ಹೆಣ್ಣೆಂದರೆ ~ಪೂರ್ಣಿಮಾ ಜನಾರ್ದನ್ ಕೊಡವೂರು

ನೀವು ಆಕೆಯನ್ನು ಸ್ತ್ರೀ, ಮಹಿಳೆ, ವನಿತೆ, ಹೆಣ್ಣು, ಮಾನಿನಿ, ನಾರಿ, ಮಾತೆ ಯಾವ ಹೆಸರಿನಿಂದ ಬೇಕಾದರೂ ಕರೆಯಿರಿ…ಎಲ್ಲದಕ್ಕೂ ಒಪ್ಪುವಂತಹಳು.. ಎಲ್ಲದಕ್ಕೂ ದಕ್ಕುವಂತಹವಳು ಅವಳು..

ಆಕೆ ಕೇವಲ ವ್ಯಕ್ತಿಯಲ್ಲ , ಆಕೆ ಒಂದು ಶಕ್ತಿಯ ವಿವಿಧ ರೂಪ ಅಷ್ಟೇ. ಜನನಕ್ಕೆ ಮಾತ್ರವಲ್ಲ ಆಕೆ ಲಾಲನೆ ,ಪಾಲನೆ ಕೊನೆಗೆ ನಾಶಕ್ಕೂ ಕಾರಣಳಾಗಬಲ್ಲಳು ಆಕೆ. ಅಹುದು ಆಕೆ ಒಲಿದರೆ ಸಂತಸವ ತರುವ ನಾರಿ.. ಮುನಿದರೆ ವಿನಾಶದ ರಹದಾರಿ ತೋರುವ ಮಾರಿ. ಅನಾದಿ ಕಾಲದಿಂದಲೂ ಯುದ್ಧ ನಡೆದದ್ದೇ ಹೆಣ್ಣು ಹೊನ್ನು ಮಣ್ಣಿಗಾಗಿ. ಹೆಣ್ಣೆಂಬ ದೇವತೆಯ ವ್ಯಾಪ್ತಿ ಅಗಾಧ.

ಸ್ತ್ರೀ ಅಂದರೆ ಧರೆಯಂತೆ. ತನ್ನನ್ನು ಕೊಚ್ಚಿದರೂ, ಮೆಟ್ಟಿದರೂ, ತನಗೆ ಉಗುಳಿದರೂ ಮೌನವಾಗಿ ಸಹಿಸುವ ಧರೆಯಂತೆ ತನ್ನ ದೂಷಿಸುವ ತನ್ನ ಮನೆಮಂದಿಯನ್ನು , ಮಕ್ಕಳನ್ನು ಕ್ಷಮಿಸಿ ಪೊರೆವ ಆಕೆ ಕ್ಷಮಯಾ ಧರಿತ್ರಿ‌.
ನಾರಿ ಅಂದರೆ ನದಿಯಂತೆ. ಸದಾ ಹರಿಯುತ್ತಲೇ ಇರಬೇಕು. ಶುಭ್ರ ಜಲದೊಂದಿಗೆ ತನ್ನೊಡಲೊಳಗೆ ಕೊಚ್ಚೆಯನ್ನು, ಕೆಸರನ್ನು ಬೇಡದ ವಸ್ತುಗಳನ್ನು, ಹೊತ್ತುಕೊಂಡೇ ಸಾಗರವ ಸೇರುವಂತೆ ಸಂಸಾರವೆಂಬ ನದಿಯನ್ನು ಸಂತೃಪ್ತಿಯೆಂಬ ಸಾಗರಕೆ ಸೇರಿಸಬೇಕು.

ನೀರೆ ಅಂದರೆ ನೀರಿನಂತೆ‌. ಆಕೆ ಹೊಂದಾಣಿಕೆಯ ಗುಣವನ್ನು ಹೊಂದಿರಲೇಬೇಕು. ಆಕಾರಕ್ಕೆ ತಕ್ಕಂತೆ ತನ್ನ ಸ್ವರೂಪವನ್ನು ಬದಲಾಯಿಸುತ್ತಾ , ಎಲ್ಲದಕ್ಕೂ ಹೊಂದಿಕೊಳ್ಳುತ್ತಾ ಎಲ್ಲರ ಭಾವನೆಗಳನ್ನು ಗೌರವಿಸುತಾ ಬದುಕಬೇಕು‌. ಮಹಿಳೆ ಅಂದರೆ ಮಣ್ಣಿನಂತೆ. ತನ್ನಿಂದಲೇ ಹುಟ್ಟಿ ತನ್ನಿಂದಲೇ ಬದುಕಿ ತನ್ನಲ್ಲಿಯೇ ‍ಲೀನವಾಗುವ ಪ್ರಕೃತಿಯಾಗಿ ಪುರುಷನ ಕಾಯಬೇಕು‌, ಪೊರೆಯಬೇಕು.

