ತಿಮ್ಮಪ್ಪ.. ಮಣಿಕಂಠ~ ಪಿ.ಲಾತವ್ಯ ಆಚಾರ್ಯ.ಉಡುಪಿ.

ಶ್ರಾವಣಮಾಸ ಆರಂಭ ಆಗ್ತಾ ಇದೆ. ಈ ನಿಮಿತ್ತ ತಿಮ್ಮಪ್ಪನ ಮಹಿಮೆಯ ಕುರಿತ ಪುಟ್ಟಕತೆ ನಿಮಗಾಗಿ ಮೂಡಿ ಬರುತ್ತಿದೆ. ಜೊತೆಗೆ ಶ್ರೀಶಿರೂರುಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ಶ್ರಾವಣಮಾಸದ ಪರ್ವಕಾಲದಲ್ಲಿ ಉಡುಪಿ ಶ್ರೀಕೃಷ್ಣದೇವರಿಗೆ ಸಲ್ಲಿಸುತ್ತಿದ್ದ ತಿರುಪತಿ ಶ್ರೀನಿವಾಸದೇವರ ಅಪೂರ್ವ ಅಲಂಕಾರದ ಭಾವಚಿತ್ರವನ್ನು ಕೂಡಾ ಇಲ್ಲಿ ಪ್ರಸ್ತುತ ಪಡಿಸು ತ್ತಿದ್ದೇವೆ.
ಉತ್ತರ ಕೇರಳದ ಕಂಬನ್ ಸಾಮ್ರಾಜ್ಯಕ್ಕೆ ಮಣಿಕಂಠನ ದರೋಡೆ, ಕಳ್ಳತನ ದೊಡ್ಡ ಸವಾಲಾಗಿತ್ತು. ನಡುರಾತ್ರಿಯಲ್ಲಿ ದೇವಾಲಯಕ್ಕೆ ಮಣಿಕಂಠನು ನುಗ್ಗಿದರೆ ದೇವರ ಗರ್ಭಗೃಹ ದಲ್ಲಿದ್ದ ಎಲ್ಲಾ ಚಿನ್ನಾಭರಣಗಳನ್ನು ಬಾಚಿಬಳಿದು ಹೋಗುತ್ತಿದ್ದ. ದೇವಾಲಯ ದೋಚುವು ದರಲ್ಲಿ ಈತ ಪರಿಣತಿ ಹೊಂದಿದ್ದ.
ಈತನನ್ನು ಪತ್ತೆಹಚ್ಚಲು ನಡೆಸಿದ ಪ್ರಯತ್ನವೆಲ್ಲವೂ ವಿಫಲವಾಗಿತ್ತು. ಆತನ ಗುರುತು ಹಿಡಿಯಲೂ ಕೂಡಾ ಸೈನಿಕರಿಗೆ ಸಾದ್ಯವಾಗಿರಲಿಲ್ಲ. ಒಮ್ಮೆ ನಡುರಾತ್ರಿ ಜೋರಾದ ಮಳೆ ಹೊಡೆಯುತ್ತಿತ್ತು. ಕಳ್ಳ ಮಣಿಕಂಠನು ಕಲ್ಲಂಪುರದ ತಿಮ್ಮಪ್ಪನ ದೇವಾಲಯಕ್ಕೆ ನುಗ್ಗಿ ಗರ್ಭಗೃಹ ಪ್ರವೇಶಿಸಿದ.
ದೀಪದ ಮಂದ ಬೆಳಕಿನಲ್ಲಿ ಎಂಟುಅಡಿ ಎತ್ತರದ ತಿಮ್ಮಪ್ಪನ ಪ್ರತಿಮೆಯು ವಜ್ರ ವೈಢೂರ್ಯ ಚಿನ್ನಾಭರಣಗಳಿಂದ ಕಂಗೊಳಿಸುತ್ತಿತ್ತು.
ಮಣಿಕಂಠನ ಸಂತೋಷಕ್ಕೆ ಪಾರವೇ ಇರಲಿಲ್ಲ. ತನ್ನಲ್ಲಿದ್ದ ದೊಡ್ಡ ಚೀಲವನ್ನು ತೆರೆದು ದೇವರ ಆಭರಣಕ್ಕೆ ಕೈಯಿಕ್ಕುವ ಕ್ಷಣದಲ್ಲಿ ಏನೋ ಸದ್ದಾಯಿತು. ಮಣಿಕಂಠನು ಒಂದುಕ್ಷಣ ದಂಗಾದ.
ಗರ್ಭಗೃಹದ ಮೂಲೆಯಲ್ಲಿ ಅವಿತುಕೊಂಡ. ಯಾರೋ “ಮಣಿಕಂಠ”ಎಂದು ಕರೆದಂತಾಯಿತು.
ಪ್ರತಿಮೆಯ ಒಳಗಿನಿಂದ ಹೊಮ್ಮಿಬಂದ ಸದ್ದು ಕೇಳಿ ಬೆಚ್ಚಿಬಿದ್ದ. ಓಡಿಹೋಗೋಣವೆಂದರೆ ಆತನ ಕೈಕಾಲುಗಳು ಮರಗಟ್ಟಿದಂತಾಗಿತ್ತು.
ಪ್ರತಿಮೆಯ ಒಳಗಿನಿಂದ ಮಾತು ಆರಂಭವಾಯಿತು. “ಮಣಿಕಂಠ ಎಲ್ಲಾ ಸಂಪತ್ತುಗಳನ್ನು ನಿನಗೇ ನೀಡುವೆ. ಆದರೆ ಅದಕ್ಕಿಂತ ಮೊದಲು ನನ್ನದೊಂದು ಕರಾರಿದೆ. ಅದೇನೆಂದರೆ ಈ ಊರಿನ ಆಸ್ಪತ್ರೆಯಲ್ಲಿ ಅನೇಕರು ಸಾವು ಬದುಕಿನ ನಡುವೆಹೋರಾಡುತ್ತಿದ್ದಾರೆ.
ನೀನು ಒಂದುವಾರ ಅವರ ಜೊತೆಗೆ ಇದ್ದು ನಿನ್ನಿಂದ ಸಾಧ್ಯವಾದಷ್ಟು ಆರೈಕೆ ಮಾಡಿ ಬಾ.ಅಗಾಧ ಸಂಪತ್ತನ್ನು ನೀಡುತ್ತೇನೆ. ಈಗ ಇಲ್ಲಿಂದ ಹೊರಡುವ ಮೊದಲು ಇಲ್ಲಿರುವ ಗಂಧಪ್ರಸಾದವನ್ನು ಆರೋಗಿಗಳಿಗೆ ತಪ್ಪದೆ ನೀಡು”..ಪ್ರ ತಿಮೆಯ ಒಳಗಿನಿಂದ ಬಂದ ಅಶರೀರವಾಣಿ ಕೇಳಿ ಮಣಿಕಂಠ ನಿಗೆ ಭಯವಾಗಿತ್ತು. ಆದರೂ ತಿಮ್ಮಪ್ಪನೇ ಸ್ವತಃ ದುಪ್ಪಟ್ಟು ಸಂಪತ್ತನ್ನು ನೀಡುವುದಾಗಿ ಮಾತು ಕೊಟ್ಟಿರುವುದನ್ನು ನೆನೆಸಿ ಮಣಿಕಂಠ ಹಿರಿಹಿರಿ ಹಿಗ್ಗಿದ.
ಬೆಳಿಗ್ಗೆಯಾಗುತ್ತಿದ್ದಂತೆ ಮಣಿಕಂಠ ದೊಡ್ಡ ನಿರೀಕ್ಷೆಯಲ್ಲಿ ದೇವರ ಪ್ರಸಾದದೊಂದಿಗೆ ಆಸ್ಪತ್ರೆಯತ್ತ ಹೊರಟ. ಜೀವನದಲ್ಲಿ ಮೊದಲಭಾರಿ ಮಣಿಕಂಠನು ಆಸ್ಪತ್ರೆಯ ದರ್ಶನ ಪಡೆದ. ಅಲ್ಲಿನ ರೋಗಿ ಗಳ ಗೋಳಾಟ ಕಂಡು ಕಂಗಾಲಾದ. ಅಶರೀರವಾಣಿಯ ನಿರ್ದೇಶನದಂತೆ ತೀವ್ರ ತೊಂದರೆ ಯಲ್ಲಿರುವ ರೋಗಿಗಳ ಬಳಿ ಸಾಗಿದ.
ರೋಗಿಗಳ ನೋವಿನ ಆರ್ತನಾದ ಕೂಗು ಕೇಳುತ್ತಿದ್ದಂತೆ ಮಣಿಕಂಠನಿಗೆ ತಲೆಸುತ್ತು ಬಂದಂತಾ ಗುತ್ತಿತ್ತು.ಹೇಗೋ ಸಾವರಿಸಿಕೊಂಡ. ಮುಂದಿನವಾರ ಲಭಿಸಲಿರುವ ಸಂಪತ್ತಿನ ಸಲುವಾಗಿ ಎಲ್ಲ ರಗಳೆಗಳನ್ನು ಸಹಿಸಲು ಆತ ಸಿದ್ದನಾಗಿದ್ದ.
