ಭವರೋಗಗಳ ನಿವಾರಣೆಗೆ ಶ್ರೀವಾದಿರಾಜ ರಚಿತ ದಿವ್ಯಮಂತ್ರ ಪಠಿಸಿ ~ಬರಹ : ಪಿ.ಲಾತವ್ಯ ಆಚಾರ್ಯ

ಧನ್ವಂತರೀ ವಿದ್ಯೆಯಲ್ಲೂ ಸಿದ್ಧಿಸಾಧಕರೆನಿಸಿದ್ದ ಭಾವಿಸಮೀರಶ್ರೀವಾದಿರಾಜಗುರುಸಾರ್ವಭೌಮರು ವಿವಿಧ ದೈಹಿಕ-ಮಾನಸಿಕ ಖಾಯಿಲೆಗಳ ಹಾಗೂ ಇನ್ನಿತರ ಇಹಪರ ಸಮಸ್ಯೆಗಳ ನಿವಾರಣೆಗಾಗಿ ಮಂತ್ರತುಲ್ಯವಾದ ಸಂಜಿವಿನೀ ಸನ್ನಿಧಿಯನ್ನೊಳಗೊಂಡ ವ್ಯಾಧಿ ನಿವಾರಣಾ ಸ್ತುತಿಗಳನ್ನು ರಚಿಸಿದ್ದಾರೆ.ಕಳೆದ ಕೆಲವು ಶತಮಾನಗಳಿಂದ ಸಹಸ್ರಾರು ಭಕ್ತರು ಈ ಸ್ತುತಿಗಳನ್ನು ಶ್ರದ್ದಾ-ಭಕ್ತಿಯಿಂದ ಪಠಿಸಿ ವ್ಯಾಧಿಯಿಂದ ಮುಕ್ತರಾದ ವಿಚಾರ ಎಲ್ಲೆಡೆ ಜನಜನಿತವಾಗಿದೆ.

ಚಿಂತಾಖಂಡನಾ ಸ್ತೋತ್ರಂ

ಸೃಷ್ಟಿ-ಸ್ಥಿತಿ-ಲಯದ ಸೊಗಸನ್ನು ಆಧ್ಯಾತ್ಮಿಕವಾಗಿ ಬಣ್ಣಿಸಿ ನಿತ್ಯ ಸತ್ಯವನ್ನು ತಿಳಿಹೇಳಿ ಸರ್ವರಕ್ಷಕನಾದ ಭಗವಂತನ ಸ್ವರೂಪ ಹಾಗೆಯೇ ಸುಖ-ದುಃಖವನ್ನು ಸಮಾನವಾಗಿ ಸ್ವೀಕರಿಸುತ್ತಾ ಬದುಕನ್ನು ಪಾರಮಾರ್ಥಿಕವಾಗಿ ದೇವರ ಪಾದಕಮಲಗಳಿಗೆ ಹೇಗೆ ಅರ್ಪಿಸಬೇಕು ಎಂಬ ನಿರೂಪಣೆ ಈ ಸ್ತೋತ್ರದ-ಹಂದರ.ಈ ಸ್ತೋತ್ರದ ಪಠಣವು ಯಾವುದೇ ತರಹದ ಮನೋವ್ಯಾಧಿಗೆ ರಾಮಬಾಣ.

 

ಸತ್ಸಂತಾನಾರ್ಥ ಸ್ತೋತ್ರಂ

ಸಂತಾನ ರಹಿತರಿಗಾಗಿ ರಚಿಸಿರುವ ಸತ್ಸಂತಾನಾರ್ಥ ಸ್ತೋತ್ರದ ಮಹಿಮೆಯಿಂದ ಸಾವಿರಾರು ಭಕ್ತರಿಗೆ ಸಂತಾನ ಭಾಗ್ಯವು ಅನುಗ್ರಹವಾಗಿದೆ.

