ಅನಸೂಯರಿಗೆ ಮಾತ್ರ~ ವೀಣಾ ಬನ್ನಂಜೆ

ನಾನು ಹದಿನೈದು ವರ್ಷಗಳ ಹಿಂದೆ ಕಲ್ಲಹಳ್ಳಿಯಲ್ಲಿ ಇದ್ದೆ. ಆಗ ನನ್ನನ್ನು ಕೆಲವರು ಬಹಳ ಪ್ರೀತಿಸುತ್ತಿದ್ದರು. ನಾನಾಗ ನನ್ನ ಪಾಡಿಗೆ ಇದ್ದೆ. ನಾನು, ಕೃಷಿ, ಅಲ್ಲಿಯ ಕೆಲವು ಸಾರ್ವಜನಿಕ ಕೆಲಸ ಹೀಗೆ….. ಎಲ್ಲಿಯಾದರೂ ಅಪರೂಪಕ್ಕೆ ಯಾರಾದರೂ ಕರೆದರೆ ಭಾಷಣ. ಇದು ಬಿಟ್ಟರೆ ನಾನು ಅಲ್ಲಿ ಇದ್ದದ್ದು ಯಾರಿಗೂ ಗೊತ್ತಿರಲಿಲ್ಲ. ನನ್ನ ಸಂತೋಷ ಆಗ ಅಪರಂಪಾರ ಇತ್ತು. ಯಾರಾದರೂ ಬಂದರೆ, ಸಿಕ್ಕರೆ ಅವರನ್ನು ಪ್ರೀತಿಯ ಮಳೆಯಲ್ಲಿ ಮೀಯಿಸುತ್ತಿದ್ದೆ.

ಅದಾಗಿ ಈಗ ಬೆಂಗಳೂರಿಗೆ ಬಂದು ಹದಿನೈದು ವರ್ಷಗಳು ಆದುವು. ಇಲ್ಲಿ ಬಂದಾಗಲೂ ನನ್ನ ಪಾಡಿಗೆ ಇದ್ದೆ. ಆಗಲೂ ನನಗೆ ಹಲವು ಹಿತೈಷಿಗಳು. ತುಂಬ ಪ್ರೀತಿ. ನಾನು ಕೂಡ ಬೇಕಾದಷ್ಟು ಪ್ರೀತಿ ಹಂಚಿದೆ.nಎಲ್ಲೋ ಅಪರೂಪಕ್ಕೆ ಒಂದೆರಡು ಟೀವಿ ಇಂಟರ್ವ್ಯೂವ್, ಅಲ್ಲೊಂದು ಇಲ್ಲೊಂದು ಭಾಷಣ. ನನಗೆ ಎಲ್ಲೂ ಏನೂ ವ್ಯತ್ಯಾಸ ಆಗಲಿಲ್ಲ. ಇದ್ದವರು ಹಾಗೇ ಇದ್ದರು. ಹೊಸಬರು ಬಂದು ಹೋಗುತ್ತಿದ್ದರು.

ಕಳೆದ ೨೦೧೫ರಲ್ಲಿ ಅಪ್ಪನ ಎಂಭತ್ತರ ಸಂಭ್ರಮ ಕಾರ್ಯಕ್ರಮದ ಜವಾಬ್ದಾರಿ ಹೊತ್ತೆ. ಅದು ಅಪೇಕ್ಷೆಯಿಂದಲ್ಲ, ಅಪ್ಪನ ಸೂಚನೆ. ಅದನ್ನು ನಿಸ್ಪೃಹವಾಗಿ ನಡೆಸಿದೆ. ಏನನ್ನೂ ನನ್ನ ಕಡೆಯಿಂದ ಊನ ಆಗದಂತೆ ನೋಡಿದೆ. ಪ್ರಾಮಾಣಿಕವಾಗಿ ನಿರಹಂಕಾರದಿಂದ ಕರ್ತವ್ಯ ಪಾಲನೆ ಎಂಬಂತೆ. ಅದರ ನಂತರ ನನಗೆ ಎಂದೂ ಗೊತ್ತಿಲ್ಲದ ಹೊಸ ವಲಯ ಪ್ರವೇಶ ಮಾಡಿತು. ಅದು ಸ್ವಲ್ಪ ಮತೀಯ ಸೈದ್ಧಾಂತಿಕ ಭಿನ್ನಾಭಿಪ್ರಾಯ ಚರ್ಚಿಸುತ್ತಿತ್ತು. ಅದೂ ಆರೋಗ್ಯಕರವಾಗಿಯೇ ಇತ್ತು.

