ಸ್ವಚ್ಛತಾ ಕಾರ್ಯದಲ್ಲಿ ಪ್ರಾಣಿ ಸಂಕುಲ- ನಾವೇಕೆ ಹೀಗೆ? ~ಡಾ.ರಶ್ಮಿ ಅಮ್ಮೆಂಬಳ

ಆಗಸ್ಟ್ 8ನೇ ತಾರೀಖನ್ನು ‘ಅಂತರಾಷ್ಟ್ರೀಯ ಬೆಕ್ಕಿನ ದಿನ‘ವನ್ನಾಗಿ ಆಚರಿಸಲಾಗುತ್ತಿದೆ. ಈ ವಿಚಾರ ಬಹಳಷ್ಟು ಮಂದಿಗೆ ತಿಳಿದೇ ಇಲ್ಲ. ಯಾಕೆಂದರೆ ನಮ್ಮಲ್ಲಿ ಎಷ್ಟು ಜನ ಪ್ರಾಣಿ, ಪಕ್ಷಿ, ಗಿಡ, ಮರ ಎಂದು ಪ್ರಾಶಸ್ತ್ಯವನ್ನು ಅವುಗಳಿಗೆ ಕೊಡುತ್ತಿದ್ದೇವೆ?  ಇದನ್ನು ಮೊದಲು ಯೋಚಿಸಲೇ ಬೇಕು ಅಲ್ಲವೆ? ಬೆಕ್ಕು “ಮ್ಯಾಂವ್’ ಎಂದೊಡನೆ ಹಾಲು ಗಲ್ಲದ ಮಗು ಕೂಡಾ ಅಳುವುದನ್ನು ನಿಲ್ಲಿಸಿ ಕಣ್ಣರಳಿಸಿ ನೋಡುತ್ತದೆ. 
ಯಾಕೆಂದರೆ ನೋಡಲು ಮುದ್ದಾಗಿ ಕಾಣುವ ಬಹುತೇಕ ಬೆಕ್ಕುಗಳನ್ನು ಮನೆಗಳಲ್ಲಿ ಸಾಕು ಪ್ರಾಣಿಯಾಗಿ ಬೆಳೆಸುವುದಿದೆ. ಇಂತಹ ಬೆಕ್ಕಿನ ಚಲನ-ವಲನ, ಸ್ವಭಾವವನ್ನು ಅವಲೋಕಿಸಿದಾಗ ಅದರ ನಿತ್ಯ ಕರ್ಮಗಳು ನಿಜಕ್ಕೂ ಸ್ವಚ್ಚತೆ ಸಂಬಂಧ ಮನುಷ್ಯನಿಗೆ ಮಾದರಿ ಎನಿಸುವುದಿದೆ.
ನಮ್ಮ ಮನೆ /ಕಚೇರಿಗಳಲ್ಲಿ ದ್ರವ ತ್ಯಾಜ್ಯ , ಹಸಿ ತ್ಯಾಜ್ಯ ವಿಂಗಡಣೆಗಾಗಿ ಪ್ರತ್ಯೇಕ ಕಸದ ಬುಟ್ಟಿ ಗಳನ್ನಿರಿಸುತ್ತೇವೆ. ಹಳೇ ಬಟ್ಟೆ, ಒಡೆದ ಗ್ಲಾಸ್, ಲೋಹ, ಕಾಗದ, ರಟ್ಟು, ಪ್ಲಾಸ್ಟಿಕ್, ಸ್ಯಾನಿಟರಿ ಪ್ಯಾಡ್ಸ್ ಇತ್ಯಾದಿ ತ್ಯಾಜ್ಯಗಳನ್ನು ಪರಿಸರಕ್ಕೆ ಮಾರಕವಾಗದ ಹಾಗೆ ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕಾದ ಸವಾಲು ಇಂದು ನಮಗೆ ಎದುರಾಗಿರುವುದು ಸತ್ಯ. 
