Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

ಮಹಾಮೇರು ಯಕ್ಷ ಕಲಾವಿದ ಮಲ್ಪೆ ವಾಸುದೇವ ಸಾಮಗ-ಒಂದು ನುಡಿ ನಮನ~ರಾಜೇಂದ್ರ ಭಟ್ ಕೆ.

ಇಂದು ನಮ್ಮನ್ನಗಲಿದ ಮಲ್ಪೆ ವಾಸುದೇವ ಸಾಮಗರು ದೇವ ಕಲೆಯಾದ ಯಕ್ಷಗಾನದ ಸವ್ಯಸಾಚಿ ಕಲಾವಿದರು. ಯಕ್ಷಗಾನದ ಎಲ್ಲಾ ಅಂಗಗಳನ್ನು ಅಧ್ಯಯನ ಮಾಡಿದವರು. ಹೊಸ ಹೊಸ ಪ್ರಯೋಗಗಳನ್ನು ಮಾಡಿ ಯಕ್ಷಗಾನವನ್ನು ಬೆಳೆಸಿದವರು. ತಮ್ಮ ತಂದೆ ಮಲ್ಪೆ ರಾಮದಾಸ ಸಾಮಗ ಅವರ ಶ್ರೇಷ್ಟವಾದ ಬಹುಶ್ರುತ ವಿದ್ವತ್ ಪರಂಪರೆಯನ್ನು ಬಹಳ ಎತ್ತರಕ್ಕೆ ತೆಗೆದುಕೊಂಡು ಹೋದವರು. ತೆಂಕು ಮತ್ತು ಬಡಗು ತಿಟ್ಟುಗಳ ಬೇಧವಿಲ್ಲದೆ ಮೆರೆದವರು.ಹಳೆಯ ಮತ್ತು ಹೊಸತು ಶೈಲಿಗಳ ಕೊಂಡಿ ಆಗಿದ್ದ ಸಾಮಗರು ಅರ್ಥಗಾರಿಕೆಯಲ್ಲಿ ಶೇಣಿ, ಕುಂಬ್ಳೆ, ತೆಕ್ಕಟ್ಟೆ, ಮಾರೂರು ಮೊದಲಾದವರ ಸಾಲಿನಲ್ಲಿ ನಿಂತವರು. ದೊಡ್ಡ ಸಾಮಗರು, ಚಿಟ್ಟಾಣಿ, ಕೋಟ ವೈಕುಂಠ, ಎಂ.ಏ.ನಾಯಕ, ನಗರ ಜಗನ್ನಾಥ ಶೆಟ್ಟಿ, ಕೋಳ್ಯೂರು, ಗೋಡೆ ನಾರಾಯಣ ಹೆಗಡೆ ಅವರಂಥ ಮಹಾರಥಿಗಳ ಒಡನಾಟ ಅವರನ್ನು ಬಹಳ ಬೆಳೆಸಿದವು. ಭಾಗವತ ನಾರಣಪ್ಪ ಉಪ್ಪೂರು ಅವರ ಪ್ರಭಾವ ಅವರಲ್ಲಿ ಭಾರೀ ದಟ್ಟವಾಗಿತ್ತು. ಕಾಳಿಂಗ ನಾವಡ ಅವರ ನಾಗಶ್ರೀ ಪ್ರಸಂಗದ ‘ಶುಭ್ರಾಂಗ’ ಅವರ ಟ್ರಂಪ್ ಕಾರ್ಡ್ ಪಾತ್ರ. ಆ ಪ್ರಸಂಗದಲ್ಲಿ ಮೊದಲ ಬಾರಿಗೆ ಯಕ್ಷಗಾನದ ವೇದಿಕೆಯಲ್ಲಿ ಕೋರ್ಟು ಕಟಕಟೆಯನ್ನು ನಿರ್ಮಾಣ ಮಾಡಿದ ಸಾಧನೆ ಅವರದ್ದು.

