Janardhan Kodavoor/ Team KaravaliXpress
29.6 C
Udupi
Sunday, February 5, 2023
Sathyanatha Stores Brahmavara

ಶಿರೂರು ಶ್ರೀಪಾದರೊಂದಿಗಿನ ಮರೆಯಲಾಗದ ನೆನಪುಗಳು​/3~ಅಕ್ಷೋಭ್ಯ ಆಚಾರ್ಯ

ಈಗ್ಗೆ ಮೂರು ವರ್ಷಗಳ ಹಿಂದೆ ನಡೆದ ಈ ಘಟನೆಗೆ ನಾನೊಬ್ಬನೇ ಅಲ್ಲ ಶಿರೂರು ಮೂಲ ಮಠದಲ್ಲಿದ್ದ ಸುಮಾರು 450 ರಿಂದ 500 ಭಕ್ತರು ಸಾಕ್ಷಿ..​ ಎಂದಿನಂತೆ ಪ್ರತಿ ಶನಿವಾರ ಶಿರೂರಿನ ಮುಖ್ಯಪ್ರಾಣದೇವರ ಸನ್ನಿಧಿಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.​ ​ಅಂದು ಶ್ರಾವಣ ಶನಿವಾರವೂ ಕೂಡಾ.​ ​ಹೆಚ್ಚಿನ ಭಕ್ತಾದಿಗಳು ಪೂಜಾ ನಂತರ ತಮಗೆ ಏನಾದರೂ ಸಮಸ್ಯೆ ಇದ್ದಲ್ಲಿ ಮುಖ್ಯಪ್ರಾಣ ದೇವರ ಸಮ್ಮುಖದಲ್ಲಿ ಹಾಗೆಯೇ ಶ್ರೀಪಾದರಲ್ಲಿ ಹೇಳಿಕೊಂಡು ಸೂಕ್ತ ಪರಿಹಾರವನ್ನು ನಿರೀಕ್ಷಿಸುತ್ತಿದ್ದರು.​ ​

ತದನಂತರ ಸನ್ನಿಧಾನದಲ್ಲಿ ಶ್ರೀಪಾದರು ಪ್ರಾರ್ಥಿಸಿ ನೀಡುತ್ತಿದ್ದ ಪ್ರಸಾದವು ಬಹುತೇಕ ಭಕ್ತರ ಸಂಕಷ್ಟವನ್ನು ನಿವಾರಿಸುತ್ತಿತ್ತು.​ ​ಹಾಗಾಗಿ ಪ್ರತೀ ಶನಿವಾರವೂ ಭಕ್ತರ ಸಂಖ್ಯೆ ವೃದ್ಧಿಯಾಗುತ್ತಿತ್ತು. ಪೂಜಾ ನಂತರ ನೂರಾರು ಜನರು ಸರದಿಯಲ್ಲಿ ನಿಂತು ಶ್ರೀಪಾದರಿಂದ ಪ್ರಸಾದ ಸ್ವೀಕರಿಸುತ್ತಿದ್ದರು.

ಆ  ಶನಿವಾರದಂದು ದೂರದ ಊರಿಂದ ಬಂದ ಪತಿಪತ್ನಿಯರು ಒಂದು ವರ್ಷದ ​ಅಂದದ ಮಗುವಿನೊಂದಿಗೆ ಶ್ರೀಪಾದರ ನೀಡುವ ಪ್ರಸಾದವನ್ನು ಬಹು ಕಾತರದಿಂದ ನಿರೀಕ್ಷಿಸುತ್ತಿದ್ದರು. ಮಗುವಿನ ಸರದಿ ಬಂದಾಗ ಸ್ವಾಭಾವಿಕವಾಗಿಯೇ ಸ್ವಾಮೀಜಿಯವರು  ಮಗುವಿನೊಂದಿಗೆ ಏನು ಹೆಸರು ಎಂದು ಕೇಳಿದಾಗ ತಂದೆ ತಾಯಿ ಯವರು ದುಃಖತಪ್ತರಾಗಿ ಶ್ರೀಪಾದರಲ್ಲಿ ಮಾತನಾಡಲು ಆರಂಭಿಸಿ ವಿಷಯ ತಿಳಿಸಿದಾಗ ಶ್ರೀಪಾದರಿಗೂ ದುಃಖ ತಡೆಯಲಾಗಲಿಲ್ಲ.​ ​ತಕ್ಷಣ ಶ್ರೀಪಾದರು ಮುಖ್ಯಪ್ರಾಣದೇವರನ್ನು ದಿಟ್ಟಿಸುತ್ತಾ ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಹೇಳಲಾರಂಭಿಸಿದರು “ಮುಖ್ಯಪ್ರಾಣ ಈ ಪುಟ್ಟ ಮಗು ದೊಡ್ಡ ಖಾಯಿಲೆಯಿಂದ ಬಳಲುತ್ತಿದ್ದು ಈಗಾಗಲೇ ಎಲ್ಲಾ ಚಿಕಿತ್ಸೆಗಳು ಮುಗಿದಿದೆ.​ ​

