ಸಾಹಿತಿಗಳ ಮನಗೆದ್ದ ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನ.~  ಮೋಹನ್ ಉಡುಪ ಹಂದಾಡಿ

ರವಿರಾಜ್ ಎಚ್. ಪಿ. ಅಧ್ಯಕ್ಷತೆಯಲ್ಲಿ, ಅವರ ಅವಿರೋಧ ನಾಯಕತ್ವದಲ್ಲಿ, ಕಾರ್ಯದರ್ಶಿಗಳಾದ ಜನಾರ್ದನ್ ಕೊಡವೂರು, ರಂಜನಿ ವಸಂತ್ ಅವರುಗಳ  ದಕ್ಷ  ಸಾರಥ್ಯದಲ್ಲಿ ಕಾರ್ಯಕ್ರಮ ಸುಂದರವಾಗಿ, ಅಚ್ಚುಕಟ್ಟಾಗಿ, ಅದ್ಭುತವಾಗಿ, ಸಮಯ ಪ್ರಜ್ಞೆಯಿಂದ, ಯಾರು ಎಳ್ಳಷ್ಟೂ ತಪ್ಪು ಹುಡುಕಲಾಗದ ರೀತಿಯಲ್ಲಿ, ಯಾವುದೇ ಅಹಂ ಇಲ್ಲದೇ, ಯಾವುದೇ ಒತ್ತಡ ಗಡಿಬಿಡಿ ಇಲ್ಲದೇ,  ಸಾಹಿತ್ಯ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿ ಆಯಿತು.

ಶಾಂತ ಮೂರ್ತಿ, ಸಜ್ಜನ, ಸಾಹಿತ್ಯದ ಹೊನ್ನ ಕಲಶ,ಸದಾ ಹಸನ್ಮುಖಿ, ಸಣ್ಣವರನ್ನು ಹುರಿದುಂಬಿಸುವ , ಎಚ್ ಶಾಂತರಾಜ್ ಐತಾಳರ ಸರ್ವಾಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮದಂತೆ, ಇತರರಿಗೆ ಸಮ್ಮೇಳನ ಹೇಗೆ ಮಾಡಬೇಕೆಂಬ ಮಾದರಿ ಯಂತೆ ನಡೆಯಿತು. ಬೆಳಗಿನ ಯಕ್ಷ ನಾಟ್ಯ ದಿಂದ ಪ್ರಾರಂಭವಾಗಿ ಕೊನೆಯ ಸಾಂಸ್ಕೃತಿಕ ಕಾರ್ಯಕ್ರಮ ಶಬರಿ ನಾಟಕದ ವರೆಗೆ ಸಮಯ ಪಾಲನೆ ಯೊಂದಿಗೆ  ಕಾರ್ಯಕ್ರಮ ಸಂಪನ್ನಗೊಂಡಿತು..

ರವಿರಾಜ್ ಎಚ್. ಪಿ ಅವರ ಎಲ್ಲರನ್ನೂ ಒಂದುಗೂಡಿಸಿ ಕೊಂಡು ಹೋಗುವ ಶಾಂತ ಗುಣ,  ಎಲ್ಲೂ ಒತ್ತಡವನ್ನು ತೋರಿಸದೆ ಖುಷಿ ಖುಷಿಯಿಂದ , ಅಹಂ ಇಲ್ಲದೇ, ಅಧ್ಯಕ್ಷ ಎಂದರೆ ಹೇಗಿರಬೇಕು ಎಂದು ತೋರಿಸಿ ಕೊಟ್ಟು ಸಂಘಟನೆಗಳಿಗೆ ಮಾದರಿ ಯಾಗಿದ್ದೀರಿ ಮತ್ತು ಸಾಹಿತ್ಯ ಆಸಕ್ತರ ಹೃದಯದ ಕದ ತಟ್ಟಿದಿರಿ. ಇನ್ನು ಜನ್ನಣ್ಣ ಎಂದೇ ಪ್ರಚಲಿತ ಜನಾರ್ದನ ಕೊಡವೂರು ಸಾರಥ್ಯ  ನಿಜವಾಗಲೂ ಅದ್ಭುತ. ಎಂಥ ದೊಡ್ಡ ಸಮ್ಮೇಳನವಾದರು ಯಾರ ಮಾತಿಗೂ, ಯಾರ ಅಸಡ್ಡೆ, ಅವಹೇಳನಗಳಿಗೂ ಕಿವಿ ಕೊಡದೆ ಸಮಯಕ್ಕೆ ಒತ್ತು ಕೊಟ್ಟು, ಸಾಹಿತ್ಯ ಆಸಕ್ತರ ಮನಸೂರೆ ಗೊಳಿಸಿದರು.

