ಶ್ರೀವಾದೀಂದ್ರತೀರ್ಥ ಗುರುಸಾರ್ವಭೌಮರ ಆರಾಧನೆ

ವಂದಾರು ಜನ ಸಂದೋಹ ಮಂದಾರ ತರು ಸನ್ನಿಭಮ್ ।
ವೃಂದಾರಕ ಗುರುಪ್ರಖ್ಯಂ ವಂದೇ ವಾದೀಂದ್ರ ದೇಶಿಕಮ್ ।।

ಶ್ರೀ ವಾದೀಂದ್ರತೀರ್ಥರು, ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಪೂರ್ವಾಶ್ರಮದ ಮರಿಮಗ. ಅಸಾಧಾರಣ ಪಾಂಡಿತ್ಯ ಹಾಗೂ ರಾಯರಲ್ಲಿ ಅನನ್ಯ ಭಕ್ತಿ ಹೊಂದಿದ್ದ ಮಹಾಮಹಿಮರು.

ಶ್ರೀವಾದೀಂದ್ರತೀರ್ಥರ ಪೂರ್ವಾಶ್ರಮದ ಹೆಸರು ಶ್ರೀ ಶ್ರೀನಿವಾಸಾಚಾರ್ಯ. ಇವರ ತಂದೆ ಪುರುಷೋತ್ತಮಾಚಾರ್ಯ, ತಾತ ಶ್ರೀಲಕ್ಷ್ಮೀನಾರಾಯಣಾಚಾರ್ಯ, ಮುತ್ತಾತ ಶ್ರೀವೆಂಕಟನಾಥಾಚಾರ್ಯ(ಶ್ರೀರಾಘವೇಂದ್ರ ಗುರುರಾಯರು).

ಕಲಿಯುಗದ ಕಲ್ಪವೃಕ್ಷವಾದ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರು ಸಶರೀರರಾಗಿ ಬೃಂದಾವನಗತರಾದಾಗ ಶ್ರೀನಿವಾಸಾಚಾರ್ಯರು ಎರಡು ವರ್ಷದ ಸಣ್ಣ ಬಾಲಕ.

ಬೃಂದಾವನದ ವಿಧಿವಿಧಾನಗಳನ್ನು ನೋಡಿದ ಆ ಪುಟಾಣಿಗೆ, ಮುಂದೊಂದು ದಿನ ಹೀಗೆ ತಾವೂ ಸಹ ವೃಂದಾವನವಾಗುವ ಸಣ್ಣ ಕಲ್ಪನೆಯೂ ಇರದ ಸಣ್ಣ ವಯಸ್ಸು. ಜತೆಗ ಸಶರೀರರಾಗಿ ವಂದಾವನಸ್ಥರಾಗುತ್ತಿರುವ ಮಹಾಮಹಿಮರ ಅನುಗ್ರಹ ಪಡೆಯುವುದಾಗಲಿ. ಅವರಿಗೆಂದು ಮಾಡಿಸಿದ ಶಿಲಾ ವೃಂದಾವನದಲ್ಲಿ ತಾವು ನೆಲೆಗೊಳ್ಳುವುದಾಗಲಿ ಊಹೆಗೂ ನಿಲುಕದ ಮಾತಾಗಿತ್ತು.

