಂಪತಿಗಳ 2 ನೇ ಪುತ್ರನಾಗಿ ಜನಿಸಿದ ರಾಮ ಗಾಣಿಗರ ವಿದ್ಯಾಭ್ಯಾಸ ಬೈಕಾಡಿಯ ಐಗಳ ಮಠದಲ್ಲಿ 2 ನೇ ತರಗತಿಯವರೆಗೆ ಮಾತ್ರ . 
ತನ್ನ 14 ನೇ ವಯಸ್ಸಿನಲ್ಲಿ ಮಾರಣಕಟ್ಟೆ ಮೇಳದಲ್ಲಿ ಬಾಲಗೋಪಾಲನಾಗಿ ಮೊದಲು ಗೆಜ್ಜೆ ಕಟ್ಟಿ , ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದ ಅವರು . ಒಂದು ವರ್ಷದ ತಿರುಗಾಟದ ಬಳಿಕ ಇತಿಹಾಸ ಪ್ರಸಿದ್ಧ ಮಂದಾರ್ತಿ ಮೇಳಕ್ಕೆ ಸೇರ್ಪಡೆಗೊಂಡರು. ಆ ಮೇಳವೊಂದರಲ್ಲಿ 45 ವರ್ಷಗಳ ಸುಧೀರ್ಘ ಕಾಲ ತಿರುಗಾಟ ನಡೆಸಿದುದು ದಾಖಲೆಯಾಗಿದೆ. 
ಪ್ರಖ್ಯಾತಿಯ ಉತ್ತುಂಗಕ್ಕೇರಿದ ಅವರು ಮಂದಾರ್ತಿ ಮೇಳ ಮಾತ್ರವಲ್ಲದೆ ಅಮೃತೇಶ್ವರಿ ಮೇಳ ಕೋಟ, ಅಂದಿನ ಕಾಲದ ವರಂಗ ಮೇಳ, ಸೌಕೂರು ಮೇಳ, ಸಾಲಿಗ್ರಾಮ ಮೇಳದಲ್ಲೂ ಕೆಲ ಕಾಲ ತಿರುಗಾಟ ಮಾಡಿದ್ದರು ಎನ್ನುವುದು ದಾಖಲೆಗಳಿಂದ ಲಭ್ಯವಾಗಿದೆ.
ಯಕ್ಷಗಾನ ಬಡಗು ನಡುತಿಟ್ಟನ್ನು ಬೆಳಗಿದ ಹಾರಾಡಿ ರಾಮಗಾಣಿಗರು ಕರ್ಣ,ಋತುಪರ್ಣ,ತಾಮ್ರಧ್ವಜ, ಅರ್ಜುನ , ಕೌಂಡ್ಲಿಕ, ಮಾರ್ತಾಂಡತೇಜ, ಭೀಮ ಹಿರಣ್ಯಕಶ್ಯಪು, ಜಾಂಬವ, ಭೀಷ್ಮ, ಅಂಗಾರವರ್ಮ, ಚಿತ್ರಸೇನ ಮೊದಲಾದ ಪಾತ್ರಗಳಿಂದ ಪ್ರಖ್ಯಾತರಾಗಿದ್ದರು. 
ತನ್ನ ಜೀವಿತ ಕಾಲದಲ್ಲಿ ಕರಾವಳಿಯಲ್ಲಿ  ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ  ಅವರು ರಂಗದಲ್ಲೂ ನಿಜ ಜೀವನದಲ್ಲೂ ಆದರ್ಶಪ್ರಾಯ ವ್ಯಕ್ತಿಯಾಗಿದ್ದರು. 
ತನ್ನ ಪಾತ್ರವೈಭವದ ಮೂಲಕ ಯಕ್ಷಗಾನ ಬಯಲಾಟ ರಂಗವನ್ನು ಶ್ರೀಮಂತಗೊಳಿಸಿದ್ದ ರಾಮಗಾಣಿಗರಿಗೆ 1961 ರಲ್ಲಿ ಮೈಸೂರು ರಾಜ್ಯ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, 1962 ರಲ್ಲಿ ರಾಜ್ಯ ಪ್ರಶಸ್ತಿಯನ್ನು ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್‌.ನಿಜಲಿಂಗಪ್ಪನವರು ನೀಡಿ ಗೌರವಿಸಿದ್ದರು
1964 ರಲ್ಲಿ ಸರ್ವಪಲ್ಲಿ  ಡಾ.ರಾಧಾಕೃಷ್ಣನ್‌ ರವರು ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು. 1966ರಲ್ಲಿ ಪಾರ್ಶ್ವವಾಯು ಪೀಡಿತರಾದ ರಾಮಗಾಣಿಗರು 1968  ಡಿಸೆಂಬರ್‌ 11 ರಂದು ಇಹಲೋಕದ ಯಾತ್ರೆ ಮುಗಿಸಿದರು. 
ಲೇ :ಸುರೇಂದ್ರ ಪಣಿಯೂರು
 
 
 
 
 
 
 
 
 
 
 

Leave a Reply