ಕಾರ್ಯಕ್ರಮ ರೂಪಿಸುವಲ್ಲಿ ಅವರ ಬದ್ಧತೆ, ಚಾಕಚಕ್ಯತೆ, ಎಲ್ಲರನ್ನೂ ಎಲ್ಲ ಕೆಲಸಗಳಿಗೆ ಸೇರಿಸಿಕೊಂಡು ತಮಾಷೆ ಮಾಡುತ್ತ , ಒಮ್ಮೊಮ್ಮೆ ಬೈಯುತ್ತಾ, ಅವರಿಗೆ ನೋವಾಗದಂತೆ ಮಾತನಾಡಿಸಿಕೊಂಡು ಯಾವುದೇ ರಾಷ್ಟ್ರ ಮಟ್ಟದ ಕಾರ್ಯಕ್ರಮವನ್ನು ಮಾಡಬಲ್ಲೆ ಎಂದು ಪ್ರತೀ ಬಾರಿಯಂತೆ, ಈ ಸಮ್ಮೇಳನ ದಲ್ಲಿಯೂ ನಿರೂಪಿಸಿದರು. ಸರ್ವಾಧ್ಯಕ್ಷರೂ ಸೇರಿದಂತೆ, ಎಲ್ಲರ ಹೃದಯದಲ್ಲೂ ಮನೆ ಮಾಡಿದರು. ಯುವ ಪೀಳಿಗೆಗೆ, ಯುವ ಸಮುದಾಯಕ್ಕೆ ಗುರುವಾದರು.
ಅವರ ದೂರದೃಷ್ಟಿತ್ವ ಪ್ರತಿಯೊಂದು ವಿಷಯವನ್ನು ತೂಗಿ ಅಳೆದು ಮಾಡಿ ಕಾರ್ಯಕ್ರಮ ರೂಪಿಸುವಲ್ಲಿ ಯಶಸ್ವಿಯಾಯಿತು. ಸಂಘಟನೆಯ ಅಧ್ಯಕ್ಷ ಮತ್ತು ಕಾರ್ಯದರ್ಶಿ ಹೇಗಿರಬೇಕೆಂದು ತೋರಿಸಿಕೊಟ್ಟರು. ಅವರಿಬ್ಬರಿಗೂ ನನ್ನ ಹೃದಯಾಂತರಾಳದ ಅಭಿನಂದನೆಗಳು..ಯಶಸ್ವಿ ಸಮ್ಮೇಳನ:  ಸರಿಯಾದ ಸಮಯಕ್ಕೆ ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ, ಎಂ. ಐ .ಟಿ ಬಸ್ ತಂಗುದಾಣ ದಿಂದ ಮಕ್ಕಳ ಸುಂದರ,  ಶಿಸ್ತಿನ, ಆಡಂಬರ ಇಲ್ಲದ ಮೆರವಣಿಗೆ, ಸಮ್ಮೇಳನಾಧ್ಯಕ್ಷ ಶಾಂತರಾಜ್ ಐತಾಳರನ್ನು ಶಾಂತ ರೀತಿಯಲ್ಲಿ ಗೌಜು ಗದ್ದಲವಿಲ್ಲದೆ ಸಾಹಿತ್ಯ ಅಭಿಮಾನಿಗಳ ಸಹಗೂಡುವಿಕೆಯೊಂದಿಗೆ ಉತ್ತಮವಾಗಿ ದಾರಿಯುದ್ದಕ್ಕೂ ಸುಮಾರು ೩೦೦ ಜನಕ್ಕೂ ಮಿಕ್ಕಿ ಸೇರಿದ ಸಾಹಿತಿಗಳು, ಸಾಹಿತ್ಯಸಕ್ತರು ವಿದ್ಯಾರ್ಥಿಗಳು ಸೇರಿದ ಈ ಮೆರವಣಿಗೆ ಎಲ್ಲರ ಗಮನ ಸೆಳೆದು ಶಿಸ್ತಿನ ಧ್ವಜಾರೋಣ ಖುಷಿ ಕೊಟ್ಟಿತು.


ಸಾಹಿತಿಗಳ ಹಾಗೂ ಸಾಹಿತ್ಯ ಆಸಕ್ತರ ಗಮನ ಸೆಳೆದ ಲೇಜಿಯಂ ನೃತ್ಯ
: ಧ್ವಜಾರೋಹಣದ ನಂತರ ನಶಿಸುತ್ತಿರುವ ಲೇಜಿಯಮ್ ನೃತ್ಯವನ್ನು ಕನ್ನಡದ ಹಾಡಿಗೆ ಅದ್ಭುತವಾಗಿ ಪ್ರಸ್ತುತ ಪಡಿಸಿದ ಸ್ಥಳೀಯ ಶಾಲೆಯ ಮುದ್ದು ಮಕ್ಕಳ  ನೃತ್ಯ ಸುಮಾರು ಎರಡು ಕಿಲೋ ಮೀಟರ್ ಮೆರವಣಿಗೆಯಲ್ಲಿ ಬಂದು ಬಸವಳಿದ ಜೀವ ಗಳ ಮನ ತಣಿಸಿತು. ಇದು ನಶಿಸುತ್ತಿರುವ, ಇಂದಿನ ಪೀಳಿಗೆಗೆ ಗೊತ್ತಿರದ ಕಲೆ. ಲೇಜಿಯಂ ಹಿಡಿದು ಕಲಾತ್ಮಕವಾಗಿ ಕನ್ನಡ ಹಾಡಿಗೆ ನೃತ್ಯವನ್ನು ಮಾಡಿ ತೋರಿಸಿರುವುದು ಸಮ್ಮೇಳನಕ್ಕೆ ಕಳೆ ತಂದಿತು.ಶ್ರೀ ಉಮಾಮಹೇಶ್ವರ ದೇವಳದ ಸುಂದರ ಪರಿಸರದ ನಡುವೆ ಶ್ರೀ ಉಮಾಮಹೇಶ್ವರ ನ ಅನುಗ್ರಹದಿಂದ ಕನ್ನಡ ಕಂಪು ಪಸರಿಸಿತು. ದೇವಳದ ಮುಖದ್ವಾರ ದಲ್ಲಿ ಈ ಪರಿಸರದ ವಿಶ್ವೇಶ್, ವಿದ್ಯಾ ದಂಪತಿಗಳ ಕೈಚಳಕದಲ್ಲಿ ನೀರಿನಲ್ಲಿ ತೇಲುವ ರಂಗವಲ್ಲಿ ಗಮನ ಸೆಳೆಯಿತು. ಹಿರಿಯ ಸಾಹಿತಿ ನೆಂಪು ನರಸಿಂಹ ಭಟ್ಟರಿಂದ ಉದ್ಘಾಟನೆಗೊಂಡ  ಪುಸ್ತಕ ಮಳಿಗೆಗಳು ಸಾಹಿತ್ಯ ಅಭಿಮಾನಿಗಳನ್ನು ಕೈ ಬೀಸಿ ಕರೆಯುತ್ತಿತ್ತು. ಇನ್ನೂ ಕೆಲವು ವ್ಯಾವಹಾರಿಕ ಮಳಿಗೆಗಳು ಗಮನ ಸೆಳೆದವು.

ಅಚ್ಚುಕಟ್ಟಾದ  ಬೆಳಗಿನ ಉಪಾಹಾರದ ವ್ಯವಸ್ಥೆ, ಸಂಘ ಸಂಸ್ಥೆಗಳು ಮತ್ತು ಶಾಲಾ ವಿದ್ಯಾರ್ಥಿಗಳಿಂದ ಸಮರ್ಥ ನಿರ್ವಹಣೆ. ಸುಂದರ ಶಿಸ್ತುಬದ್ಧ ತೆಂಕು ತಿಟ್ಟು ಯಕ್ಷಗಾನ ವೈಭವದೊಂದಿಗೆ ಪ್ರಾರಂಭಗೊಂಡ ಸಭಾ ಕಾರ್ಯಕ್ರಮ ಖುಷಿ ಕೊಟ್ಟಿತು. ಸರ್ವಾಧ್ಯಕ್ಷ ದಂಪತಿಗಳಿಗೆ ಮಹಿಳಾ ಮಣಿಗಳು ಸಂಪ್ರದಾಯದಂತೆ ಆರತಿ ಬೆಳಗಿ ಬರಮಾಡಿಕೊಂಡದ್ದು ಮನ ಮುಟ್ಟುವಂತೆ ಮಾಡಿತು.

