ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ 

ಕೊರೋನಾ ಹಾವಳಿ ಆರಂಭವಾದಂದಿನಿಂದ ಇಂದಿನವರೆಗೂ ಛಾಯಾಗ್ರಾಹಕರಾದ ನಮ್ಮ ಬದುಕು ಮೂರಾ ಬಟ್ಟೆಯಾಗಿದೆ. ಸಂಸಾರದ ನಿರ್ವಹಣೆಗಾಗಿ ನಾವು ಆಯ್ದುಕೊಂಡ ವೃತ್ತಿ ಛಾಯಾಗ್ರಹಣ. ಈ ವೃತ್ತಿಯನ್ನು ಹೊರತುಪಡಿಸಿದರೆ ನಮಗೆ ಬೇರೆ ಗತಿ ಇಲ್ಲ. ಕ್ಯಾಮರಾ ಹಾಗೂ ಇನ್ನಿತರ ಪರಿಕರಗಳಿಗಾಗಿ ಲಕ್ಷಾಂತರ ರೂಪಾಯಿ ಸಾಲಮಾಡಿ ಕಳೆದ ಲಾಕ್ ಡೌನ್ ನಿಂದಾಗಿ ಸಾಲ ಮರು ಪಾವತಿಸಲಾಗದೆ.  ಈಗಾಗಲೇ ಬ್ಯಾಂಕಿನವರ ಕೆಂಗಣ್ಣಿಗೆ ಗುರಿಯಾಗಿದ್ದೇವೆ. 
ಲಾಕ್ ಡೌನ್ ನಿಂದಾದ ಆರ್ಥಿಕ ನಷ್ಟವನ್ನು ಸರಿದೂಗಿಸಲಾಗದೇ ಕೆಲವು ಛಾಯಾಗ್ರಾಹಕರು ಆತ್ಮಹತ್ಯೆಗೆ ಶರಣಾದ ಉದಾಹರಣೆಯೂ ಇದೆ. ಆ ಸಮಯದಲ್ಲಿ ಸರಕಾರದಿಂದ ಬೇರೆ ಬೇರೆ ವೃತ್ತಿಯವರಿಗೆ ಸಹಾಯಧನ ದೊರಕಿದ್ದರೂ ಛಾಯಾಗ್ರಹಣ ವೃತ್ತಿಯವರಿಗೆ ಕವಡೆ ಕಾಸಿನ ಸಹಾಯವೂ ಸಿಕ್ಕಿಲ್ಲ. ಮದುವೆ, ಗೃಹಪ್ರವೇಶ ಹಾಗೂ ಇನ್ನಿತರ ಶುಭ ಸಮಾರಂಭಗಳೇ ನಮಗೆ ಆದಾಯದ ಮೂಲ.
ಮುಂದೆ ಲಾಕ್ ಡೌನ್ ಘೋಷಣೆಯಾಗಿ ಸಮಾರಂಭಗಳಿಗೆ ನೂರು ಅಥವಾ ಇನ್ನೂರು ಜನ ನಿಗದಿಪಡಿಸಿದರೆ ನಮ್ಮ ವೃತ್ತಿಯಲ್ಲಿ ಜೀವನ ಸಾಗಿಸುವುದು ಅಸಾಧ್ಯ.ಅಥವಾ ಸಮಾರಂಭಗಳಿಗೆ ನಿರ್ಬಂಧ ಹೇರಿದರೆ ಉಳಿದ ಛಾಯಾಗ್ರಾಹಕರೂ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಬಂದೀತು.
ಕ್ಯಾಮರಾ ಸಾಲ ,ಗೃಹಸಾಲ, ಮಕ್ಕಳ ವಿದ್ಯಾಭ್ಯಾಸ, ಪೋಷಕರ ವೈದ್ಯಕೀಯ ವೆಚ್ಚ, ಸಂಸಾರ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತು ನಮ್ಮ ಸಂಕಷ್ಟದ ಸ್ಥಿತಿಯನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೇ  ಒದ್ದಾಡುವ ಸ್ಥಿತಿ ಇಂದು ನಮ್ಮದಾಗಿದೆ. 
ವರ್ಷಕ್ಕೊಂದು ಬಾರಿ ಎಪ್ರಿಲ್, ಮೇ ತಿಂಗಳಲ್ಲಿ ಬರುವ ಸೀಸನ್ ಅವಧಿಯೇ ನಮಗೆ ಆರ್ಥಿಕ ಸುಧಾರಣೆಗೊಂದು ಆಶಾಕಿರಣ. ಆದುದರಿಂದ ಮುಂಬರುವ ಸೀಸನ್ ಅವಧಿಯಲ್ಲಿ ಲಾಕ್ ಡೌನ್ ಘೋಷಣೆ ಮಾಡದೇ ಕೊರೋನಾ ನಿರ್ಮೂಲನೆಗೆ ಬೇರೆ ರೀತಿಯ ಮಾರ್ಗೋಪಾಯಗಳನ್ನು ಕಂಡುಕೊಂಡು.
ನಮಗೆ ದುಡಿದು ಸಂಸಾರದೊಂದಿಗೆ ನೆಮ್ಮದಿಯ ಜೀವನ ಸಾಗಿಸಲು ಅವಕಾಶ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಮ್ರವಾಗಿ ವಿನಂತಿಸಿಕೊಳ್ಳುವುದರೊಂದಿಗೆ ಈಗಾಗಲೇ ಸಲ್ಲಿಸಲಾಯಿತು. 
ಈ ಸಂದರ್ಭದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಕರಂದಾಡಿ ಶ್ರೀಧರ್ ಶೆಟ್ಟಿಗಾರ್, ಜಿಲ್ಲಾ ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು , ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕೊಳಲಗಿರಿ, ಉಡುಪಿ ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರು, ಕಾರ್ಯದರ್ಶಿ ಸುಕೇಶ್ ಅಮೀನ್ ಹಾಗು ಪತ್ರಕರ್ತ ಆಸ್ಟ್ರೋ ಮೋಹನ್ ಉಪಸ್ಥಿತರಿದ್ದರು.    
 
 
 
 
 
 
 
 
 
 
 

Leave a Reply