‘ಯಕ್ಷ ಲೋಕ ವಿಜಯ’ ಪ್ರಸಂಗದ ಅವರ ಪ್ರದೀಪನ ಪಾತ್ರ ಅವರಿಗೆ ಭಾರೀ ಹೆಸರು ತಂದದ್ದು. ನಾಯಕ, ಪೋಷಕ, ಗಯ್ಯಾಳಿ, ಗರತಿ ಮತ್ತು ಪ್ರತಿ ನಾಯಕ..ಹೀಗೆ ಎಲ್ಲಾ ಪಾತ್ರಗಳಲ್ಲಿ ಅವರು ಗಟ್ಟಿ ಹೆಜ್ಜೆ ಗುರುತು ಮೂಡಿಸಿದರು. ಧರ್ಮಸ್ಥಳ, ಕದ್ರಿ, ಕರ್ನಾಟಕ, ಸುರತ್ಕಲ್, ಸಾಲಿಗ್ರಾಮ ಮೊದಲಾದ ಗಜ ಮೇಳಗಳು ಮತ್ತು ಬಗ್ವಾಡಿ, ಸೌಕೂರು ಮೊದಲಾದ ಹರಕೆ ಮೇಳಗಳು ಅವರ ವೇಶಗಳಿಂದ ಕೀರ್ತಿ ಪಡೆದವು. ನಂತರ ಅವರದ್ದೇ ತಾಳಮದ್ದಳೆ ಕೂಟ “ಸಂಯಮಮ್” ಕಟ್ಟಿ ಅದರ ಸಂಚಾಲಕರಾಗಿ ಸಾಮಗರು ಮುನ್ನಡೆದವರು. ಅಲ್ಲಿಯೂ ಅವರು ಯಶಸ್ವೀ ಆದರು. ಯಕ್ಷಗಾನ ಪ್ರಸಂಗಗಳ ಸಂಗ್ರಹ ಪುಸ್ತಕ ಮಾಡಿದರು. ಅವರೂ ಹಲವು ಪ್ರಸಂಗ ರಚನೆ ಮಾಡಿದರು.

ಕೈಕೆ, ಮಂಥರೆ, ಅಂಬೆ, ಪ್ರಮೀಳೆ, ಮೋಹಿನಿ, ಹಿಡಿಂಬೆ, ಮೊದಲಾದ ತೂಕದ ಸ್ತ್ರೀ ಪಾತ್ರಗಳು ಅವರದ್ದೇ ಸೃಷ್ಟಿಯಲ್ಲಿ ಜನಪ್ರಿಯ ವಾದವು. ದಶರಥ, ದೇವವೃತ, ಕಂಸ, ಕೃಷ್ಣ, ರುಕ್ಮಾಂಗದ,  ಪರಶುರಾಮ, ಕಂಸ, ಸುಧನ್ವ, ಭಾನುತೇಜ, ಕಾರ್ಥ ವೀರ್ಯ, ದ್ರೋಣ, ರಾವಣ, ಕೌರವ, ಭೀಮ, ಅರ್ಜುನ, ಕರ್ಣ ಮೊದಲಾದ ಪಾತ್ರಗಳು ಅವರ ಎರಕದಲ್ಲಿ ಶ್ರೇಷ್ಟವಾಗಿ ಮೂಡಿ ಬಂದ ಪಾತ್ರಗಳು. ಅಷ್ಟೇ ಸಶಕ್ತವಾಗಿ ಸಂಜಯ, ಶಲ್ಯ, ಉತ್ತರಕುಮಾರ ಮೊದಲಾದ ಪಾತ್ರಗಳನ್ನು ಅವರಷ್ಟು ಸಮರ್ಥವಾಗಿ ಯಾರಿಗೂ ಮಾಡಲು ಸಾಧ್ಯವಾಗಿಲ್ಲ ಎಂದು ಹಲವು ಬಾರಿ ರುಜುವಾತಾಗಿದೆ!