ಸಮಯ ಪ್ರಜ್ಞೆಯಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಖ್ಯಾತ ಪರಿಸರವಾದಿ ಶಿಸ್ತು ಸಂಯಮದ ಸಾಕಾರ ಮೂರ್ತಿ ದಿನೇಶ್ ಹೊಳ್ಳರಿಂದ ದೀಪ ಬೆಳಗಿ ಪ್ರಾರಂಭಗೊಂಡ ಕಾರ್ಯಕ್ರಮ ಹಚ್ಚಿದ ದೀಪದಂತೆ ಸಂಯಮದಿಂದ ಬೆಳಗಿದಂತೆ ಸಂಜೆ ತನಕ ಕಾರ್ಯಕ್ರಮ ನಡೆಯಿತು. ರವಿರಾಜ್ ರಿಂದ ಚಿಕ್ಕದಾದ ಚೊಕ್ಕದಾದ ಪ್ರಸ್ತಾವನೆ ಮತ್ತು ಪ್ರೀತಿಯ ಸ್ವಾಗತ, ಮೈ ನವಿರೇಳಿಸುವ ಮಾತು, ನಮ್ಮನ್ನು ಎಚ್ಚರಿಸುವ ಮಾತು, ಯುವ ಪೀಳಿಗೆಗೆ ಉಪಯುಕ್ತ ಮಾತು ಇದು ಹೊಳ್ಳರ  ಅನುಭವದ ಮಾತು.
ವಿಶೇಷ ಅತಿಥಿ ದೂರದರ್ಶನದ ಥಟ್ ಅಂತ ಹೇಳಿ ಖ್ಯಾತಿಯ ಸಜ್ಜನ ಸಾಕಾರ ಮೂರ್ತಿ, ಕನ್ನಡದ ಭಂಡಾರ ಡಾ. ನಾ. ಸೋಮೇಶ್ವರ ಅವರ ಮುಗ್ಧ ಪ್ರಬುದ್ದ, ಅರ್ಥ ಗರ್ಭಿತ ಮಾತುಗಳು ಎಲ್ಲರ ಮನ ಮುಟ್ಟಿತು. ಯಾರಿಗೂ ತಿಳಿಯದ ತಾಯಿ ಭುವನೇಶ್ವರಿಯ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದಿತು. ವಿಶೇಷ ಸಾಧನೆ ಮಾಡಿದವರ ಗುರುತಿಸುವಿಕೆ ಹೆಮ್ಮೆಯ ವಿಷಯ, ಸಮ್ಮೇಳನದ ಅಧ್ಯಕ್ಷರನ್ನು ಪರಿಚಯಿಸಿದ ಖ್ಯಾತ ಲೇಖಕಿ ಕಾತ್ಯಾಯಿನಿ ಕುಂಜಿಬೆಟ್ಟು ಮುಗ್ಧವಾಗಿ   ತಮ್ಮ ಸಮಯದ ಚೌಕಟ್ಟಿನಲ್ಲಿ ಅವರ ಬಗೆಗಿನ ಅಪಾರ ವಿಷಯಗಳನ್ನು ಸಭೆಯ ಮುಂದೆ ಪ್ರಸ್ತುತ ಪಡಿಸಿದ್ದು ಖುಷಿ ಕೊಟ್ಟಿತು.
ನಂತರದ ಸಮ್ಮೇಳನ ಅಧ್ಯಕ್ಷರ ನುಡಿಯಲ್ಲಿ ಕನ್ನಡದ ಇತಿಹಾಸ, ಕನ್ನಡದ ಬಗೆಗಿನ ಕಾಳಜಿಯನ್ನು ಮತ್ತು ಯುವ ಪೀಳಿಗೆ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುವ ಬಗ್ಗೆ ವಿಸ್ತಾರವಾಗಿ ಹೇಳಿದರು. ಅವರು ಅಭಿಯಂತರರಾಗಿದ್ದರೂ  ಅವರಲ್ಲಿನ ಅಗಾಧ ಸಾಹಿತ್ಯ ಪಾಂಡಿತ್ಯಕ್ಕೆ ಶರಣು ಹೋಗಲೇ ಬೇಕು.