ತಾನು ತಂದಿದ್ದ ದೇವರ ಪ್ರಸಾದವನ್ನು ರೋಗಿಗಳಿಗೆ ನೀಡಿ ಅವರ ಆರೈಕೆ ಆರಂಭಿಸಿದ.ಕೆಲ ರೋಗಿಗಳ ಕರುಣಾಜನಕ ಸ್ಥಿತಿ ಕಂಡು ಮರುಗಿದ. ರೋಗಿಗಳ ಸೇವೆಯಲ್ಲಿ ಮಣಿಕಂಠನಿಗೆ ದಿನಗಳು ಸಾಗಿದ್ದೆ ತಿಳಿಯಲಿಲ್ಲ. ಇದೆಲ್ಲದರ ನಡುವೆ ಎರಡೂ ಕಾಲುಗಳನ್ನು ಕಳಕೊಂಡು ಸಾವಿ ನಂಚಿನಲ್ಲಿದ್ದ ರೋಗಿಯೊಬ್ಬ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳನ್ನ ಹೊಂದಿರುವ ವಿಚಾರವೂ ಮಣಿಕಂಠನ ಕಳ್ಳಬುದ್ದಿಗೆ ತಿಳಿಯಿತು.
ಆರೋಗಿಯ ಬಗ್ಗೆ ವಿಶೇಷ ನಿಗಾ ವಹಿಸಿದ್ದ ಮಣಿಕಂಠ ಆತನ ಸಂಪತ್ತನ್ನು ಕೂಡಾ ಪಟಾಯಿಸಲು ಯೋಜನೆ ರೂಪಿಸುತ್ತಿದ್ದ. ತಿಮ್ಮಪ್ಪ ನೀಡಿದ್ದ ಒಂದುವಾರದ ಗಡುವು ಮುಗಿಯಲು ಕೆಲವೇ ಗಂಟೆ ಗಳು ಉಳಿದಿತ್ತು. ನಾಳೆ ಸೂರ್ಯೋದಯಕ್ಕೆ ಮೊದಲೇ ದೇವರ ಅಪಾರ ಸಂಪತ್ತು ತನ್ನ ಪಾಲಾಗಲಿದೆ ಎಂದು ಮನದಲ್ಲೇ ನೆನೆದು ಮಣಿಕಂಠನು ಕುಣಿಯುತ್ತಿದ್ದ.
ಒಟ್ಟಿನಲ್ಲಿ ಕೋಟ್ಯಾಂತರ ಸಂಪತ್ತಿನ ಒಡೆಯನಾಗುವ ಕನಸು ಕಾಣುತ್ತಿದ್ದ.ಅದೇ ಸಂದರ್ಭದಲ್ಲಿ ಎರಡೂ ಕಾಲುಗಳನ್ನು ಕಳಕೊಂಡು ಜೀವನ್ಮರಣದ ಹೋರಾಟದ ನಡುವೆ ನರಳುತ್ತಿದ್ದ ರೋಗಿಯು ನೀರು ಬೇಕು ಎಂದು ಹೇಳಿ ಮಣಿಕಂಠನನ್ನು ಕರೆದ. ಮಣಿಕಂಠ ಆತನಿಗೆ ನೀರು ಕುಡಿಸಿದ. ನೋವಿ ನಿಂದ ಚೀರುತ್ತಿದ್ದ ರೋಗಿಯು ಮಣಿಕಂಠನಲ್ಲಿ ಏದುಸಿರು ಬಿಡುತ್ತಾ ಹೇಳಿದ..”ನನ್ನ ಜನ್ಮ ಯಾರಿಗೂ ಬರಬಾರದು.
