ಕಾಲು ಜಾರಿ ಬಿದ್ದು, ಪ್ಯಾಂಟ್ ಕೆಸರಾದರೂ ವಾಕಿಂಗ್ ನಿಲ್ಲಿಸಲಿಲ್ಲ~ಕೋ. ಚಂದ್ರ ಶೇಖರ ನಾವುಡ.

ಇಂದು ಸಾಯಂಕಾಲ ವಾಕಿಂಗ್ ಮುಗಿಸಿ ಬರುವಾಗ ಸಿಕ್ಕಿದ ಆ ಮೂವರು ಒಂದು ಮಾತು ಹೇಳಿಲ್ಲದಿದ್ದರೆ ಈ ಲೇಖನ ನಾನು ಇಂದು ಬರೆಯುತ್ತಿರಲಿಲ್ಲ. ಈ ಪುಟ್ಟ ಬರಹಕ್ಕೆ ಅವರು ಹೇಳಿದ ಮಾತೇ ಪ್ರೇರಣೆ…  ಇಷ್ಟಕ್ಕೂ ಆ ಮೂವರು ಹೇಳಿದ ಮಾತೇನು?

ಅದನ್ನು ಹೇಳುವ ಮುಂಚೆ ಇವತ್ತೇನಾಯ್ತು ಎಂದು ಹೇಳುತ್ತೇನೆ ಕೇಳಿ. ವಿಶೇಷ ಕುತೂಹಲ ಏನೂ ಬೇಡ; ಒಂದು ಸಣ್ಣ ಘಟನೆ, ಅಷ್ಟೇ. ಇಂದು ಸಂಜೆ ವಾಕಿಂಗ್ ಗೆಂದು ಹೊರಟೆ. ಮನೆಯಿಂದ ನೂರು ಮೀಟರ್ ದೂರದಲ್ಲಿ ಕೋಟ-ಕೋಡಿ ರಸ್ತೆಯಿದೆ. ಆ ರಸ್ತೆಯಲ್ಲಿ ಒಂದು ಕಿ.ಮೀ. ಹೋಗಿದ್ದೆ. ಅಲ್ಲೇ ಎಡಕ್ಕೊಂದು ಕೆಂಪು ಮಣ್ಣಿನ ರಸ್ತೆ ಸಮುದ್ರ ತೀರಕ್ಕೆ ಹೋಗುತ್ತದೆ. ಇಂದು ಮಳೆ ಬಂದುದರಿಂದ ಆ ರಸ್ತೆ ಕೊಚ್ಚೆಯಾಗಿತ್ತು.

ಇನ್ನೊಂದು ಸ್ವಲ್ಪ ದೂರ ಹೋದರೆ ಪುನಃ ಇನ್ನೊಂದು ರಸ್ತೆಯೂ ಸಮುದ್ರ ತೀರಕ್ಕೆ ಹೋಗುತ್ತದೆ. ಆ ಮುಂದಿನ ರಸ್ತೆಯಲ್ಲೇ ಸಮುದ್ರ ತೀರಕ್ಕೆ ಹೋಗೋಣವೆಂದು ಹತ್ತು ಹೆಜ್ಜೆ ಮುಂದೆ ಇಟ್ಟಿದ್ದೆ. ಹಾಗೆ ಮುಂದಕ್ಕೆ ಹೋದವನು ಸೀದ ಹೋಗಿಯೇ ಬಿಟ್ಟಿದ್ದರೂ ಇಂದಿನ ಈ ಪುಟ್ಟ ಬರಹ ಮೂಡಿ ಬರುತ್ತಿರಲಿಲ್ಲ.

ಆದರೆ ನನ್ನ ದುರದೃಷ್ಟಕ್ಕೆ ನಾನು ಮುಂದಿಟ್ಟ ಹೆಜ್ಜೆ ಹಿಂದೆ ಇಟ್ಟು ಬಿಟ್ಟೆ. ಆ ಕೊಚ್ಚೆ ರಸ್ತೆಯಲ್ಲೇ ಸಮುದ್ರ ತೀರಕ್ಕೆ ಹೊರಟುಬಿಟ್ಟೆ. ತುಂಬಾ ಜಾಗ್ರತೆಯಾಗಿಯೇ ಹೋಗುತ್ತಿದ್ದೆ. ಆದರೂ ನೂರು ಹೆಜ್ಜೆ ಹೋಗುವುದರೊಳಗೆ ಕೊಚ್ಚೆ ರಸ್ತೆಯಲ್ಲಿ ಕಾಲು ಜಾರಿ ಬಿದ್ದು ಬಿಟ್ಟೆ. ರಸ್ತೆಯಲ್ಲಿ ಒಂದರ್ಧ ಅಡಿ ಕೆಂಪು ಮಣ್ಣು ಮಿಶ್ರಿತ ನೀರು ಇದ್ದಿತ್ತು.