ಕೃಷ್ಣ ಸ್ತುತಿ

ದೃಷ್ಟಿದೋಷ ನಿವಾರಣೆಗಾಗಿ ಬರೆಯಲ್ಪಟ್ಟ ಕೃಷ್ಣಸ್ತುತಿಯು ಅಂಧತ್ವವನ್ನು ನಿವಾರಿಸಿ ಆನಂದವನ್ನು ಕರುಣಿಸುವ ಅಪೂರ್ವ ಸ್ತೋತ್ರರತ್ನ.

ಶ್ರೀವಾದಿರಾಜರ ಕಾಲದಲ್ಲಿ ಭಕ್ತನೋರ್ವನು ಎಷ್ಟೇ ಔಷಧಿ ನಡೆಸಿದರೂ ಕಣ್ಣುನೋವು ಹಾಗೂ ಅಂಧತ್ವ ಉಪಶಮನವಾಗಲ್ಲಿಲ್ಲ.ಕೊನೆಗೆ ಶ್ರೀವಾದಿರಾಜರ ಬಳಿ ಬರಲು ಶ್ರೀರಾಜರು ಕೃಷ್ಣಸ್ತುತಿಯಿಂದ ನಿತ್ಯ ಪುರಶ್ಚರಣೆ ನಡೆಸುವಂತೆ ತಿಳಿಸಿದರು.ಭಕ್ತನು ಈ ಪುರಶ್ಚರಣೆಯನ್ನು ಸಲ್ಲಿಸಿ ಎರಡೂ ಕಣ್ಣುಗಳನ್ನು ಪಡೆದನು.ತದನಂತರ ಶ್ರೀವಾದಿರಾಜರ ಪರಂಪರೆಯ ಯತಿಗಳಾದ ವೃಂದಾವನಾಚಾರ್ಯರ ಕಾಲದಲ್ಲಿ ಹಿರಿಯರೊಬ್ಬರಿಗೆ ಶ್ರೀಕೃಷ್ಣನ ಪ್ರತಿಮೆ ಕಾಣುತ್ತಿರಲಿಲ್ಲ.ಅವರು ವೃಂದಾವನಾಚಾರ್ಯರ ಬಳಿಬಂದು ತಮ್ಮ ನೋವನ್ನು.ಹೇಳಿಕೊಂಡರು.ವೃಂದಾವನಾಚಾರ್ಯರು ನಿತ್ಯ ಸಹಸ್ರಭಾರೀ ಕೃಷ್ಣಸ್ತುತಿಯ ಪುರಶ್ಚರಣೆ ನಡೆಸುವಂತೆ ತಿಳಿಸಿದರು.೪೮ ದಿನಗಳಲ್ಲಿ ಕೃಷ್ಣಸ್ತುತಿಯ ನಿರಂತರ ಪಠಣದಿಂದ ದೃಷ್ಟಿದ್ವಯಗಳನ್ನು ಮತ್ತೆ ಪಡೆದ ರೋಚಕ ಘಟನೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಮಧ್ವಮುನಿ ಪ್ರತಾಪಾಷ್ಠಕಮ್

