ಮಾತೃತ್ವ, ಮಾರ್ಕೆಟಿಂಗ್ ಮತ್ತು ವಿಕೃತಿ.

ತಾಯ್ತನವನ್ನು ಮಾರುಕಟ್ಟೆಯ ಸರಕು ಮಾಡಿದವರು ಯಾರು?
———————————-
ಇದರ ಹಿಂದೆ ಕೂಡ ಒಮ್ಮೆ ಇದೇ ಥೀಮ್ ಮೇಲೆ ತುಂಬ ಸಿಟ್ಟಿನಿಂದ ಬರೆದಿದ್ದೆ. ಭಾರತೀಯ ಮೌಲ್ಯಗಳನ್ನು ಯಾವುದೇ ವಿದೇಶದ ಪತ್ರಿಕೆ ಬಿಕರಿ ಮಾಡಲು ಹೊರಟರೆ ಅದಕ್ಕೆ ಕ್ಷಮೆ ಕೊಡಬಹುದು. ಆದರೆ ನಮ್ಮದೇ ಕೇರಳದ ಒಂದು ಹೆಸರಾಂತ (?) ಪತ್ರಿಕೆ ‘ಗೃಹ ಲಕ್ಷ್ಮಿ’ಯು ಭಾರತೀಯ ಮೌಲ್ಯಗಳನ್ನು ಅಪಮಾನ ಮಾಡಿದೆ. ಅದನ್ನು ‘ಮಾತೃತ್ವದ ಭಾವನೆಗಳ ಪರಾಕಾಷ್ಟೆ’ ಎಂದು ಬೇರೆ ವರ್ಣಿಸಿದೆ!

ಆ ಮುಖಪುಟದ ಫೋಟೋ ಬಗ್ಗೆ! .. ಇಲ್ಲಿ ಒಬ್ಬಳು ಹದಿಹರೆಯದ ಮಾಡೆಲ್ ತನ್ನ ಬ್ಲೌಸನ್ನು ತೆರೆದು ತನ್ನ ಹಾಲಿಲ್ಲದ ಮೊಲೆಯನ್ನು ಮಗುವಿನ ಬಾಯಲ್ಲಿ ತುರುಕಿಸಿ ಬಿಟ್ಟಿದ್ದಾಳೆ. ಅದು ಅವಳ ಮಗು ಅಲ್ಲ. ಮಗುವಿನ ಮುಖದಲ್ಲಿ ಸಂತೃಪ್ತಿಯ, ಆನಂದದ ಭಾವನೆ ಇಲ್ಲ. ಏಕೆಂದರೆ ಮಗು ಅಳಬಾರದು ಎಂಬ ಕಾರಣಕ್ಕೆ ಅದಕ್ಕೆ ನಿದ್ದೆ ಬರುವ ಇಂಜೆಕ್ಷನ್ ಚುಚ್ಚಿ ಬಿಟ್ಟಿರಬೇಕು ಎಂದು ನನ್ನ ಅನಿಸಿಕೆ.

ಈ ಮಾಡೆಲ್ ಮುಖದಲ್ಲಿ ಮಾತೃತ್ವದ ಇಂಟೆನ್ಸ್ ಭಾವನೆ ಹುಡುಕಿ ನೋಡೋಣ! ಯಾವುದೇ ತಾಯಿ ಮಗುವಿಗೆ ಎದೆ ಹಾಲು ಕೊಡುವಾಗ ಮಗುವನ್ನು ನೋಡುತ್ತಾಳೆ ಹೊರತು ಫೋಟೋಕ್ಕೆ ಪೋಸ್ ಕೊಡುವುದಿಲ್ಲ! ವಿದ್ಯಾಭ್ಯಾಸ ಇಲ್ಲದ ಹಳ್ಳಿಯ ತಾಯಂದಿರು ಕೂಡ ಹಾಲು ಕೊಡುವಾಗ ಒಂದು ಸೆರಗಾದರೂ ಎದೆಗೆ ಅಡ್ದ ಹಿಡಿಯುತ್ತಾರೆ ಅಥವಾ ಹಾಲು ಕೊಡಲು ಸ್ವಲ್ಪ ಮರೆಯ ಜಾಗವನ್ನು ಹುಡುಕುತ್ತಾರೆ. ಭಾರತದ್ದು ತೆರೆದು ತೋರಿಸುವ ಸಂಸ್ಕೃತಿ ಅಲ್ಲ. ಅದು ಮುಚ್ಚಿಡುವ ಸಂಸ್ಕೃತಿ. ಹೌದಲ್ಲ?