ಸಮಯಕ್ಕೆ ಸರಿಯಾಗಿ ಮುಗಿದ ಉದ್ಘಾಟನಾ ಸಮಾರಂಭ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಚೂರು ಸಮಯಕ್ಕೆ ಎಡೆ ಕೊಡದೆ ನಡೆದ ಗೀತ ಗಾಯನ ಮನಸೂರೆ ಗೊಂಡಿತು. ಗೃಹಿಣಿಯರ ಅಡುಗೆ ಮನೆ ಸಾಹಿತ್ಯದ ಬಗ್ಗೆ ಅಂಚೆ ಕಾರ್ಡ್ ಕಥೆಗಳ ವಾಚನದಿಂದ ತೆರೆಯ ಮರೆಯಲ್ಲಿ ಹುದುಗಿರುವ ಅವಕಾಶ ವಂಚಿತ ಸ್ತುಪ್ತ ಪ್ರತಿಭೆಗಳಿಗೆ ನೀಡಿದ ಅಪೂರ್ವ ಅವಕಾಶ ಸಾರ್ಥಕತೆ ಪಡೆಯಿತು.

ನಂತರ ವಿಪಂಚಿ ಬಳಗದವರಿಂದ ನಡೆದ ಕನ್ನಡ ಭಾವಗೀತೆಗಳ ವೀಣಾ ವಾದನ ಮತ್ತು ವಿದುಷಿ ಅದಿತಿ ಮೆಹಂದಳೆ ಅವರ ನೃತ್ಯ ಸಿಂಚನ ಕಣ್ಮನ ತಣಿಸಿದರೆ, ಅದೆ ಸಮಯಕ್ಕೆ  ರುಚಿ ರುಚಿಯಾದ ಅನ್ನ ಪ್ರಸಾದ ಎಲ್ಲರ ಉದರವನ್ನು ತಣಿಸಿತು. ಯುವ ಕವಿ ಗೋಷ್ಠಿ ವಿದ್ಯಾರ್ಥಿಗಳ ಸಾಹಿತ್ಯದ ಅಭಿರುಚಿಗೆ ನೀರೆರೆದು ಪ್ರೋತ್ಸಾಹಿಸಿ ದಂತೆ ಭಾಸವಾಯಿತು..

ಮಧ್ಯಾಹ್ನದ  ಹೊಟ್ಟೆ ತುಂಬಿ ಕಣ್ಣು ಬಾಡುವ ಸಮಯದಲ್ಲಿ ಪದ್ಮಾಸಿನಿ ಉದ್ಯಾವರ ಅವರ ಒಡಿಸ್ಸಿ ನೃತ್ಯ ನಂತರ ನಡೆದ ಅಲ್ಲಿ ಇಲ್ಲಿ ಹಾಸ್ಯ ಗೋಷ್ಠಿ ಬಾಡಿದ ಕಣ್ಣನ್ನು ತೆರೆಸಿ ನಗೆಯಲ್ಲಿ ತೇಲಿಸಿ, ಮನಸನ್ನು ಮುದಗೊಳಿಸುವಲ್ಲಿ ಯಶಸ್ವಿಯಾಯಿತು. ಅದಕ್ಕೆ ಸಂಧ್ಯಾ ಶೆಣೈ ಅವರು ಉಪ್ಪು ಖಾರ ಸೇರಿಸಿ ಪ್ರೇಕ್ಷಕರಿಗೆ ಸಿಹಿ ಉಣ ಬಡಿಸಿದರು. ಅಧ್ಯಕ್ಷರೊಂದಿಗಿನ ಅರ್ಥಪೂರ್ಣ ಮಾತುಕತೆ ಇನ್ನಷ್ಟು ಶಾಂತರಾಜ ಐತಾಳರ ಬಗ್ಗೆ  ಮತ್ತು ಅವರ ಅಂತರಾಳದ ಮಾತುಗಳನ್ನು ಇನ್ನಷ್ಟು ತಿಳಿಯುವಂತೆ ಮಾಡಿತು. ಇಷ್ಟೆಲ್ಲಾ ಕಾರ್ಯಕ್ರಮ ಆದರೂ ಸಮಯ ಪ್ರಜ್ಞೆ ಇಲ್ಲಿಯೂ ಕೈ ಕೊಡಲಿಲ್ಲ .