ವನಿತೆ ಅಂದರೆ ವೃಕ್ಷ ದೇವತೆಯಂತೆ‌. ತನಗೆ ಕಲ್ಲು ತೂರಿದವರಿಗೂ ಸಿಹಿಯನ್ನು ಹಂಚುತ್ತಾ, ತನ್ನನ್ನು ಆಶ್ರಯಿಸಿ ಬಂದವರಿಗೆ ನೆರಳನ್ನು ನೀಡುತ್ತಾ ಅವರ ಆಯಾಸ ಪರಿಹರಿಸಬೇಕು. ಹೆಣ್ಣೆಂದರೆ ಹೂವಿನಂತೆ. ಯಾವಾಗ ಯಾರ ಮುಡಿಗೋ , ಇಲ್ಲಾ ಯಾರ ಪಾದಕೋ , ಇಲ್ಲಾ ಯಾರ ಕೊರಳಿಗೋ ಮೌನದಿ ಮೈಯೊಡ್ಡಬೇಕು‌.ಇಲ್ಲವೇ ಅಲ್ಲೇ ಬಾಡಿ ಹೋಗಬೇಕು.

ಮಹಿಳೆಯೆಂದರೆ ಉಪ್ಪಿನಂತೆ‌.ಅವಳ ಬೆಲೆ ಪದಾರ್ಥಕ್ಕೆ ಹಾಕದೇ ಇದ್ದಾಗ ಮಾತ್ರ ತಿಳಿಯುವಂತೆ. ಪ್ರತಿಯೊಂದು ಪದಾರ್ಥ ರುಚಿಸಲು,ಮನೆಯ ಅಂದ ಚೆಂದವ ಹೆಚ್ಚಿಸಲು ಮನೆಯಲ್ಲಿ ಉಪ್ಪಿನಂತೆ ಮಹಿಳೆಯೂ ಬೇಕು.
ಮಾನಿನಿ ಅಂದರೆ ಗಾಳಿಯಂತೆ.ಕಣ್ಣಿಗೆ ಕಾಣಲಾರಳು. ಕೈಯೊಡ್ಡಲು ಸಿಕ್ಕಲಾರಳು.ಅವಳ ಅಸ್ತಿತ್ವವನ್ನು ಅನುಭವಿಸಿಯೇ ತಿಳಿಯಬೇಕು.

ಮಾತೆ ಎಂದರೆ ದೀಪದಂತೆ.ತಾನು ಉರಿದು ಇತರರಿಗೆ ಬೆಳಕ ನೀಡುವಂತೆ ತನ್ನ ನೋವ ನುಂಗಿ ನಗುವ ಹರಿಸಿ ಮನೆ ಮನವ ಬೆಳಗುವಂತವಳು ಅವಳು. ಅವಳು, ಪರ್ವತದಂತೆ. ಜೀವನ ಜಂಜಾಟದಲ್ಲಿ ಬರುವ ಎಷ್ಟೋ ಕಷ್ಟ ಕೋಟಲೆ, ತೊಂದರೆ ತೊಡಕುಗಳಿಗೆ ಆಕೆ ತಟಸ್ಥ. ತನ್ನ ಕಾಯಕಕೆ, ತನ್ನ ನಿಯತ್ತಿಗೆ,ತನ್ನ ಸಿದ್ಧಾಂತಕ್ಕೆ ಅಚಲ ಅವಳು.

ಅವಳು ಪ್ರಕೃತಿ.‌ ಅವಳು ಸಂಸ್ಕ್ರತಿ. ಅವಳು ಶಕ್ತಿ. ಅವಳು ಯುಕ್ತಿ. ಅವಳು ಸಂತಸ, ಅವಳು ಸಂತೃಪ್ತಿ. ಪದಗಳಿಂದ ವರ್ಣಿಸಲಾಗದ ಪದಪುಂಜ ಅವಳು. ಅವಳಿಗೆ ವಿಶ್ವ ಮಹಿಳಾದಿನದ ಶುಭಾಶಯಗಳು.

 
 
 
 
 
 
 
 
 
 
 

Leave a Reply