ಕಲ್ಜಿಗದ ಮಾಯ್ಕಾರೆ ಪಂಜುರ್ಲಿ…. ಅತ್ಯದ್ಭುತ ಕಲಾಕಾಣಿಕೆ

“ಹಿಂದಕ್ಕೆ ಗುರುವಿದ್ದ ಮುಂದಕ್ಕೆ ಗುರಿಯಿತ್ತು ಸಾಗಿದುದು ಧೀರ ದಂಡು… ಆದರಿಂದು ಹಿಂದಕ್ಕೆ ಗುರುವಿಲ್ಲ ಮುಂದಕ್ಕೆ ಗುರಿಯಿಲ್ಲ ಮುಗ್ಗರಿಸಿ ಬೀಳುತಿದೆ ಹೇಡಿ ಹಿಂಡು” ಎಂದು ಮಹಾಕವಿಯೊಬ್ಬರು ಎಲ್ಲೊ ಒಂದು ಕಡೆ ಬರೆದ ಸಾಲು ಯಾಕೊ ಆಗಾಗ್ಗೆ ನೆನಪಾಗುತ್ತಿರುತ್ತದೆ. ಇಂದಿನ ದಿನಗಳಲ್ಲಿ ಮನುಷ್ಯ ತಳಕು ಬಳುಕಿನ ಶೋಕಿ ಜೀವನಕ್ಕೆ ಮರುಳಾಗಿ , ಅದರ ಪ್ರಾಪ್ತಿಗಾಗಿ ಯಾವ ತಳ ಮಟ್ಟದ ನಡತೆಗೂ ಹೇಸದೇ , ಬದುಕನ್ನೇ ಫ್ಯಾಷನ್ ಆಗಿ ಮಾಡಿಕೊಳ್ಳುವ ತವಕದಲ್ಲಿ ನೈತಿಕವಾಗಿ ಪಾತಾಳಕ್ಕಿಳಿಯುತ್ತಿರುವುದು ವೇದ್ಯವಾಗುತ್ತಿದೆ. ಯುವಜನತೆ ಗೊತ್ತು ಗುರಿಯಿಲ್ಲದೆ, ಹಣದ ಮೌಲ್ಯ ತಿಳಿಯದೆ , ದೇವರು ಗುರು ಹಿರಿಯರು ಎಂಬ ಭಯ ಭಕ್ತಿ ಇಲ್ಲದೇ ಮಜಾ ಮಾಡುವುದೇ ಬದುಕಿನ ಗುರಿಯೆಂದು ದೀಪದ ಬೆಳಕಿಗೆ ಮರುಳಾದ ಪತಂಗದಂತೆ ರೆಕ್ಕೆ ಪುಕ್ಕ ಸುಟ್ಟು ಕರಕಲಾಗಿಸಿಕೊಂಡು ನರಕಸದೃಶ ಜೀವನವನ್ನು ತಮ್ಮದಾಗಿಸಿಕೊಂಡದ್ದನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ. ಯುವ ಮನಸ್ಸುಗಳನ್ನು ಮಾರ್ಗದರ್ಶಿಸಬೇಕಾದ ಹಿರಿಯರು ದೃತರಾಷ್ಟ್ರ ತನ್ನ ಪುತ್ರ ವ್ಯಾಮೋಹದಿಂದ ಅಂಧನಾಗಿದ್ದಂತೆ ತಮ್ಮ ಮಕ್ಕಳ ವ್ಯಕ್ತಿತ್ವದ ಬಗ್ಗೆ ಕುರುಡರಾಗಿದ್ದಾರೆ. ಹಣಬಲವೇ ಸರ್ವಸ್ವವೆಂದು ಬಗೆದಿರುವಂತಿದೆ. ಇದರಿಂದ ಸಮಾಜದಲ್ಲಿ ನಕಾರಾತ್ಮಕ ಶಕ್ತಿಗಳೇ ರಾರಾಜಿಸುತ್ತಿದೆ. ಕೊರೊನಾ ನಂತರದ ದಿನಗಳಲ್ಲಂತೂ ಇದ್ದಬಿದ್ದ ಮನುಷ್ಯತ್ವವೂ ಸತ್ತು ಹೋಗಿ ಜನ ಬರಡಾಗುತ್ತಿದ್ದಾರೆ. ಇಂತಹಾ ಸಂದರ್ಭದಲ್ಲಿ ಸಮಾಜದ ಯುವಶಕ್ತಿಯನ್ನು ಮುನ್ನಡೆಸುತ್ತಾ ಅವರಲ್ಲಿ ನೈತಿಕತೆಯನ್ನು ಭರಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಈ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮಗಳು ಬಹಳಾ ಮುಖ್ಯ ಪಾತ್ರವಹಿಸಲಿದೆ. ಇತ್ತೀಚಿನ ದಿನಗಳಲ್ಲಿ ಇಂತಹಾ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಮೂಹ ಮಾದ್ಯಮಗಳು ಕೆಟ್ಟು ತಳಹಿಡಿದಿವೆ. ಸಮಾಜವನ್ನು ಸಂಘಟಿಸಿ ನಮ್ಮಲ್ಲಿ ನೈತಿಕತೆಯ ಮೌಲ್ಯಗಳನ್ನು ಬೆಳೆಸುವ ಬದಲಾಗಿ ಭ್ರಷ್ಟವಾಗುತ್ತಿವೆ. ಅವುಗಳಲ್ಲಿ ಹೆಚ್ಚಿನ ಎಲ್ಲಾ ರೀತಿಯ ದೃಶ್ಯ ಮಾಧ್ಯಮಗಳೂ ತಮ್ಮ ಮೌಲ್ಯಗಳನ್ನು ಬದಿಗೊತ್ತಿ , ಅಶ್ಲೀಲದ , ದ್ವಂದ್ವಾರ್ಥದ ಸಂಭಾಷಣೆಗಳ ಆಸರೆಯಿಂದ ಕೀಳು ಮಟ್ಟದ ಪ್ರೇಕ್ಷಕವರ್ಗವನ್ನು ಸೃಷ್ಟಿಸಲು ಹೊರಟಂತಿದೆ. ಪ್ರೇಕ್ಷಕರ ಮನಸ್ಸನ್ನು ಪ್ರಭಾವಿಸುವ ನಾಟಕ ಪ್ರದರ್ಶಗಳು ಇತ್ತೀಚಿನ ದಿನಗಳಲ್ಲಿ ಉದ್ಯಮವಾಗಿ ಪರಿಣಮಿಸಿ ಹಲವಾರು ಕಲಾವಿದರನ್ನು ಪೋಷಿಸುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ ಕಳಪೆ ಗುಣಮಟ್ಟದ ಸಾರವಿಲ್ಲದ ಅಸಹ್ಯ ಸಂಭಾಷಣೆಗಳನ್ನೇ ಬಂಡವಾಳ ಮಾಡಿಕೊಂಡು ಒಂದು ವರ್ಗದ ಪ್ರೇಕ್ಷಕರ ಓಲೈಕೆಯಲ್ಲಿ ತೊಡಗಿ ಸಿಳ್ಳೆ ಗಿಟ್ಟಿಸಿಕೊಳ್ಳುವ ತವಕದಲ್ಲಿವೆ. ಸಾಮಾಜಿಕ ಮೌಲ್ಯಗಳನ್ನು ಬಿತ್ತುವ ಹೊಣೆಗಾರಿಕೆಯನ್ನು ಗಾಳಿಗೆ ತೂರಲಾಗುತ್ತಿದೆ. 

