ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಂತರರಾಷ್ಟ್ರೀಯ ಸರಣಿ ವೆಬಿನಾರ್

 ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ರಕ್ತ ಕೇಂದ್ರವು ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಅಂತರರಾಷ್ಟ್ರೀಯ ವೆಬಿನಾರ್ ಕಾರ್ಯಕ್ರಮ ಆಯೋಜಿಸಿತ್ತು.  

ಏಪ್ರಿಲ್ 27 ರಿಂದ 29 ರವರೆಗೆ ನಡೆದ ಈ ಸರಣಿ ವೆಬಿನಾರ್ ಕಾರ್ಯಕ್ರಮವು ಬಾಂಗ್ಲಾದೇಶ, ಇಂಡೋನೇಷ್ಯಾ, ಮಾಲ್ಡೀವ್ಸ್, ನೇಪಾಳ ದೇಶಗಳಲ್ಲಿ ರಕ್ತ ವರ್ಗಾವಣೆ ಸೇವೆಗಳಲ್ಲಿ ತೊಡಗಿರುವ ಆರೋಗ್ಯ ರಕ್ಷಣೆ ನೀಡುಗರಿಗೆ ಗುಣಮಟ್ಟದ ಮಾಹಿತಿಯನ್ನು ನೀಡುವ ಗುರಿಯನ್ನು ಹೊಂದಿತ್ತು.

ಆರಂಭಿಕ ನುಡಿಗಳೊಂದಿಗೆ ವೆಬಿನಾರ್ ಗೆ ಚಾಲನೆ ನೀಡಿದ ಡಬ್ಲ್ಯೂ ಎಚ್ ಓ – ಸೇರೋ (WHO-SEARO) ನ ಪ್ರಾದೇಶಿಕ ಸಲಹೆಗಾರರಾದ ಡಾ.ಅಪರ್ಣ ಸಿಂಗ್ ಷಾ, “ರಕ್ತ ವರ್ಗಾವಣೆಯ ಸಂದರ್ಭದಲ್ಲಿ ಹರಡುವ ಸೋಂಕುಗಳ ಪರೀಕ್ಷೆಯ ಗುಣಮಟ್ಟವನ್ನು ಹೆಚ್ಚಿಸಲು ತಾಂತ್ರಿಕ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ” ಎಂದು ಹೇಳಿದರು.

 ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ.ಶರತ್ ಕೆ ರಾವ್ ಮಾತನಾಡಿ, “ಇಡೀ ಪ್ರಪಂಚವು ಇನ್ನೂ ಸಾಂಕ್ರಾಮಿಕ ಲೋಕದಲ್ಲಿ ನಿಂತಿದ್ದರೂ, ತಾವೆಲ್ಲ ಆರೋಗ್ಯ ವೃತ್ತಿಪರರಾಗಿ, ಒಂದು ಹೆಜ್ಜೆ ಹಿಂದಕ್ಕೆ ಸರಿಯುವ ಬದಲು ಹೊಸ ಹೊಸ ಮಾಹಿತಿ, ತಂತ್ರಜ್ಞಾನ ಮತ್ತು ಸಂಪನ್ಮೂಲಗಳೊಂದಿಗೆ ನಮ್ಮ ಜ್ಞಾನದ ಮಟ್ಟವನ್ನು ವೃದ್ಧಿಸಿಕೊಳ್ಳಲು ಅತ್ಯುತ್ತಮವಾಗಿ ಪ್ರಯತ್ನಿಸುತ್ತಿರುವುದು ನನಗೆ ಸಂತೋಷವಾಗಿದೆ” ಎಂದರು.

ರಕ್ತ ಕೇಂದ್ರದ ನಿರ್ದೇಶಕಿ ಡಾ.ಶಮೀ ಶಾಸ್ತ್ರಿ ಅವರು ವಿಶ್ವ ಆರೋಗ್ಯ ಸಂಸ್ಥೆಯ ಆನ್ ಲೈನ್ ಪೈಲಟ್ ತರಬೇತಿ ಕಾರ್ಯಕ್ರಮವನ್ನು ಏಷ್ಯನ್ ಅಸೋಸಿಯೇಷನ್ ಆಫ್ ಟ್ರಾನ್ಸ್ಫ್ಯೂಷನ್ ಮೆಡಿಸಿನ್ ನ ಸಹಯೋಗದೊಂದಿಗೆ ನಡೆಸಲು ಮುಂದಾಳತ್ವ ವಹಿಸಿದ್ದರು.ಈ ಪ್ರಕ್ರಿಯೆಗಳ ಪ್ರಮುಖ ಭಾಗವೆಂದರೆ ವರ್ಗಾವಣೆ ಸಂದರ್ಭದಲ್ಲಿ ಹರಡುವ ಸೋಂಕುಗಳ ತಪಾಸಣೆ. ಸೋಂಕಿನ ತಪಾಸಣೆಯ ಗುಣಮಟ್ಟದ ಭರವಸೆಗಾಗಿ ಆಳವಾದ ಪರಿಗಣನೆಯನ್ನು ನೀಡುವುದು ಈ ಸಮಯದ ಅವಶ್ಯಕತೆಯಾಗಿದೆ” ಎಂದರು.

ಈ ತರಬೇತಿಯು ಆಸಕ್ತಿದಾಯಕ ಮತ್ತು ತಿಳಿವಳಿಕೆ ಉಪನ್ಯಾಸ , ಸಂವಾದ ಮತ್ತು ವೀಡಿಯೊ ಪ್ರದರ್ಶನಗಳನ್ನು ಒಳಗೊಂಡಿತ್ತು. ವಿಶ್ವದಾದ್ಯಂತದ 38 ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು.ವಿಶ್ವ ಅರೋಗ್ಯ ಸಂಸ್ಥೆ ಸಹಯೋಗ ಕೇಂದ್ರವಾಗಿರುವ ಆಸ್ಟ್ರೇಲಿಯಾದ ರಾಷ್ಟ್ರೀಯ ಉಲ್ಲೇಖ ಪ್ರಯೋಗಾಲಯದ ಸಂಪನ್ಮೂಲ ವ್ಯಕ್ತಿಗಳು ತಮ್ಮ ಜ್ಞಾನ ಮತ್ತು ಪರಿಣತಿಯನ್ನು ಹಂಚಿಕೊಂಡರು.ಇಂತಹ ಅಂತರರಾಷ್ಟ್ರೀಯ ವೆಬಿನಾರ್ ಸರಣಿಯನ್ನು ಯಶಸ್ವಿಯಾಗಿ ಆಯೋಜಿಸಿದ ಕಸ್ತೂರ್ಬಾ ಆಸ್ಪತ್ರೆ ರಕ್ತ ಕೇಂದ್ರದ ತಂಡವನ್ನು ಮುಖ್ಯ ನಿರ್ವಹಣಾಧಿಕಾರಿಗಳಾದ ಶ್ರೀ ಸಿ ಜಿ ಮುತ್ತನ ಮತ್ತು ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ಶ್ಲಾಘಿಸಿದರು.

 
 
 
 
 
 
 
 
 
 
 

Leave a Reply