ಅದಾಗಿ ಅಪ್ಪ ನಡೆದರು. ಕಾಕತಾಳೀಯ ಎಂಬಂತೆ ಉಪನ್ಯಾಸ ಆಗಲೇ ಆರಂಭ ಆಗಿತ್ತು. ಹೆಚ್ಚತೊಡಗಿತು. ಅದನ್ನು ಅಷ್ಟೇ ನಿಷ್ಠೆ ಶ್ರದ್ಧೆಯಿಂದ ಮಾಡಿದೆ. ಅದೇನೋ ಸೂಚನೆ ಎಂಬಂತೆ. ನಂಬಿದರೆ ನಂಬಿ ನಾನು ನಿಜವಾಗಿಯೂ ಸರ್ವಾರಂಭ ಪರಿತ್ಯಾಗಿ.

ಕಾಲ ಹಾಗೇ ನಿಲ್ಲಲಿಲ್ಲ. ನನ್ನ ಉಪನ್ಯಾಸಗಳು ನನಗೇ ಸಾಕು ಎನಿಸುವಷ್ಟು ಹೆಚ್ಚಿದವು. ಬೇಡ ಅಂದರೆ ಕೇಳದ ಒತ್ತಾಯ. ಈ ತಿಂಗಳು ಇಲ್ಲ ಅಂದರೆ ಮುಂದಿನ ತಿಂಗಳ ಡೇಟ್. ರಾಮಾಯಣ, ಭಾಗವತ, ಭಗವದ್ಗೀತೆ ಹೀಗೆ ವಿಷಯ ವ್ಯತ್ಯಾಸ ಬೇರೆ.

ನನ್ನ ಸುತ್ತ ನನ್ನನ್ನು ಪೂಜಿಸುವ ಗುಂಪು ಬೆಳೆಯಿತು. ಇನ್ನೊಂದು ಕಡೆ ನಾನು ನಿತ್ಯ ಮನೆಯಲ್ಲಿ ಪಾಠ ಶುರು ಮಾಡಿದೆ. ಅವು ಕೂಡ ಉಪನಿಷತ್ತು, ಪುರಾಣಪಠನ, ಪುರುಷಸೂಕ್ತ, ವೇದ ಹೀಗೆ…. ಅದರೊಳಗೆ ಒಂದು ಗುಂಪು. ಹೊರಗೆ ಉಪನ್ಯಾಸ ಲೋಕ. ಅಲ್ಲಿ ಕಾಲಿಗೆ ಬೀಳುವ ಒಂದು ಗುಂಪು. ಇನ್ನೊಂದು ನನ್ನನ್ನು ಕಾಯುವ ಹಿಂಡು. ಎಲ್ಲ ಹೊಸಬರು. ಅವರ ಮಧ್ಯೆ ಹಳಬರೂ ಇದ್ದರು. ನಾನು ಅವರನ್ನು ಬಿಟ್ಟಿರಲಿಲ್ಲ. ನನ್ನ ಅವರ ಕುರಿತ ಗೌರವವೂ ಹಾಗೇ ಇತ್ತು.

