ಕೆಎಸ್ ಆರ್ ಟಿಸಿ ಬಸ್ ಗೆ ಡಿಕ್ಕಿ ಹೊಡೆದ ಕಾರು; ನಾಲ್ವರು ಸ್ಥಳದಲ್ಲೇ ಸಾವು

ನಿಂತಿದ್ದ ಕೆಎಸ್ ಆರ್ ಟಿಸಿ ಬಸ್ ಗೆ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿ.ಜಿ.ನಗರ ಬಳಿಯ ಬೆಳ್ಳೂರು ಕ್ರಾಸ್ ಬಳಿ ನಡೆದಿದೆ. ಮೃತರು ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದೆ.

ಕೆಎಸ್ ಆರ್ ಟಿಸಿ ಬಸ್ಸು ಹಾಸನ ಕಡೆಯಿಂದ ಬೆಂಗಳೂರು ಕಡೆ ಬರುತ್ತಿತ್ತು. ಈ ವೇಳೆ ಆದಿಚುಂಚನಗಿರಿ ಮೆಡಿಕಲ್ ಆಸ್ಪತ್ರೆ ಎದುರು ಜನರನ್ನು ಇಳಿಸಲು ಬಸ್ ನಿಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ವೇಗವಾಗಿ ಹಿಂದಿನಿಂದ ಬಂದ ಕಾರು ನಿಂತಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ. ಅಕ್ಸೆಂಚರ್ ಕಂಪನಿ‌ ಉದ್ಯೋಗಿಗಳಾದ ಬೆಂಗಳೂರಿನ ನಮಿತಾ, ಧಾರವಾಡದ ರಘುನಾಥ್ ಭಜಂತ್ರಿ, ಇನ್ಫೋಸಿಸ್ ಉದ್ಯೋಗಿ, ರಾಜಸ್ತಾನ ಮೂಲದ ಪಂಕಜ್ ಶರ್ಮಾ, ಬೆಂಗಳೂರಿನ ವಂಶಿಕೃಷ್ಣ ಮೃತಪಟ್ಟವರು.

ಕಾರು ಚನ್ನರಾಯಪಟ್ಟಣ ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿತ್ತು. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ‌ನಜ್ಜುಗುಜ್ಜಾಗಿದೆ. ಸ್ಥಳದಲ್ಲಿದ್ದ ಜನರು, ವಿದ್ಯಾರ್ಥಿಗಳು ‌ಮೃತದೇಹಗಳನ್ನು ಹೊರ ತೆಗೆಯಲು ಸಹಾಯ ಮಾಡಿದರು. ಬೆಳ್ಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply