ಚಿತ್ರಾಪುರ ಮಠದ ಪೂಜ್ಯ ಶ್ರೀಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರ 21ನೇ ಜನ್ಮ ನಕ್ಷತ್ರ 

ದ.ಕ‌. ಜಿಲ್ಲೆಯ ಸುರತ್ಕಲ್ ಸಮೀಪ ಇರುವ ಶ್ರೀ ಕ್ಷೇತ್ರ ಚಿತ್ರಾಪುರ ಒಂದು ದಿವ್ಯ ಕ್ಷೇತ್ರ. ಜಗದ್ಗುರು ಶ್ರೀ ಮಧ್ವಾಚಾರ್ಯ ಪರಂಪರೆಯ ಶ್ರೀ ಪೇಜಾವರ ಅಧೋಕ್ಷಜ ಮಠದ ಕವಲು ಮಠವೇ ಶ್ರೀ ಚಿತ್ರಾಪುರ ಮಠ. ಶ್ರೀ ಪೇಜಾವರ ಮಠದ ಯತಿ ಪರಂಪರೆಯ ಪ್ರಾತಃಸ್ಮರಣೀಯರಾದ ಕೀರ್ತಿಶೇಷ ಪರಮಪೂಜ್ಯ ಶ್ರೀ ಶ್ರೀ ವಿಜಯಧ್ವಜತೀರ್ಥರು ತಮಗೆ ಒಲಿದ ದುರ್ಗೆ ಯನ್ನು ಚಿತ್ರಾಪುರದಲ್ಲಿ ಪ್ರತಿಷ್ಠಾಪಿಸಿ ಸುಂದರ ದೇವಾಲಯ ನಿರ್ಮಿಸಿದರು. ಅದರ ನಿರ್ವಹಣೆಗಾಗಿ ಅಲ್ಲೇ ಸಮೀಪದಲ್ಲೇ ಒಂದು ಮಠವನ್ನು ಸ್ಥಾಪಿಸಿ ಓರ್ವ ಯತಿಗಳನ್ನು ನೇಮಿಸಿದರು . ಅದೇ ಪರಂಪರೆಯಾಯಿತು. ಆ ಯತಿ ಪರಂಪರೆಯ ಈಗಿನ ಉತ್ತರಾಧಿಕಾರಿಗಳೇ ಶ್ರೀ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು .

ಮೂಲತಃ ತೀರ್ಥಹಳ್ಳಿ ಯವರಾದ ಇವರು ಅತ್ಯಂತ ಎಳೆಯ  ವಯಸ್ಸಿನಲ್ಲೇ ಶ್ರೀ ಮಠದ ಹಿಂದಿನ ಯತಿಗಳಾಗಿದ್ದ ಕೀರ್ತಿ ಶೇಷ ಪರಮಪೂಜ್ಯ ಶ್ರೀ ಶ್ರೀ  ವಿದ್ಯಾವಲ್ಲಭ ತೀರ್ಥ ಶ್ರೀಪಾದರಿಂದ ಶ್ರೀ ಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ  ಶ್ರೀಮಠದ 20  ನೇ ಉತ್ತರಾಧಿಕಾರಿಯಾಗಿ ತುರೀಯಾಶ್ರಮ ಸ್ವೀಕರಿಸಿದರು. ಬಳಿಕ ಶಾಸ್ತ್ರಾಧ್ಯಯನಗಳನ್ನು ಶ್ರೀ ಪುತ್ತಿಗೆ ಶ್ರೀಗಳವರ ಮಾರ್ಗದರ್ಶನದಲ್ಲೇ ಶ್ರೀ ಪುತ್ತಿಗೆ ವಿದ್ಯಾಪೀಠದಲ್ಲೇ ನಡೆಸಿದರು. ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯರಿಂದ ಮಹಾಭಾರತ ತಾತ್ಪರ್ಯ ನಿರ್ಣಯದ ಪಾಠವನ್ನೂ ಕೇಳಿದ್ದು ಮತ್ತು ಅದನ್ನು ಪ್ರಸ್ತುತ ನಾಲ್ಕಾರು ವಿದ್ಯಾರ್ಥಿಗಳಿಗೆ ನಿತ್ಯ ಶ್ರೀ ವಿದ್ಯೇಂದ್ರ ತೀರ್ಥರೇ ಸ್ವಯಂ ಈ ತಾರುಣ್ಯದಲ್ಲೇ ನಡೆಸುತ್ತಿರುವುದು ಅತ್ಯಂತ ವಿಶೇಷ .