ಈ ನಡುವೆ ಅವರನ್ನು ಕಾಣುವುದು ಅಪರೂಪ. ಅಷ್ಟರಲ್ಲಿ ಅವರಲ್ಲಿ ಕೆಲವರು ನೀವು ಈ ವಿಷಯ ಮಾತಾಡಬಾರದು ಎಂದರು. ಯಾಕೆ ಕೇಳಿದರೆ ಉತ್ತರ ಇಲ್ಲ. ಅಧ್ಯಯನ ಸಾಲದು ಎಂಬ ಉತ್ತರ. ಸರಿ ನಾನು ಖಂಡಿತ ಓದಿದವಳಲ್ಲ. ಆದರೆ ದಯವಿಟ್ಟು ನಾನು ಮಾತಾಡಿದ್ದರಲ್ಲಿ ವಿಷಯ ದೋಷ, ಲೋಪ ಇದ್ದರೆ ಹೇಳಿ ತಿಳಿಸಿ, ತಿದ್ದಿಕೊಳ್ಳುವೆ ಎಂದರೆ ಮಾತಿಲ್ಲ. ನೀವು ಉಪನ್ಯಾಸ ಮಾಡಬೇಡಿ ಎಂಬ ಉತ್ತರ. ಇವರು ನಾನು ಗೌರವಿಸುವ ಮಹಾ ವಿದ್ವಾಂಸರು ಮತ್ತೆ.

ಇನ್ನೊಬ್ಬರು ಕೂಡ ಹಾಗೆ. ಬೇಕಾದಷ್ಟು ಪ್ರೀತಿ ಗೌರವ ನನಗೆ ಅವರೆಂದರೆ. ಹೇಗೆ ಬೇಕೋ ಹಾಗೆ ಸಲಿಗೆ. ಅವರು ನನ್ನ ಉಪನ್ಯಾಸಗಳನ್ನು ಕೇಳಿ ಕೊಂಡಾಡುತ್ತಿದ್ದವರು. ಆಗ ನಾನು ಇನ್ನೂ ಈ ವಿಷಯ ಮಾತಾಡುತ್ತಿರಲಿಲ್ಲ. ವಚನ, ಅಧ್ಯಾತ್ಮ ಹೀಗೆ ಜನರಲ್. ನಾನು ‘ಅವೈದಿಕ’ ಅಲ್ಲಿಯವರೆಗೆ ಓಹೋ ಅಂದವರು.

ಆ ಬಳಿಕ ಮಾತಿನ ವರಸೆ ಬದಲಾಯಿತು. ಬೇರೆಲ್ಲ ಸುದ್ದಿ ಬೇಕಾದಷ್ಟು ಮಾತಾಡುತ್ತಾರೆ. ನಾನೇ ಪರೀಕ್ಷಿಸಿದ್ದೇನೆ. ಪ್ರಶ್ನಿಸಿದರೂ ಆ ವಿಷಯ ಮಾತಿಲ್ಲ.ಹಲವು ಬಾರಿ ನನ್ನ ಈಗಿನ ಉಪನ್ಯಾಸದಲ್ಲಿ ತಪ್ಪು ಇದ್ದರೆ ತಿಳಿಸಿ ಅಂದಿದ್ದೆ. ಉಳಿದುದಕ್ಕೆಲ್ಲ ಉತ್ತರಿಸಿ ಆ ವಿಷಯ ತಿಳಿದೇ ಇಲ್ಲದಂತೆ ಗಪ್ ಚಿಪ್.

ಈ ಮಧ್ಯೆ ವಯದಿಂದ ಎಪ್ಪತ್ತು ದಾಟಿದ ಹಿರಿಯ ವಿದ್ವಾಂಸರು. ನಿಮ್ಮ ಭಾಗವತ ಕೇಳಿದೆ ಅಂತ ಕಣ್ಣೀರು ಹರಿಸಿ ಕಾಲ್ಮುಗಿದರು. ಇನ್ನೊಬ್ಬರು ದೊಡ್ಡ ವಿದ್ವಾಂಸರ ಮಗಳು. ಕರ್ಣಾಟಕದಲ್ಲಿ ಬಹುಶಃ ಹೀಗೆ ಭಾಗವತ ಹೇಳುವ ಹೆಣ್ಣು ಮಗಳು ನೀವೇ ಮೊದಲು ಮುಂದುವರಿಸಿ ನಿಲ್ಲಿಸಬೇಡಿ ಎಂದರು. ಅಂಥವರೂ ಇದ್ದಾರೆ ಗುಣಕ್ಕೆ ಮತ್ಸರವಿಲ್ಲ.

