ದೇವರು ಎಲ್ಲೆಡೆ ಇದ್ದಾನೆಂದು ತಿಳಿದವನೇ ಭಕ್ತ~ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ

ಮೈಸೂರು: ದೇವರು ಎಲ್ಲೆಡೆ ಇದ್ದಾನೆ ಎಂದು ತಿಳಿದವನೇ ನಿಜವಾದ ಭಕ್ತ ಎಂದು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ನುಡಿದರು. ನಗರದ ಅಗ್ರಹಾರದಲ್ಲಿರುವ ಉತ್ತರಾದಿಮಠದ ಶ್ರೀ ಧನ್ವಂತ್ರಿ ಸನ್ನಿಧಾನದಲ್ಲಿ `ಶ್ರೀ ಧನ್ವಂತರಿ ಪ್ರಾದುರ್ಭಾವ ಉತ್ಸವ’ ದ ಎರಡನೇ ದಿನ ಅವರು ವಿಶೇಷ ಆಶೀರ್ವಚನ ನೀಡಿದರು.
ದೇವರು ಕೇವಲ ಗುಡಿ, ಗುಂಡಾರ, ಮಠ, ಪ್ರತಿಮೆಗಳಲ್ಲಿ ಮಾತ್ರ ಇಲ್ಲ. ಆತ ಸರ್ವವ್ಯಾಪ್ತ ಎಂದು ಶ್ರೀಮದ್ ಭಾಗವತ ಹೇಳುತ್ತದೆ. ನಿಜವಾದ ಭಕ್ತನಾದವನು ತನ್ನನ್ನು ತಾನು ಮೊದಲು ತಿಳಿದಾಗ ದೇವರ ಬಗ್ಗೆ ಅರಿವು ಮೂಡುತ್ತದೆ. ಆಗ ಭಕ್ತ ಭಾಗವತೋತ್ತಮನಾಗುವ ಮಟ್ಟಕ್ಕೆ ಏರುತ್ತಾನೆ ಎಂದು ಅವರು ಹೇಳಿದರು.
ಎಲ್ಲರೂ- ಎಲ್ಲವೂ ಸಮಾನ ಎಂಬ ವಾದ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದು ನೈಸರ್ಗಿಕವಾಗಿ ಎಂದಿಗೂ ಸಾಧ್ಯವೇ ಇಲ್ಲ. ಕಲ್ಲು, ವಜ್ರ, ಮಣ್ಣು- ಇವುಗಳಿಗೆ ಭೇದ ಇದೆ. ಸಮಾನ ಎಂದ ಮಾತ್ರಕ್ಕೆ ಬೇಳೆಯಷ್ಟೇ ಸಮನಾಗಿ ಉಪ್ಪನ್ನೂ ಹಾಕಿದರೆ ಸಾರು ರುಚಿಸುವುದಿಲ್ಲ. ದೇವತೆಗಳಲ್ಲೂ ಸಾಮ್ಯ ಎಂಬುದು ಇಲ್ಲ.
ಒಬ್ಬೊಬ್ಬರಿಗೆ ಒಂದೊ೦ದು ಶಕ್ತಿ, ಜವಾಬ್ದಾರಿಗಳಿರುತ್ತವೆ. ಈ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಭಕ್ತನ ಲಕ್ಷಣ ಎಂದು ಅವರು ಹೇಳಿದರು. ದೇವರು ದುರ್ಯೋಧನ, ರಾವಣಾದಿಗಳಿಗೆ ಅಜ್ಞಾನವನ್ನು ಕೊಟ್ಟ. ದ್ವೇಶವನ್ನು ಕೊಟ್ಟ. ರಾಮ, ಅರ್ಜುನ, ಭೀಮಾದಿ ಗಳಿಗೆ ಸುಗುಣಗಳನ್ನೇ ತುಂಬಿದ. ಸುಗುಣ- ದುರ್ಗುಣಗಳು ನಮ್ಮ ನಮ್ಮ ಪೂರ್ವಜನ್ಮದ ಪುಣ್ಯದ ಫಲವಾಗಿ ದೇವರಿಂದ ಕೊಡಲ್ಪಡುತ್ತವೆ. ಎಲ್ಲವೂ ದೇವರಿಂದಲೇ ಆಗುತ್ತದೆ. ಹಾಗಾಗಿ ಮಾನವ ಜನ್ಮ ಬಂದಿರುವಾಗ ಸತ್ಕಾರ್ಯಗಳನ್ನೇ ಮಾಡಬೇಕು. ಸಜ್ಜನರಿಗೆ ಒಳಿತಾಗಲಿ ಎಂದೇ ಬಯಸಬೇಕು.
ಎಲ್ಲಿ ನಿಜವಾದ ಪ್ರೀತಿ ಮತ್ತು ಅಭಿಮಾನಗಳು ಇರುವುದೋ ಅಲ್ಲಿ ಮಾತ್ರ ದೇವರ ಸನ್ನಿಧಿ ಇರಲು ಸಾಧ್ಯ. ಸುಖ ಮತ್ತು ಪ್ರೀತಿ ಇಲ್ಲ ಎಂದರೆ ಒಬ್ಬ ವ್ಯಕ್ತಿ ತನ್ನ ಪತ್ನಿ ಮತ್ತು ಮಕ್ಕಳನ್ನೇ ತ್ಯಾಗ ಮಾಡಲು ಮುಂದಾಗುತ್ತಾನೆ. ಹಾಗಿರುವಾಗ ನಾನು, ನನ್ನದು, ನನ್ನವರು ಎಂಬಲ್ಲೆಲ್ಲಾ ನಿಷ್ಕಲ್ಮಶ ಪ್ರೀತಿ ಇರಬೇಕು. ಎಲ್ಲರೂ ನಮ್ಮ ಮೇಲೆ ಅಭಿಮಾನ ಇರಿಸಿರುವ ಕಾರಣಕ್ಕಾಗಿಯೇ ನಾವು ಬದುಕುತ್ತೇವೆ. ಇಲ್ಲದಿದ್ದರೆ ಜಿಗುಪ್ಸೆ ಮೂಡಿ ಬದುಕೇ ಸಾಕು ಎಂಬ ಭಾವ ಬರುತ್ತದೆ.
ಆದಕಾರಣ ನಾವು ಪ್ರೀತಿಯ ಪ್ರತಿಮೆಗಳಾಗಬೇಕು. ಆಗ ಮಾತ್ರ ನಿಜವಾದ ಭಕ್ತರಾಗಲು ಸಾಧ್ಯ ಎಂದು ಸತ್ಯಾತ್ಮತೀರ್ಥರು ಹೇಳಿದರು. ಅಹಂಕಾರ ಮೂಡಿಸಿಕೊಂಡು ಇತರರನ್ನು ತಿರಸ್ಕಾರ ಮಾಡಬಾರದು ಎಂದು ಸ್ವಾಮೀಜಿ ಸಂದೇಶ ನೀಡಿದರು.ಇದೇ ಸಂದರ್ಭ ಶ್ರೀಗಳಿಗೆ ಪವಿತ್ರ ಕ್ಷೇತ್ರ ಬದರೀನಾಥದಲ್ಲಿ ದೇವರಿಗೆ ಸಮರ್ಪಿಸಿದ ವಸ್ತು, ಪ್ರಸಾದ, ಅಲಕನಂದಾ-ಗ೦ಗಾ-ಸರಸ್ವತಿ ತೀರ್ಥಗಳನ್ನು ಸಮರ್ಪಿಸಲಾಯಿತು.

ಮಧ್ವರ ಬಗ್ಗೆ ತಪ್ಪು ತಿಳಿವಳಿಕೆ ಸಲ್ಲ~ ವಿಶ್ವಕ್ಕೆ ಪೂರ್ಣಪ್ರಜ್ಞ ದೃಷ್ಟಿಯನ್ನು ನೀಡಿದ ಆಚಾರ್ಯ ಮಧ್ವರ ಬಗ್ಗೆ ಅನೇಕರು ತಪ್ಪು ತಿಳಿದಿದ್ದಾರೆ. ಟೀಕೆ ಮಾಡುತ್ತಾರೆ. ಇವರೆಲ್ಲರೂ ಮೊದಲು ಆಚಾರ್ಯ ಮಧ್ವರ ದ್ವೈತ ಸಿದ್ಧಾಂತವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಪರಮ ಸತ್ಯವಾದ ಶಾಸ್ತ್ರೀಯ ತತ್ವ ಹೇಳಿ ಜಗತ್ತಿಗೆ ಬೆಳಕು ನೀಡಿದ ಮಹಾನ್ ಯತಿಯ ಜ್ಞಾನಧಾರೆಯನ್ನು ಅರಿಯಬೇಕು. ನಂತರ ಚರ್ಚೆ ಮಾಡಿದರೆ ಸ್ವಾಗತಾರ್ಹ ಎಂದು ಶ್ರೀ ಸತ್ಯಾತ್ಮತೀರ್ಥರು ಹೇಳಿದರು.

ಯಾರೂ ಅಧಮರಾಗಬೇಡಿ: ಬೆಳಗ್ಗೆ ಬೇಗನೆ ಏಳುವುದು ನಮ್ಮ ಆತ್ಮಸಾಧನೆಗಾಗಿ. ಪರರ ನಿಂದನೆಗಾಗಿ ಅಲ್ಲ. ಯಾರು ಇತರರನ್ನು ಉದಾಸೀನ, ಉಪೇಕ್ಷೆ, ತಿರಸ್ಕಾರ ಮಾಡುತ್ತಾರೆಯೋ ಅವರು ಅಧಮರಾಗುತ್ತಾರೆ, ಅಧೋಗತಿಗೆ ಹೋಗುತ್ತಾರೆ ಎಂದು ಭಾಗವತ ಹೇಳಿದೆ. ಈ ಬಗ್ಗೆ ದಿನವೂ ನಮ್ಮಲ್ಲಿ ಎಚ್ಚರ ಇರಬೇಕು. ಸಜ್ಜನರನ್ನು ಬೆಂಬಲಿಸುವ ಮೂಲಕ ಸನ್ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕ ಎಂಬುದೇ ನಮ್ಮೆಲ್ಲರ ಧ್ಯೇಯವಾಗಬೇಕು. ಆಗ ಬದುಕಿದ್ದಕ್ಕೂ ಸಾರ್ಥಕ ಎಂದು ಶ್ರೀ ಸತ್ಯಾತ್ಮರು ನುಡಿದರು.

 
 
 
 
 
 
 
 
 
 
 

Leave a Reply