ಯಾವ ಪಾತ್ರವನ್ನು ತೆಗೆದುಕೊಂಡರೂ ಅವರದ್ದು ಅದ್ಭುತವಾದ ಪಾತ್ರ ಚಿತ್ರಣ. ಆ ಪಾತ್ರದ ಮಾನಸಿಕ ಸ್ಥಿತಿ, ಮನೋಧರ್ಮ, ಹಿನ್ನೆಲೆಗಳು ಎಲ್ಲವನ್ನೂ ಸರಿಯಾಗಿ ಅರ್ಥ ಮಾಡಿಕೊಂಡು ಅವರು ಪರಕಾಯ ಪ್ರವೇಶ ಮಾಡಿದರೆ ಆ ಪಾತ್ರವೇ ಕಣ್ಣು ಮುಂದೆ ಬರುವಷ್ಟು ತಾದಾತ್ಮ್ಯ. ಕರ್ಣನ ಅಸಹಾಯಕತೆ, ದಶರಥನ ಶಂಡತನ, ಭೀಷ್ಮನ ದ್ವಂದ್ವಗಳು, ಕೌರವನ ಧಾಷ್ಟಿಕತೆ, ಧೃತ ರಾಷ್ಟ್ರನ ಕುರುಡು.ಪುತ್ರಪ್ರೇಮ, ಇಂದ್ರಜಿತುವಿನ ಅತೀ ಮಾನುಷ ಶಕ್ತಿಗಳು, ರಾವಣನ ಸಾತ್ವಿಕ ಮುಖಗಳು, ಉತ್ತರ ಕುಮಾರನ ಸೋಗಲಾಡಿತನ, ಕೀಚಕನ ಕಾಮುಕತೆ, ಶಲ್ಯ ಮಹಾರಾಜನ ವಿಶ್ವಾಸಘಾತುಕ ಮುಖಗಳು, ಶ್ರೀರಾಮನ ನ್ಯಾಯದಾನ, ವಾಲಿಯ ಅಧಿಕಾರದ ಮದ, ಮಂಥರೆಯ ಮಾತ್ಸರ್ಯ, ಶಕುನಿಯ ಕುತಂತ್ರ …..ಹೀಗೆ ಆ ಪಾತ್ರಗಳ ಒಳ ಹೊರಗನ್ನು ಅನಾವರಣ ಮಾಡುವ ರೀತಿ ಇದೆಯಲ್ಲ ಅದು ಅದ್ಭುತವೇ ಸರಿ! ಅಂಬೆಯ ಮೊನಚು ಪ್ರಶ್ನೆಗಳಿಗೆ ಅಷ್ಟೇ ಗಟ್ಟಿಯಾಗಿ ಸಮರ್ಥನೆ ಮಾಡುವ ಭೀಷ್ಮನ ಪಾತ್ರದಲ್ಲಿ ಅವರಿಗೆ ಅವರೇ ಸಮ! ಹೀಗೆ ಪ್ರತೀ ಪಾತ್ರವನ್ನು ಹೊಸದಾಗಿ ಕಡೆದು ನಿಲ್ಲಿಸುವ ಸಾಮರ್ಥ್ಯದಿಂದ ಅವರು ನಿಜವಾದ ಲೆಜೆಂಡ್ ಎಂದೇ ನನ್ನ ಭಾವನೆ.ಯಕ್ಷಗಾನದಲ್ಲಿ ವಾಸುದೇವ ಸಾಮಗರ ಸ್ಥಾನವನ್ನು ತುಂಬುವ ಇನ್ನೊಬ್ಬ ಕಲಾವಿದ ನಿಜಕ್ಕೂ ಅಲಭ್ಯ ಎಂದು ಹೇಳಬಹುದು. ಅವರ ಮಗ ಡಾಕ್ಟರ್ ಪ್ರದೀಪ್ ಸಾಮಗ ಅವರು ತಂದೆಯ ಪರಂಪರೆಯನ್ನು ಮುಂದೆ ತೆಗೆದುಕೊಂಡು ಹೋಗುತ್ತಿರುವುದು ನಿಜವಾಗಿಯೂ ಶ್ಲಾಘನೀಯ. 