ಎಳೆಯ ವಯಸ್ಸಿನಲ್ಲಿ ನಾನು ಬೇರೆ ಬೇರೆ ಊರುಗಳಿಗೆ ತೆರಳಿ ಮನೆ ಮಠದೇಗುಲಗಳನ್ನು ದರೋಡೆ ನಡೆಸಿದ್ದಕ್ಕೆ ಲೆಕ್ಕವೇ ಇಲ್ಲ. ಅಂದು ರಾಜಭಟರ ಕೈಯಿಂದ ಪಾರಾಗಿದ್ದೆ. ಆದರೆ ವಿಧಿಯ ಸೆರೆಯಲ್ಲಿ ಸಿಕ್ಕಿಬಿದ್ದೆ. ದೇವರು ನನಗೆ ಸರಿಯಾದ ಶಿಕ್ಷೆ ಕೊಟ್ಟಿದ್ದಾನೆ. ಕಳೆದ ಹತ್ತುವರ್ಷಗಳಿಂದ ಅಸಾಧ್ಯ ನೋವು ಅನುಭವಿಸುತ್ತಿದ್ದೇನೆ.ನನ್ನಂತೆ ದುಷ್ಕೃತ್ಯಗಳನ್ನು ನಡೆಸಿದ ಕೆಲಮಂದಿ ಇತ್ತೀಚೆಗೆ ಇಲ್ಲೇ ತೀರಿಕೊಂಡರು.
ಅವರ ಸಾವು ಇನ್ನಷ್ಟು ಘೋರವಾಗಿತ್ತು”ಎಂದು ರೋಗಿಯು ಕಣ್ಣೀರಿಡುತ್ತಾ ತನ್ನ ನೋವಿನ ಧೀರ್ಘ ಕಥೆ ಮುಗಿಸುತ್ತಿದ್ದಂತೆ ಮಣಿಕಂಠನು ಗರಬಡಿದಂತವನಾದ. ಮಾತೇ ಹೊರಡಲಿಲ್ಲ. ಮಣಿಕಂಠನ ದುಃಖದಕಟ್ಟೆ ಒಡೆಯಿತು. ಅಲ್ಲೇ ಕುಸಿದುಬಿದ್ದ. ಕಳ್ಳ ಮಣಿಕಂಠನಿಗೆ ಅಶರೀರ ವಾಣಿಯ ಸಂದೇಶ ಉದ್ದೇಶ ಎಲ್ಲವೂ ಅರಿವಾಯಿತು.
ಮಣಿಕಂಠನ ದರೋಡೆ,ಕಳ್ಳತನ ಎಲ್ಲವೂ ಅಂದೇ ಕೊನೆಯಾಯಿತು.ತಾನು ಈವರೆಗೆ ಕೊಳ್ಳೆ ಹೊಡೆದ ಅಷ್ಟೂ ನಗನಾಣ್ಯಗಳನ್ನು ಆಯಾ ಮನೆ ಮಂದಿರಗಳಿಗೆ ಗೌಪ್ಯವಾಗಿ ತೆರಳಿ ಸುರಿದು ಬಂದ. ಕಣ್ಣೀರಿಟ್ಟು ತಿಮ್ಮಪ್ಪನಲ್ಲಿ ಕ್ಷಮೆಯಾಚಿಸಿದ. ಒಂದು ಶುಭಮುಂಜಾನೆ ಪಯಸ್ವಿನೀ ನದಿ ಯಲ್ಲಿ ಮಿಂದು ಕಲ್ಲಂಪುರದ ದೇವರ ಸಮ್ಮುಖದಲ್ಲಿ ತಾಳ ತಂಬೂರಿ ಪಿಡಿದ ಮಣಿಕಂಠನು ತಿಮ್ಮಪ್ಪನ ದಾಸನಾದ.
ಕಲ್ಲಂಪುರದದೇವರು ಎಂದೂ ಬರಿದಾಗದ ಸತ್ಯದರ್ಶನವೆಂಬ ಸಂಪತ್ತನ್ನು ಮಣಿಕಂಠನಿಗೆ ಕರುಣಿ ಸಿದರು. ಕೊನೆಉಸಿರವರೆಗೂ ತಿಮ್ಮಪ್ಪನನ್ನು ಭಜಿಸುತ್ತಾ ಅಶಕ್ತರ ಅನಾರೋಗ್ಯ ಪೀಡಿತರ ಸದ್ಭಕ್ತರ ಸೇವೆಯಲ್ಲೇ ಮಣಿಕಂಠ ಮುನ್ನಡೆದ. ಬಂಗಾರದ ಹೊಸ ಬದುಕಿಗೆ ಮಣಿಕಂಠದಾಸನು ಶ್ರದ್ದಾ ಭಕ್ತಿಯಲಿ ಸಾಕ್ಷಾತ್ಕಾರದ ವ್ಯಾಖ್ಯೆ ಬರೆದ.
 
 
 
 
 
 
 
 
 
 
 

Leave a Reply