ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಮಾಧ್ಯಮ ಕಾರ್ಯಾಗಾರ

ಉಡುಪಿ : “ಆಧುನಿಕ ಕಾಲದಲ್ಲಿ ಮಾಧ್ಯಮ ಮನುಷ್ಯನ ಜೀವನದ ಮೇಲೆ ಅಗಾಧ ಪರಿಣಾಮ ಬೀರುತ್ತಿದೆ. ಮಾಧ್ಯಮಗಳಿಂದ ದೂರವಿರದೆ, ಅವುಗಳ ಮೂಲಕ ನಮ್ಮ ಒಳ್ಳೆಯ ಚಿಂತನೆಗಳನ್ನು ಹಾಗೂ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಪ್ರಚುರಗೊಳಿಸಿ, ಸಮಾಜಕ್ಕೆ ಸುಸಂದೇಶವನ್ನು ಮತ್ತು ಸತ್ಯವನ್ನು ತಲುಪಿಸಬೇಕಾದ ಅಗತ್ಯವಿದೆ. ಉಡುಪಿ ಧರ್ಮಪ್ರಾಂತ್ಯದ ಮಟ್ಟದಲ್ಲಿ ಇಂದಿನ ಮಾಧ್ಯಮ ಕಾರ್ಯಾಗಾರ ಒಂದು ಮಹತ್ತರ ಹೆಜ್ಜೆ” ಎಂದು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಟಗುರು ಅತಿ ವಂದನೀಯ ಫಾದರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಇವರು ನುಡಿದರು.

ಉಡುಪಿ ಧರ್ಮಪ್ರಾಂತ್ಯ, ದೀಪಾ ಟ್ರಸ್ಟ್, ಉಜ್ವಾಡ್ ಕೊಂಕಣಿ ಪಾಕ್ಷಿಕ, ಸಾಮಾಜಿಕ ಸಂಪರ್ಕ ಆಯೋಗ ಮತ್ತು ಸಿಗ್ನಿಸ್ ಇಂಡಿಯಾ ವತಿಯಿಂದ ಅಂಬಾಗಿಲು ಬಳಿಯ ಅನುಗ್ರಹ ಪಾಲನಾ ಕೇಂದ್ರದಲ್ಲಿ ನಡೆದ ‘ಚರ್ಚ್ ಮತ್ತು ಮಾಧ್ಯಮ’ ಎಂಬ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ತಮ್ಮ ಸಂದೇಶವನ್ನು ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಧರ್ಮಪ್ರಾಂತ್ಯದ ಕುಲಪತಿ ಅತಿ ವಂದನೀಯ ಡೊ. ರೋಶನ್ ಡಿಸೋಜಾರವರು, “ಇದು ಮಾಧ್ಯಮದ ಯುಗವಾಗಿದ್ದು, ಕಥೊಲಿಕ್ ಧರ್ಮಸಭೆ ಇದರಿಂದ ಹೊರತಾಗಿರುವುದು ಸಾಧ್ಯವಿಲ್ಲ.

ಧರ್ಮಸಭೆಯು ನಡೆಸುವ ಕಾರ್ಯಕ್ರಮಗಳು ಮಾಧ್ಯಮಗಳಲ್ಲಿ ಕಾಣಲು ಸಿಗುವುದು ವಿರಳ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಮಾಧ್ಯಮದ ಮೂಲಕ ಸಾವಿರಾರು ಜನರನ್ನು ಸುಲಭವಾಗಿ ಸಂಪರ್ಕಿಸುತ್ತವೆ. ಧರ್ಮಸಭೆ ಮಾಧ್ಯಮದಲ್ಲಿ ತಮ್ಮ ಇರುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ನೀಡುವಂತಾಗಬೇಕು” ಎಂದು ನುಡಿದರು.

ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂದನೀಯ ಫಾದರ್ ಡೆನಿಸ್ ಡೆಸಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸಂದೇಶ ಫೌಂಡೇಶನ್ ಮಂಗಳೂರು ಇದರ ನಿರ್ದೇಶಕರಾದ ಫಾದರ್ ಸುದೀಪ್ ಪೌಲ್, ಕೆಪಿಎಸ್‍ಸಿ ಸದಸ್ಯರಾದ ಡೊ. ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ವಾರ್ತಾ ಇಲಾಖೆಯ ಸಹಾಯಕ ಆಯುಕ್ತೆ ರೋಹಿಣಿ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾದ ಫಾದರ್ ಸುದೀಪ್ ಪೌಲ್ ಪ್ರಸ್ತುತ ಕಾಲಘಟ್ಟದಲ್ಲಿ ಚರ್ಚ್ ಮತ್ತು ಮಾಧ್ಯಮದ ಸಂಬಂಧದ ಕುರಿತಾಗಿ, ಕೆಪಿಎಸ್ಸಿ ಸದಸ್ಯ ರೊನಾಲ್ಡ್ ಅನಿಲ್ ಫೆರ್ನಾಂಡಿಸ್‍ರವರು ಚರ್ಚ್ ಮತ್ತು ಮುದ್ರಣ ಮಾಧ್ಯಮದ ಕುರಿತಾಗಿ, ದಾಯ್ಜಿವರ್ಲ್ಡ್ ಮಾಧ್ಯಮದ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆಯವರು ಚರ್ಚ್ ಮತ್ತು ವೆಬ್-ಸೋಷಿಯಲ್ ಮೀಡಿಯಾ ಕುರಿತಾಗಿ ಮತ್ತು ಟಿವಿ 9 ಗ್ರೂಪ್‍ನ ನಿರ್ದೇಶಕರಾದ ಕ್ಲಿಫರ್ಡ್ ಪಿರೇರಾ ಚರ್ಚ್ ಮತ್ತು ದೃಶ್ಯ ಮಾಧ್ಯಮದ ಕುರಿತಾಗಿ ಉಪನ್ಯಾಸ ನೀಡಿದರು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. “ಉಡುಪಿ ಧರ್ಮಪ್ರಾಂತ್ಯವು ಇದೀಗ 11 ವರ್ಷಗಳನ್ನು ಪೂರ್ಣಗೊಳಿಸುತ್ತಿದೆ. ಮಾಧ್ಯಮವಿಲ್ಲದ ಜೀವನವನ್ನು ಊಹಿಸಲು ಕೂಡಾ ಸಾಧ್ಯವಿಲ್ಲ. ಈ 11 ವರ್ಷಗಳಲ್ಲಿ ಉಡುಪಿ ಧರ್ಮಪ್ರಾಂತ್ಯವು ಉಡುಪಿಯ ಮಾಧ್ಯಮ ಮಿತ್ರರೊಂದಿಗೆ ಉತ್ತಮ ಬಾಂಧವ್ಯವನ್ನು ಇರಿಸಿಕೊಂಡಿದೆ.

ಇಂದಿನ ಕಾರ್ಯಾಗಾರದ ಪ್ರೇರಣೆಯಿಂದ ನಾವೆಲ್ಲರೂ ಜೊತೆಗೂಡಿ ಮಾಧ್ಯಮದ ಸದುಪಯೋಗಪಡಿಸಿದಲ್ಲಿ, ನಮ್ಮ ಧರ್ಮಪ್ರಾಂತ್ಯ ಕೂಡಾ ಮಾಧ್ಯಮ ರಂಗದಲ್ಲಿ ಉನ್ನತ ಮಟ್ಟಕ್ಕೇರಲು ಸಾಧ್ಯವಿದೆ. ಪ್ರಭು ಯೇಸುಕ್ರಿಸ್ತರು ಅತಿ ಉತ್ತಮ ಸಂವಹನಕಾರರಾಗಿದ್ದರು. ಅವರು ಈ ಭೂ ಲೋಕದಲ್ಲಿ ದೇವರ ಶುಭ ಸುವಾರ್ತೆಯನ್ನು ಸಾರಲು ಬಂದವರಾಗಿದ್ದರು. ಪ್ರಭು ಯೇಸು ಕ್ರಿಸ್ತರ ಅನುಯಾಯಿಗಳಾದ ನಾವು ಕೂಡಾ ಶುಭ ಸುದ್ದಿಯನ್ನು ನೀಡುವಂತಾಗಲಿ” ಎಂದು ಅವರು ನುಡಿದರು.