ಯಾಕೆಂದರೆ  ವೈಯಕ್ತಿಕ ಸ್ವಚ್ಛತೆ ಸೇರಿದಂತೆ ನಮ್ಮ ಪರಿಸರವನ್ನು ನಾವು ಸ್ವಚ್ಛ ಹಾಗೂ ಸುಂದರ ಪರಿಸರವನ್ನಾಗಿ ಮಾಡುವುದು ನಮ್ಮೆಲ್ಲರ ಆರೋಗ್ಯಕರ ಜೀವನಕ್ಕೆ ಅನಿವಾರ್ಯ ಹಾಗೂ ಅಗತ್ಯ. ಇದಕ್ಕಾಗಿ ರೋಗ ರುಜಿನಗಳು ಕಾಡದಂತೆ ವೈಯಕ್ತಿಕ ಸ್ವಚ್ಛತೆ, ನೈರ್ಮಲ್ಯತೆಯನ್ನು ಕಾಪಾಡಿ ಕೊಂಡು ಗಿಡ-ಮರಗಳನ್ನು ಬೆಳೆಸುತ್ತಾ, ತ್ಯಾಜ್ಯ ವಿಲೇವಾರಿಗಾಗಿ ಸಹಕಾರ ನೀಡುತ್ತಾ, ಪ್ಲಾಸ್ಟಿಕ್ ಬಳಕೆಯನ್ನು ಮಿತಗೊಳಿಸುತ್ತಾ, ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸುತ್ತಾ ಬದುಕುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ನಮ್ಮ ಸುತ್ತ-ಮುತ್ತವಿರುವ ಮೂಕ-ಪ್ರಾಣಿ-ಪಕ್ಷಿ ಸಂಕುಲವನ್ನು ನೋಡಿದಾಗ ಅವುಗಳಲ್ಲಿ ಕೆಲವೊಂದು ಪರಿಸರ ಸ್ನೇಹಿಯಾಗಿ, ಪರಿಸರದ ಸಮತೋಲ ನವನ್ನು ಕಾಪಾಡಿಕೊಂಡು ಬದುಕುತ್ತಿರುವುದು ಬುದ್ಧಿವಂತನಾದ ಮಾನವನಿಗೆ ಪಾಠ ಹೇಳುವಂತಿದೆ. ಮನುಷ್ಯರು ಬಿಸಾಕಿದ ತ್ಯಾಜ್ಯಾಹಾರವನ್ನು ಹೆಕ್ಕಿ ತಿಂದು, ಸತ್ತ ಪ್ರಾಣಿಗನ್ನು ಸ್ವತಃ ಪ್ರಾಣಿ ಪಕ್ಷಿಗಳೇ ವಿಲೇವಾರಿ ಗೊಳಿಸುತ್ತಾ, ಪರಿಸರವನ್ನು ಸ್ವಚ್ಚಗೊಳಿಸುವ ಸ್ವಚ್ಛಾಗ್ರಹಿಗಳಂತೆ  ಕೆಲಸ ಮಾಡುತ್ತಿ ರುವುದು ಕೌತುಕವನ್ನೇ ಸೃಷ್ಠಿಸುವಂತಿದೆ. ನಾವು ನಮ್ಮ ಪರಿಸರದಲ್ಲಿ ನೊಡುವ ಬೆಕ್ಕು, ಹದ್ದು,ಕಾಗೆ,ಗಿಡುಗ,ಏಡಿ, ನಾಯಿ ಇತ್ಯಾದಿ ಪ್ರಾಣಿ-ಪಕ್ಷಿ ಸಂಕುಲ ಸ್ವಚ್ಛಾಗ್ರಹಿಗಳಂತೆ ನಮ್ಮ ಕಣ್ಣೆದುರಿಗಿವೆ. 
ಇವುಗಳೆಲ್ಲ ಸ್ವಚ್ಛ-ನೈರ್ಮಲ್ಯಯುತ ಪರಿಸರವನ್ನು ನಿರ್ಮಾಣ ಮಾಡುತ್ತಿರುವುದು ಮಾತ್ರವಲ್ಲದೆ ನಮ್ಮ ಪರಿಸರದಲ್ಲಿ ಅನಗತ್ಯ ರೋಗ ಪಸರಿಸುವ ಸೂಕ್ಷ್ಮ ಜೀವಿಗಳು ಬೆಳೆಯದಂತೆ ಜವಾಬ್ದಾರಿಯುತವಾಗಿ ಕಾರ್ಯಾಚರಿಸುತ್ತಿವೆ. ನಾವು ದಿನನಿತ್ಯ ನೋಡುವ ಸಾಕು ಪ್ರಾಣಿ ಬೆಕ್ಕು,ನಾಯಿ ಮೊದಲಾದುವುಗಳ ಜೀವನ ಶೈಲಿಯನ್ನು ಗಮನವಿಟ್ಟು ನೋಡಿದಾಗ ಆಶ್ಚರ್ಯ ಕಾಡದಿರದು.
 
