ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಮತ್ತು ಅಭಯ ಸಿಂಹರಿಗೆ ‘ಕಲಕ’ ಪ್ರಶಸ್ತಿ

ದಕ್ಷಿಣ ಕನ್ನಡ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಅಂತಾರಾಷ್ಟ್ರೀಯ ಲಯನ್ಸ್ ಜಿಲ್ಲೆ 312-ಡಿಯ ಪ್ರತಿಷ್ಠಿತ ಕ್ಲಬ್ ಗಳಲ್ಲೊಂದಾದ ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಪ್ರತೀ ವರ್ಷ ಕನ್ನಡ ನಾಡು ನುಡಿಯ ಸೇವೆಗಾಗಿ ದುಡಿದ ಸಾಧಕರಿಗೆ ನೀಡುವ ಕದ್ರಿ ಲಯನ್ಸ್ ಕನ್ನಡ ರತ್ನ (ಕಲಕ) ಪ್ರಶಸ್ತಿಯ 2019-20ನೆಯ ಸಾಲಿಗೆ ಖ್ಯಾತ ಚಲನಚಿತ್ರ ನಿರ್ದೇಶಕ ಅಭಯಸಿಂಹ ಹಾಗೂ 2020-21ನೆಯ ಸಾಲಿಗೆ ಕವಯತ್ರಿ, ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಆಯ್ಕೆಯಾಗಿದ್ದಾರೆ.
2010ರಲ್ಲಿ ನಡೆದ ಸಿಂಹಗಳ ನಡುವೆ ಕನ್ನಡದ ಕಲರವ ಎಂಬ ಲಯನ್ಸ್ ಕನ್ನಡ ಸಮ್ಮೇಳನದ ಸವಿನೆನಪಿಗಾಗಿ ಪ್ರತೀ ವರ್ಷ ನೀಡುತ್ತಿರುವ ಈ ರಾಜ್ಯಮಟ್ಟದ ಪ್ರಶಸ್ತಿಗೆ ಎನ್ ಟಿ ರಾಜಾ ನೇತೃತ್ವದ ಆಯ್ಕೆ ಸಮಿತಿ ಈ ಈರ್ವರು ಸಾಧಕೆನ್ನು ಆಯ್ಕೆ ಮಾಡಿದ್ದು. ಜನವರಿ 16ರಂದು ಸಂಜೆ 3.30ರಿಂದ ವಾಮಂಜೂರು ಚರ್ಚ್ ಹಾಲ್ ನಲ್ಲಿ ನಡೆಯಲಿರುವ ಪ್ರಾಂತ್ಯ ೪ರ ಪ್ರಾಂತೀಯ ಸಮ್ಮೇಳನ, ‘ಮನಸ್ವಿನಿ’ಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿಯು ಹತ್ತು ಸಾವಿರ ರೂಪಾಯಿಗಳ ಪ್ರಶಸ್ತಿ ಮೊತ್ತದೊಂದಿಗೆ ಪ್ರಶಸ್ತಿ ಫಲಕ ವನ್ನೊಳಗೊಂಡಿರುತ್ತದೆ ಎಂದು ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಅಧ್ಯಕ್ಷೆ ಮಂಜುಳಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭಯಸಿಂಹ:- ಮಂಗಳೂರಿನವರಾದ ಅಭಯಸಿಂಹ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ಕನ್ನಡದ ಸಮಕಾಲೀನ ಯುವ ಚಲನಚಿತ್ರ ನಿರ್ದೇಶಕರಲ್ಲಿ ಅಗ್ರಪಂಕ್ತಿಯಲ್ಲಿ ಕೇಳಿಬರುತ್ತಿರುವ ಹೆಸರು. ಈಗಾಗಲೇ ಇವರು ನಿರ್ದೇಶಿಸಿದ ಚಲನಚಿತ್ರಗಳಿಗೆ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಗುಬ್ಬಚ್ಚಿಗಳು, ಶಿಖಾರಿ, ಸಕ್ಕರೆ ಹಾಗೂ ಪಡ್ಡಾಯಿ ಎಂಬ ಚಲನಚಿತ್ರಗಳನ್ನು ನಿರ್ದೇಶಿಸಿರುವ ಇವರು ಮ್ಯೂಸಿಕ್ ವೀಡಿಯೋ, ಅನೇಕ ಟಿವಿ ಧಾರಾವಾಹಿಗಳು, ಯಕ್ಷಗಾನದ ಮೇಲೆ ಸಿನಿಮಾ ಹಾಗೂ ಸಾಕ್ಷ್ಯ ಚಿತ್ರಗಳನ್ನೂ ನಿರ್ಮಿಸಿದ್ದಾರೆ. 
ನಟರಾಗಿ ಚಲನಚಿತ್ರಗಳಲ್ಲೂ ಅಭಿನಯಿಸಿರುವ ಅಭಯ ಸಿಂಹ ಚಲನಚಿತ್ರ, ರಂಗಭೂಮಿಯ ಅನೇಕ ಸಂಸ್ಥೆ ಗಳಲ್ಲಿ ಬೇರೆ ಬೇರೆ ಪದವಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಒಟ್ಟೂ ಸಾಧನೆಯನ್ನು ಪರಿಗಣಿಸಿ 2019-20ನೆಯ ಸಾಲಿನ ಕಲಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಡಾ.ಕಾತ್ಯಾಯಿನಿ ಕುಂಜಿಬೆಟ್ಟು:– ಪ್ರಸ್ತುತ ಉಡುಪಿಯ ಎಂಜಿಎಂ  ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ ಯಾಗಿರುವ ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ಸಮಕಾಲೀನ ಸಾಹಿತಿಗಳಲ್ಲಿ ಮುಂಚೂಣಿಯಲ್ಲಿರುವರಲ್ಲೋರ್ವರು. ಇದುವರೆಗೆ ಸ್ವ ರಚಿತ, ಅನುವಾದಿತ ಹಾಗೂ ಇನ್ನಿತರ ಒಟ್ಟೂ ೨೫ಕ್ಕೂ ಮಿಕ್ಕಿ ಕೃತಿಗಳನ್ನು ಪ್ರಕಟಿಸಿರುವ ಕಾತ್ಯಾಯಿನಿ ಇತ್ತೀಚೆಗೆ ಕನಕ ಯುವ ಪುರಸ್ಕಾರವನ್ನೂ ಸೇರಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಅನೇಕ ಸಾಹಿತ್ಯ ಸಂಘಟನೆಗಳಲ್ಲೂ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕನ್ನಡ, ತುಳುವಿನಲ್ಲಿ ಬರೆಯುತ್ತಿದ್ದಾರೆ. ಕನ್ನಡದ ಅನೇಕ ಉತ್ಕೃಷ್ಠ ನಾಟಕ ಹಾಗೂ ಕೃತಿಗಳನ್ನು ತುಳುವಿಗೆ ಅನುವಾದಿಸಿದ್ದಾರೆ. ಅನೇಕ ಕಾಲೇಜುಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡಿರುವ ಕಾತ್ಯಾಯಿನಿ ಸಂಪನ್ಮೂಲ ವ್ಯಕ್ತಿಯಾಗಿ, ಪ್ರಬಂಧ ಮಂಡನೆಗಳೊಂದಿಗೆ ಗಮನ ಸೆಳೆದಿದ್ದಾರೆ. ಇವರ ಸಾಹಿತ್ಯ ಸೇವೆಗಳನ್ನು ಪರಿಗಣಿಸಿ 2020-21ನೇ ಸಾಲಿನ ಕಲಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ 
 
 
 
 
 
 
 
 
 
 
 

Leave a Reply