ಧಾರವಾಡದಲ್ಲಿ ʼಸಾರ್ಥವಾಹ-2024ʼ ಕಾರ್ಯಕ್ರಮ

ಸಮೃದ್ಧ ರಾಷ್ಟ್ರ ನಿರ್ಮಾಣದಲ್ಲಿ ಯುವ ಸಮುದಾಯದ ಕೊಡುಗೆ ಅನನ್ಯ:

‘ಯುವಜನರು ಭವ್ಯ ಭಾರತದ ಭವಿಷ್ಯ ಮತ್ತು ಅಭಿವೃದ್ಧಿಯ ಪ್ರಮುಖ ಅಂಶವಾಗಿದ್ದು, ಇಂದಿನ ಯುವ ಸಮುದಾಯವೇ ಭಾರತ ಇಂದು ವಿಶ್ವ ಗುರು ಆಗಲು ಕಾರಣವಾಗಿದೆʼ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅಭಿಪ್ರಾಯಪಟ್ಟರು.

ಇಲ್ಲಿನ ಕರ್ನಾಟಕ ಕಾಲೇಜಿನ ಸೃಜನಾ ರಂಗಮಂದಿರದಲ್ಲಿ ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರವಾಸೋದ್ಯಮ ಅಧ್ಯಯನ ವಿಭಾಗ ಹಾಗೂ ಕೇಂದ್ರ ಪವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನಗಳ ʻಸಾಂಸ್ಕೃತಿಕ ಉತ್ಸವ- ಸಾರ್ಥವಾಹ-2024 ವಿಶೇಷ ಕಾರ್ಯಕ್ರಮ ಉದ್ಘಾಟಿಸಿ, ಸಚಿವರು ಮಾತನಾಡಿದರು.

ವಿವಿಧತೆಯಲ್ಲಿ ಏಕತೆ ಭಾರತದ ಶಕ್ತಿ

ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ. ಸ್ವಾವಲಂಬನೆಯತ್ತ ರಾಷ್ಟ್ರದ ಪ್ರಯಾಣ ಮುಂದುವರಿದಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ಹಾಗೂ ದೇಶವನ್ನು ವಿಶ್ವದ ಅತ್ಯುತ್ತಮ ಸ್ಥಾನದಲ್ಲಿ ಇರಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದು ಹೇಳಿದ ಅವರು, ಭಾರತವು ವಿಶಿಷ್ಟ ಸಂಸ್ಕೃತಿಗಳಿಂದ ತುಂಬಿದ ವೈವಿಧ್ಯಮಯ ದೇಶವಾಗಿದೆ ಮತ್ತು ವಿವಿಧತೆಯಲ್ಲಿ ಏಕತೆ ಈ ರಾಷ್ಟ್ರದ ಶಕ್ತಿಯಾಗಿ ಉಳಿದಿದೆ ಎಂದು ಹೇಳಿದರು.

 ಜೀವನದಲ್ಲಿ ಸೋಲು -ಗೆಲವು ಸಮಾನವಾಗಿ ಸ್ವೀಕರಿಸಿ

ಸೋಲು ಗೆಲುವು ಎಲ್ಲವೂ ಸಾಮಾನ್ಯ, ಸೋಲೇ ಗೆಲುವಿನ ಮೆಟ್ಟಿಲು ಎನ್ನುತ್ತಾರೆ, ಆದರೆ ಕೆಲವೊಬ್ಬರ ಜೀವನದಲ್ಲಿ ಕೆಲವೊಮ್ಮೆ ಕೇವಲ ಸೋಲನ್ನು ಮಾತ್ರವೇ ಕಾಣುತ್ತಿರುತ್ತಾರೆ. ಆಗ ಸೋತೆ ಎಂದು ಕೊರಗುವುದು, ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಬದಲು, ಗೆಲುವು ನಿಮ್ಮದಾಗಿಸಿಕೊಳ್ಳುವುದು ಹೇಗೆ, ನೀವು ಎಡವಿದ್ದೆಲ್ಲಿ ಎಂಬುದರ ಬಗ್ಗೆ ಆಲೋಚಿಸಬೇಕು. ಆತ್ಮವಿಶ್ವಾಸ, ಛಲ ನಿಮ್ಮಲ್ಲಿದ್ದರೆ ಅಸಾಧ್ಯವಾದುದ್ದನ್ನು ಕೂಡ ಸಾಧಿಸಿ ತೋರಿಸಬಹುದು ಎಂದು ಸಚಿವರು ಕಿವಿಮಾತು ಹೇಳಿದರು.

ಖ್ಯಾತ ನಟ, ನಿರ್ದೇಶಕ ಡಾ.ಯಶವಂತ ಸರದೇಶಪಾಂಡೆ ಮಾತನಾಡಿ ಯುವಕರು ಬದುಕಿನ ಜ್ಞಾನವನ್ನು ವೃದ್ಧಿಸಿಕೊಳ್ಳಿ ಎಂದು ಸಲಹೆ ನೀಡಿದರು. 

ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಲಾ ಕಾಲೇಜಿನ ಪ್ರಭಾರ ಪ್ರಾಚಾರ್ಯರಾದ ಡಾ. ಮಂಜುಳಾ ಚಲವಾದಿ, ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುಲಿ ಸಾಳುಂಕೆ, ಪ್ರವಾಸೋದ್ಯಮ ವಿಭಾಗದ ಸಂಯೋಜಕ ಡಾ. ಕೆ. ಜಗದೀಶ್, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ. ವೀರೇಂದ್ರ ಯಾದವ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಸ್.ರಾಜಶೇಖರ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಅಕ್ಷರ ಬೆಳಕು ನೀಡಿದ ಸಾವಿತ್ರಿಬಾಯಿ ಪುಲೆ ಸ್ಮರಿಸಿದ ಸಚಿವರು

ಇಂದು ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಅಕ್ಷರ ಬೆಳಕು ನೀಡಿದ ಸಾವಿತ್ರಬಾಯಿ ಪುಲೆ ಅವರ ಹೋರಾಟದಿಂದ ಸಾಧ್ಯವಾಗಿದೆ. ಅದರೂ ಇಂದಿಗೂ ಸಮಾಜದಲ್ಲಿ ಜಾತಿ ಅಸಮಾನತೆ, ಅಸ್ಪಶ್ಯತೆ, ದೌರ್ಜನ್ಯ ನಡೆಯುತ್ತಿದ್ದು, ಈ ತರದ ಅನಿಷ್ಟ ಪದ್ಧತಿಗಳ ವಿರುದ್ಧ ದೊಡ್ಡ ರೀತಿಯಲ್ಲಿ ಚಳವಳಿ ಅವಶ್ಯಕ. ಈ ನಿಟ್ಟಿನಲ್ಲಿ ಯುವ ಜನರು ಮುಂದಾಗಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಳಾಕರ ಎಂದು ಹೇಳಿದರು.

ಚಿತ್ರಕಲಾ ಪ್ರದರ್ಶನ ಉದ್ಘಾಟನೆ

ಇದೇ ವೇಳೆ ಸಚಿವರು, ಕರ್ನಾಟಕ ಕಲಾ ಮಹಾವಿದ್ಯಾಲಯದ ಚಿತ್ತಾರ ಕಲಾ ಬಳಗವು ಏರ್ಪಡಿಸಿದ್ದ ಮೂರು ದಿನಗಳ ಚಿತ್ರ ಕಲಾ ಪ್ರದರ್ಶನವನ್ನು ಉದ್ಘಾಟಿಸಿ, ಕಲಾ ಕೃತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

 
 
 
 
 
 
 
 
 
 
 

Leave a Reply