ಉಡುಪಿ ಪಶುಪಾಲನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಉದಯಕುಮಾರ್ ಶೆಟ್ಟಿ ಅವರ ಪ್ರಕಾರ ಬೆಕ್ಕು ಮನೆಯಲ್ಲಿದ್ದಾಗ ಶಾಂತ ಸ್ವಭಾವವನ್ನು ಹೊಂದಿರುವ, ತನ್ನ ಮೈಯನ್ನು ಹಲವಾರು ಬಾರಿ ನಾಲಗೆಯಿಂದ ನೆಕ್ಕುತ್ತಾ ಸ್ವಚ್ಛತೆಯನ್ನೇ ಬಯಸುವ ಏಕೈಕ ಸಾಕು ಪ್ರಾಣಿ. ದೇಸೀ ತಳಿಯ ಬೆಕ್ಕು ಮಾತ್ರವಲ್ಲದೆ ಬೇರೆ ತಳಿಯ ಬೆಕ್ಕುಗಳಿಗೂ ಸ್ವಚ್ಛ ಪರಿಸರ ಮನೆಯಲ್ಲಿ ಇಲ್ಲದೆ ಇದ್ದಾಗ ಅವುಗಳ ಆರೋಗ್ಯ ಹದಹಡದುವುದು ಶತಸಿದ್ದ ಎನ್ನುತ್ತಾರೆ ಅವರು.
ಬೆಕ್ಕು ಹೊಂಡ ತೋಡಿ, ಬಹಿರ್ದೆಶೆ ಮುಗಿಸಿ ಅದಕ್ಕೆ ಕಾಲಿನಿಂದ ಮಣ್ಣನ್ನು ಕೆರೆದು ಹಾಕಿ ಮುಚ್ಚುತ್ತದೆ. ಇದು ಬೆಕ್ಕುಗಳಿಗೆ ನೈಸರ್ಗಿಕವಾಗಿ ಬಂದಿರುವ ಜ್ಞಾನ. ಇಂತಹ ನಿದರ್ಶನ ನಿಜಕ್ಕೂ ಬಯಲು ಶೌಚವನ್ನು ಪೂರೈಸುವ ಮಂದಿಗೆ ಪಾಠ ಹೇಳುವಂತಿರುತ್ತದೆ. ವನ್ಯ ಪ್ರದೇಶದಲ್ಲೂ ಇತರೆ ಪ್ರಾಣಿಗಳು ಸ್ವತಃ ವಿಲೇವಾರಿ ಮಾಡುವುದು ನಿಜಕ್ಕೂ ಅಚ್ಚರಿ. ಆದರೆ ಎಷ್ಟೇ ತರಬೇತಿ,ಶಿಕ್ಷಣದ ಮೂಲಕ ಜಾಗೃತಿ ಮೂಡಿಸಿದರೂ ಮಾನವರು ಮಾತ್ರ ತಮ್ಮ ಕಸದ ಜವಾಬ್ದಾರಿಯನ್ನು ತಾವು ವಹಿಸುತ್ತಿಲ್ಲ.  ಯಾಕೆ ಹೀಗೆ? ಎನ್ನುವ ಪ್ರಶ್ನೆ ಕಾಡದಿರದು.
ಸ್ವಚ್ಛವಾಗಿರುವ ಬಟ್ಟೆ ಅಥವಾ ನೆಲದಲ್ಲಿ ಬೆಕ್ಕು, ನಾಯಿ ಮಲಗುವುದನ್ನು, ಮಲಿನವಾಗಿರುವ ಆಹಾರದ ತಟ್ಟೆಯನ್ನು  ತಮ್ಮ ಮೂತಿಯಿಂದ ದೂರ ಸರಿಸುವುದನ್ನು ನಾವು ನೋಡಿದಾಗ ನಾಯಿ, ಬೆಕ್ಕುಗಳೂ ಸ್ವಚ್ಛ ಪರಿಸರವನ್ನು ಬಯಸುತ್ತವೆ ಎಂದು ವೇದ್ಯವಾಗುತ್ತದೆ. ಮೂಕ ಜೀವಿಗಳೇ ಸ್ವಚ್ಛ ಪರಿಸರಕ್ಕಾಗಿ ತಮ್ಮದೇ ಕೊಡುಗೆ ನೀಡುತ್ತಿರುವಾಗ ನಾವೇಕೆ ಹೀಗೆ? ಎಂದು ಬುದ್ಧಿವಂತರಾದ ನಾವು ಒಂದರೆಕ್ಷಣ ಈ ಬಗ್ಗೆ ಈ ಬಗ್ಗೆ ಚಿಂತಿಸ ಬೇಕಿದೆ, ಸಮಸ್ಯೆಯನ್ನು ಅರ್ಥೈ ಸಬೇಕಿದೆ. 