ಆದರೆ ದೈವ ಸಂಕಲ್ಪವೇ ಬೇರೆಯಿತ್ತು. ರಾಯರ ನಂತರ ಶ್ರೀಯೋಗೀಂದ್ರತೀರ್ಥರು, ಶ್ರೀಸೂರೀಂದ್ರತೀರ್ಥರು, ಶ್ರೀಸುಮತೀಂದ್ರತೀರ್ಥರು ಹಾಗೂ ಶ್ರೀಉಪೇಂದ್ರತೀರ್ಥರು ಯತಿಗಳಾಗಿದ್ದರು. ಇವರ ನಂತರ 1728ರಲ್ಲಿ, ಶ್ರೀ ಶ್ರೀನಿವಾಸಾಚಾರ್ಯರು ಶ್ರೀವಾದೀಂದ್ರತೀರ್ಥರು ಎಂಬ ಅಭಿಧಾನ ಪಡೆದು ತುರ್ಯಾಶ್ರಮ(ಸನ್ಯಾಸಿ) ಸ್ವೀಕರಿಸಿದರು. ಶ್ರೀಮದುಪೇಂದ್ರತೀರ್ಥರ ಅನುಗ್ರಹದೊಂದಿಗೆ, ಶ್ರೀಹಂಸನಾಮಕ ಪರಮಾತ್ಮನ ಪರಂಪರೆಯ ಜಗದ್ಗುರು ಶ್ರೀಮನ್ ಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನದ ವೇದಾಂತ ಸಾಮ್ರಾಜ್ಯ ಸಿಂಹಾಸನವೇರಿದರು.

22 ವರ್ಷಗಳ ಕಾಲ ಸುಗುಣ ಸನ್ಯಾಸಿ ಜೀವನ ನಡೆಸಿದ ಸಕಲ ವಿದ್ಯಾ ಪಾರಂಗತರಾದ ಶ್ರೀವಾದೀಂದ್ರತೀರ್ಥರು, ಭೂಗೋಳ ಖಗೋಳವೆಂಬ ಅಪ್ರತಿಮ ಕೃತಿಯನ್ನು ರಚಿಸಿದರು. ಇದರ ಜತೆ ಶ್ರೀರಾಘವೇಂದ್ರಮಠಾರ್ಚಾಗತಿಕ್ರಮ, ತತ್ತ್ವೋದ್ಯೋತ ಟಿಪ್ಪಣಿ , ವಿಷ್ಣುಸೌಭಾಗ್ಯಶಿಖರಿಣಿ, ಗುರುಗುಣಸ್ತವನ, ತತ್ತ್ವಪ್ರಕಾಶಿಕಾ ಟಿಪ್ಪಣಿ – ಮೀಮಾಂಸಾನಯದರ್ಪಣ ಮುಂತಾದ ಗ್ರಂಥಗಳನ್ನು ರಚಿಸಿದರು.

ಇವರು ಪೀಠಕ್ಕೆ ಬಂದಾಗ, ಭಾರತದಲ್ಲಿ
ಪರಿಸ್ಥಿತಿ ಸರಿಯಿರಲಿಲ್ಲ. ಕೆಲವು ಅನಾವಶ್ಯಕ ಕಾನೂನುಗಳಿಂದಾಗಿ ಮಂತ್ರಾಲಯದ ಆಸ್ತಿ ಸರಕಾರದ ವಶವಾಗಬೇಕಿತ್ತು. ಆಗ ಶ್ರೀಮಠದ ಆಸ್ತಿಯನ್ನು ರಕ್ಷಿಸಲು ಆದವಾನಿ ಅಧಿಕಾರಿ ಮಝಫರ್ ಜಂಗ್ ನೊಡನೆ ಮಾತನಾಡಿ ಆ ಸ್ಥಳದ ಸನ್ನದನ್ನು ಮಾಡಿಸಿಕೊಂಡರು. ಪಂಡಿತರು ಹಾಗೂ ಪಾಮರರನ್ನು ಸಮಾನವಾಗಿ ನೋಡುತ್ತಿದ್ದ ಇವರಲ್ಲಿ ಅಸಾಧಾರಣ ಉತ್ತಮ ಗುಣಗಳು ನೆಲೆಮಾಡಿದ್ದವು.

22 ವರ್ಷಗಳ ಕಾಲ ವೇದಾಂತ‌ ಸಾಮ್ರಾಜ್ಯ ಸಿಂಹಾಸನವನ್ನಾಳಿದ ಶ್ರೀವಾದೀಂದ್ರ ತೀರ್ಥರ ವೃಂದಾವನ ಪ್ರವೇಶ‌ ಸಹ ವಿಸ್ಮಯಕಾರಿಯೇ.