ವಾಸುದೇವ ಸಾಮಗರು ಸಾಕ್ಷಿ ಆದ ಮೂರು ಘಟನೆಗಳ ಜೊತೆಗೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸೋಣ.
ಪ್ರಸಂಗ ೧) ಶ್ರೀ ಕೃಷ್ಣ ಸಂಧಾನ ತಾಳ ಮದ್ದಲೆ ಪ್ರಸಂಗ. ಶೇಣಿ ಅವರದ್ದು ಎಂದಿಗೂ ಸೋಲದ ಕೌರವ. ವಾಸುದೇವ ಸಾಮಗ ರದ್ದು ಶ್ರೀ ಕೃಷ್ಣನ ಪಾತ್ರ. ಸಾಮಗರು ಶೇಣಿ ಅವರನ್ನು ಕೆಣಕುತ್ತ ನಿನಗೆ 99 ಜನ ತಮ್ಮಂದಿರು ತಾನೇ? ಅವರ ಎಲ್ಲರ ಹೆಸರು ಹೇಳುತ್ತೀಯ? ಎಂದರು. ಶೇಣಿ ಅವರಿಗೆ ಉತ್ತರ ತಕ್ಷಣ ನೆನಪಾಗಲಿಲ್ಲ. ಆಗ ಸಾಮಗರು ಒಂದೇ ಉಸಿರಲ್ಲಿ ಎಲ್ಲಾ ನೂರು ಕೌರವರ ಹೆಸರನ್ನು ಹೇಳುತ್ತಾ ಹೋದರು. ಶೇಣಿ ಅವರು ಗಟ್ಟಿಯಾಗಿ ನಗುತ್ತ “ನೀನು ಯಾರ್ಯಾರ ಮನೆಯ ಕಾನಿಷ್ಮಾರಿ ಮಾಡಲು ಮಾತ್ರ ಯೋಗ್ಯ” ಎಂದು ಹೇಳಿ ಮತ್ತೆ ನಕ್ಕರು!

ಪ್ರಸಂಗ ೨) ಸುರತ್ಕಲ್ ಮೇಳದ ವೇದಿಕೆಯಲ್ಲಿ ‘ಅಮರ ಶಿಲ್ಪಿ ಶಂಭು ಕಲ್ಕುಡ ‘ ಪ್ರಸಂಗ. ಶೇಣಿ ಪೀಟಿಕೆ ಹಾಕಿ ಮಾತು ಆರಂಭ ಮಾಡಿದ್ದರು. ಪೀಟಿಕೆಯಲ್ಲಿ ಶೇಣಿ ಕನಿಷ್ಟ ಎಂದರೂ ಅರ್ಧ ಗಂಟೆಯಷ್ಟು ಮಾತಾಡುತ್ತಾರೆ. ಇದು ಭಾಗವತರಿಗೆ ಗೊತ್ತಿತ್ತು. ಅವರು ಜಾಗಟೆ ಕೆಳಗಿಟ್ಟು ಟೀ ಕುಡಿಯಲು ಹೊರಗೆ ಹೋದರು. ಆದರೆ ಆ ದಿನ ಶೇಣಿ ಅವರು ಮಾತು ಬೇಗ ಮುಗಿಸಿ ಮುಂದಿನ ಪದ್ಯದ ಎತ್ತುಗಡೆ ಕೊಟ್ಟು ಹಿಂದೆ ತಿರುಗಿ ನೋಡಿದರು. ಭಾಗವತರು ಇಲ್ಲ! ಅಷ್ಟು ಹೊತ್ತಿಗೆ ಚೌಕಿಯಲ್ಲಿ ಗಾಢವಾಗಿ ಮಲಗಿದ್ದ ಸಾಮಗರು ಓಡಿ ಬಂದು ಜಾಗಟೆ ಹಿಡಿದು ಪದ್ಯ ಆರಂಭ ಮಾಡಿಯೇ ಬಿಟ್ಟರು! ಪದ್ಯ ಮುಗಿದ ನಂತರ ಶೇಣಿಯವರು ಹಿಂದೆ ತಿರುಗಿ ನೋಡಿ
“ಶಾಭಾಷ! ಭಳಿರೆ! ಒಳ್ಳೆಯ ಪದ್ಯ, ಆದರೆ ಧ್ವನಿ ಮಾತ್ರ ಬೇರೆ” ಎಂದು ನಗುತ್ತ ಮುಂದುವರೆದರು!