ಈ ಕೃತಿಯ ಪಠಣದಿಂದ ಶಾಶ್ವತವಾಗಿ ಜ್ವರದ ಬಾಧೆಯಿಂದ ಮುಕ್ತಿದೊರಕುತ್ತದೆ.ನೂರಾರು ಭಕ್ತರು ಶ್ರೀವಾದಿರಾಜರ ದಿವ್ಯಮಂತ್ರಗಳನ್ನು ಪಠಿಸಿ ಜ್ವರದ ಬಾಧೆಯಿಂದ ಮುಕ್ತರಾಗುತ್ತಿರುವ ಘಟನೆಗಳು ಇಂದಿಗೂ ಜರುಗುತ್ತಿವೆ.ಒಮ್ಮೆ ಶ್ರೀವಾದಿರಾಜರು ದ್ವಾರಕಾ ಕ್ಷೇತ್ರಕ್ಕೆ ತೀರ್ಥಯಾತ್ರೆಗೆ ಸಾಗುವ ಸಂದರ್ಭದಲ್ಲಿ ಆರುತಿಂಗಳು ಉಪಾವಾಸದಲ್ಲಿದ್ದು ಕೃಷ್ಣಧ್ಯಾನ ಮಾಡುತ್ತಿರುವ ಸಂದರ್ಭದಲ್ಲಿ ಈ ಕೃತಿಯನ್ನು ರಚಿಸಿದ್ದರು. ಶ್ರೀಕೃಷ್ಣ ಯತಿಗಳು ಎಂಬವರು ತೀವ್ರಜ್ವರದಲ್ಲಿದ್ದಾಗ ಅವರಿಗೆ ಶ್ರೀವಾದಿರಾಜರ ಮಧ್ವಮುನಿಪ್ರತಾಪಾಷ್ಟಕಮ್ ಕೃತಿಯನ್ನು ಪಠಿಸುವಂತೆ ಸ್ವಪ್ನ ಸೂಚನೆಯಾಯಿತು.ಅಂತೆಯೇಈ ಮಂತ್ರ ಪಠಿಸಲು ರೋಗ ಸಂಪೂರ್ಣ ನಿವಾರಣೆಯಾಯಿತು.ಇಂದಿಗೂ ಅನೇಕರು ಶ್ರೀದೇವರ ತೀರ್ಥವನ್ನು ಹಿಡಿದುಕೊಂಡು ಈ ಮಂತ್ರ ಪಠಿಸಿ ತೀರ್ಥವನ್ನು ಸ್ವೀಕರಿಸಿ ಜ್ವರವನ್ನು ಉಪಶಮನ ಮಾಡಿಕೊಳ್ಳುತ್ತಿದ್ದಾರೆ.

ವ್ಯಾಸಸ್ತುತಿ:

ಅಸ್ಪಷ್ಟ-ನುಡಿಗಳು ತೊದಲು-ಮಾತು ಹೀಗೇ ವಾಕ್ ಸಂಬಂಧ ಏನೇ ದೋಷ ಗಳಿದ್ದರೂ ಇದರ ನಿವಾರಣೆಗಾಗಿ ಶ್ರೀವಾದಿರಾಜರು ರಚಿಸಿರುವ ಶ್ರೀವ್ಯಾಸಸ್ತುತಿಯ ಪಠಣ ವಾಕ್ ಸಿದ್ಧಿಗೆ ಉತ್ಕೃಷ್ಟಮಂತ್ರ ಎಂದು ಅಪರೋಕ್ಷ ಜ್ಞಾನಿಗಳು ಈ-ಮಂತ್ರವನ್ನು ವಿಶೇಷವಾಗಿ ಕೊಂಡಾಡಿದ್ದಾರೆ.

ಶ್ರೀಹರ್ಯಷ್ಠಕಮ್

ಅಂತರ್ಬಹಿರ್ ಶತ್ರುಭಾದೆಗಳ ದೂರೀಕರಿಸಲು ರಚಿತವಾದ ನರಸಿಂಹ ದೇವರ ಉಗ್ರರೂಪದ ಮಹಿಮೆಯ ಶ್ರೀಹರ್ಯಷ್ಠಕಮ್ ಪಠಣದಿಂದ ಸಮಸ್ತ ಶತ್ರುಭೀತಿಗಳು ಮುಕ್ತವಾಗುತ್ತವೆ.ಈ ಸ್ತುತಿಯ ಮಹಿಮೆಗೆ ಸಂಬಂಧಿಸಿ ಅನೇಕ ಘಟನಾವಳಿಗಳು ಸಂಭವಿಸಿವೆ.