ಹಿಂದೆ ಶ್ರೀರಾಘವೇಂದ್ರ ಗುರು ಸಾರ್ವಭೌಮರು ವೃಂದಾವನ ಪ್ರವೇಶ ಮಾಡಲು ಆಲೋಚಿಸಿದಾಗ, ದಿವಾನ್ ವೆಂಕಣ್ಣನವರು ರಾಯರಿಗಾಗಿ ಒಂದು ವೃಂದಾವನ ಮಾಡಿಸಿದರು. ಆದರೆ ತಮ್ಮ ಶಿಷ್ಯರು ಅಪ್ರತಿಮರಾಗಬೇಕೆಂಬ ಸಂಕಲ್ಪ ಹೊಂದಿದ್ದ ಉದಾರ ಮನಸ್ಸಿನ ರಾಯರು, ಅವರಿಗೆಂದು
ಮಾಡಿಸಿದ್ದ ಬೃಂದಾವನವನ್ನು ಹಾಗೆಯೇ ಪಕ್ಕಕ್ಕೆ ಇಡಿಸಿದರು. ಅಲ್ಲದೇ ಅವರಿಗಾಗಿ, ಮಾದಾವರದ ಬಳಿ ತುಂಗಭದ್ರಾನದಿಯಲ್ಲಿ ಶ್ರೀರಾಮಚಂದ್ರ ಪ್ರಭು ತ್ರೇತಾಯುಗದಲ್ಲಿ ಕೆಲಕಾಲ ಕುಳಿತು ವಿಶ್ರಮಿಸಿದ್ದ ಬಂಡೆಯಿಂದ ಮತ್ತೊಂದು ವೃಂದಾವನ ಮಾಡಿಸಿದರು. ಇದರ ಅಳತೆ ಮೊದಲು ಮಾಡಿಸಿದ ವೃಂದಾವನಕ್ಕಿಂತ ಒಂದು ಇಂಚು ಎತ್ತರ ಕಡಿಮೆಯಿತ್ತು. ಇದನ್ನು ಕಂಡ ವೆಂಕಣ್ಣ, ಹಿಂದೆ ಮಾಡಿಸಿದ ಬೃಂದಾವನ ಏನು ಮಾಡುವುದು ಎಂದಾಗ, ಮುಂದೆ ಮಹಾಮಹಿಮ ಯತಿಯೊಬ್ಬರಿಗೆ ಇದು ಮೀಸಲು ಎಂದು ರಾಯರು ನಸು ನಕ್ಕಿದ್ದರು.

ಇದು ಅಂದಿನ ಶ್ರೀಮಠದ ಶಿಷ್ಯರು ಹಾಗೂ ದಿವಾನ್ ವೆಂಕಣ್ಣಯ್ಯ ಮತ್ತಿತರರಿಗೆ ಅರ್ಥವಾಗದ ವಿಷಯವಾಗಿತ್ತು. ಸ್ವತಃ ರಾಯರೇ ಮೀಸಲಿಟ್ಟ, ಅವರಿಗಿಂತ ಎತ್ತರದ ಬೃಂದಾವನವನ್ನು ಹೊಂದುವಂತಹ ಪುಣ್ಯಾತ್ಮರು ಯಾರು ಪೀಠಕ್ಕೆ ಬರುತ್ತಾರೆ ಎಂಬುದೇ ಕುತೂಹಲವಾಗಿತ್ತು.

