ಹೀಗೂ ಉಂಟೆ !!!

ನಾನು ನನ್ನ ಕಾರ್ಯಕ್ರಮಗಳಿಗಾಗಿ ಹೆಚ್ಚಾಗಿ ಪ್ರಯಾಣ ಮಾಡುತ್ತಾ ಇರುವುದರಿಂದಲೋ ಏನೋ ನನಗೆ ಪ್ರಯಾಣದ ವೈವಿಧ್ಯಮಯ ಅನುಭವಗಳು ಆಗುತ್ತಿರುತ್ತವೆ.

ಸ್ವಲ್ಪ ಸಮಯದ ಹಿಂದೆ ನನಗೆ ಮಂಗಳೂರಿಗೆ ಹೋಗಲಿದ್ದಾಗ ಉಡುಪಿ ಬಸ್ಟ್ಯಾಂಡಿನಲ್ಲಿ ಎಕ್ಸ್ ಪ್ರೆಸ್ ಬಸ್ ಹತ್ತಿದೆ .

ಬಸ್ ಕಿನ್ನಿಮುಲ್ಕಿ ದಾಟಿ ಹೈವೇಯಲ್ಲಿ ಹೋಗುತ್ತಿರುವಾಗ ಬಹುಶಃ ಬಸ್ಸಿನ ಏಜೆಂಟ್ ಇರಬೇಕು ನನ್ನ ಬಳಿ ಬಂದು ಟಿಕೆಟ್ ಎಂದು ಕೇಳಿದ. ನಾನು ನನ್ನ ಬಳಿಯಿದ್ದ ಐನೂರು ರೂಪಾಯಿಯ ನೋಟನ್ನು ಕೊಟ್ಟು ಮಂಗಳೂರು ಎಂದೆ.
ಅದಕ್ಕವನು “ಚಿಲ್ಲರೆ ಕೊಡಿ ಮೇಡಂ “ಎಂದ .

ನಾನು “ಚಿಲ್ಲರೆ ಇಲ್ಲಪ್ಪ.. ಇದ್ದಿದ್ರೆ ಕೊಡ್ತಿದ್ದೆ” ಎಂದೆ.

ಅದಕ್ಕವನು “ಇಲ್ಲ ಮೇಡಂ ಚಿಲ್ಲರೆ ಕೊಡಲೇಬೇಕು” ಎಂದ .

ನಾನು ಹೇಳಿದೆ” ಚಿಲ್ಲರೆ ಇಲ್ಲ ಅಪ್ಪ ಏನ್ ಮಾಡ್ಲಿ”? .”

ಚಿಲ್ಲರೆ ಇಲ್ಲದಿದ್ದರೆ ಮುಂದಿನ ಸ್ಟಾಪ್ ಕಟ್ಪಾಡಿಯಲ್ಲಿ ಇಳಿಯಿರಿ ಮೇಡಂ.. ಬೇರೆ ಬಸ್ಸಲ್ಲಿ ಹೋಗಿ “ಎಂದ ಬಹಳ ಗಂಭೀರ ಮುಖದಿಂದ. ನನಗೆ ಒಂದು ಕ್ಷಣ ಆಶ್ಚರ್ಯ ಹಾಗೂ ಕೋಪ ಅವಮಾನ ಎಲ್ಲವೂ ಆಯಿತು .

ಕೂಡಲೇ ನಾನು ಎದ್ದು ನಿಂತು “ನನ್ನ ಬಳಿ ಐನೂರು ರುಪಾಯಿ ನೋಟ್ ಇದೆ . ಯಾರ ಬಳಿಯಲ್ಲಾದರೂ ಚಿಲ್ಲರೆ ಇದ್ದರೆ ದಯವಿಟ್ಟು ಕೊಡುತ್ತೀರಾ ಇಲ್ಲವಾದರೆ ನಾನು ಮುಂದಿನ ಸ್ಟಾಪಿನಲ್ಲಿ ಇಳಿಯ ಬೇಕಂತೆ”ಎಂದೆ.

ಬಹುಶಃ ಬಸ್ಸಿನಲ್ಲಿದ್ದ ಕಂಡಕ್ಟರಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗಿರಬೇಕು.ಇದೀಗ ವಿಷಯ ಸ್ವಲ್ಪ ಮುಂದೆ ಹೋಗಬಹುದಾದ ಅಂದಾಜು ಅವನಿಗೆ ಆಗಿರಬೇಕು .

ತಕ್ಷಣ ಅವನು ತನ್ನ ಪಾಕೇಟಿನಿಂದ ಐನೂರು ರುಪಾಯಿಗೆ ಚಿಲ್ಲರೆ ತೆಗೆದುಕೊಟ್ಟ .ಕೂಡಲೇ ನಾನು ಅದರಿಂದ ಒಂದು ನೂರರ ನೋಟು ತೆಗೆದು ಏಜೆಂಟನ್ನು ಕರೆದು ಬನ್ನಿ ಇಲ್ಲಿ ತೊಗೊಳ್ಳಿ ಚಿಲ್ಲರೆ ಎಂದೆ.ಅಷ್ಟರಲ್ಲಿ ಹಿಂದೆ ಕುಳಿತ ನಾಕೈದು ಜನರು ತಮ್ಮ ಕೈಯಲ್ಲಿ ಐನೂರು ರೂಪಾಯಿಯ ಚಿಲ್ಲರೆ ನನಗೆ ಕೊಡಲು ಹಿಡಿದುಕೊಂಡದ್ದು ಕಾಣಿಸುತ್ತಿತ್ತು.

ಅವನು ಟಿಕೆಟ್ ಕೊಡುತ್ತಾ ಇರುವಾಗ ಕೇಳಿದೆ” ಐನೂರು ರುಪಾಯಿ ನೋಟು ಕೊಟ್ಟರೆ ಮಂಗಳೂರಿಗೆ ಟಿಕೆಟ್ ಕೊಡಲು ಆಗದಿದ್ದರೆ ನಿಮ್ಮ ಬಸ್ಸಿನಲ್ಲಿ ಬೋರ್ಡ್ ಹಾಕಿ ಬಿಡಿ ಚಿಲ್ಲರೆ ಕೊಡುವವರು ಮಾತ್ರ ಬಸ್ಸಿಗೆ ಬರಬೇಕು ಎಂದು “

ಎದ್ದು ನಿಂತು ಹಿಂದೆ ತಿರುಗಿ ಕೇಳಿದೆ “ನಿಮಗ್ಯಾರಿಗಾದರೂ ಬಸ್ಸಿನಲ್ಲಿ ಟಿಕೇಟಿಗೆ ಚಿಲ್ಲರೆಯನ್ನೇ ಕೊಡಬೇಕು.. ಐನೂರು ರುಪಾಯಿ ಕೊಟ್ಟು ಮಂಗಳೂರಿಗೆ ಪ್ರಯಾಣ ಮಾಡುವವರಿಗೆ ಟಿಕೆಟ್ ಕೊಡಲಾಗುವುದಿಲ್ಲ ನಡುವೆ ಇಳಿಸುತ್ತೇವೆ ..ಎನ್ನುವ ಬೋರ್ಡ್ ಕಾಣಿಸುತ್ತಿದೆಯೇ ಎಂದು ಕೇಳಿದೆ .

ಅಷ್ಟೊತ್ತಿಗೆ ಕಟಪಾಡಿ ಬಸ್ಟ್ಯಾಂಡ್ ಬಂದೇಬಿಟ್ಟಿತು ಇವನು ಪುಸುಕ್ಕನೆ ಜಾರಿ ಯಾರ ಕಡೆಯೂ ನೋಡದೆ ತಲೆತಗ್ಗಿಸಿ ಇಳಿದುಹೋದ .

ನಾನು ಕಂಡೆಕ್ಟರ್ ಬಳಿ ಅವನ ಹೆಸರೇನು ಎಂದು ಕೇಳಿದೆ .ಅವನು “ಇರ್ಲಿ ಬಿಡಿ ಮೇಡಂ ಇರ್ಲಿ ಅವನು ಸ್ವಲ್ಪ ಹಾಗೆ ಸ್ವಲ್ಪ ಒರಟು ಎನ್ನುತ್ತಲೇ” ಅವನ ಹೆಸರನ್ನು ಹೇಳಿದ .