ಶ್ರೀಶ್ರೀಶಗುಣದರ್ಪಣ

ಆರ್ಥಿಕ ಬಾಧೆ ಹಾಗೂ ದಾರಿದ್ರ್ಯನಿರ್ಮೂಲನಕ್ಕಾಗಿ ಶ್ರೀವಾದಿರಾಜರಿಂದ ಮೂಡಿಬಂದ ಶ್ರೀಶಗುಣದರ್ಪಣವಂತೂ ಯಾವುದೇ ತೆರನಾದ ಬಡತನವಿದ್ದರೂ ತೊಡೆದುಹಾಕುವ ಬ್ರಹ್ಮಾಸ್ತ್ರ ಎಂದು ಜ್ಞಾನಿಗಳು ಈ ಕೃತಿಯನ್ನು ಹೃತ್ಪೂರ್ವಕವಾಗಿ ಸ್ಮರಿಸುತ್ತಾರೆ.

ವಿಜಯನಗರ ಸಾಮ್ರಾಜ್ಯದ ಬೊಕ್ಕಸ ಬರಿದಾಗಿದ್ದ ಸಂದರ್ಭದಲ್ಲಿ ಆಗಿನ ಅರಸನಾಗಿದ್ದ ಅಚ್ಯುತರಾಯನು ತೀವ್ರ ಚಿಂತೆಯಲ್ಲಿದ್ದ.ಆ ಸಂದರ್ಭದಲ್ಲಿ ವಿಜಯನಗರ ಸಂಸ್ಥಾನಕ್ಕೆ ಆಗಮಿಸಿದ ಶ್ರೀವಾದಿರಾಜರು ಸಾಮ್ರಾಜ್ಯದ ಪರಿಸ್ಥಿತಿ ಹಾಗೂ ಅಚ್ಯುತರಾಯ ಅರಸನ ನೋವನ್ನು ತಿಳಿದುಕೊಂಡರು.ಅರಸನ ಪ್ರಾರ್ಥನೆಯ ಮೇರೆಗೆ ಶ್ರೀಶಗುಣದರ್ಪಣ ಮಂತ್ರವನ್ನು ಅರಸನಿಗೆ ಉಪದೇಶಿಸಿ ಬರಿದಾಗಿದ್ದ ಬೊಕ್ಕಸವನ್ನು ಶ್ರೀವಾದಿರಾಜರು ಮತ್ತೆ ತುಂಬಿಸಿದ ಘಟನೆ ಶ್ರೀವಾದಿರಾಜರ ಅಪೂರ್ವ ಮಹಿಮೆಯ ಕೃತಿಗಳಲ್ಲಿ ದಾಖಲಾಗಿದೆ.

ಋಣಮೋಚನ ಸ್ತೋತ್ರ

ದೇವಋಣ,ಋಷಿಋಣ ಪಿತೃಋಣ ಮತ್ತು ವಿವಿಧ ಋಣಗಳಿಂದ ಮುಕ್ತರಾಗಲು ರಚಿಸಿರುವ ಋಣಮೋಚನಸ್ತೋತ್ರದ ನಿತ್ಯ ಪಠಣವು ಎಲ್ಲಾ ಋಣಗಳಿಂದ ಮನುಷ್ಯನನ್ನು ಬಂಧಮುಕ್ತಗೊಳಿಸಿ ಸಾರ್ಥಕ ಬದುಕಿನತ್ತ ಕರೆದೊಯ್ಯುತ್ತದೆ. ಮುಖ್ಯವಾಗಿ ಭಗವಂತನ ಆರಾಧನೆ,ಬ್ರಹ್ಮಯಜ್ಞ ಹಾಗೂ ಪಿತೃಗಳ ಆರಾಧನೆಯಲ್ಲಿ ತಿಳಿದೋ ತಿಳಿಯದೆಯೋ ಸಂಭವಿಸುವ ಅಚಾತುರ್ಯಗಳಿಗೆ ನರಸಿಂಹದೇವರ ಮೂಲಕ ಪ್ರಾರ್ಥಿಸಿ ಋಣಪರಿಹಾರ ಮಾಡಿಕೊಳ್ಳಲು ರೂಪಿತವಾಗಿರುವ ಅಪರೂಪದ ಸ್ತೋತ್ರ.

