ಒತ್ತಡ ರಹಿತ ಬದುಕಿಗೆ ಗೀತೆಯೇ ದಿವ್ಯ ಔಷಧಿ —ಪುತ್ತಿಗೆ ಶ್ರೀಪಾದರು

ಉಡುಪಿ : ಇವತ್ತಿನ ಕಾಲದಲ್ಲಿ ಆಬಾಲವೃದ್ಧರೂ ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ. ಇದರ ಪರಿಣಾಮವಾಗಿ ಅನೇಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಪಾರಾಗಲು ಸುಲಭವೆಂದರೆ ಗೀತಾಧ್ಯಯನ. 

ಶ್ರೀಕೃಷ್ಣನು ನೀಡಿದ ಭಗವದ್ಗೀತೆಯು ನಮ್ಮ ಒತ್ತಡವನ್ನು ನಿಯಂತ್ರಿಸುತ್ತದೆ.ಈ ಹಿನ್ನೆಲೆಯಲ್ಲಿ ಭಾರತದ ಸರ್ಕಾರವು ಗೀತಾ ಜಯಂತಿಯಂದು ವಿಶೇಷ ಗೀತಾಧ್ಯಯನಕ್ಕಾಗಿ ಶಾಲೆಗಳಿಗೆ ರಜೆಯನ್ನು ನೀಡಿ ಪ್ರೋತ್ಸಾಹಿಸಬೇಕು. ಬಾಲ್ಯದಲ್ಲಿಯೇ ಗೀತಾಭ್ಯಾಸದ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಕರೆ ನೀಡಿದರು. 

ಉಡುಪಿಯ ಗೀತಾ ಮಂದಿರದಲ್ಲಿ ಗೀತಾ ಜಯಂತಿಯ ಪ್ರಯುಕ್ತ ಆಯೋಜಿಸಿದ್ದ ಸಾಮೂಹಿಕ ಗೀತಾ ಪಾರಾಯಣ ಕಾರ್ಯಕ್ರಮ ಹಾಗೂ ಕಂಠಪಾಠ ಸ್ಪರ್ಧೆಯ ಬಹುಮಾನ ವಿತರಣಾ ಸಭಾ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶವನ್ನು ನೀಡಿದರು. 

ವಿಶ್ವಸ್ತರ ದಲ್ಲಿ ಭಗವದ್ಗೀತೆಯ ವಿಶೇಷ ಪ್ರಚಾರಕ್ಕಾಗಿ ಇದೇ ಬರುವ ಜನವರಿ 20 ರಂದು ಕೋಟಿಗೀತಾಲೇಖನ ಯಜ್ಞ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಲು ಸಂಕಲ್ಪಿಸಲಾಗಿದೆ.

ಸಮಗ್ರ ರಾಷ್ಟಸ್ತರದಲ್ಲಿ ಗೀತಾ ಲೇಖನ ಆಂದೋಲನವನ್ನು ನಡೆಸಲಾಗುವುದು. ಬರುವ ನಮ್ಮ ನಾಲ್ಕನೇ ಪರ್ಯಾಯವು ಗೀತಾಪರ್ಯಾಯವಾಗಲಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಾನ್ನಿಧ್ಯವನ್ನು ನೀಡಿದ್ದ ಪರ್ಯಾಯ ಶ್ರೀ ಅದಮಾರು ಮಠದ ಹಿರಿಯ ಪೀಠಾಧಿಪತಿ ಪರಮಪೂಜ್ಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಗೀತೆಯ ಮಹತ್ವವನ್ನು ತಿಳಿಸಿದರು. 

“ಗೀತಾಧ್ಯಯನದಿಂದ ಎಲ್ಲ ಸಮಸ್ಯೆಗಳೂ ನಿವಾರಣೆ ಆಗುತ್ತದೆ. ಪ್ರತಿ ದಿನವೂ ತಪ್ಪದೇ ಸಂಕಲ್ಪಪುರಸ್ಸರವಾಗಿ ಗೀತಾಪಠಣೆಯನ್ನು ಮಾಡಬೇಕು. ಪುತ್ತಿಗೆ ಶ್ರೀಪಾದರು ನಡೆಸುತ್ತಿರುವ ಗೀತಾ ಪ್ರಚಾರ ಕಾರ್ಯವು ಅದ್ವಿತೀಯವಾಗಿದೆ ಎಂದು ತಿಳಿಸಿದರು. 

ಶ್ರೀ ಪುತ್ತಿಗೆ ಮಠದಿಂದ ಮುದ್ರಣಗೊಂಡ ಶುಭಕೃತ್ ಸಂವತ್ಸರದ ದೃಗ್ಗಣಿತಾನುಸಾರಿ ಪಂಚಾಂಗವನ್ನು ಪೂಜ್ಯ ಅದಮಾರು ಶ್ರೀಪಾದರು ಬಿಡುಗಡೆಗೊಳಿಸಿದರು.

ಗೀತಾ ಜಯಂತಿಯ ಅಂಗವಾಗಿ ಉಡುಪಿಯ ಸುತ್ತ ಮುತ್ತಲಿನ ಸುಮಾರು 24 ಶಾಲೆಗಳಲ್ಲಿ ಗೀತಾ ಕಂಠಪಾಠ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಸುಮಾರು 184 ವಿದ್ಯಾರ್ಥಿಗಳು ಬಹುಮಾನವನ್ನು ಪಡೆದಿದ್ದಾರೆ. ಪೂಜ್ಯ ಶ್ರೀಪಾದರ ಬಹುಮಾನವನ್ನು ನೀಡಿ ಅನುಗ್ರಹಿಸಿದರು. 

ವಿದ್ವಾಂಸ ಶ್ರೀಮಧ್ವರಮಣ ಆಚಾರ್ಯ, ವಿದ್ವಾನ್ ಮುಟ್ಟು ಪ್ರವೀಣ ತಂತ್ರಿ, ವಿದ್ವಾನ್ ಸುನೀಲ ಆಚಾರ್ಯ, ಮೊದಲಾದವರು ಉಪಸ್ಥಿತರಿದ್ದರು. ವಿದ್ವಾನ್ ಬಿ.ಗೋಪಾಲಾಚಾರ್ಯ ನಿರೂಪಿಸಿದರು.

 
 
 
 
 
 
 
 
 
 
 

Leave a Reply