ಮತ್ತೊಂದು ವಿಶೇಷವೆಂದರೆ ಈ ಸಮ್ಮೇಳನದಲ್ಲಿ ಅರ್ಹ ಸಾಧಕರಿಗೆ ಪುರಸ್ಕಾರ. 20ವರುಷದಿದ – 80ವರುಷದ ವರೆಗಿನ ಅವರವರ ಕ್ಷೇತ್ರದಲ್ಲಿ ಸಾಧನೆ ಮಾಡಿದ 2 ಜನ ಸಾಧಕ ಗಣ್ಯರಿಗೆ ಗೌರವ ಅಭಿನಂದನೆ ನಡೆಯಿತು.

ಸಮಾರೋಪ ಸಮಾರಂಭ 4.30ಕ್ಕೆ ಪ್ರಾರಂಭಗೊಂಡಿತು. ಅತಿಥಿ ಕಬ್ಯಾಡಿ ಜಯರಾಮ ಆಚಾರ್ಯರು ತಮ್ಮ ಮಾತಿನಲ್ಲಿ ವಿಶ್ಲೇಷಿಸಿದರು.  ಜಿಲ್ಲಾಧ್ಯಕ್ಷರ ನುಡಿಗಳಲ್ಲಿ ತಮ್ಮ ಪದಾಧಿಕಾರಿಗಳ ಸಹಕಾರ, ನಡೆಗಳ ಬಗ್ಗೆ ಖುಷಿ ಎದ್ದು ಕಾಣುತಿತ್ತು. ತಮ್ಮ ಅಧ್ಯಕ್ಷತೆಯ ಸಾರ್ಥಕತೆಯು ಇತರರಿಗೆ ಮಾದರಿ ಎಂಬಂತಿತ್ತು. ಸಮ್ಮೇಳನ ಅಧ್ಯಕ್ಷರ ಪ್ರತಿಸ್ಪಂದನದಲ್ಲಿ ಧನ್ಯತಾ ಭಾವ ಎದ್ದು ಕಾಣುತಿತ್ತು. ಅವರ ಮನ ತುಂಬಿದ  ಮಾತುಗಳು ಸಮ್ಮೇಳನಕ್ಕೆ ಹಗಲಿರುಳು ಒದ್ದಾಡಿದ ಕನ್ನಡದ ಸೈನಿಕರಿಗೆ ಸಾರ್ಥಕತೆಯನ್ನು ತಂದಿತು.

ಪ್ರೊ.ಮುರಳೀಧರ ಉಪಾಧ್ಯರ  ಗಂಭೀರತೆಯ ಅದ್ಭುತ ಸಮಾರೋಪ ಭಾಷಣ ನೆರೆದ ಸಾಹಿತ್ಯ ಅಭಿಮಾನಿಗಳ ಕಿವಿ ಅರಳಿಸಿ ಕೇಳುವಂತೆ ಮಾಡಿತು. ಅನುದಾನಿತ ಕನ್ನಡ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವಂತೆ ಹಕ್ಕೊತ್ತಾಯ ಮಾಡಬೇಕೆಂದು ಕರಾ ವಳಿಯ ಗಟ್ಟಿ ಧ್ವನಿಯ ರಾಜಕಾರಣಿ ಶ್ರೀನಿವಾಸ ಪೂಜಾರಿ ಅವರಿಗೆ ಅವರ ಅನುಪಸ್ಥಿತಿಯಲ್ಲಿ ಕರೆ ನೀಡಿದರು.(ಈ ಗಂಭೀರ ವಿಷಯವನ್ನು ನಾನು ವೀಡಿಯೋ ಚಿತ್ರೀಕರಿಸಿ ಶ್ರೀನಿವಾಸ ಪೂಜಾರಿ ಅವರಿಗೆ ತಲುಪಿಸಿ ಸದನದಲ್ಲಿ ಸರಕಾರದ ಗಮನ ಸೆಳೆಯುವಂತೆ ಮನವಿ ಮಾಡಿ, ಉಪಾಧ್ಯಯರ ಕನ್ನಡ ಕಾಳಜಿಯನ್ನು ಸಚಿವರಿಗೆ ತಲುಪಿಸಿ ಧನ್ಯನಾದೆ. ಅದಕ್ಕೂ ಸಚಿವರ ಉತ್ತಮ ಸ್ಪಂದನೆ ಮನಸಿಗೆ ಖುಷಿ ಕೊಟ್ಟಿತು)