ಹಿಂದೆ ಹಿಂದೀ ಸಿನೆಮಾ ನಿರ್ದೇಶಕ ರಾಜಕಪೂರ್ ಮಾಡಿದ್ದು ಅದನ್ನೇ!.. ಹಿಂದೀ ಸಿನೆಮಾದ ಪಕ್ಕಾ ಶೋ ಮ್ಯಾನ್ ನಿರ್ದೇಶಕ ರಾಜಕಪೂರ್ ತನ್ನ ಜನಪ್ರಿಯವಾದ ‘ ರಾಮ್ ತೇರಿ ಗಂಗಾ ಮೈಲಿ’ ಸಿನೆಮಾದಲ್ಲಿ ಅದೇ ರೀತಿಯ ಗಿಮಿಕ್ ಮಾಡುತ್ತಾನೆ. ಗಂಗಾ ಎಂಬ ಹಳ್ಳಿಯ ಮುಗ್ಧ ಹುಡುಗಿ( ಆ ಪಾತ್ರವನ್ನು ಮಂದಾಕಿನಿ ಎಂಬ ನಟಿ ಮಾಡಿದ್ದರು) ತನ್ನ ಸೊಂಟದ ಮೇಲೆ ತನ್ನ ಪುಟ್ಟ ಮಗುವನ್ನು ಕೂರಿಸಿಕೊಂಡು ಕಳೆದು ಹೋದ ತನ್ನ ಪ್ರಿಯಕರನನ್ನು ಹುಡುಕುತ್ತಾ ರೈಲಿನಲ್ಲಿ ಬಹು ದೂರ ಹೋಗ್ತಾ ಇರುತ್ತಾಳೆ. ಅವಳ ಮುಂದೆ ಮೂವರು ಪ್ರಾಯದ ರಸಿಕರು ಕೂತಿರುತ್ತಾರೆ.

ಸ್ವಲ್ಪ ದೂರಕ್ಕೆ ಹೋಗುವಾಗ ಮಗು ಜೋರಾಗಿ ಅಳತೊಡಗಿತು. ಆಗ ಎದುರು ಕೂತ ಆ ದುರುಳರು ‘ದೂದ ಪಿಲಾವೋ ಬೇಹನ್ ‘ ಎಂದು ಕೊಂಕಾಗಿ ನೋಡಿದಾಗ ಅವಳು ತುಂಬಾ ಸಂಕೋಚ ಪಡುತ್ತಾ ತನ್ನ ಸೆರಗನ್ನು ಸರಿಸಿ, ರವಿಕೆಯನ್ನು ತೆರೆದು ಮಗುವಿನ ಬಾಯಿಯಲ್ಲಿ ಮೊಲೆ ಇಟ್ಟು ಕಣ್ಣು ಮುಚ್ಚಿಕೊಂಡು ಕುಳಿತು ಬಿಡುತ್ತಾಳೆ.

ಇದನ್ನು ನಿರ್ದೇಶಕರಾದ ರಾಜ ಕಪೂರ್ ಸೂಚ್ಯವಾಗಿ ತೋರಿಸಬಹುದಿತ್ತು. ಅವಳ ಮುಖದ ಮೇಲೆ ಕ್ಯಾಮೆರ ಇಟ್ಟು ಅವಳ ಮಾತೃತ್ವದ ನವಿರು ಭಾವನೆಗಳನ್ನು ಚಂದವಾಗಿ ತೋರಿಸಬಹುದಿತ್ತು. ಆದ್ರೆ ರಾಜಕಪೂರ ಅವರ ವ್ಯಾಪಾರಿ ಬುದ್ದಿ ನೋಡಿ. ಆತ ಕ್ಯಾಮೆರಾ ಇಟ್ಟದ್ದು ಅವಳ ಎದೆಯ ಭಾಗಕ್ಕೆ!