ಒಂದು ಕಡೆ ಅಪ್ಪನ ಶಿಷ್ಯರು. ಅವರಿಗೆ ತಾವೇ ವಾರಸುದಾರರು ಎಂಬ ಭಾವ. ಅವರಿಗೆ ಎಲ್ಲಿಲ್ಲದ ಸಿಟ್ಟು ದ್ವೇಷ. ಮತ್ತೊಂದು ಕಡೆ ಹೆತ್ತಮನೆಯವರ ಬೇರೆ ಬೇರೆ ಒಳಗುದಿ. ಕೆಲವರಿಗೆ ಇವಳು ಯಾಕೆ ಅಪ್ಪ ಹೋದ ಮೇಲೆ ಮಾತಾಡುವುದು? ಎಂಬ ತಲೆನೋವು. ಮತ್ತೆ ಕೆಲವರಿಗೆ ನಮ್ಮ ಅಪ್ಪ ನಮ್ಮನ್ನು ಕಾಯಲು ಇವಳನ್ನು ಬಿಟ್ಟು ಹೋಗಿದ್ದಾಳೆ ಎಂಬ ಭಾವ.

ನಾನು ಜೀವನದಲ್ಲಿ ಅಪ್ಪಯ್ಯನ ಜೊತೆ ಬಂದ ಮೇಲೆ ನೋಡಿದ ಹೊಸ ಲೋಕ ಇದು. ಈ ರೀತಿ ಸಾರ್ವಜನಿಕ ಆದದ್ದು ಈಗಲೇ. ಒಂದೊಂದು ಅತಿರೇಕ. ಇದರ ಹೊಟ್ಟೆ ಒಳಗೆ ಬರೇ ಕಿಚ್ಚು. ಪ್ರೀತಿ ಸುಟ್ಟು ಭಸ್ಮ ಆಗಬೇಕು ಹಾಗೆ ಉಂಟು ಇದರ ಆರ್ಭಟ.  ನಮ್ಮಲ್ಲಿ ಇಲ್ಲದ್ದು ನಿಮ್ಮ ಬಳಿ ಇದ್ದರೆ ಮತ್ಸರ. ನನಗೆ ಆದದ್ದು ನಿಮಗೆ ಆಗದಿದ್ದರೆ ಹೊಟ್ಟೆಕಿಚ್ಚು. ಇದೆಲ್ಲ ಲೌಕಿಕದ ವಿಷಯ ವಸ್ತುಗಳಿಗೆ ಸರಿ.

ನಾನು ಮೇಲೆ ಹೇಳಿದ್ದು ಬೇರೆ ಲೋಕ. ಇಲ್ಲಿ ವಿದ್ಯೆಯ ಅಸೂಯೆ. ವಿದ್ವಾಂಸರ ಒಳಗೆ ಉರಿ. ಅವರ ಬಳಿ ಇಲ್ಲದ್ದಲ್ಲ. ಅವರಿಂದ ಕದಿಯಲೂ ಸಾಧ್ಯ ಇಲ್ಲ. ಶಾಸ್ತ್ರ ಗ್ರಂಥದ ಓದು ನನ್ನದಾದೀತು ಹೇಗೆ? ಬೇಡ ಅಪ್ಪನ ವಾರಸುದಾರರು ಹೇಗೆ ಆಗುವುದು? ಎಂಥಾ ಮೂರ್ಖ ವಿಚಾರ. ಹೇಗೆ ಬಂತು ಇವೆಲ್ಲ ತಲೆಗೆ? ಎಷ್ಟು ಜನರಿಗೆ ಯಾವ ಪರಿ ಕುದಿ?