ಈ ರೀತಿಯಾಗಿ ಕನ್ನಡ ಉಳಿಸಿ ಬೆಳೆಸಲು ಕ್ರಮ ಕೈಗೊಳ್ಳುವಂತೆ ಸರಕಾರವನ್ನು ನೇರವಾಗಿ ಎಚ್ಚರಿಸಿದರು. ಇಳಿ ವಯಸ್ಸಿನಲ್ಲೂ ಅವರ ಜ್ಞಾಪಕ ಶಕ್ತಿ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸಿತು. ತಮ್ಮ ಸಾಹಿತ್ಯದ ಗಣಿ ಯಲ್ಲಿನ ಚಿನ್ನದಂತಹ  ವಿಷಯಗಳನ್ನು ಮುತ್ತಿನಂತಹ ಮಾತುಗಳಿಂದ ಉಣಬಡಿಸಿದರು.. ಮಲಗಿದ್ದ ಕನ್ನಡ ಭಾಷಿಗರನ್ನು ಎಚ್ಚರಿಸಿದರು.

ತೆರೆಯ ಮರೆಯಲ್ಲಿ ತಮ್ಮದೇ ಆದ ಸಾಧನೆಯನ್ನು ಮಾಡಿದ ಪರಿಸರದ ಸಾಧಕರನ್ನು ಮತ್ತು ಸಂಘಟನೆಗಳನ್ನು ಗುರುತಿಸಿ ಸನ್ಮಾನಿಸಿರುವುದು ಸಮ್ಮೇಳನಕ್ಕೆ ಕಳಶ ಇಟ್ಟಂತೆ ಆಯಿತು. ಕೊನೆಯಲ್ಲಿ  ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಅವರ ಅಧ್ಯಕ್ಷೀಯ ನುಡಿಗಳಲ್ಲಿ ಧನ್ಯತಾ ಭಾವ ಎದ್ದು ಕಾಣುತಿತ್ತು. ಕಾರ್ಯ ಕ್ರಮಕ್ಕೆ ಸಹಕರಿಸಿದ ಯಾರನ್ನು ಬಿಡದೇ ಸ್ಮರಿಸಿರುವುದು ಅವರ ಹಿರಿತನವನ್ನು ಎತ್ತಿ ತೋರಿಸಿತು.

ಬೆಳಗಿನ ಉದ್ಘಾಟನಾ ಕಾರ್ಯಕ್ರಮದ ನಿರೂಪಕಿ ಪೂರ್ಣಿಮಾ ಜನಾರ್ಧನ್ ಮತ್ತು ಸಮಾರೋಪ ಸಮಾರಂಭದ ನಿರೂಪಕರಾದ ಪ್ರಭಾಕರ್ ತುಮರಿ ಮತ್ತು ರಾಘವೇಂದ್ರ ಪ್ರಭು ಕರ್ವಾಲು, ರಾಜೇಶ್ ಭಟ್ ಪಣಿಯಾಡಿ ಇವರು ಶಿಸ್ತು ಸಂಯಮಗಳಿಂದ ಎಲ್ಲಿಯೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸದೆ ಕಾರ್ಯಕ್ರಮವನ್ನು ನಿರೂಪಿಸಿರುವುದು ಎಲ್ಲರ ಗಮನ ಸೆಳೆಯಿತು. ಸಮಾರೋಪ ಸಮಾರಂಭದ ನಂತರ ನಡೆದ ಕಾದಿರುವಳು ಶಬರಿ ನಾಟಕ ಅದ್ಭುತವಾಗಿ ಮೂಡಿಬಂದು ಕಲಾ ರಸಿಕರನ್ನು ಮನಸೂರೆಗೊಳಿಸಿತು .