ಯಾಕೆಂದರೆ ಸ್ವಚ್ಛ ಸುಂದರ ಪರಿಸರ ನಿರ್ಮಾಣದ ಜೊತೆಗೆ ತ್ಯಾಜ್ಯವಿಲೇವಾರಿಗಾಗಿ ಪರ ದಾಡುತ್ತಾ ನಮ್ಮ ಪರಿಸರವನ್ನು ಮಲಿನಗೊಳಿಸುತ್ತಿದ್ದೇವೆ. ಮನೆ ತ್ಯಾಜ್ಯವನ್ನು ಕಸ ಸಂಗ್ರಹಣಾ ವಾಹನಕ್ಕೆ ನೀಡಲು ಸಮಯವಿಲ್ಲವೆಂದು ಎಲ್ಲೋ ಅದನ್ನು ಎಸೆಯುವುದು, ಅಥವಾ ಹಸಿ -ಒಣ ಬೇಧವಿಲ್ಲದೆ, ಗಾಜಿನ ತುಂಡು, ಪ್ಲಾಸ್ಟಿಕ್ ಮನೆಯಿಂದ ಹೊರ ಹೊದರಷ್ಟೇ ಸಾಕು ಎನ್ನುವ ಧೋರಣೆಯಲ್ಲಿ ಕಸವನ್ನು ಸ್ವಚ್ಚಾಗ್ರಹಿಗಳಿಗೆ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. 
ನಮ್ಮಲ್ಲಿರುವ ತಪ್ಪುಗಳನ್ನು ನಾವೇ ಪರಾಮರ್ಶಸಬೇಕಿದೆ. ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಕೆಲಸ ಮಾಡುವ ಜನರು ನಮ್ಮಂತೆಯೇ ಮನುಷ್ಯರು, ಅವರ ಸಂಕಷ್ಟಗಳನ್ನೂ ಅರಿತುಕೊಂಡು ಸ್ವಚ್ಛ ಸುಂದರ ಪರಿಸರಕ್ಕಾಗಿ ಮಕ ಜೀವಿಗಳು ನಿರ್ವಹಿಸಿದ್ದಕ್ಕಿಂತಲೂ ಮಿಗಿಲಾಗಿ ಕಾರ್ಯಪ್ರವೃತ್ತ ರಾಗಬೇಕಿದೆ.
 
ಸ್ವಚ್ಛತೆಯ ಪಾಠ ಹೇಳುವ  ಬೆಕ್ಕಿನ ವಿಶೇಷ ದಿನವಾದ ಇಂದು ಮನೆಬೆಕ್ಕುಗಳ ಸಂತಾನ ನಿಯಂತ್ರಣ ಮಾಡುವ, ರೋಗ ನಿರೋಧಕ ಲಸಿಕೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡು ಬೀದಿ ಪಾಲಾಗುವ ಬೆಕ್ಕುಗಳ ಸಂಖ್ಯೆಯನ್ನು ನಿಯಂತ್ರಿಸ ಬಹದಾಗಿದೆ. ಈ ಬಗ್ಗೆ ನಾವೆಲ್ಲಾ ಚಿಂತಿಸಿ ಕಾರ್ಯತತ್ಪರರಾಗೋಣ ಆಗದೆ? 
 
 
 
 
 
 
 
 
 
 
 

Leave a Reply