“ಸಿಂಧೂರ” ಕಾವಿ ಕಲಾ ಪ್ರದರ್ಶನ

ನವರಾತ್ರಿಯ ಸಂದರ್ಭದಲ್ಲಿ “ಸಿಂಧೂರ” ಎನ್ನುವ ಶೀರ್ಷಿಕೆಯಡಿಯಲ್ಲಿ ಭಾವನಾ ಪೌಂಡೇಶನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ, ಶ್ರೀ ಸ್ಥಾನಿಕ ಬ್ರಾಹ್ಮಣ ಸಂಘ (ರಿ.) ಉಡುಪಿಯ ಸಹಯೋಗದಲ್ಲಿ ಕುಂಜಿಬೆಟ್ಟಿನ ಶಾರದಾ ಮಂಟಪದಲ್ಲಿರುವ ಕೆ. ಆನಂದ ರಾವ್ ಸಭಾಂಗಣದ ಗ್ಯಾಲರಿ ಯಲ್ಲಿ ಸಂಯೋಜಿಸಿದ ಡಾ. ಜನಾರ್ದನ ಹಾವಂಜೆಯವರ ನವದುರ್ಗೆಯರ ಕಾವಿ ವರ್ಣದ ಕಲಾಕೃತಿಗಳ ಪ್ರದರ್ಶನವನ್ನು ಕಾರ್ಪೋರೇಶನ್ ಬ್ಯಾಂಕಿನ ನಿವೃತ್ತ ಡಿ.ಜಿ.ಎಂ. ಸಿ. ಎಸ್. ರಾವ್ ರವರು ಉದ್ಘಾಟಿಸಿ ದರು.


“ಭಾರತೀಯ ಸಾಂಪ್ರದಾಯಿಕ ಕಲಾಪ್ರಕಾರಗಳಲ್ಲೊಂದಾದ ಪುರಾತನವಾದ ಕಾವಿ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಹಾವಂಜೆಯವರ ಶ್ರಮ ನಿಜಕ್ಕೂ ಸ್ತುತ್ಯಾರ್ಹವಾದುದು. ಕೆಂಪು ಹಾಗೂ ಬಿಳಿ; ಸುಣ್ಣ ಮತ್ತು ಕೆಮ್ಮಣ್ಣು ಇವನ್ನಷ್ಟೇ ಬಳಸಿ ರಚಿಸುವ ಈ ಕಲಾಪ್ರಕಾರಕ್ಕೆ ಇನ್ನಾದರೂ ತಕ್ಕುದಾದ ಪ್ರಾಶಸ್ತ್ಯ  ದೊರೆತು ಇನ್ನಷ್ಟು ಕಲಾಕಾರರು ಈ ಕೊಂಕಣ ಕರಾವಳಿಯ ಭಾಗದ ಕಲೆಯನ್ನು ಬೆಳೆಸುವಂತಾಗಲಿ” ಎಂದು ಶುಭ ಹಾರೈಸಿದರು.

ಖ್ಯಾತ ಲೆಕ್ಖ ಪರಿಶೋಧಕರಾದ ಗಣೇಶ್ ಹೆಬ್ಬಾರ್‌ರವರು “ನಮ್ಮ ಸಮಾಜದ ಹಾವಂಜೆಯವರು ಕಳೆದ ಇಪ್ಪತ್ತು ವರ್ಷಗಳಿಂದ ಈ ಕಲೆಯನ್ನು ಕರಗತ ಮಾಡಿಕೊಂಡು ಭಗೀರಥ ಪ್ರಯತ್ನವನ್ನು ನಡೆಸುತ್ತ ಈ ಕಲೆಯ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಈ ಗ್ಯಾಲರಿಯ ಮೂಲಕ ಇಲ್ಲಿ ನವರಾತ್ರಿಯ ಸಂದರ್ಭದಲ್ಲಿ ದುರ್ಗೆಯರ ಬಗೆಗಿನ ಕಲಾಕೃತಿಗಳು ಪ್ರದರ್ಶನ ಕಾಣುತ್ತಿರುವುದು ನಮಗೆ ಹೆಮ್ಮೆಯ ಸಂಗತಿ” ಎಂದರು.


ಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಮಂಜುನಾಥ ಹೆಬ್ಬಾರ್, ಭಾವನಾ ಫೌಂಡೇಶನ್‌ನ ನಿರ್ದೇಶಕ ರಾದ ಯಕ್ಷಗುರು ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಭಾಕರ ಭಂಡಿಯವರು ನಿರೂಪಿಸಿ ಕಲಾವಿದರಾದ ಹಾವಂಜೆಯವರು ಪ್ರಸ್ತಾವನೆಗೈದರು. ಸಭಾ ಕಾರ್ಯಕ್ರಮದ ಬಳಿಕ ವಿದುಷಿ ಅಕ್ಷತಾ ವಿಶು ರಾವ್ ಹಾಗೂ ಹಾವಂಜೆ ಮಂಜುನಾಥಯ್ಯ ಇವರ “ದೇವಿ ಮಾಹಾತ್ಮೆ” ವಾಚನ – ಪ್ರವಚನ ಕಾರ್ಯಕ್ರಮವನ್ನೂ ಕೂಡ ಆಯೋಜಿಸಲಾಗಿತ್ತು. ‘ಸಿಂಧೂರ’ ಕಾವಿ ಕಲಾ ಪ್ರದರ್ಶನವು 24ನೇ ಅಕ್ಟೋಬರ್ ವಿಜಯದಶಮಿಯ ತನಕ ಅಪರಾಹ್ನ 3 ರಿಂದ ರಾತ್ರಿ 8ರವರೆಗೆ ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ.

 
 
 
 
 
 
 
 
 
 
 

Leave a Reply