ನನಗೆ ಇದ್ದ ಬಹಳ ದೊಡ್ಡ ಖುಷಿ ನನ್ನನ್ನು ದ್ವೇಷಿಸುವವರೇ ಇಲ್ಲ ಅಂತ. ಎಲ್ಲವೂ ಕೊಚ್ಚಿ ಕೊಂಡು ಹೋಯಿತು. ಅದೂ ಯಾವುದರಲ್ಲಿ? ಶುದ್ಧ ದೇವರ ದಾರಿಯಲ್ಲಿ. ನಾನು ಸಿದ್ಧಾಂತ ವಾದಿಯಲ್ಲ. ಅಂಥಾದ್ದರಲ್ಲಿ ಹೀಗೆ. ಗಮ್ಮತ್ತು ಅಂದರೆ ವಚನ ಮಾತಾಡಿದಾಗ ಪ್ರೀತಿಸಿದವರು ಈಗ ವೇದಾಂತ ಮಾತಾಡುತ್ತೇನೆ ಅಂತ ದೂರ ಇಡುತ್ತಾರೆ. ವಚನ ಮಾತಾಡುತ್ತಿದ್ದಾಗ ಮೆಚ್ಚಿದ್ದ ವೈದಿಕ ವಿದ್ವಾಂಸರು ಈಗ ವೇದಾಂತ ಮಾತಾಡುತ್ತೇನೆ ಅಂತ ದ್ವೇಷಿಸುತ್ತಾರೆ.

ಮೆಚ್ಚುವವರ ವಲಯವೂ ಅಷ್ಟೇ ಭಯಾನಕ. ಇವರಿಗೆ ಕೆಲವೊಮ್ಮೆ ಅಂಧಶ್ರದ್ಧೆ. ಇನ್ನು ಕೆಲವೊಮ್ಮೆ ಅಭಿಮಾನ. ಅವೂ ಅಪಾಯಕಾರಿ. ಮತ್ಸರಕ್ಕಿಂತ ವಾಸಿ ಆ ಮಾತು ಬೇರೆ. ಆದರೆ ಬೆಳೆಯುವ ಅಧ್ಯಾತ್ಮಕ್ಕೆ ಅದೂ ಹಾನಿ. ಈ ಜಗದ ಗದ್ದಲ ನಿಮಗೆ ಗೊತ್ತು. ದೇವರ ಲೋಕ, ಅಲೌಕಿಕ ಕೂಡ ಇದೇ. ತಪ್ಪು ತಿಳಿಯಬೇಡಿ. ಈ ಲೋಕದ ವಿಷಯ, ವಸ್ತುವಿನ ಮತ್ಸರ ಆದರೂ ಆದೀತು. ಈ ವಿದ್ಯಾ ಮತ್ಸರ ಅಥವಾ ಅಸೂಯೆ ಇದೆಯಲ್ಲ ಭಯಾನಕ. ಅದನ್ನೇ ಕೃಷ್ಣ ಹೇಳಿದ್ದು ಇದನ್ನು ನನ್ನ ಕುರಿತು ಅಸೂಯೆ ಉಳ್ಳವನಿಗೆ ಹೇಳಬೇಡ. ಅಸೂಯೆ ಎನ್ನುವುದು ಅಸುವಿಗೆ ಸಂಬಂಧ ಪಟ್ಟಿದ್ದು. ಹೊಟ್ಟೆಕಿಚ್ಚು ಹೊಟ್ಟೆ ಅಷ್ಟೇ ಸುಟ್ಟೀತು. ಅಸೂಯೆ ಪ್ರಾಣ ಸುಡುವಂಥದ್ದು.

ಇಷ್ಟೆಲ್ಲ ಆದಾಗಲೂ ನಾನು ಎಲ್ಲ ನೋಡುತ್ತಿದ್ದೇನೆ. ನನಗೆ ಈಗಲೂ ಯಾರ ಮೇಲೂ ದ್ವೇಷ ಇಲ್ಲ. ಆದರೆ ಈ ಕೊಳಕು ಗದ್ದಲದ ಅಸೂಯೆಯ ಲೋಕ ಬೇಕಾ ಸುಮ್ಮನೆ ನೋಡುತ್ತಿದ್ದೇನೆ. ಆಶ್ಚರ್ಯ ಅನಿಸುತ್ತದೆ ದೊಡ್ಡವರ ಸಣ್ಣತನ ನೋಡಿ. ಸಣ್ಣವರ ದೊಡ್ಡ ತನವೂ ಅಷ್ಟೇ ಬೆರಗು ಹುಟ್ಟಿಸುತ್ತದೆ.

 
 
 
 
 
 
 
 
 
 
 

Leave a Reply