ವೈದ್ಯರು ಕೇವಲ ರೋಗವನ್ನು ಗುಣಪಡಿಸುವುದರ ಜೊತೆಗೆ ಗುಣಮಟ್ಟದ ಆರೋಗ್ಯಯುತ ಜೀವನವನ್ನು ಸಾಗಿಸಲು ನೆರವಾಗಬೇಕು~ ಕೆ.ಪಿ.ರಾವ್

ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ 31.8.2023 ರಂದು “ವಿಶಿಖಾನುಪ್ರವೇಶ” ಪದವಿ ಪ್ರದಾನ ಸಮಾರಂಭವು ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ.ಯವರು ಅತಿಥಿಗಳನ್ನು ಸ್ವಾಗತಿಸಿ, ಅಧ್ಯಯನದಲ್ಲಿ ಶ್ರದ್ಧೆ, ಪರಿಶ್ರಮ ಹಾಗೂ ನೂತನ ಕಲಿಕಾ ವಿಧಾನಗಳ ಅನುಸರಣೆಯೊಂದಿಗೆ ಯಶಸ್ವಿಯಾಗಿ ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.
 ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ, ಉಜಿರೆ ಇದರ ಕಾರ್ಯದರ್ಶಿಯವರಾದ ಡಾ. ಸತೀಶ್ಚಂದ್ರ ಎಸ್.ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನೂತನವಾಗಿ ಪದವಿಯನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ವೈದ್ಯ ವೃತ್ತಿಗೆ ಆದ್ಯತೆ ನೀಡಿ ಆಯುರ್ವೇದ ಜ್ಞಾನವನ್ನು ಕ್ರಿಯಾತ್ಮಕವಾಗಿ ಉಪಯೋಗಿಸಿ ಸಮಾಜಮುಖಿಯಾಗಿರಿ ಎಂದು ಸಂದೇಶ ನೀಡಿದರು.
ವಿಜ್ಞಾನಿ ಹಾಗೂ ಮಣಿಪಾಲ ಎಮ್.ಐ.ಟಿಯ ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಕೆ. ಪದ್ಮನಾಭ ರಾವ್‌ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ‘ಆಯುರ್ವೇದ ಚಿಕಿತ್ಸಾ ಪದ್ಧತಿಯ ಮಹತ್ವವನ್ನು ತಿಳಿಸುತ್ತಾ ವೈದ್ಯರು ಕೇವಲ ರೋಗವನ್ನು ಗುಣಪಡಿಸುವುದರ ಬಗ್ಗೆ ಅಷ್ಟೇ ಯೋಚಿಸದೆ ಗುಣಮಟ್ಟದ ಆರೋಗ್ಯಯುತ ಜೀವನವನ್ನು ಸಾಗಿಸಲು ನೆರವಾಗುವಂತೆ ವಿದ್ಯಾರ್ಥಿಗಳಿಗೆ ಕರೆನೀಡಿದರು.
ಎಸ್.ಡಿ.ಎಮ್. ಆಯುರ್ವೇದ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಸ್ನಾತಕ ವಿದ್ಯಾರ್ಥಿನಿ ಡಾ. ಪ್ರಜ್ಞಾ ಎನ್ ಅವರಿಗೆ ಉತ್ತಮ ಫಲಿತಾಂಶಕ್ಕಾಗಿ ಚಿನ್ನದ ಪದಕವನ್ನು ನೀಡಲಾಯಿತು. ಕಾಲೇಜಿನ ಶೈಕ್ಷಣಿಕ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಲತಾ ಕಾಮತ್‌ರವರು ೭೩ ಸ್ನಾತಕ ಮತ್ತು ೩೯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಅಶೋಕ್ ಕುಮಾರ್ ಬಿ.ಎನ್. ಹಾಗೂ ಸ್ನಾತಕ ವಿಭಾಗದ ಡೀನ್ ಡಾ. ರಜನೀಶ್ ವಿ. ಗಿರಿ ವಿದ್ಯಾರ್ಥಿಗಳಿಗೆ ಪದವಿ ಪತ್ರವನ್ನು ಪಡೆಯಲು ಆಹ್ವಾನಿಸಿದರು. ಉಪಪ್ರಾಂಶುಪಾಲರಾದ ಡಾ. ನಿರಂಜನ್ ರಾವ್ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್. ವಂದಿಸಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಅರುಣ್ ಕುಮಾರ್ ಮತ್ತು ಡಾ. ಶುಭ ಪಿ.ಯು ಕಾರ್ಯಕ್ರಮವನ್ನು ನಿರೂಪಿಸಿದರು.
 
 
 
 
 
 
 
 
 
 
 

Leave a Reply