ದುಬೈ ಪ್ರವಾಸದ ಸವಿ ನೆನಪು.​~ಪೂರ್ಣಿಮಾ ಜನಾರ್ದನ್ 

Dubai, United Arab Emirates - December 5, 2009: Gold Jewellery at Gold Souq Dubai, United Arab Emirates
ಇವತ್ತು ಪ್ರವಾಸೋದ್ಯಮ ದಿನ…​​  ಹಾಗೇ ಬೆಳಿಗ್ಗೆ  ಚಹಾ ಕುಡೀತಾ ಇದ್ದಾಗ ನಾವು ದುಬೈಗೆ ಪ್ರವಾಸ ಹೋದ ನೆನಪು ಮನದಲ್ಲಿ ಮರುಕಳಿಸಿತು. ಸುಮಾರು ಆರು ವರುಷಗಳ ಹಿಂದೆ ಅಲ್ಲಿದ್ದ ನಮ್ಮ ಕುಟುಂಬ ಸ್ನೇಹಿತನ ಆಹ್ವಾನದ ಮೇರೆಗೆ ನಾನು ಹಾಗು ನನ್ನ ಪತಿ ಒಂದು ವಾರದ ಮಟ್ಟಿಗೆ ದುಬೈ ವೀಸಾ ಪಡೆದು ಹೊರಟು ನಿಂತೆವು.
ಹೊರಡುವ ಸಮಯ ಹತ್ತಿರ ಬರುತ್ತಿದ್ದಂತೆ ಮನದ ತುಂಬ ಕಾತರ, ಕುತೂಹಲ, ಕಳವಳ,​ ​ಸಂಭ್ರಮ ಎಲ್ಲವೂ ಮೇಳೈಸಿದ ವಿಚಿತ್ರ ಅನುಭವ. ಅಂತೂ ಎಲ್ಲವೂ ಸುಸೂತ್ರವಾಗಿ ನಡೆದು ದುಬೈಗೆ ಆಗಮಿಸಿ ನಮ್ಮ ಸ್ನೇಹಿತರ ಫ್ಲಾಟ್ ತಲುಪಿದೆವು. ಎರಡು ದಿನ‌ ಬಿಟ್ಟು ಅಲ್ಲೇ ಇದ್ದ ಇನ್ಬೋರ್ವ ಸ್ನೇಹಿತನ ಪತ್ನಿಯನ್ನು ಕರೆದುಕೊಂಡು ಅಲ್ಲಿದ್ದ ಗೋಲ್ಡ್ ಸೂಕ್ ಅಂದ್ರೆ ರಸ್ತೆಯುದ್ದಕ್ಕೂ ಚಿನ್ನದ ಅಂಗಡಿಗಳ ಸಾಲಿನಲ್ಲಿ ನಡೆದುಕೊಂಡು ವಿಧ ವಿಧ ನವ ನವೀನ ವಿನ್ಯಾಸದ ಚಿನ್ನದ ಆಭರಣಗಳನ್ನು ಭಾರೀ ಆಶ್ಚರ್ಯದಿಂದ ನೋಡುತ್ತಾ ತಿರುಗುತ್ತಿದ್ದೆವು.
ಅಲ್ಲೇ ಒಂದು ಅಂಗಡಿಯಲ್ಲಿದ್ದ ವಿಶೇಷ ವಿನ್ಯಾಸದ ಚಿನ್ನದ ಕಡಗ ನನ್ನೊಡನೆ ಬಂದ ಸ್ನೇಹಿತೆಗೆ ಇಷ್ಟವಾಗಿ ಅದನ್ನು ಕೈಗೆ ತೆಗೆದುಕೊಂಡು ಅದರ ಬೆಲೆಯನ್ನು ಹಿಂದಿ,​ ​ಇಂಗ್ಲಿಷ್ ನಲ್ಲಿ ವಿಚಾರಿಸಿದೆವು. ಮತ್ತೆ  ಅಲ್ಲಿಯ ಸೇಲ್ಸ್ ಹುಡುಗನಿಗೆ ಗೊತ್ತಾಗಬಾರದು ಎಂದು ನಾವು ನಾಲ್ಕೂ ಜನ ತುಳುವಿನಲ್ಲಿ ” ನಮ ಪೂರಾ ಗೋಲ್ಡ್ ಸೂಕ್ ಸೂತು ಬರ್ಕ…ಬೇತೆ ಓಳುಲಾ ಲಾಯ್ಕ್ ಇದ್ಯಡ ಉಂದೆನಿ ಗೆತೊಂಕ “.
(ನಾವು ಗೋಲ್ಡ್ ಸೂಕಾ ಪೂರಾ ತಿರುಗಿ ಬರುವಾ..​ ​ಎಲ್ಲಿಯಾದರೂ ಇದಕ್ಕಿಂತ ಒಳ್ಳೆಯ ವಿನ್ಯಾಸ ಸಿಕ್ಕದಿದ್ದರೆ ಮಾತ್ರ ಮತ್ತೆ ಇಲ್ಲೇ ಬರುವ) ಎಂದು ನಮ್ಮ ನಮ್ಮಲ್ಲೇ ಮಾತನಾಡಿಕೊಂಡೆವು. ನಾವು ಮಾತು ಮುಗಿಸಿ ಹೊರಡಲನುವಾದಾಗ ಆ ಸೇಲ್ಸ್ ಮ್ಯಾನ್ ನಗುತ್ತಾ ” ಅಕ್ಕೆರೆ.​ ​ನಿಗಲೆಲು ಈತು ಪೊರ್ಲುದ ಡಿಸೈನ್ ಈತು ಕಡಮೆಡು ಒಲ್ಪಲಾ ತಿಕ್ಕುಜ್ಜಿ.​ ​ಈರ್ ಇಡೆಗೇ ಬರ್ಪರು” (ಅಕ್ಕನವರೆ, ಇಷ್ಟು ಚೆಂದದ ವಿನ್ಯಾಸ ಇಷ್ಟು ಕಡಿಮೆ ದರದಲ್ಲಿ ಬೇರೆಲ್ಲೂ ಸಿಗುವುದಿಲ್ಲ ನೀವು ಮತ್ತೆ ಇಲ್ಲಿಗೇ ಬರುತ್ತೀರಿ) ಎಂದು ತುಳುವಿನಲ್ಲಿ ಹೇಳಿದಾಗ ನಮಗೆ ನಗು ತಡೆಯಲಾಗಲಿಲ್ಲ.