ಆತ್ಮೀಯರೇ ಮನುಕುಲದ ಕಲ್ಯಾಣಕ್ಕಾಗಿ ಸಂಜೀವಿನಿಯಂತಹ ಅನೇಕ ಕೃತಿರತ್ನಗಳು ಶ್ರೀವಾದಿರಾಜರಿಂದ ಅರ್ಪಿಸಲ್ಪಟ್ಟಿವೆ.

ಇಷ್ಟಾರ್ಥಸಿದ್ಧಿಗಾಗಿ ಯಜ್ಞ-ಯಾಗ ಹೋಮ-ಹವನಾದಿಗಳನ್ನೇ ಅಂತಿಮವೆಂದು ನಂಬಿಸಾಗುತ್ತಿದ್ದ 16ನೇ ಶತಮಾನದಲ್ಲಿ ಅಶಕ್ತರ ಅನುಕೂಲಕ್ಕಾಗಿ ಸುಲಭ ಸುಂದರ ಸಿದ್ದಿಸಾಧಕ ಸ್ತೋತ್ರರತ್ನಗಳನ್ನು ತಮ್ಮ ದಿವ್ಯಶಕ್ತಿಯಿಂದ ರಚಿಸಿದವರು ಶ್ರೀವಾದಿರಾಜರು. ಇಷ್ಟಪ್ರಾಪ್ತಿಯ ಅನಿಷ್ಟನಿವೃತ್ತಿಯ ನವಮಾರ್ಗವನ್ನು ದರ್ಶಿಸಿ ಭಕ್ತರನ್ನು ಉದ್ದರಿಸುತ್ತಿರುವ ಭಾವೀಸಮೀರಶ್ರೀವಾದಿರಾಜರ ಪಾದಕಮಲಗಳಿಗೆ ಕೋಟಿ-ಕೋಟಿ ಸಾಷ್ಟಾಂಗ ಪ್ರಣಾಮಗಳು.

ಆತ್ಮೀಯ ಭಗವದ್ಭಕ್ತರೇ, ಶ್ರೀವಾದಿರಾಜಯತಿ ವಿರಚಿತ ದಿವ್ಯಮಂತ್ರ ಪಠಿಸಿ ಭವರೋಗಗಳಿಂದ ಮುಕ್ತರಾಗಿ. ಶ್ರೀರಾಜರ ಕರುಣೆಗೆ ಪಾತ್ರರಾಗಿ.

ಪ್ರಿಯ ಓದುಗ ಮಿತ್ರರೇ, ಶ್ರೀಭೂವರಾಹ,ಶ್ರೀಹಯಗ್ರೀವ ದೇವರ,ಶ್ರೀವಾದಿರಾಜಗುರುಸಾರ್ವಭೌಮರ ಶ್ರೀಭೂತರಾಜರ ವಿಶೇಷ ಅನುಗ್ರಹವು ಸದಾ ಎಲ್ಲರಿಗೂ ಕರುಣವಾಗುತ್ತಿರಲಿ ಎಂದು ಶ್ರೀವಾದಿರಾಜರ ಆರಾಧನೆಯ ಪರ್ವಕಾಲದಲ್ಲಿ ಭಕ್ತಿಪೂರ್ವಕವಾಗಿ ವಿಶೇಷ ಪ್ರಾರ್ಥನೆ.

ಪ್ರೀತೋಸ್ತು ಕೃಷ್ಣಪ್ರಭುಃ

ಬರಹ:ಪಿ.ಲಾತವ್ಯ ಆಚಾರ್ಯ ಉಡುಪಿ.

 
 
 
 
 
 
 
 
 
 
 

Leave a Reply