ಇನ್ನು ಹೆಚ್ಚೆಂದರೆ ಕೇವಲ 2 ತಿಂಗಳುಗಳ ಕಾಲ ಬದುಕಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ ನೀವೇನು ಹೇಳ್ತೀರಿ”ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಗಟ್ಟಿಯಾಗಿ ಕಣ್ಣೀರಿಡುತ್ತಾ  ಆರ್ಭಟಿಸಿದಾಗ ಅಲ್ಲಿ ಸಂಪೂರ್ಣ ನಿಶ್ಯಬ್ದ ಆವರಿಸಿತ್ತು.​ ​ಅಲ್ಲಿದ್ದ ಅನೇಕರಿಗೆ  ಮಗುವಿನ ಮುಗ್ದತೆ ಕಂಡು ಅರಿವಿಲ್ಲದೆ ಕಣ್ಣೀರು ತೊಟ್ಟಿಕ್ಕುತ್ತಿತ್ತು. ಶ್ರೀಪಾದರ ಮಾತು ಅಲ್ಲಿಗೇ ನಿಲ್ಲಲಿಲ್ಲ.​ ​ಪ್ರಾಣದೇವರನ್ನು ನೋಡುತ್ತಾ ಮಾತು ಮುಂದುವರೆಸಿದರು.

“ನಿನ್ನನ್ನು ನಂಬಿಕೊಂಡು ಬಹುದೂರದಿಂದ ಸನ್ನಿಧಾನಕ್ಕೆ ಬಂದಿದ್ದಾರೆ ಈ ಒಂದು ವರ್ಷದ ಮಗುವಿನೊಂದಿಗೆ ಏನಿದು ನಿನ್ನ ಆಟ.​ ​ಬೇಕಾದರೆ ನನ್ನ ಜೀವ ತೆಗೆದುಕೊಂಡು ಈ ಪುಟ್ಟ ಜೀವವನ್ನು ಉಳಿಸು”​ ​ಎಂದಾಗ ನೆರೆದಿದ್ದ ಭಕ್ತರಿಗೆ ದಿಗ್ಭ್ರಮೆಯಾಯಿತು. ಶ್ರೀಪಾದರ ಪಕ್ಕದಲ್ಲೇ ನಿಂತಿದ್ದ ನನಗಂತೂ ದುಃಖ ತಡೆಯಲಾಗಲಿಲ್ಲ. ಆಶ್ಚರ್ಯ ವೆಂದರೆ  ಶ್ರೀಪಾದರ ಮಾತು ಮುಗಿಯುತ್ತಿದ್ದಂತೆ ದೇವರ ಮೇಲಿದ್ದ ಕೆಂಪು ಬಣ್ಣದ ಗುಲಾಬಿ ಹೂವು ತಕ್ಷಣ ಕೆಳಗೆ ಬಿದ್ದಿತು. ಶ್ರೀಪಾದರಿಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ.