ಮತ್ತೆ ನೋಡಿದರೆ ಆತ ಮೂಲ್ಕಿ ಸಮೀಪದ ಊರಿನವನು, ದುಬೈ ನಲ್ಲಿ ಕೆಲಸ ಮಾಡುವುದು ಎಂದು ಗೊತ್ತಾಗಿ ಬೇರೆಲ್ಲೂ ಹೋಗದೆ ಅಲ್ಲೇ ಚಿನ್ನದ ಕಡಗ ಖರೀದಿಸಿ ವಾಪಾಸಾದೆವು. ಅಂತೂ ವಿಶ್ವದ ಮೂಲೆ ಮೂಲೆಗಳಲ್ಲಿ ನಮ್ಮ ಕರುನಾಡು ಹಾಗು ತುಳು ನಾಡಿನ ಜನರ ಒಡನಾಟ ಖುಷಿ ತಂದಿತು.

ಆದಷ್ಟು ಬೇಗ ಕೋವಿಡ್ 19 ಮಹಾಮಾರಿಯ ಚಿಂತೆ ನಿಲ್ಲಲಿ..
ಪ್ರವಾಸಕ್ಕೆ ಹೊರಡಲು ಜನರು ಚಿಂತನೆ ನಡೆಸಲಿ..

ಒಂದು ಹನಿಗವನದೊಂದಿಗೆ ಈ ಬರಹಕ್ಕೊಂದು ವಿರಾಮ..

ವಿಶ್ವ ಪ್ರವಾಸ ದಿನ..
ಇಂದು ವಿಶ್ವ ಪ್ರವಾಸ ದಿನ​ ಹಾಗಾಗಿ ಹೇಳಿದೆ,
ಹೋಗೋಣ ನಮ್ಮೂರ ಸುತ್ತ ಮುತ್ತ ಒಂದು ಸುತ್ತು..

ಬಂದಿತು ಕೂಡಲೇ ಸಿದ್ಧ ಉತ್ತರ,
ಊರು ಸುತ್ತಲು ಇದಲ್ಲ ಸರಿಯಾದ ಹೊತ್ತು…​​
ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು..

 
 
 
 
 
 
 
 
 
 
 

Leave a Reply