ಹದಿನೆಂಟು ವರ್ಷದ ಮುಗ್ಧ(?) ಹುಡುಗಿ ಮಂದಾಕಿನಿ ಆ ದೃಶ್ಯಕ್ಕಾಗಿ ಪಡೆದ ಲಾಭ ಎಷ್ಟು ಅಂದ್ರೆ ಅವಳು ಮುಂದೆ ಭೂಗತ ದೊರೆ ದಾವೂದ್ ಇಬ್ರಾಹಿಂನ ಕೈ ಹಿಡಿದು ವಿದೇಶದಲ್ಲಿ ನೆಲೆಸಿದಳು. ರಾಜಕಪೂರ್ ಮಾಡಿದ ಲಾಭ ಎಷ್ಟು? ಯಾರಿಗೂ ಗೊತ್ತಿಲ್ಲ. ಪಡ್ಡೆ ಹೈಕಳು ಅನೇಕರು ಆ ದೃಶ್ಯ ನೋಡಲೆಂದು ಸಿನೆಮಾ ನೋಡಲು ಬರುತ್ತಿದ್ದರು. ಆ ದೃಶ್ಯ ಮುಗಿದ ಕೂಡಲೇ ಅರ್ಧ ಸಿನೆಮಾ ಮಂದಿರ ಖಾಲಿ ಆಗುತ್ತಿತ್ತು!

ಕನ್ನಡದ ಒಂದು ಸಿನಿಮಾದಲ್ಲಿಯೂ ಹಾಗೆಯೇ..! .. ಇನ್ನೊಂದು ಕನ್ನಡ ಸಿನೆಮಾದಲ್ಲಿ (ಹೆಸರು ಮರೆತು ಹೋಯಿತು) ಒಬ್ಬಳು ತಾಯಿ ಮಾನಭಂಗ ಆಗಿ ರಸ್ತೆಯಲ್ಲಿ ಬಿದ್ದಿರುತ್ತಾಳೆ. ಪ್ರಾಣ ಹಾರಿ ಹೋಗಿರುತ್ತದೆ. ಅಲ್ಲೇ ನೆಲದ ಮಣ್ಣಲ್ಲಿ ತೆವಳುತ್ತಿದ್ದ ಅವಳ (ಸಿನೆಮಾದ) ಪುಟ್ಟ ಮಗು ಹಸಿವೆಯಿಂದ ಅಳುತ್ತ ಬಂದು ತನ್ನ ಸತ್ತು ಹೋಗಿರುವ (ಸಿನಿಮಾದ) ತಾಯಿಯ ಎದೆಗೆ ನೇರವಾಗಿ ಬಾಯಿ ಹಾಕಿ ಹಾಲನ್ನು ಹುಡುಕುತ್ತ ನಿರಾಸೆಯಿಂದ ಅಳುತ್ತಿತ್ತು.

ಆ ದೃಶ್ಯವನ್ನು ಕ್ರಿಯೇಟ್ ಮಾಡಿದ ನಿರ್ದೇಶಕರ ಕ್ರಿಯೇಟಿವಿಟಿಗೆ ಏನು ಹೇಳೋಣ. ಸುತ್ತ ಮುತ್ತ ಸಿನೆಮಾ ನೋಡುತಿದ್ದ ಹೆಂಗಸರ ಸೀರೆಯ ಸೆರಗು ಒದ್ದೆ ಆಗಿಯೇ ಆಗುತ್ತದೆ. ಛೇ! ಎಂದು ಹಲವರು ಕೊರಗುತ್ತಾರೆ. ನಿರ್ಮಾಪಕರ ತಿಜೋರಿ ತುಂಬುತ್ತದೆ. ಇದು ನಿಮಗೆ ಕ್ರೌರ್ಯ ಎಂದು ಅನ್ನಿಸುವುದಿಲ್ಲವೇ?