ಇಂತಹಾ ಹತಾಶ ಸಂದರ್ಭದಲ್ಲಿದ್ದ ನನಗೆ ಇತ್ತೀಚೆಗೆ ಒಂದು ನಾಟಕವನ್ನು ನೋಡುವ ಅವಕಾಶ ಆಕಸ್ಮಿಕವಾಗಿ ಒದಗಿಬಂತು. ಬಾರ್ಕೂರಿನ ಬೆಣ್ಣೆಕುದ್ರು ಮೊಗವೀರ ಮಹಿಳಾ ಸಂಘದ 16 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶಾರದಾ ಆಟ್ರ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಇವರ ಅಭಿನಯದ ” ಕಲ್ಜಿಗದ ಮಾಯ್ಕಾರೆ ಪಂಜುರ್ಲಿ ” ಎಂಬ ತುಳು ಪೌರಾಣಿಕ ಮತ್ತು ಸಾಮಾಜಿಕ ಭಕ್ತಿ ಪ್ರಧಾನ ನಾಟಕವು ನನಗೆ ಹೊಸ ಭರವಸೆ ಮೂಡಿಸಿತು.

 ತುಳುನಾಡ ಮಣ್ಣಿನ ಕಾರ್ನಿಕದ ದೈವವಾಗಿರುವ ಮಾಯ್ಕಾರ ಪಂಜುರ್ಲಿಯು ಭೂಮಿಗೆ ಅವತರಿಸಿದ ಕತೆಯನ್ನು ಶ್ರೀಯುತ ಗಣೇಶ್ ಅಮೀನ್ ಸಂಕಮಾರ್ ಇವರ ಪ್ರಖ್ಯಾತ ಪುಸ್ತಕವಾದ ” ಸಾವಿರ ದೈವಗಳು ” ಎಂಬ ಪುಸ್ತಕದಿಂದ ಆಯ್ದುಕೊಂಡು ಅದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ಮುಂದೆ ಭೂಲೋಕದಲ್ಲಿ ಧರ್ಮಸಂರಕ್ಷಣೆಯ ಕೈಂಕರ್ಯವನ್ನು ಹೊಣೆಗಾರಿಕೆಯಿಂದ ನಿಭಾಯಿಸುವ ಬಗೆಯನ್ನು ಮಾರ್ಮಿಕವಾಗಿ ಮೂಡಿಸಿದ ಈ ನಾಟಕವನ್ನು ಜೆ.ಪಿ.ತೂಮಿನಾಡು ಮತ್ತು ಮೈಮ್ ರಾಮದಾಸ್ ಇವರು ಅತ್ಯುತ್ತಮವಾಗಿ ನಿರ್ದೇಶಿಸಿದ್ದು , ಇವರದ್ದು ಅತಿರೇಕದ ಸೋಂಕಿಲ್ಲದ, ಹಿತಮಿತವಾದ ಅಚ್ಚುಕಟ್ಟಾದ ನಿರ್ದೇಶನ. ಇಲ್ಲಿ ಪ್ರತಿಯೊಬ್ಬ ಕಲಾವಿದರೂ ಸ್ವತಃ ಪಾತ್ರಗಳೇ ಆಗಿ ಹೊರಹೊಮ್ಮಿದ್ದಾರೆ. ರಂಗಸಜ್ಜಿಕೆ, ಧ್ವನಿ, ಸಂಗೀತ ಪ್ರತಿಯೊಂದೂ ಅತ್ಯದ್ಭುತ ಅನುಭವವನ್ನು ನೀಡಿದೆ. ಹಾಸ್ಯ ದೃಶ್ಯಗಳು ನಕ್ಕು ಹೊಟ್ಟೆಹುಣ್ಣಾಗಿಸಿದರೆ… ಕರುಣಾರಸಗಳು ಮನಕಲಕಿ ಕಣ್ಣೀರು ಹರಿಸಿದೆ. ಈ ನಾಟಕವನ್ನು ರಚಿಸಿದ ಶ್ರೀಯುತ ಕೃಷ್ಣ ಜಿ. ಮಂಜೇಶ್ವರ ಇವರಿಗಂತೂ ಅಭಿಂದನೆ ಸಲ್ಲಿಸಲೇಬೇಕು. ಅಪೂರ್ವವಾದ ಕಲಾಕಾಣಿಕೆಯನ್ನು ಸಮರ್ಪಿಸಿದ ಶ್ರೇಯಸ್ಸು ಇವರದು. ಶ್ರೀಯುತ ಮುದ್ದು ಮೂಡುಬೆಳ್ಳೆ ಇವರ ಹದವರಿತ ಸಂಭಾಷಣೆ ನಾಟಕದ ಗೌರವವನ್ನು ಇಮ್ಮಡಿಗೊಳಿಸಿದೆ. ಆಕಾಶವಾಣಿ ಮಂಗಳೂರಿನ ರೇಡಿಯೋ ಕಾರ್ಯಕ್ರಮಗಳಲ್ಲಿ ಅವರ ಧ್ವನಿಗಾಗಿ ಹಾತೊರೆಯುತ್ತಿದ್ದವರು ನಾವು. ಇಂದು ಅವರ ಹೆಸರು ಕೇಳಿದಾಗಲೇ ಪುಳಕಗೊಂಡೆ. ಸಾಮಾಜಿಕ ಜವಾಬ್ದಾರಿಯನ್ನರಿತ ನಾಟಕವಿದು. ಇದು ಇಂದಿನ ಅಗತ್ಯತೆ. ದೈವ ದೇವರ ಅಸ್ತಿತ್ವವನ್ನೇ ಧಿಕ್ಕರಿಸಿ ಮೆರೆಯುವ ಮನಸ್ಥಿತಿ ರಾಜಾಜಿಸುತ್ತಿರುವ ಕಾಲಘಟ್ಟದಲ್ಲಿ ನಮ್ಮ ಸನಾತನ ಧರ್ಮದ ಹಿರಿಮೆ ಗರಿಮೆಯನ್ನು ಸಾರುವ ಕಾಯಕವನ್ನು ಹೆಮ್ಮೆಯಿಂದ ಚಿತ್ರಿಸಿದ ಕಲಾಕುಸುಮವಿದು. ಧಾರ್ಮಿಕ ಭಾವನೆಗಳು ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬ ಚಿಂತನೆಯಲ್ಲಿರುವ ಸಂದರ್ಭದಲ್ಲಿ ನಮ್ಮ ಹಿರಿಯರು ನಂಬಿಕೊಂಡು ಬಂದ ದೈವ ದೇವರು, ಆಚರಿಸಿಕೊಂಡು ಬಂದ ರೀತಿ ರಿವಾಜುಗಳನ್ನು ಅನುಸರಿಸಿ ಮುಂದುವರಿಯುವ ಹೊಣೆಗಾರಿಕೆಯನ್ನು ಯುವಪೀಳಿಗೆಗೆ ಮನಮುಟ್ಟುವಂತೆ ತಿಳಿಸಿದ ನಾಟಕವಿದು. 