ಮುಖ್ಯ ಅತಿಥಿ ಸಿಗ್ನಿಸ್ ಇಂಡಿಯಾ ಇದರ ಅಧ್ಯಕ್ಷರಾದ ವಂದನೀಯ ಫಾದರ್ ವಿಕ್ಟರ್ ವಿಜಯ್ ಲೋಬೋ ಮಾತನಾಡಿ “ಮಾಧ್ಯಮಗಳಲ್ಲಿ ನಾವು ಸತ್ಯವನ್ನು ಬಿತ್ತರಿಸಬೇಕು. ಇಂದಿನ ಕಾರ್ಯಾಗಾರದ ಬಳಿಕ ನಾವು ಮತ್ತೊಬ್ಬರು ಪ್ರತಿಕ್ರಿಯೆ ನೀಡುವ ತನಕ ಕಾಯುವುದು ಬೇಡ, ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸುವ ಪರಿಪಾಠವನ್ನು ಬೆಳೆಸೋಣ. ಸತ್ಯವನ್ನು ಪ್ರಚುರಪಡಿಸೋಣ, ಇಂದು ಸತ್ಯವನ್ನು ಹೇಳಬೇಕಾದ ಅವಶ್ಯಕತೆ ಇದೆ” ಎಂದರು.

ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಲ್ಯಾಣಪುರ ಮಿಲಾಗ್ರಿಸ್ ಕೆಥೆದ್ರಲ್‍ನ ರೆಕ್ಟರ್ ಫಾದರ್ ವಲೇರಿಯನ್ ಮೆಂಡೋನ್ಸಾ ರವರು “ಪ್ರಸ್ತುತ ಧರ್ಮಸಭೆಯ ಮುಖ್ಯಸ್ಥರ ಮೇಲೆ ಗುರುತರವಾದ ಜವಾಬ್ದಾರಿಯಿದ್ದು, ನಾವು ಸಂವಹನ ನಡೆಸುವಾಗ ಅತಿ ಜಾಗರೂಕರಾಗಿ ಇರಬೇಕಾಗುತ್ತದೆ. ನಾವು ಮಾಧ್ಯಮಗಳನ್ನು ಉತ್ತಮ ಕಾರ್ಯಕ್ಕಾಗಿ ಬಳಸಬೇಕು. ನಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಮುಖೇನ ತಿಳಿಸುವುದು ಅತಿ ಅಗತ್ಯ ಮಾತ್ರವಲ್ಲದೇ ಸತ್ಯವನ್ನು ಅರಿಯುವ ಜವಾಬ್ದಾರಿಯನ್ನು ಕೂಡಾ ನಾವು ಹೊಂದಿದ್ದೇವೆ” ಎಂದರು.

ಈ ಸಂದರ್ಭದಲ್ಲಿ ಉಜ್ವಾಡ್ ಪಾಕ್ಷಿಕದ ಸಂಪಾದಕರಾದ ವಂದನೀಯ ಫಾದರ್ ರೊಯ್ಸನ್ ಫೆರ್ನಾಂಡಿಸ್‍ರವರ ಸಣ್ಣ ಕಥೆಗಳ ಚೊಚ್ಚಲ ಪುಸ್ತಕ ‘ಪಯ್ಲಿ ಭೆಟ್’ ಅನ್ನು ಧರ್ಮಾಧ್ಯಕ್ಷರು ಲೋಕಾರ್ಪಣೆಗೊಳಿಸಿದರು. ವಂದನೀಯ ಫಾದರ್ ಆಲ್ವಿನ್ ಸಿಕ್ವೇರಾ ಮತ್ತು ಜೋಶಿತಾ ಮಿನೇಜಸ್ ಕಾರ್ಯಕ್ರಮ ನಿರ್ವಹಿಸಿದರು. ಉಜ್ವಾಡ್ ಕೊಂಕಣಿ ಪಾಕ್ಷಿಕದ ಸಂಪಾದಕರಾದ ಫಾದರ್ ರೊಯ್ಸನ್ ಫೆರ್ನಾಂಡಿಸ್ ವಂದಿಸಿದರು.

 
 
 
 
 
 
 
 
 
 
 

Leave a Reply