ಆ ಬಸ್ಸಿನ ಓನರ್ ಪರಿಚಯ ನನ್ನ ಒಬ್ಬ ಆತ್ಮೀಯರಿಗೆ ಬಹಳ ಚೆನ್ನಾಗಿ ಇರುವುದರಿಂದ ಕೂಡಲೇ ಅವರಿಗೆ ಫೋನ್ ಮಾಡಿ “ನೋಡಿ ಹೀಗೀಗಾಯಿತು ಆ ಓನರಿಗೆ ತಿಳಿಸಿ ಬಿಡಿ “ಎಂದೆ .

ಹತ್ತೇ ನಿಮಿಷದಲ್ಲಿ ನನಗೆ ಆ ಬಸ್ ಓನರ್ ರಿಂದ ಫೋನ್ ಬಂತು .ನಾನು ಪ್ರತಿಯೊಂದನ್ನೂ ವಿವರವಾಗಿ ಅವರಿಗೆ ತಿಳಿಸಿದೆ. ಅವರು ನನ್ನ ಬಳಿ ಕ್ಷಮೆಯಾಚಿಸಿ ನಾನು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಆಶ್ವಾಸನೆ ಕೊಟ್ಟರು .

ಹಾಗೆ ಮಂಗಳೂರಿಗೆ ಹೋಗಿ ಕಾಸರಗೋಡಿಗೆ ಹೋಗಿ ಸಾಯಂಕಾಲ ವಾಪಾಸು ಬಂದು ಮಂಗಳೂರಿಗೆ ಬಸ್ಸ್ಟಾಂಡಿನಲ್ಲಿ ಬಸ್ ಹತ್ತುವಾಗ ನೋಡಿದರೆ ಸಾಲಿನಲ್ಲಿ ಮೊದಲನೆಯದಾಗಿ ನಾನು ಹೋದ ಬಸ್ಸೆ ನಿಂತಿದೆ.

ಡ್ರೈವರ್ ಮತ್ತೆ ಕಂಡೆಕ್ಟರು ನಾನು ಬರುತ್ತಾ ಇರುವುದನ್ನು ನೋಡಿ ಬಹಳ ಪರಿಚಯದ ನಗುವನ್ನು ಬೀರುತ್ತಾ ಕುಳಿತಿದ್ದಾರೆ .

ನಾನು ಬಸ್ ಹತ್ತಿದ ಕೂಡಲೇ ಇಬ್ಬರೂ ಹೇಳಿದರು “ಬನ್ನಿ ..ಬನ್ನಿ ಮೇಡಂ !!ನೀವು ಬೆಳಿಗ್ಗೆ ಫೋನ್ ಮಾಡಿದ್ರಲ್ಲ ಭಾರೀ ಒಳ್ಳೆ ಕೆಲ್ಸ ಮಾಡಿದಿರಿ ಮೇಡಮ್.. ಅವನು ಹಾಗೆಯೇ.. ಬರೀ ಒರಟು .. ಇವತ್ತು ಅವನಿಗೆ ಫೋನ್ ಮಾಡಿ ಓನರ್ ಸರೀ ಬೈದಿದ್ದಾರೆ .ನಾಡಿದ್ದು ದೀಪಾವಳಿಗೆ ಬೋನಸ್ ಕೊಡುವುದಿಲ್ಲ ಎಂದೂ ಹೇಳಿದ್ದಾರೆ. ನಮಗೂ ಫೋನ್ ಮಾಡಿ ನಡೆದುದನ್ನೆಲ್ಲ ಕೇಳಿ ವಿಚಾರಿಸಿದರು” ಎಂದು ಹೇಳಿದ .