ಪ್ರಸಂಗ ೩)ನಿಟ್ಟೆಯಲ್ಲಿ ನಾಗಶ್ರೀ ಪ್ರಸಂಗ. ಕಾಳಿಂಗ ನಾವಡರ ಕಾಲ ಅದು. ಟೆಂಟ್ ಭರ್ತಿಯಾಗಿ ಪ್ರಸಂಗ ಆರಂಭ ಆಗಿತ್ತು. ಅದರಲ್ಲಿ ಕೈರವ ಎಂಬ ಬೆಸ್ತನ ಪಾತ್ರವು ಇಡೀ ಪ್ರಸಂಗದ ಪ್ರಮುಖ ಪಾತ್ರ. ಅದನ್ನು ಮಾಡುವವರು ಪ್ರಸಿದ್ದ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ಅವರು. ಅಂದು ರಾತ್ರಿ 10 ಘಂಟೆಯವರೆಗೂ ಕಿನ್ನಿಗೋಳಿ ಬರಲೆ ಇಲ್ಲ. ಮೊಬೈಲ್ ಕಾಲ ಅಲ್ಲ ಅದು. ಅವರನ್ನು ಹುಡುಕುವುದು ಹೇಗೆ? ಕೊನೆಗೆ ನಾಗಶ್ರೀ ಪ್ರಸಂಗದಲ್ಲಿ ದಿನವೂ ಶುಭ್ರಾಂಗನ ಪಾತ್ರ ಮಾಡುತ್ತಿದ್ದ ವಾಸುದೇವ ಸಾಮಗರು ಅಂದು ಕೈರವನ ಪಾತ್ರಕ್ಕೆ ಬಣ್ಣ ಹಚ್ಚಿ ಪ್ರವೇಶ ಮಾಡಿದರು. ಅದು ಅದ್ಭುತವಾದ ಕೈರವ! ಸ್ವಲ್ಪ ಹೊತ್ತಿಗೆ ಮುಖ್ಯ ಪ್ರಾಣ  ಕಿನ್ನಿಗೋಳಿಯವರು ಬೆವರುತ್ತಾ ಓಡೋಡಿ ಬಂದರು. ಅವರ ವಾಹನ ಹಾಳಾಗಿ ಅವರು ಏದುಸಿರು ಬಿಡುತ್ತ ಬಂದಿದ್ದರು. ಕೊನೆಗೆ ಬೆವರು ಒರೆಸಿಕೊಂಡು ಅವರು ಪ್ರೇಕ್ಷಕರಾಗಿ ಬಂದು ಸಾಮಗರ ಕೈರವನ ಪಾತ್ರ ಪೂರ್ತಿ ನೋಡಿದರು.“ಸಾಮಗರು ಆ ಪಾತ್ರವನ್ನು ನನಗಿಂತ ಚೆನ್ನಾಗಿ ಮಾಡಿದರು” ಎಂದು ಮುಖ್ಯಪ್ರಾಣರು ಮನದುಂಬಿ ಅಭಿನಂದನೆ ಮಾಡಿದರು!ಮಲ್ಪೆ ವಾಸುದೇವ ಸಾಮಗರು ಯಕ್ಷಗಾನದ ನಿಜವಾದ ಅಧ್ವರ್ಯು ಮತ್ತು ಶಿಖರ ಕಲಾವಿದ ಎನ್ನುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.~  ರಾಜೇಂದ್ರ ಭಟ್ ಕೆ.

 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!