ಕವಿ ಕೆ.ವಿ.ತಿರುಮಲೇಶ್ ಕವಿತೆಗಳು ಮಲೆಯಾಳಕ್ಕೆ

ಬ್ರಹ್ಮಾವರ : ‘ ಮಲೆಯಾಳದ ಮಹಾಕವಿ ಚಙ್ಙಪ್ಪುಳ ಕೃಷ್ಣ ಪಿಳ್ಳೆಯವರು ಹೇಳಿದಂತೆ ಕಾವ್ಯವು ಒಬ್ಬ ನರ್ತಕಿ ಇದ್ದಂತೆ. ನರ್ತಕಿ ತನಗೆ ಹೇಳಬೇಕಾದ ವಿಚಾರಗಳನ್ನು ಸನ್ನೆ – ಸಂಕೇತಗಳ ಮೂಲಕವೇ ಸೂಚಿಸುತ್ತಾಳೆ.

ಚಙ್ಙಪ್ಪುಳ, ವಳ್ಳತ್ತೋಳ್, ಉಳ್ಳೂರ್ ಮೊದಲಾದ ಮಹಾಕವಿಗಳು ಮಲೆಯಾಳ ಕಾವ್ಯದ ತೋರುಗಂಬಗಳಾಗಿ ಉತ್ಕೃಷ್ಟ ಕಾವ್ಯ ರಚನೆ ಮಾಡಿದರು. ವೇದ-ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಮೊದಲಾದ ಮಹಾಕಾವ್ಯಗಳು, ಭಗವದ್ಗೀತೆಯಂಥ ಅಮೂಲ್ಯ ಗ್ರಂಥ, ಕಾಳಿದಾಸ-ಭಾಸರಂಥ ಮಹಾಕವಿಗಳು ಸಾಹಿತ್ಯವನ್ನು ಶ್ರೀಮಂತವಾಗಿಸಿದಂತಹ ನಾಡು ನಮ್ಮದು. ಅವರ ಆದರ್ಶದಲ್ಲೇ ಮಲೆಯಾಳ ಕಾವ್ಯವು ರೂಪ ಪಡೆಯಿತು.

ಅಂಥ ಸಾಹಿತ್ಯಕ್ಕೆ ಈಗ ಕೆ.ವಿ.ತಿರುಮಲೇಶ್ ಅವರ ಕಾವ್ಯವೂ ಅನುವಾದದ ಮೂಲಕ ಸೇರ್ಪಡೆಗೊಳ್ಳುತ್ತಿರುವುದು ತುಂಬಾ ಸಂತಸ ಪಡಬೇಕಾದ ಸಂಗತಿ ‘ಎಂದು ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಜಯರಾಜ್ ಹೇಳಿದರು.

ಅವರು ಎಸ್.ಎಂ.ಎಸ್.ಕಾಲೇಜಿನ ಕಿರು ಸಭಾಂಗಣದಲ್ಲಿ ಡಾ.ಪಾರ್ವತಿ ಜಿ.ಐತಾಳ್ ಮಲೆಯಾಳಕ್ಕೆ ಅನುವಾದಿಸಿದ ‘ ಕೆ.ವಿ.ತಿರುಮಲೇಶಿಂದೆ ತೆರಞ್ಣೆಡುತ್ತ ಕವಿತಗಳ್'( ಕೆ.ವಿ.ತಿರುಮಲೇಶರ ಆಯ್ದ ಕವಿತೆಗಳು) ಕೃತಿಯ ಅನಾವರಣಕ್ಕಾಗಿ ಏರ್ಪಡಿಸಿದ ಸರಳ ಸಮಾರಂಭದಲ್ಲಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣಪತಿ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಾ.ಪಾರ್ವತಿ ಜಿ.ಐತಾಳ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರೊ.ಬಾಬುರಾಜ್ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ, ಸಹ-ಅನುವಾದಕ ಡಾ.ಟಿ.ಕೆ.ರವೀಂದ್ರನ್ ಅವರ ಅನುಪಸ್ಥಿತಿಯ ಕಾರಣದಿಂದ ಅವರು ಕೃತಿಯ ಕುರಿತು ಬರೆದ ಪ್ರಬಂಧವನ್ನು ಓದಿ ಹೇಳಿದರು.

ಮುಖಚಿತ್ರ ಕಲಾವಿದರಾದ ಡಾ.ಹರ್ಷಿತ್ ಕ್ರಮಧಾರಿಯವರನ್ನು ಸನ್ಮಾನಿಸಲಾಯಿತು.
ಮಲೆಯಾಳ ಭಾಷೆಯಲ್ಲಿ ನಡೆದ ಕಾರ್ಯಕ್ರಮವನ್ನು ಜೆಸ್ಸಿ ಎಲಿಝಬೆತ್ ನಿರೂಪಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply