ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹುಟ್ಟೂರು ಎರಟಾಡಿ ವಿಷ್ಣುಮೂರ್ತಿ ದೇವರಿಗೆ ನೂತನ ರಥ , ಆವರಣ ಗೋಡೆ ಸಮರ್ಪಣೆ .

ಪದವಿಭೂಷಣ ಪುರಸ್ಕೃತ ಹಿರಿಯ ಸಂತ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹುಟ್ಟೂರು ದ ಕ‌ ಜಿಲ್ಲೆ ಕಡಬ ತಾಲೂಕು ಹಳೇನೇರಂಕಿ ಗ್ರಾಮದ ಎರಟಾಡಿ ಶ್ರೀ ವಿಷ್ಣುಮೂರ್ತಿ ದೇವರಿಗೆ ನೂತನವಾಗಿ ನಿರ್ಮಿಸಲಾಗಿರುವ ಚಂದ್ರಮಂಡಲ ರಥ ಹಾಗೂ ದೇವಾಲಯಕ್ಕೆ ನಿರ್ಮಿಸಲಾದ ಆವರಣಗೋಡೆ ಯ ಸಮರ್ಪಣೆ ಕಾರ್ಯಕ್ರಮಗಳು ಭಾನುವಾರ ಸೋಮವಾರ ನೆರವೇರಿತು .
ರಾಜ್ಯ ಮುಜರಾಯಿ ಇಲಾಖೆಯ ಇಪ್ಪತ್ತು ಲಕ್ಷ ರೂ ಅನುದಾನ‌ ಹಾಗೂ ಭಕ್ತರ ನೆರವಿನಿಂದ ಈ ನಿರ್ಮಾಣಗಳು ನಡೆದಿವೆ .

ಭಾನುವಾರ ಸಂಜೆ ರಾಜ್ಯ ಬಂದರು ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಮಂತ್ರಿ ಎಸ್ ಅಂಗಾರ ಅವರು ಕ್ಷೇತ್ರಕ್ಕೆ ಇದೇ ಮೊದಲಬಾರಿಗೆ ಆಗಮಿಸಿ ಆವರಣಗೋಡೆಯನ್ನು ಉದ್ಘಾಟಿಸಿ , ದೇವರ ದರ್ಶನ‌ಪಡೆದು ಪ್ರಸಾದ ಸ್ವೀಕರಿಸಿ ದೇವಳದ ಪರಿಸರವನ್ನು ಕಂಡು ಹಾಗೂ ನೂತನ ರಥವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು .‌

ಪ್ರಸಿದ್ಧ ಆಗಮ ವಿದ್ವಾಂಸ ಪಂಜ ಭಾಸ್ಕರ ಭಟ್ , ದೇವಳದ ಆಡಳಿತ ಮೊಕ್ತೇಸರ ಹರಿನಾರಾಯಣ ಆಚಾರ್ಯ , ಪೇಜಾವರ ಮಠದ ದಿವಾನರಾದ ಎಂ ರಘುರಾಮಾಚಾರ್ಯ , ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಪ್ರಮುಖರಾದ ನಾರಾಯಣ ಭಟ್ ಹಳೇನೇರಂಕಿ ಗ್ರಾ ಪಂ ಅಧ್ಯಕ್ಷೆ ಮಾಲತಿ‌ಕದ್ರ ಮಾಜಿ ತಾ ಪಂ ಸದಸ್ಯೆ ತೇಜಸ್ವಿನಿ ಕಟ್ಟಪುಣಿ , ಮಾಜಿ ಗ್ರಾ ಪಂ ಅಧ್ಯಕ್ಷ ಪ್ರಶಾಂತ್ ಆರ್ ಕೆ , ಗ್ರಾಮ ಲೆಕ್ಕಿಗ ಶೇಷಾದ್ರಿ , ದೇವಳದ ಅರ್ಚಕ ಸುಧೀಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು .

ತಾಳ ಹಿಡಿದು ಭಜನೆಗೈದ ಸಚಿವ ಅಂಗಾರ !!!:
ಬಳಿಕ ದೇವಳದ ಆವರಣದಲ್ಲಿ ಯುವಕರು ನಡೆಸುತ್ತಿದ್ದ ಭಜನೆಯಲ್ಲಿ ಪಾಲ್ಗೊಂಡ ಸಚಿವ ಅಂಗಾರ ಸುಮಾರು ಅರ್ಧಘಂಟೆ ತಾವೂ ತಾಳ ಹಿಡಿದು ಭಜನೆಗಳನ್ನು ಹಾಡಿ ಭಕ್ತಿ ಮೆರೆದರು .

ಸೋಮವಾರ ಬೆಳಿಗ್ಗೆ ದೇವರಿಗೆ ವಿಶೇಷ ಶುದ್ಧ ಪ್ರಾಯಶ್ವಿತ್ತ ಹೋಮ ಹಾಗೂ ಕಲಶಾಭಿಷೇಕ ಸಹಿತ ಮಹಾಪೂಜೆಗಳು ಪಂಜ ಭಾಸ್ಕರ ಭಟ್ಟರ ನೇತೃತ್ವದಲ್ಲಿ ನಡೆದವು .

ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಆಗಮಿಸಿ ನೂತನ ಚಂದ್ರಮಂಡಲರಥವನ್ನು ದೇವರಿಗೆ ಅರ್ಪಿಸಿ ಶಿಲಾಫಲಕ ಅನಾವರಣಗೊಳಿಸಿ , ಭಿಕ್ಷೆ ಗುರುಪೂಜೆ ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದರು .

ನೂರಾರು ಭಕ್ತರು ಆಗಮಿಸಿ ದೇವರ ಪ್ರಸಾದ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು .

ರಾಮಕುಂಜೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಧಾಕೃಷ್ಣ ಕೆ ಎಸ್ ವಿಷ್ಣುಮೂರ್ತಿ ಆಚಾರ್ಯ ಕೃಷ್ಣ ಭಟ್ , ವಾಸುದೇವ ಭಟ್ ಪೆರಂಪಳ್ಳಿ , ಎಸ್ ವಿ ಭಟ್ ಮೊದಲಾದವರು ಉಪಸ್ಥಿತರಿದ್ದರು .

 
 
 
 
 
 
 
 
 
 
 

Leave a Reply