ಶ್ರೀ ಶ್ರೀ  ವಿದ್ಯಾವಲ್ಲಭತೀರ್ಥ ಶ್ರೀಪಾದರ ಕಾಲಾನಂತರ ಚಿತ್ರಾಪುರ ಮಠದ ಅಧಿಕಾರ ಸ್ವೀಕರಿಸಿದ ಶ್ರೀ ವಿದ್ಯೇಂದ್ರತೀರ್ಥ ಶ್ರೀಗಳು ಅಲ್ಲೇ ಶ್ರೀಮಠದ ಪಟ್ಟದ ದೇವರಾದ ಶ್ರೀ ಕಾಲೀಯಮರ್ದನ ತಾಂಡವ ಕೃಷ್ಣ ದೇವರ ಆರಾಧನೆಯನ್ನು ನಡೆಸಿಕೊಂಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತವನ್ನು ನಿರ್ವಹಿಸುತ್ತಿದ್ದಾರೆ. ಇಲ್ಲಿನ ದುರ್ಗಾ ಸನ್ನಿಧಿಯು ಅತ್ಯಂತ ಕಾರಣಿಕದ ಕ್ಷೇತ್ರವಾಗಿದ್ದು ಆರಾಧನೆಗೊಳ್ಳುತ್ತಿರುವ ತಾಯಿ ಜಗನ್ಮಾತೆಯು ಭಕ್ತಾಭೀಷ್ಟ ಪ್ರದಾಯಿನಿಯಾಗಿದ್ದಾಳೆ. ಆ ಪ್ರದೇಶದಲ್ಲಿ ಬಹಳ ದೊಡ್ಡ ಭಕ್ತವರ್ಗವನ್ನು ಅದರಲ್ಲೂ ಸಮುದ್ರ ತೀರದಲ್ಲಿರುವುದರಿಂದ ಮೀನಗಾರ ಸಮುದಾಯದ ಸಮಸ್ತರು ಇಲ್ಲಿನ ದುರ್ಗೆಯನ್ನು ವಿಶೇಷವಾಗಿ ನಂಬಿಕೊಂಡು ಆರಾಧಿಸುತ್ತಿದ್ದಾರೆ . ಶರನ್ನವರಾತ್ರಿಯ ಉತ್ಸವವು ಇಲ್ಲಿ ವಿಶೇಷವಾಗಿ ನಡೆಯುತ್ತದೆ. ವಾರ್ಷಿಕ ರಥೋತ್ಸವಾದಿಗಳೂ ವೈಭವದಿಂದ ನಡೆಯುತ್ತದೆ.

ಅತ್ಯಂತ ಸರಳ ಮುಗ್ಧ ಮನಸ್ಸಿನ ಶ್ರೀಗಳು ಈ ತಾರುಣ್ಯದಲ್ಲೇ ಶ್ರೀ ಮಾಧ್ವಸಿದ್ಧಾಂತದ ಬಗ್ಗೆ ಆತ್ಯಂತಿಕವಾದ ನಿಷ್ಠೆ ಶ್ರದ್ಧೆಯನ್ನು ಹೊಂದಿದ್ದು ಸಮಾಜದ ಪೂರ್ಣ ಸಹಕಾರ ದೊರೆತರೆ ಭವಿಷ್ಯ ದಲ್ಲಿ ಓರ್ವ ಉತ್ತಮ ಪೀಠಾಧಿಪತಿಯಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡಬಲ್ಲವರಾಗಿದ್ದಾರೆ. ಪ್ರಸ್ತುತ ಶ್ರೀ ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಂ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಶ್ರೀ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರಿಗೆ 21  ನೇ ಜನ್ಮ ನಕ್ಷತ್ರದ ಪರ್ವಸಂದರ್ಭದಲ್ಲಿ ಸಮಸ್ತ ಮಾಧ್ವರ ಪರವಾಗಿ ಆಸ್ತಿಕ ಬಂಧುಗಳ ಪರವಾಗಿ ಭಕ್ತಿ ಪ್ರಣಾಮ ಪೂರ್ವಕ ಅಭಿವಂದನೆಗಳನ್ನು ಸಲ್ಲಿಸುತ್ತಿದ್ದೇವೆ.

 
 
 
 
 
 
 
 
 
 
 

Leave a Reply