ನಾ ಧರಿಸಿದ ಪ್ಯಾಂಟ್​ ​ಹಿಂಬದಿ ಸ್ವಲ್ಪ ಜಾಗ ಒದ್ದೆಯಾಗಿದ್ದು ಮಾತ್ರವಲ್ಲದೆ ಕೆಂಪು ಬಣ್ಣದ ಮಣ್ಣು ಲೈಟಾಗಿ ಮೆತ್ತಿಕೊಂಡಿತು. ಕೈಯಲ್ಲಿದ್ದ ಕೊಡೆಯೂ ಅಲ್ಲಲ್ಲಿ ಮಣ್ಣಾಯಿತು. ಪುಣ್ಯಕ್ಕೆ ಅಂಗಿ ಒದ್ದೆಯಾಗಲಿಲ್ಲ, ಅಂಗಿ ಜೇಬಿನಲ್ಲಿದ್ದ ಮೊಬೈಲ್ ಕೂಡಾ ಹಾರಿ ಹೋಗಿ ಕೊಚ್ಚೆಯಲ್ಲಿ ಬೀಳಲಿಲ್ಲ. ಹಾಗಾಗಿದ್ದರೂ ಈ ಲೇಖನ ಇಂದು ಬರೆಯಲಿಕ್ಕಾಗುತ್ತಿರಲಿಲ್ಲ. ಯಾಕೆಂದರೆ ನನ್ನೆಲ್ಲಾ ಚಟುವಟಿಕೆಗಳು ಈ ಮೊಬೈಲ್ ನಲ್ಲೇ.

ಈಗ ವಿಷಯಕ್ಕೆ ಬರುತ್ತೇನೆ. ನಾನು ವಾಕಿಂಗ್ ಮುಂದುವರಿಸಿದೆ. ಸಮುದ್ರ ತೀರದಲ್ಲಿ ಒಂದು ವೀಡಿಯೋ ಮಾಡಲು ಕೂಡಾ ಅವಕಾಶ ಸಿಕ್ಕಿತು. ಪ್ರತಿ ದಿನ ಐದಾರು ಕಿ.ಮೀ. ದೂರ ವಾಕಿಂಗ್ ಹೋಗದಿದ್ದರೆ ನನಗೆ ಏನೋ ಕಳೆದುಕೊಂಡ ಭಾವ. ಇಂದು ಆತ್ಮೀಯ ಮಿತ್ರರೊಬ್ಬರ ಜೊತೆ ಕೂಡಾ ಸಿಕ್ಕಿತು. ಆದ್ದರಿಂದ ಐದು ಕಿ.ಮೀ. ದೂರ ನಡೆದುದು ಗೊತ್ತೇ ಆಗಲಿಲ್ಲ. ಇನ್ನೇನು ಸಮುದ್ರ ತೀರದಿಂದ ಮನೆಯತ್ತ ನನ್ನ ಪಾದಗಳು ತಿರುಗಬೇಕು; ಮತ್ತೆ ಮೂವರು ಮಿತ್ರರು ಸಮುದ್ರ ತೀರದಲ್ಲಿ ಸಿಕ್ಕರು.

ಅವರೇ ಮೊದಲೇ ಹೇಳಿದಂತೆ ಈ ಬರಹಕ್ಕೆ ಕಾರಣಕರ್ತರಾದರು. ಅವರು ನನ್ನ ಪ್ಯಾಂಟ್​ ​ ಕೆಂಪಾದುದನ್ನು ಗಮನಿಸಿ, ನಾನೆಲ್ಲಾದರೂ ಬಿದ್ದೆನಾ ಎಂದು ವಿಚಾರಿಸಿದರು. ಹೌದು ಎಂದೆ. ಅದೇ ರೀತಿ ಮುಂಚೆ ಹಲವರು ವಿಚಾರಿಸಿದ್ದರು. ಅವರೆಲ್ಲಾ ನಾನು ಹೌದು ಎಂದಿದ್ದಕ್ಕೆ “ಅಲ್ಲಿ ಯಾವಾಗಲೂ ಜಾರುತ್ತದೆ” ಎಂದು ಹೇಳಿ ಸುಮ್ಮನಾಗಿದ್ದರು. ಆದರೆ ಈ ಮೂವರು ಬೇರೆಯೇ ಹೇಳಿದರು.

ಅವರು ಹೇಳಿದ್ದು ಇಷ್ಟೇ; “ಕಾಲು ಜಾರಿ ಬಿದ್ದು, ಪ್ಯಾಂಟ್​ ​ಕೆಸರಾದರೂ ನೀವು ವಾಕಿಂಗ್ ಮುಂದುವರಿಸಿ ಇಷ್ಟೊಂದು ದೂರ ಹೋಗಿ ಬಂದಿರಲ್ಲಾ, ನೀವು Great ನಾವಡರೇ” ಎಂದರು. ಬೇರೆ ಯಾರಾದರೂ ಬಿದ್ದ ಕೂಡಲೇ ವಾಪಾಸು ಹೋಗಿ ಬಿಡುತ್ತಿದ್ದರು ಎನ್ನುವುದು ಅವರ ಅಂಬೋಣ. ಆಗ ನನಗೆ ಹೌದಲ್ಲಾ ಎನ್ನಿಸಿತು, ನಾನು Great ಎಂದಲ್ಲ. ಈ ನಿಟ್ಟಿನಲ್ಲಿ ನಾವೆಲ್ಲಾ ಯೋಚಿಸಬೇಕಲ್ಲ ಎಂದು.

ಇಲ್ಲೀಗ ಯೋಚಿಸಬೇಕಾದ್ದೇನೆಂದರೆ- ಪ್ರಾಮಾಣಿಕ ಉದ್ದೇಶದಿಂದ ಕೆಲಸ ಮಾಡುವಾಗ ಕೂಡಾ ನಾವೇನಾದರೂ ಕಾಲು ಜಾರಿ ಬಿದ್ದರೆ, ಹೆಚ್ಚಾಗಿ ಅನವಶ್ಯಕ ಕೀಳರಿಮೆ, ಭಯ ಬೆಳೆಸಿಕೊಂಡು ಆ ಕೆಲಸ ಅರ್ಧಕ್ಕೇ ನಿಲ್ಲಿಸಿಬಿಡುತ್ತೇವೆ, ಮತ್ತೆ ಮುಂದುವರಿಸುವುದಿಲ್ಲ. ಇದು ನಾವಿನ್ನೂ ತುಂಬಾ ಬೆಳೆಯಲಿಕ್ಕಿದೆ ಎಂಬುದರ ಮುನ್ಸೂಚನೆ.

ನಾವೆಲ್ಲಾ ಒಂದಲ್ಲಾ ಒಂದು ಕಡೆ ಕಾಲು ಜಾರಿ ಬೀಳುತ್ತಿರುತ್ತೇವೆ. ಹಾಗಿರುವಾಗ ಅವರಿವರು ನೋಡಿ ನಗುತ್ತಾರೋ ಎಂಬ ಭಯ, ಕೀಳರಿಮೆ ಯಾಕೆ? ಹಾಗೆ ನಗುವವರಿದ್ದರೂ ಅವರೂ ಕೂಡಾ ಯಾವಾಗಲಾದರೂ ಕಾಲು ಜಾರಿ ಬೀಳುವವರೆ. ಮೈ, ಬಟ್ಟೆ ಅದೆಷ್ಟು ಕೊಳೆಯಾದರೂ ಅದನ್ನು ತೊಳೆದುಕೊಳ್ಳಬಹುದು.

ಪೆಟ್ಟಾದರೂ ಗುಣಪಡಿಸಿಕೊಳ್ಳಬಹುದು. ನಾಚಿಕೆ, ಅಧೈರ್ಯ, ಕೀಳರಿಮೆ ಇವೆಲ್ಲಾ ನಮ್ಮೊಳಗೆ ಅಡಗಿಕೊಂಡಿರುವ ಹಿತಶತ್ರುಗಳು. ಇವನ್ನು ಎದುರಿಸುವುದನ್ನು ನಾವು, ನೀವೆಲ್ಲರೂ ಕಲಿತುಕೊಳ್ಳಬೇಕಿದೆ. ಎಲ್ಲಾ ಸಂದರ್ಭಗಳಲ್ಲೂ ಪ್ರಾಮಾಣಿಕತೆಯೊಂದು ನಮ್ಮ ಜೊತೆಗಿದ್ದರೆ ಅದೇ ನಮ್ಮ ಸರ್ವತ್ರ ಸಾಧನ.

 
 
 
 
 
 
 
 
 
 
 

Leave a Reply