ಆಳ್ವಾಸ್ ರಂಗ ಅಧ್ಯಯನ ಕೇಂದ್ರದಿಂದ ‘ಚಾರುವಸಂತ’ ಪ್ರಸ್ತುತಿ

ಮೂಡುಬಿದಿರೆ: ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತದ ಕುಟುಂಬದ ಬಿಂಬ ‘ಚಾರು ವಸಂತ’ ಎಂದು ಹಿರಿಯ ಸಂಶೋಧಕ ಹಾಗೂ ಕೃತಿಕಾರ ಡಾ. ಹಂ. ಪ. ನಾಗರಾಜಯ್ಯ (ಹಂಪನಾ)  ಹೇಳಿದರು. ಇಲ್ಲಿನ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾ ವಿದರು ನಿರ್ದೇಶಕ ಜೀವನ್ ರಾಂ ಸುಳ್ಯ ಅವರ ನಿರ್ದೇಶನದಲ್ಲಿ ಭಾನುವಾರ ಪ್ರಸ್ತುತ ಪಡಿಸಿದ ತಮ್ಮ  ‘ಚಾರುವಸಂತ’ ನಾಟಕವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಇದು ನನ್ನ ಕನಸು ನನಸಾದ ದಿನ. ನಾನು ಯುವಕ ಅಲ್ಲ. ಆದರೆ, ‘ಬಯಸುತ್ತೇನೆ ನಿಮ್ಮ ಆಮ್ಲಜನಕ’ ಎಂದು ಭಾವುಕರಾದರು. ಭಾರತೀಯ ಮಾತ್ರವಲ್ಲ ಎಲ್ಲ ಕುಟುಂಬಗಳಲ್ಲೂ ಏಳುಗಾಲ ಹಾಗೂ ಬೀಳು ಗಾಲ ಇರುತ್ತದೆ. ಏಳುಬೀಳುಗಳ ಜೀವನದ ಕಥನವೇ ‘ಚಾರುವಸಂತ’. ಎಲ್ಲ ಧರ್ಮ, ಮತವನ್ನು ಗೌರವಿಸಬೇಕು. ದ್ವೇಷ, ಅಸೂಯೆ, ಈರ್ಷೆ ಬಿಟ್ಟು ಬಿಡಬೇಕು. ಪರಿಸರ ಸಂರಕ್ಷಿಸಬೇಕು ಎಂಬ ಸಂದೇಶವಿದೆ.  ಮೋಹನ ಆಳ್ವರ ಅಂತರಂಗಕ್ಕೆ ಬಿದ್ದ ಯಾವುದೇ ಕಲೆಯು ಕೃತಿಯಾಗುತ್ತದೆ ಎಂದು ಅವರು ಶ್ಲಾಘಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಕೃತಿಗಳು ಹೆಚ್ಚು ಮಾತನಾಡಬೇಕು. ವ್ಯಕ್ತಿಗಳಲ್ಲ. ಪರಿಸರ ರಕ್ಷಣೆಯ ಮಹತ್ವ ನಾಟಕದಲ್ಲಿದೆ. ಧರ್ಮ, ಜಾತಿ ಮುಖ್ಯವಲ್ಲ, ಸೌಹಾರ್ದತೆ ಮುಖ್ಯ. ಸುಖ- ದುಖ ಸಮಾನವಾಗಿ ಸ್ವೀಕರಿಸಿ ಎಂಬ ಸಂದೇಶ ನಾಟಕದಲ್ಲಿದೆ.

ಹಂಪನಾ ಅವರು ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷತೆ ವಹಿಸಿದ್ದರು. ಅವರ ಪತ್ನಿ ಕಮಲಾ ಹಂಪನಾ ಮೂಡುಬಿದಿರೆ ಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿದ್ದರು. ಅವರ ಕುಟುಂಬದ ಜೊತೆ ನಮಗೆಲ್ಲ ಅವಿನಾಭಾವ ನಂಟಿದೆ ಎಂದು ಮೋಹನ್‌ ಆಳ್ವಾ ನೆನಪಿಸಿಕೊಂಡರು.

ನಾಟಕ ಎಂದರೆ ನಿರ್ದೇಶಕನ ಕೈಚಳಕ. ಜೀವನ್ ರಾಂ ಸುಳ್ಯ ಅವರು ನಾಟಕವನ್ನು ರಂಗ ರೂಪಕ್ಕೆ ತಂದ ಬೆರಗನ್ನು ನೋಡಿದರೆ ಹಂಪನಾ ಮೂಕವಿಸ್ಮಿತರಾಗುವರು ಎಂದು ಆಳ್ವಾ ಶ್ಲಾಘಿಸಿದರು.

ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಂ ಸುಳ್ಯ ಮಾತನಾಡಿ, ೨೦೦೩ರಲ್ಲಿ ಹಂಪನಾ ಬರೆದ ಚಾರುವಸಂತವನ್ನು ಡಾ. ಎಂ.ಮೋಹನ ಆಳ್ವರ ಆಶಯದಂತೆ ನಿರ್ದೇಶಿಸಲಾಗಿದೆ. ರಂಗಕರ್ಮಿ ಡಾ. ನಾ. ದಾ. ಶೆಟ್ಟಿ ರಂಗರೂಪ ನೀಡಿದ್ದಾರೆ. ಸುಮಾರು ಎರಡು ವರ್ಷಗಳ ಈ ಪಯಣವು ಮೂಡುಬಿದಿರೆ ಮೂಲಕ ರಾಜ್ಯದಾದ್ಯಂತ ತಿರುಗಾಟ ನಡೆಸಲಿದೆ ಎಂದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಮ್ಮದ್ ಸದಾಕತ್ ಇದ್ದರು.  ಉಪನ್ಯಾಸಕ ವೇಣುಗೋಪಾಲ ಕೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ  ದರು. ಚಾರುವಸಂತ ನಾಟಕವು ಅ. 31 ರಂದು ಕಲಾಮಂದಿರ ಮೈಸೂರು, ನ.02ರಂದು ರವೀಂದ್ರ ಕಲಾಕ್ಷೇತ್ರ ಬೆಂಗಳೂರು, ನ.04 ಡಾ. ಎಚ್.ಎನ್. ಕಲಾಮಂದಿರ ಗೌರಿಬಿದನೂರು, ನ.06 ಗುಬ್ಬಿ ವೀರಣ್ಣ ಕಲಾಮಂದಿರ ತುಮಕೂರು, ನ.08 ರಂದು ತ.ರಾ.ಸು. ರಂಗಮಂದಿರ ಚಿತ್ರದುರ್ಗ, ನ.10 ರಂದು ಮಲ್ಲಿಕಾರ್ಜುನ ರಂಗಮಂದಿರ ದಾವಣಗೆರೆ, ನ.12 ಡಾ. ಪಾಟೀಲ ಪುಟ್ಟಪ್ಪ ಸಭಾಭವನ ಧಾರವಾಡ ಹಾಗೂ ನ.15 ರಂದು ರಂಗಮನೆ ಸುಳ್ಯದಲ್ಲಿ ಪ್ರದರ್ಶನಗೊಳ್ಳಲಿದೆ.

 
 
 
 
 
 
 
 
 
 
 

Leave a Reply