ನಾನು ಪುನಃ ಓನರಿಗೆ ಫೋನ್ ಮಾಡಿ ” ನೀವು ನನ್ನ ಮಾತಿಗೆ ಗೌರವ ಕೊಟ್ಟು ಅವನ ಮೇಲೆ ಕ್ರಮ ತೆಗೆದುಕೊಂಡದಕ್ಕೆ ಅತ್ಯಂತ ಧನ್ಯವಾದಗಳು ಸರ್ ..ಆದರೆ ಅವನಿಗೆ ನ್ಯಾಯಯುತವಾಗಿ ಸಲ್ಲಬೇಕಾದ ದೀಪಾವಳಿಯ ಬೋನಸ್ಸನ್ನು ಕೊಡದೆ ಇದ್ದರೆ ನನಗೆ ತುಂಬಾ ಬೇಸರವಾಗುತ್ತದೆ .ಅವನ ಮನೆ ಮಂದಿಯಲ್ಲಿ ದೀಪಾವಳಿಯ ಸಂಭ್ರಮವೇ ಮಾಯವಾಗುತ್ತದೆ. ಹಾಗಾಗಿ ದಯವಿಟ್ಟು ಅವನಿಗೆ ಕೊಡಬೇಕಾದ ಬೋನಸನ್ನು ಕೊಡಿ. ಆದರೆ ನಿಮ್ಮ ಸಿಬ್ಬಂದಿಗಳಿಗೆ ಶಿಸ್ತುಬದ್ಧವಾಗಿ ನಡೆದುಕೊಳ್ಳಬೇಕು ಹಾಗೂ ಪ್ರಯಾಣಿಕರ ಜತೆ ಹೇಗೆ ವರ್ತಿಸಬೇಕು ಎನ್ನುವ ಬಗ್ಗೆ ಸಣ್ಣ ತರಬೇತಿಯನ್ನು ಕೊಟ್ಟು ಬಿಡಿ.
ಬಹುಶಃ ನನ್ನ ಜಾಗದಲ್ಲಿ ಬೇರೆ ಯಾರಾದರೂ ಹೆಂಗಸರು ಇದ್ದಿದ್ದರೆ ಎಷ್ಟು ಕಕ್ಕಾಬಿಕ್ಕಿಯಾಗುತ್ತಿದ್ದರೇನೋ.. ಒಂದು ವೇಳೆ ಸ್ವಲ್ಪ ವಯಸ್ಸಾಗಿ ಕೈಕಾಲು ನೋವು ಇದ್ದವರು ಈ ರೀತಿ ಇವನ ಜಬರ್ದಸ್ತಿಗೆ ಹೆದರಿ ಇಳಿದರೆ ಒಮ್ಮೆ ಇಳಿದು ಪುನಃ ಇನ್ನೊಂದು ಬಸ್ಸು ಹತ್ತಿ ಹೋಗುವುದು ಅವರಿಗೆ ಎಷ್ಟು ತ್ರಾಸದಾಯಕ ಎನ್ನುವ ಅಂದಾಜಾದರೂ ಇವತ್ತು ಕೈಕಾಲು ಗಟ್ಟಿ ಇರುವ ಇವರಿಗಿದೆಯೇ.
ಅಷ್ಟಕ್ಕೂ ದುಡ್ಡು ಕೊಟ್ಟು ಟಿಕೆಟ್ ತೆಗೆಯುತ್ತಿರುವಾಗ ಇಳಿ ಎನ್ನುವ ಹಕ್ಕು ಇವರಿಗೆ ಕೊಟ್ಟವರಾದರೂ ಯಾರು? ಆ ನೋಟು ಏನು ನಾನು ಮನೆಯಲ್ಲಿ ಪ್ರಿಂಟ್ ಮಾಡಿ ತಂದ ಖೋಟಾನೋಟೇ ? ಹೇಗೂ ನಾನು ಮಂಗಳೂರಿನಲ್ಲಿ ಇಳಿಯುವವಳು ಚಿಲ್ಲರೆ ಮುಂದೆ ಕೊಡುತ್ತೇನೆ ಮೇಡಂ ..ಎಂದು ಹೇಳಿ ಇಳಿಯುವ ಮೊದಲು ಕೊಟ್ಟರೂ ಸಾಕಿತ್ತಲ್ಲವೇ” ಎಂದು ಕೇಳಿದೆ .

ಅವರೂ ಪ್ರೀತಿಯಿಂದಲೇ ನನಗೆ ಸಮಾಧಾನವನ್ನು ಹೇಳಿ ಮುಂದಿನ ದಿನಗಳಲ್ಲಿ ಯಾರಿಗೂ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎನ್ನುವ ಆಶ್ವಾಸನೆಯನ್ನು ನೀಡಿದರು ..

