ಶ್ರಾವಣ ಹುಣ್ಣಿಮೆಯ ಚಂದ್ರ ನೊಂದಿಗೆ ಗುರು ಗ್ರಹದ ಹುಣ್ಣಿಮೆ.

ನಾಳೆ ರವಿವಾರ ಶ್ರಾವಣ ಹುಣ್ಣಿಮೆ.
ನಮಗೆ ತಿಳಿದಿರುವಂತೆ ಹುಣ್ಣಿಮೆಯ ದಿನ ಸಂಪೂರ್ಣ ಚಂದ್ರ , ಇಡೀ ರಾತ್ರಿ ಕಾಣುತ್ತದೆ. ಸಂಜೆ ಯಾಗುತ್ತಿದ್ದಂತೆ ಪೂರ್ವ ಆಕಾಶದಲ್ಲಿ ಚಂದ್ರೋದಯ. ಇಡೀ ರಾತ್ರಿ ಆಕಾಶದಲ್ಲಿ ತಿರುಗುತ್ತಾ ಮುಂದಿನ ದಿನದ ಸೂರ್ಯೋದಯಕ್ಕೆ ಚಂದ್ರ ಅಸ್ತ.

ಇದೇರೀತಿ ವರ್ಷದಲ್ಲಿ ಕೆಲವು ದಿನ ಗುರು ಗ್ರಹವೂ ಇಡೀ ರಾತ್ರಿ ಕಾಣುತ್ತದೆ. ಸಂಜೆ ಯಾಗುತ್ತಿದ್ದಂತೆ ಪೂರ್ವ ಆಕಾಶದಲ್ಲಿ ಉದಯಿಸಿ ಮುಂದಿನ ದಿನ ಸೂರ್ಯೋದಯಕ್ಕೆ ಅಸ್ತ. ರವಿವಾರ ಶ್ರವಣ ನಕ್ಷತ್ರ ದಪಕ್ಕದಲ್ಲಿ ಚಂದ್ರನಿರುತ್ತದೆ. ಹಾಗಾಗಿ ಶ್ರಾವಣ ಹುಣ್ಣಿಮೆ.

ನಾಳೆಯ ಮತ್ತೊಂದು ವಿಶೇಷವೆಂದರೆ ಚಂದ್ರ ಹಾಗೂ ಗುರು ಗ್ರಹ ಜೊತೆ ಜೊತೆಗೆ ಹುಣ್ಣಿಮೆ ಆಚರಿಸುತ್ತಿವೆ. ಇದೊಂದು ಅಪರೂಪದ ವಿದ್ಯಮಾನ. ಚಂದ್ರ ಗುರು ಗ್ರಹ ಹಾಗೂ ಶ್ರಾವಣ ನಕ್ಷತ್ರ ಜೊತೆಜೊತೆಗೆ ಕಾಣುತ್ತಿವೆ.ದೂರ ದರ್ಶಕದಲ್ಲಿ ಗುರು ಗ್ರಹ ನೋಡಲು ಇಡೀ ವರ್ಷದಲ್ಲೇ ಈ ತಿಂಗಳಿಡೀ ಒಳ್ಳೆಯ ಕಾಲ. ನೋಡಿ ಆನಂದಿಸಿ. ಆಕಾಶದಲ್ಲಿ ನೋಡುವಾಗ ಚಂದ್ರ , ಗುರು ಗ್ರಹಕ್ಕಿಂತ ದೊಡ್ಡದಾಗಿ ಕಾಣುತ್ತಿದೆ. ಇದಕ್ಕೆ ಕಾರಣ ಚಂದ್ರ ಗುರು ಗ್ರಹ ಕ್ಕಿಂತ ಚಿಕ್ಕದಾಗಿದ್ದರೂ ಭೂಮಿಗೆ ತುಂಬಾ ಹತ್ತಿರವಿರುವುದೇ.

ವಾಸ್ತವವಾಗಿ ಚಂದ್ರ ಈ ದಿನ 3 ಲಕ್ಷದ 74 ಸಾವಿರದ 484 ಕಿಮೀ ದೂರದಲ್ಲಿದ್ದರೆ , ಗುರುಗ್ರಹ ಭೂಮಿಯಿಂದ 58 ಕೋಟಿ 80 ಲಕ್ಷ ಕಿಮೀ ದೂರದಲ್ಲಿದೆ. ಸುಮಾರು ಒಂದೂವರೆ ಸಾವಿರ ಪಟ್ಟು ಆಳದಲ್ಲಿದೆ ಗುರುಗ್ರಹ. ಚಂದ್ರನಿಗಿಂತ ಗುರುಗ್ರಹ ಅದೆಷ್ಟು ದೊಡ್ಡದೆಂದರೆ ಗುರು ಗ್ರಹದ ಹೊಟ್ಟೆ ಖಾಲಿಯಾಗಿದ್ದರೆ 60 ಸಾವಿರ ಚಂದ್ರರನ್ನು ತುಂಬಬಹುದು.

ಶ್ರಾವಣ ಮಾಸ ವೆಂದರೆ ಹುಣ್ಣಿಮೆ ಚಂದ್ರ, ಆ ದಿನ ಶ್ರವಣ ನಕ್ಷತ್ರದ ಪಕ್ಕದಲ್ಲಿ ಇರುವುದು. ಈ ಶ್ರವಣ ನಕ್ಷತ್ರವೋ ಭೂಮಿಯಿಂದ ಸುಮಾರು 16.7 ಜ್ಯೋತಿರ್ವರ್ಷ ದೂರದಲ್ಲಿದೆ.
ಒಂದು ಜ್ಯೋತಿರ್ವರ್ಷವೆಂದರೆ ಸುಮಾರು ಒಂದು ಲಕ್ಷ ಕೋಟಿ ಕಿಮೀ ( 946 ಬಿಲಿಯನ್ ಕಿಮೀ.) ಈ ನಕ್ಷತ್ರ ನಮ್ಮ ಸೂರ್ಯನಿಗಿಂತ ಎಂಟು ಪಟ್ಟು ದೊಡ್ಡದು.

ಹಾಗಾಗಿ ಈ ನಕ್ಷತ್ರದಲ್ಲಿ 8000 ಗುರು ಗ್ರಹಗಳನ್ನು ತುಂಬಬಹುದು. (ನಮ್ಮ ಸೂರ್ಯ ನಮ್ಮ ಗುರು ಗ್ರಹಕ್ಕಿಂತ 1000 ಪಟ್ಟು ದೊಡ್ಡದು.) ಆಶ್ಚರ್ಯ ವಲ್ಲವೇ ಈ ಖಗೋಳ ವಿಶ್ವ. ಇಂದಿನ ದಿನ ಶ್ರವಣ ನಕ್ಷತ್ರ, ಚಂದ್ರ ಹಾಗೂ ಗುರು ಗ್ರಹ ಅಕ್ಕಪಕ್ಕದಲ್ಲಿ ಕಾಣಲಿವೆ.

 
 
 
 
 
 
 
 
 
 
 

Leave a Reply