ಇಂದು “ಗುರು ಪೂರ್ಣಿಮೆ” ಗುರುಗಳಿಗೆ ವಂದನೆ ಸಲ್ಲಿಸಲು ಮೀಸಲಾದ ದಿನ~ಕೆ.ವಿ.ಲಕ್ಷ್ಮೀನಾರಾಯಣ ಆಚಾರ್ಯ, ಆನೇಕಲ್

ಒಂದಕ್ಷರ ಕಲಿಸಿದ ವ್ಯಕ್ತಿಯೂ ನಮಗೆ ಗುರು ಸಮಾನ ಎಂದು ಗೌರವಿಸುವ ಗುಣ ಭಾರತೀಯರಲ್ಲಿದೆ. ಇದಲ್ಲದೇ ವೇದ ವೇದಾಂಗ ಜತೆಗೆ ಜೀವನ ಶೈಲಿಯನ್ನು ಕಲಿಸುವ ಗುರುಗಳನ್ನು ನಿತ್ಯ ನಿರಂತರ ಸ್ಮರಿಸುತ್ತೇವೆ. ಹಾಗಾಗಿಯೇ ದೇವರನ್ನು ಭಜಿಸುವ ಮೊದಲು ಶ್ರೀಗುರುಭ್ಯೋ ನಮಃ ಎಂದು ಗುರುಗಳನ್ನು ನೆನೆಯುತ್ತೇವೆ.

ಗುರುಗಳನ್ನು ನಿತ್ಯ, ನಿರಂತರ ಸ್ಮರಿಸಬೇಕು. ಆದರೂ ಈ ದಿನ ವಿಶೇಷವಾಗಿ ಸ್ಮರಿಸಬೇಕು. ಕಾರಣ ಈ ದಿನ ಶ್ರೀವೇದವ್ಯಾಸ ದೇವರಿಗೆ ಮೀಸಲಾದ ದಿನ. ಕೆಲವರು ಈ ದಿನ ಶ್ರೀವೇದವ್ಯಾಸರ ಜನ್ಮದಿನ ಎನ್ನುತ್ತಾರೆ. ಈ ಮಹಾನುಭಾವರು ಅವತರಿಸಿದ್ದು, ವೈಶಾಖ ಮಾಸ ಶುದ್ಧ ತ್ರಯೋದಶಿಯಂದು. ಅಂದು ಅವರ ಜನ್ಮದಿನ.

ಪರ್ತತೋಪಾದಿಯಲ್ಲಿ ರಾಶಿಯಾಗಿದ್ದ ವೇದ(ಜ್ಞಾನ) ಸಂಗ್ರಹ ವನ್ನು, ಆಷಾಢಮಾಸದ ಹುಣ್ಣಿಮೆಯಂದು ನಾಲ್ಕು ವಿಭಾಗಗಳಾಗಿ ಮಾಡುತ್ತಾರೆ. ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವಣ ವೇದ ಎಂದು ವಿಭಾಗ ಮಾಡಿ ಜ್ಞಾನದಾಹಿ ಗಳಿಗೆ ಅನುಕೂಲ ಮಾಡಿಕೊಟ್ಟರು. ಹಾಗಾಗಿ ಜ್ಞಾನಗಳಿಕೆ ಗೆ ಸುಲಭ ಮಾಡಿಕೊಟ್ಟ ಈ ದಿನವನ್ನು ಗುರುಪೂರ್ಣಿಮೆ ಎಂದು ಆಚರಿಸುತ್ತೇವೆ.

ಈ ನೆಪದಲ್ಲಿ, ನಮಗೆ ಪಾರಮಾರ್ಥಿಕ ಹಾಗೂ ಲೌಕಿಕ ವಿದ್ಯೆ ಹಾಗೂ ಬುದ್ಧಿ ಕಲಿಸಿದ ಎಲ್ಲರನ್ನು ಗುರುಗಳೆಂದು ಭಾವಿಸಿ ಅವರಿಗೆ ಗೌರವ ಸಲ್ಲಿಸುತ್ತೇವೆ.

ನಮಗೆ ಪಾಠದ ಜತೆ ಜೀವನದ ಮಾರ್ಗದರ್ಶನ ಮಾಡಿದ ಎಲ್ಲ ಗುರುಗಳನ್ನು ಇಂದು ಸ್ಮರಿಸೋಣ. ಸಮಸ್ತ ಗುರುಗಳ ಹೃತ್ಕಮಲದಲ್ಲಿ ಸದಾ ನೆಲೆಸಿ ಜನರಿಗೆ ಸದಾಚಾರ, ಸದ್ವಿದ್ಯೆ ಬೋಧಿಸುವ ಶ್ರೀವೇದವ್ಯಾಸದೇವರಿಗೆ ನಮಿಸೋಣ.

ವ್ಯಾಸಾಯ ಭವನಾಶಾಯ ಶ್ರೀಶಾಯ ಗುಣರಾಶಯೇ |
ಹೃದ್ಯಾಯ ಶುದ್ಧವಿದ್ಯಾಯ ಮಧ್ವಾಯ ಚ ನಮೋ ನಮ: ||

 
 
 
 
 
 
 
 
 
 
 

Leave a Reply