ಇತ್ತೀಚೆಗೆ ಒಂದು ಮದುವೆಗೆ ಹೋಗಲು ಬಸ್ ಹತ್ತಿದವಳು ಕಂಡೆಕ್ಟರ್ ಬಳಿ ಟಿಕೆಟ್ ತೆಗೆದುಕೊಳ್ಳುತ್ತಾ ನನಗೆ ಇಂಥ ಮದುವೆ ಹಾಲಿಗೆ ಹೋಗಬೇಕಾಗಿತ್ತು ..ಯಾವ ಸ್ಟಾಪ್ ನಲ್ಲಿ ಇಳಿಯಬೇಕು ಎಂದು ವಿಚಾರಿಸಿದಾಗ ಅವರು “ಮೇಡಂ ಆ ಹಾಲಿಗೆ ಇಂಥ ಸ್ಟಾಪಿನಲ್ಲಿ ಇಳಿದರೆ ಬಹಳ ಹತ್ತಿರ. ನೀವು ಆರಾಮದಲ್ಲಿ ಕುಳಿತುಕೊಳ್ಳಿ ಇಳಿಯುವ ಸ್ಟಾಪ್ ಬರುವಾಗ ನಾನು ನಿಮಗೆ ಮೊದಲೇ ತಿಳಿಸುತ್ತೇನೆ” ಎಂದು ನಗು ನಗುತ್ತಾ ಹೇಳಿದ .ನಾನೂ ನಿಶ್ಚಿಂತೆಯಿಂದ ಕುಳಿತುಕೊಂಡೆ.

ಆ ದಿನ ಬಹುಶಃ ಎಲ್ಲಾ ಕಡೆಯೂ ಮದುವೆ ಇತ್ತೋ ಏನೋ.. ಬಸ್ಸಿನ ತುಂಬಾ ಮದುವೆಗೆ ಹೊರಟಂತಹ ಜನರೇ ಇದ್ದರು .

ಹಾಗೆ ಪ್ರತಿ ಸ್ಟಾಪಿನಲ್ಲೂ ಬಸ್ ನಿಲ್ಲುವಾಗ ಕಂಡೆಕ್ಟರ್ ಆ ಸ್ಟಾಪಿನ ಹೆಸರನ್ನು ಹೇಳುತ್ತಾ ಈ ಸ್ಟಾಪಿನಿಂದ ಇಂಥಿಂಥ ಮದುವೆ ಹಾಲ್ ಗಳಿಗೆ ಹೋಗಬಹುದು ಎಂದು ಗಟ್ಟಿಯಾಗಿ ಅನೌನ್ಸ್ ಮಾಡುತ್ತಾ ಇದ್ದ .

ನಾನು ಇಳಿಯುವ ಸ್ಟಾಪ್ ಬರುವ ಐದು ನಿಮಿಷದ ಮೊದಲೇ ನನ್ನ ಬಳಿ ಬಂದು “ಮುಂದಿನ ಸ್ಟಾಪ್ ನೀವು ಇಳಿಯಬೇಕಾದದ್ದು ಮೇಡಂ! ಆ ಮದುವೆ ಹಾಲಿಗೆ ಹೋಗಲು ನೀವು ಏನು ರಿಕ್ಷಾ ಮಾಡಬೇಕಾದ ಅವಶ್ಯಕತೆಯಿಲ್ಲ ರಸ್ತೆ ಕ್ರಾಸ್ ಮಾಡಿ ಎದುರಿನಲ್ಲಿ ಕಾಣುವ ರಸ್ತೆಯಲ್ಲಿ ಒಂದು ನಾಲ್ಕು ಹೆಜ್ಜೆ ನಡೆದರೆ ಸಾಕು ನೀವು ಹಾಲ್ ಸೇರುತ್ತೀರಿ.” ಎಂದು ಹೇಳುತ್ತಾ… ಬಸ್ ನಿಂತಾಗ ಕಿಟಕಿಯಿಂದ ಹೊರಗೆ ತೋರಿಸುತ್ತ “ಅಗೋ ಅಲ್ಲಿ ನೋಡಿ ಮೇಡಂ.. ಅದೇ ರಸ್ತೆ ಅದರಲ್ಲಿ ಸ್ವಲ್ಪ ಮುಂದೆ ಹೋದ್ರೆ ಸಾಕು ..ನೋಡಿ ಹಾಲಿನ ಮೇಲ್ಭಾಗ ಇಲ್ಲಿಂದಲೇ ಸ್ವಲ್ಪ ಸ್ವಲ್ಪ ಕಾಣಿಸುತ್ತಾ ಇದೆ ನೋಡಿ” ಎಂದು ತೋರಿಸಿ “ನಿಧಾನ ಇಳಿಯಿರಿ “ಎಂದು ಸಮಾಧಾನದಿಂದ ಹೇಳಿದರು .