ಕಾರ್ಯದರ್ಶಿ  ರಂಜನಿ ವಸಂತ್  ಹಾಗು ವಸಂತ್ ದಂಪತಿಗಳು ತೆರೆಯ ಹಿಂದೆ ನಿಂತು ಕಷ್ಟದ ಕೆಲಸವನ್ನು ಸಲೀಸು ಮಾಡಿ ರವಿರಾಜ್ ಮತ್ತು ಜನಾರ್ದನ್  ಕೊಡವೂರು ಅವರಿಗೆ ಸಂಪೂರ್ಣ ಮನಪೂರ್ವವಾಗಿ ಸಹಕರಿಸಿದ್ದು ಶ್ಲಾಘನೀಯ. ಇದಕ್ಕೆಲ್ಲ ಕಾರಣ ತೆರೆಮರೆಯಲ್ಲಿ  ನಿಂತು ತನ್ನ ಸಂಪೂರ್ಣ ಸಹಕಾರವನ್ನು ನೀಡಿ, ವೇದಿಕೆಗೂ ಬರದೇ ತನ್ನನ್ನು ಎಲ್ಲಿಯೂ ಪ್ರದರ್ಶಿಸದೆ ತನ್ನ ಸಹಾಯ ಹಸ್ತ ಚಾಚಿದ ಸಜ್ಜನ ಸಾಕಾರ ಮೂರ್ತಿ ಮಹೇಶ್ ಠಾಕೂರ್ ಹಾಗು ಪ್ರದಾನ ಕಾರ್ಯದರ್ಶಿ ಗುರುರಾಜ ಭಂಡಾರಿಯವರ ಕಾರ್ಯದಕ್ಷತೆ.

ಇಷ್ಟು ಮಾತ್ರವಲ್ಲದೆ ಇಡೀ ತಾಲೂಕು ಪರಿಷತ್ ಘಟಕದ ಸರ್ವ ಪದಾಧಿಕಾರಿಗಳ ಸಹಕಾರವೂ ಇದರ ಹಿಂದೆ ಇದೆ.  ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಒಗ್ಗಟ್ಟಿನ ಮಂತ್ರ ಯಶಸ್ಸಿಗೆ ಕಾರಣವಾಯಿತು. ಅಂತೂ ಸಾಹಿತ್ಯ ಸಮ್ಮೇಳನವು ಸಚಿವರಿಂದ, ಚಲನ ಚಿತ್ರ ನಟರಿಂದ, ಸ್ವಾಮೀಜಿ ಗಳಿಂದ, ಕ್ರೈಸ್ತ ಪಾದ್ರಿಗಳಿಂದ ಮೌಲ್ವಿಗಳಿಂದ, ಯಕ್ಷಗಾನ ಕಲಾವಿದರಿಂದ, ಜಿಲ್ಲಾಧಿಕಾರಿಗಳಿಂದ ಪ್ರಚಾರ ಗಿಟ್ಟಿಸಿ ರಾಜ್ಯಕ್ಕೇ ಮಾದರಿ ಸಮ್ಮೇಳನವಾಗಿ ಆಗಿದ್ದಂತು ಸತ್ಯ.
ಕೊನೆಯ ಮಾತು:  ಜಿಲ್ಲಾಧ್ಯಕ್ಷರು ನನಗೆ ಉಡುಪಿ ತಾಲೂಕು ಪರಿಷತ್ ನ ಉಸ್ತುವಾರಿಯ ಜವಾಬ್ದಾರಿ ನೀಡಿದ್ದರಿಂದ ಯಶಸ್ವಿ ಗೊಳಿಸಲು ನನಗೂ ಜವಾಬ್ದಾರಿ ಇತ್ತು. ಸಮ್ಮೇಳನ ಮನ ತಣಿಸಿದ ಕಾರಣ ನನ್ನ ಮನದಾಳದ ಮಾತುಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ತಪ್ಪಿದ್ದರೆ ಮನ್ನಿಸಿ.
ಮೋಹನ್ ಉಡುಪ ಹಂದಾಡಿ,
ಪತ್ರಕರ್ತರು /ಸಹ ಕಾರ್ಯದರ್ಶಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್.
 
 
 
 
 
 
 
 
 
 
 

Leave a Reply