ಅಜ್ಜಿಯ ಪಾತ್ರ ಹಳೆ ತಲೆಮಾರನ್ನು ಪ್ರಸ್ತುತಪಡಿಸಿದರೆ , ಮೊಮ್ಮಗಳ ಪಾತ್ರ ಯುವ ಜನಾಂಗವನ್ನು ಪ್ರತಿನಿಧಿಸುತ್ತದೆ.ಸೀತಮ್ಮನ ಮಕ್ಕಳು, ಶರ್ಮಿಳ ಪಾತ್ರಗಳ ಮೂಲಕ ಎರಡು ತಲೆಮಾರುಗಳ ಕೊಂಡಿಯಂತಿರಬೇಕಿದ್ದವರು ಇಂದು ನೈತಿಕ ಅಧಪತನದತ್ತ ಸಾಗಿ ಮಕ್ಕಳ ಭವಿಷ್ಯವನ್ನು ಪಣಕ್ಕಿಡುತ್ತಿರುವುದನ್ನು ಬಿಂಬಿಸಲಾಗಿದೆ. ತಂದೆ ತಾಯಿಯಾದವರು ತಮ್ಮ ಮಕ್ಕಳಿಗೆ ನಮ್ಮ ಸಂಸ್ಕ್ರತಿಯ ಅರಿವು ಮೂಡಿಸಬೇಕಾದ್ದು ಅಗತ್ಯ… ಈ ನಾಟಕದಲ್ಲಿ ಕಾಲಕಾಲಕ್ಕೆ ಪಾತ್ರಗಳ ಧಿರಿಸು ಬದಲಾಗುವಾಗ ಪಾತ್ರಗಳ ಮನಸ್ಥಿತಿಯು ಬದಲಾಗುತ್ತಿದೆ ಎಂಬ ಸೂಕ್ಷ್ಮತೆಯನ್ನು ಶಿಸ್ತಿನಿಂದ ತೋರಿಸಲಾಗಿದೆ. ಹಣವಂತರ ದೊಡ್ಡಸ್ಥಿಕೆಯ ದುರ್ವರ್ತನೆ, ಉಡಾಫೆ ನಡೆನುಡಿ, ದುರಾಸೆ…ಇವುಗಳ ಲಾಭ ಮಾಡುವ ಮಾನವ ರೂಪದ ನರಿಗಳು… ಮೊಮ್ಮಗಳಲ್ಲಿ ಆಗುವ ಬದಲಾವಣೆಯು ನಮಗೆ ಸಮಾಜದ ಸುಸ್ಥಿರತೆಯ ಆಶಾವಾದವನ್ನು ಮೊಳಕೆಯೊಡೆಯುವಂತೆ ಮಾಡುತ್ತದೆ. ತಪ್ಪಿತಸ್ಥನಿಗೆ ಆಗುವ ಶಿಕ್ಷೆಯು ಪ್ರಾಚೀನ ಕಾಲದಿಂದ ನಂಬಿದ್ದ ಧರ್ಮೊ ರಕ್ಷತಿ ರಕ್ಷಿತ: ಎಂಬ ಮಾತನ್ನು ಸಾಬೀತುಪಡಿಸುತ್ತದೆ. ನಿಜ ಜೀವನಕ್ಕೆ ತುಂಬಾ ಹತ್ತಿರವಾಗುತ್ತಾ ಸಾಗುವ ಈ ನಾಟಕವು ಪ್ರತೀ ಕ್ಷಣವೂ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತದೆ. ಮೊನ್ನೆಯಂತೂ ಸಾವಿರಾರು ಜನ ಪ್ರೇಕ್ಷಕರಿದ್ದು ಪ್ರತಿಯೊಬ್ಬರೂ ಈ ನಾಟಕವನ್ನು ಮೆಚ್ಚಿ ಕೊಂಡಾಡುವವರೆ. 