ಶ್ರೀಹರಿಚಿತ್ತ ಸತ್ಯ ಎಂಬಂತೆ, ಆ ಕಾಲ ಬಂದೇ ಬಿಟ್ಟಿತು. ರಾಯರ ನಂತರ ಐದನೆಯವರಾಗಿ ರಾಯರು ವಿರಾಜಮಾನರಾಗಿದ್ದ, ವೇದಾಂತ ಸಾಮ್ರಾಜ್ಯ ಸಿಂಹಸಾನಾಧೀಶ್ವರರಾದ‌ ಶ್ರೀವಾದೀಂದ್ರತೀರ್ಥರೇ ಆ ಮಹಾನುಭಾವರು. ಇವರು ರಚಿಸಿದ ಗುರುಗುಣಸ್ತವನಾ ಎಂಬ ಮೇರು ಕೃತಿಯನ್ನು ರಾಯರ ಮೂಲ ಬೃಂದಾವನದ ಮುಂದೆ ಕುಳಿತು ಭಕ್ತಿಯಿಂದ ಪಠಿಸಿ, ರಾಯರಿಗೆ ಸಮರ್ಪಿಸಿದರು. ಇದರಿಂದ ರಾಯರಿಗೆ ಅಮೋಘವಾದ ಆನಂದ ಉಂಟಾಯಿತು. ಈ ವೇಳೆ ರಾಯರು ತಲೆದೂಗಿದ್ದರಿಂದ ಮೂಲ ವೃಂದಾವನ, ಅತ್ತಿತ್ತ ಲಗುವಾಗಿ ಓಲಾಡಿತು. ಆಗ ಅಲ್ಲಿ ನಡೆದ ಘಟನೆಗೆ ಸಾಕ್ಷಿಯಾದವರೆಲ್ಲ, ಓಹೋ ಇವರೇ ರಾಯರಿಗೆ ಅತ್ಯಂತ ಪ್ರೀತಿ ಪಾತ್ರರು ಎಂದು ನಿರ್ಧರಿಸಿದರು.

ಸಾಕಷ್ಟು ಮಹಿಮೆ ತೋರಿದ ಶ್ರೀವಾದೀಂದ್ರತೀರ್ಥ ಗುರುಸಾರ್ವಭೌಮರು, ತಮ್ಮ ಶಿಷ್ಯ ಶ್ರೀವಸುಧೇಂದ್ರತೀರ್ಥರಿಗೆ ಸಂಸ್ಥಾನದ ಜವಾಬ್ದಾರಿ ವಹಿಸಿದರು. 1750ರಲ್ಲಿ ಜೇಷ್ಠ ಮಾಸ, ಶುದ್ಧ ನವಮಿಯಂದು ತಮ್ಮ ಪೂರ್ವಾಶ್ರಮದ ಮುತ್ತಾತ ಹಾಗೂ ತುರ್ಯಾಶ್ರಮದ ಪರಮೇಷ್ಟಿ ಗುರುಗಳಾದ ರಾಯರ ಪಕ್ಕದಲ್ಲಿಯೇ ವೃಂದಾವನಸ್ಥರಾದರು. ಆಗ ಹಿಂದೆ ಸ್ವಯಂ ರಾಯರೇ ಮೀಸಲಿಟ್ಟಿದ್ದ ವೃಂದಾವನವನ್ನು ಇವರಿಗೆ ಸಮರ್ಪಿಸಲಾಯಿತು. ಇಂದಿಗೂ ಶ್ರೀ ರಾಘವೇಂದ್ರ ರಾಯರ ಪಾರ್ಶ್ವದಲ್ಲಿ ಅದೇ ಬೃಂದಾವನದಲ್ಲಿ ಶ್ರೀ ವಾದೀಂದ್ರತೀರ್ಥರು ವಿರಾಜಾನರಾಗಿ ರಾರಾಜಿಸುತ್ತಿದ್ದಾರೆ.

ಇಂತಹ ಮಹಾಮಹಿಮೋಪೇತರನ್ನು ಸ್ಮರಿಸೋಣ. , ಗುರುಗಳ ಪರಮಾನುಗ್ರಹ ನಮ್ಮೆಲ್ಲರ ಮೇಲಿರಲಿ…..

ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.

 
 
 
 
 
 
 
 
 
 
 

Leave a Reply