ಆ ಫೋಟೋ ಮತ್ತು ಸಿನೆಮಾ ನೋಡಿ ಸಮರ್ಥನೆ ಮಾಡುವ ಒಂದಿಷ್ಟು ಮಂದಿ ಕೂಡ ಇದ್ದಾರೆ. ಬೇರೆ ಬೇರೆಯ ಉದಾಹರಣೆ ಕೊಡುತ್ತಾರೆ. ಬೇಲೂರು, ಹಳೇಬೀಡು, ಖಜುರಾಹೋ ಮೊದಲಾದ ದೇವಾಲಯಗಳ ಗೋಡೆಯ ಮೇಲೆ ಇರುವ ನಗ್ನ ಚಿತ್ರಗಳ, ಮಿಥುನ ಚಿತ್ರಗಳ ಉದಾಹರಣೆ ಮುಂದಿಡುತ್ತಾರೆ. ಸಂಸ್ಕೃತದ ಪುರಾಣ ಕಾವ್ಯಗಳ ಶೃಂಗಾರ ಕತೆಗಳ, ವಾತ್ಸಾಯನನು ಬರೆದ ಕಾಮ ಸೂತ್ರದ ಬಗ್ಗೆ ಉಲ್ಲೇಖ ಮಾಡುತ್ತಾರೆ. ಶೃಂಗಾರ ಬೇರೆ, ಅಶ್ಲೀಲತೆ ಬೇರೆ ಎಂದು ಯಾರಿಗೂ ಅನ್ನಿಸುವುದಿಲ್ಲ.

ವಾತ್ಸಾಯನ ಬರೆದ ಕಾಮಸೂತ್ರವು ನಮಗೆ ವೈಜ್ಞಾನಿಕ ಮಾರ್ಗದರ್ಶನ ಮಾಡುವ ಗ್ರಂಥ. ಲೈಂಗಿಕ ವಿಜ್ಞಾನವು ಬೇರೆ ದೇಶಗಳಲ್ಲಿ ಕಣ್ಣು ಬಿಡುತ್ತಿದ್ದ ಕಾಲದಲ್ಲಿ ನಮ್ಮಲ್ಲಿ ಅದು ಬೆಳೆದು ಹೆಮ್ಮರ ಆಗಿತ್ತು! ಅದರ ಬಗ್ಗೆ ಮೂಗು ಮುರಿಯುವ, ಕೊಂಕು ನುಡಿಯುವ ಪಾಶ್ಚಾತ್ಯ ಸಂಸ್ಕೃತಿಯ ಆರಾಧಕರು ಎಲ್ಲಾ ಕಡೆ ಈಗಲೂ ಇದ್ದಾರೆ.

ಪ್ರೌಢಶಾಲೆಯ ಹಂತದಲ್ಲಿ ಹದಿಹರೆಯಕ್ಕೆ ಕಾಲಿಡುವ ಹುಡುಗ, ಹುಡುಗಿಯರಿಗೆ ವೈಜ್ಞಾನಿಕ ಹಿನ್ನೆಲೆಯಲ್ಲಿ ಲೈಂಗಿಕ ಶಿಕ್ಷಣವು ದೊರೆತಿದ್ದರೆ ಅವರು ಗೂಗಲ್ ಸ್ಪಾಟನಲ್ಲಿ ಪೋರ್ನ್ ವಿಡಿಯೋ ಹುಡುಕುತ್ತಲೇ ಇರಲಿಲ್ಲ! ತಾಯಿಯ ಮಾತೃತ್ವವನ್ನು ಒಂದು ಕೊಮೊಡಿಟಿ ಮಾಡಿ ವ್ಯಾಪಾರಕ್ಕಿಟ್ಟ ಸೋ ಕಾಲ್ಡ್ ಮಾರ್ಕೆಟಿಂಗ್ ಗುರುಗಳಿಗೆ ನಾನು ಕೇಳುವ ನೇರಾನೇರ ಪ್ರಶ್ನೆ- ನಿಮಗೆ ನಿಮ್ಮ ಅಮ್ಮ ಎದೆಹಾಲು ಕೊಟ್ಟಿಲ್ಲವೆನ್ರೋ! ಥೂ! ನಿಮ್ಮ ಜನ್ಮಕ್ಕೆ!

ರಾಜೇಂದ್ರ ಭಟ್ ಕೆ.

 
 
 
 
 
 
 
 
 
 
 

Leave a Reply