ನಾನು ಇವರ ಅತ್ಯಂತ ಸುಸಂಸ್ಕೃತ, ಸಾತ್ವಿಕ ,ಸ್ವಭಾವ ಹಾಗೂ ಸರಳ ಮನಸ್ಸಿಗೆ ತಲೆಬಾಗುತ್ತಾ “ಧನ್ಯವಾದಗಳು ಅಣ್ಣ!!” ಎಂದು ಹೇಳುತ್ತಾ ಡ್ರೈವರ್ ಕಂಡೆಕ್ಟರ್ ಇಬ್ಬರಿಗೂ ಕೈ ಮುಗಿದೆ.

ಬಸ್ಸು ಹತ್ತಿದ ಕೂಡಲೇ” ಬೇಗ ಬೇಗ ಹತ್ತಿ ..ಬೇಗ ಬೇಗ ಹತ್ತಿ.
ಮುಂದೆ ಹೋಗಿ ಮುಂದೆ ಮುಂದೆ ಹೋಗಿ” ಎನ್ನುತ್ತಾ ಬೊಬ್ಬೆ ಹೊಡೆಯುವ .
ಇಳಿಯುವ ಸ್ಟಾಪ್ ಬಂದ ಕೂಡ್ಲೆ ಬೇಗ ಬೇಗ ಬೇಗ ಬೇಗ ಇಳಿಯಿರಿ ಎಂದು ಗಾಬರಿ ಹುಟ್ಟಿಸುವ ಕಂಡೆಕ್ಟರ್ ಗಳು .
. ವಯಸ್ಸಾದವರು ಇವರ ಬೊಬ್ಬೆಗೆ ಗಲಾಟೆಗೆ ತಮ್ಮ ಸ್ಟಾಪಿನಲ್ಲಿ ಇಳಿಯುವ ಗಡಿಬಿಡಿಯಲ್ಲಿ ಗಲಿಬಿಲಿಗೊಂಡು ಒಂದೇ ಯಾವುದಾದರೂ ಸಾಮಾನನ್ನು ಬಸ್ಸಿನಲ್ಲಿ ಬಿಟ್ಟುಬಿಡುವ ..ಅಥವಾ ಇಳಿಯುವಾಗ ಇವರ ಗಡಿಬಿಡಿಗೆ ಕೆಲವೊಮ್ಮೆ ಬಿದ್ದುಬಿಡುವ ಅನೇಕ ಸಂದರ್ಭವನ್ನು ನೋಡುತ್ತಿರುವವಳಿಗೆ… ಈ ಕಂಡಕ್ಟರ್ ನ ಸಮಾಧಾನ. ನಗು ಮುಖದ ಸಾತ್ವಿಕ ಮನಸ್ಸು..ಸಹಾಯ ಮಾಡುವ ಮನಸ್ಸು ನಿಜವಾಗಿಯೂ ಆಶ್ಚರ್ಯವನ್ನು ಉಂಟು ಮಾಡಿತ್ತು.

ಹೀಗೂ ಉಂಟೇ ಎನ್ನುವ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡಿತ್ತು .

ಶ್ರೀಮತಿ ಸಂಧ್ಯಾ ಶೆಣೈ ಉಡುಪಿ

 
 
 
 
 
 
 
 
 
 
 

Leave a Reply