ಕೂಡಲೇ ಆ ಹೂವನ್ನು ಹೆಕ್ಕಿ ತಂದು ಆ ಮಗುವಿನ ತಲೆಯ ಮೇಲಿಟ್ಟು ಆಶೀರ್ವದಿಸುತ್ತಾ ಹೇಳಿದರು. ಮೂರು ತಿಂಗಳು ಬಿಟ್ಟು ಇಲ್ಲಿಗೆ ನೀವು ಮಗು ಸಮೇತ ಬಂದು ರಂಗ ಪೂಜೆ ನೀಡುತ್ತೀರಿ “ಎಂದು ಅಭಯ ನೀಡಿ ಪ್ರಸಾದ ಕೊಟ್ಟು ಕಳುಹಿಸಿದರು. ನೀವು ನಂಬಲೇ ಬೇಕಾದ ಸತ್ಯವಿದು.​ ​3 ತಿಂಗಳು ಕಳೆದ ಮೇಲೆ ಆ ಪುಟ್ಟ ಮಗು ತಂದೆ ತಾಯಿ ಸಮೇತ ಸನ್ನಿಧಾನಕ್ಕೆ ಬಂದಿದ್ದರು.​ ​

ವಿಷಯವೇನೆಂದರೆ 15 ದಿನಗಳ ಹಿಂದೆ ಮಗುವಿನ ದೇಹದಲ್ಲಿ ಆಗುತ್ತಿರುವ ಕೆಲವು ಬದಲಾವಣೆಗಳನ್ನು ಕಂಡ ಹೆತ್ತವರು ಮಗುವನ್ನು ಕರೆದುಕೊಂಡು ಪರೀಕ್ಷೆಗಾಗಿ ಆಸ್ಪತ್ರೆಗೆ ಹೋದರು.​ ​ಆಸ್ಪತ್ರೆಯಲ್ಲಿ ಎಲ್ಲಾ ಪರೀಕ್ಷೆ ಮತ್ತು ಸ್ಕಾನಿಂಗ್ ನಡೆಸಿದ ವೈದ್ಯರು ಆಶ್ಚರ್ಯಚಕಿತರಾದರು.​ ​ಏನೆಂದರೆ ಈ ಹಿಂದೆ ಇದ್ದ ಆ ಮಹಾಖಾಯಿಲೆಯ ಯಾವ ಕುರುಹೂ ಕೂಡಾ ಈಗ ಮಗುವಿನ ದೇಹದಲ್ಲಿ ಕಾಣುತ್ತಿಲ್ಲ ಎಂದಾಗ ಜಗತ್ಪ್ರಸಿದ್ಧ ಆಸ್ಪತ್ರೆಯ ವೈದ್ಯಲೋಕಕ್ಕೆ ಆ ವಿಷಯ 8ನೇ ಅದ್ಭುತವಾಗಿತ್ತು.

ಈ ಎಲ್ಲಾ ವಿಚಾರಗಳನ್ನು ಕುಟುಂಬಿಕರು ಆನಂದಭಾಷ್ಪ ಸುರಿಸುತ್ತಾ ಶ್ರೀಪಾದರ ಸಮ್ಮುಖದಲ್ಲಿ ಹೇಳಿದಾಗ ಸೇರಿದ್ದ ಭಕ್ತರು ಮುಖ್ಯಪ್ರಾಣ ದೇವರ ಅದ್ಭುತ ಲೀಲೆಗೆ ಅಲ್ಲೇ ತಲೆಬಾಗಿದರು. ಆದರೆ ನಮ್ಮೆಲ್ಲರ ದುರಾದೃಷ್ಟವೋ ಎಂಬಂತೆ ಮುಂದಿನ 8 ತಿಂಗಳ ಒಳಗಾಗಿ ಶಿರೂರಿನ ಶ್ರೀಮುಖ್ಯಪ್ರಾಣ ತನ್ನತ್ತ ಶ್ರೀಪಾದರನ್ನು ಸೆಳೆದುಕೊಂಡದ್ದು ವಿಧಿಯ ಲೀಲೆಯೋ ಅಥವಾ ಶ್ರೀಪಾದರ ತ್ಯಾಗವೋ ಎಂಬುದನ್ನು ಭಗವಂತ ಮಾತ್ರ ಅರಿತಿರುವ ಚಿದಂಬರ ರಹಸ್ಯ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!