ಶಾರದಾ ಆಟ್ರ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಇವರ ಅಭಿನಯದ ” ಕಲ್ಜಿಗದ ಮಾಯ್ಕಾರೆ ಪಂಜುರ್ಲಿ ” ಎಂಬ ತುಳು ನಾಟಕ ತಂಡದ ಎಲ್ಲಾ ಕಲಾವಿದರಿಗೆ ಪ್ರೀತಿಯ ಶುಭಾಶಯಗಳು ಮತ್ತು ಅಭಿನಂದನೆಗಳು. 

ಈ ನಾಟಕ ಸಾವಿರಾರು ಪ್ರದರ್ಶನಗಳನ್ನು ಕಾಣಲಿ ಎಂಬ ಹಾರೈಕೆ ನನ್ನದು. ಪ್ರೇಕ್ಷಕರು ಕಡ್ಡಾಯವಾಗಿ ಮನೆಮಂದಿ ಮಕ್ಕಳ ಸಮೇತ ಆಸ್ವಾದಿಸಬೇಕಾದ ಕಲಾಕಾಣಿಕೆ ಇದು. ಕಲಾಮಾತೆಯ ಪ್ರಸಾದವನ್ನು ಉಣಬಡಿಸಿ ನಮಗೆ ಮುದನೀಡಿದ ತಂಡಕ್ಕೆ ನಾನು ಋಣಿಯಾಗಿರುವೆ.

ನನ್ನ ಹೃದಯಂತರಾಳದ ಅನಿಸಿಕೆ ಇದು. 

          – ಸವಿತಾ ಎರ್ಮಾಳ್                     ಉಪನ್ಯಾಸಕಿ ಮತ್ತು ಎನ್ ಎಸ್ ಎಸ್ ವಿಭಾಗಾಧಿಕಾರಿ ಮಂಗಳೂರು ವಿಭಾಗ. 

 
 
 
 
 
 
 
 
 
 
 

Leave a Reply