Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ಸ್ವಚ್ಛತೆಗೆ ಆದ್ಯತೆ ನೀಡುವುದು ಎಲ್ಲರ ಕರ್ತವ್ಯವಾಗಬೇಕು: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ

ಉಡುಪಿ, ಜೂನ್ 28 (ಕವಾ): ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡುವುದು ಮುಖ್ಯ ಕರ್ತವ್ಯವಾಗಿದೆ. ಇದರಿಂದ ಸಮಾಜದಲ್ಲಿ ಎಲ್ಲರೂ ಉತ್ತಮ ಅರೋಗ್ಯವಂತರಾಗಿ ಇರಲು ಸಾಧ್ಯ ಎಂದು
ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಉಡುಪಿ ಜಿಲ್ಲೆ ಸಹಯೋಗದಲ್ಲಿ ನಡೆದ ಸ್ವಚ್ಛ ವಿದ್ಯಾಲಯ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಶಸ್ತಿ
ಪ್ರಧಾನ ಮಾಡಿ ಮಾತನಾಡಿದರು. ನಮ್ಮ ಸುತಮುತ್ತಲಿನ ಪರಿಸರವನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರಥಮ ಆದ್ಯತೆಯಾಗಬೇಕು. ಕೇವಲ ಪ್ರಶಸ್ತಿ
ಪುರಸ್ಕಾರ ಪಡೆಯುವ ದೃಷ್ಠಿಯಿಂದ ಈ ಕಾರ್ಯವನ್ನು ಮಾಡುವುದು ಸರಿಯಲ್ಲ. ಇದು ನಮ್ಮ ದೈನಂದಿನ ಚಟುವಟಿಕೆಗಳ ಕಾರ್ಯವಾಗಬೇಕು ಎಂದರು.
ಯಾವುದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವಾಗ ಫಲಾಪೇಕ್ಷೆಯಿಲ್ಲದೆ ನಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ಮಾಡಿದಾಗ ಅದಕ್ಕೆ ಪ್ರತಿಫಲ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಅಂತಹ ಪ್ರತಿಫಲ ಮಹತ್ವನ್ನು ಪಡೆದಿರುತ್ತದೆ. ಈ ರೀತಿಯಾಗಿ ನಾವುಗಳು ಸ್ವಚ್ಛತಾ ಕಾರ್ಯಗಳನ್ನು ಮಾಡಿದಾಗ ಅದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತದೆ ಎಂದರು.

ಕೇಂದ್ರ ಸರ್ಕಾರದ ಸ್ವಚ್ಛ ವಿದ್ಯಾಲಯ ಪುರಸ್ಕಾರದಂತಹ ಕಾರ್ಯಕ್ರಮವನ್ನು ನಾವ್ಯಾರು ನಿರೀಕ್ಷಿಸಿರಲಿಲ್ಲ. ಇಂತಹ ಒಂದು ಮಹತ್ವ ಕಾರ್ಯಕ್ರಮವನ್ನು ರೂಪಿಸುವುದರೊಂದಿಗೆ ಶಾಲಾ ಕಾಲೇಜುಗಳ ಪರಿಸರವನ್ನು ಉತ್ತಮವಾಗಿ ಇರಿಸುವುದರೊಂದಿಗೆ
ವಿದ್ಯಾರ್ಥಿಗಳಲ್ಲಿ ಶಿಸ್ತು, ಸಾಮರ್ಥ್ಯ ಹಾಗೂ ಶುಚಿತ್ವವನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದರು.

ಪ್ರಸ್ತುತ ಸಾಲಿನ ಈ ಪುರಸ್ಕಾರಕ್ಕೆ ಜಿಲ್ಲೆಯ 1168 ಶಾಲಾ ಕಾಲೇಜುಗಳಲ್ಲಿ 729 ಶಾಲೆಗಳು ನೊಂದಾಯಿಸಿ, 627 ಶಾಲೆಗಳು ಆನ್‌ಲೈನ್‌ನಲ್ಲಿ ತಮ್ಮ ಶಾಲೆಯ ಕಾರ್ಯ ಸಾಧನೆಯ ಮಾಹಿತಿಯನ್ನು ದಾಖಲಿಸಿದ್ದು, ಜಿಲ್ಲಾ ಮಟ್ಟದ ಸಮಿತಿಯು ಸರ್ಕಾರದ
ಮಾನದಂಡದನ್ವಯ 38 ಶಾಲೆಗಳನ್ನು ವಿವಿಧ ಆಯಾಮಗಳಲ್ಲಿ ಆಯ್ಕೆಗೊಂಡಿರುತ್ತವೆ. ಈ ಎಲ್ಲಾ ಶಾಲಾ-ಕಾಲೇಜುಗಳನ್ನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಎಂದರು.
ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ಉತ್ತಮ ಶಿಕ್ಷಣವನ್ನು ಪಡೆಯುವುದರಿಂದ ಸಮಾಜದ ಹಿತಕ್ಕೆ ಹಾಗೂ ತಮ್ಮ ವೈಯಕ್ತಿಕ ಅಭಿವೃದ್ಧಿ ಹೊಂದಲು ಸಾದ್ಯವಾಗುತ್ತದೆ ಎಂದ ಅವರು, ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿಯೊಂದು ಶಾಲೆಗಳೂ
ಸ್ವಚ್ಛ ವಿದ್ಯಾಲಯ ಪುರಸ್ಕಾರ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಒಳಿತು ಎಂದರು.

ಸ್ವಚ್ಛ ವಿದ್ಯಾಲಯ ಪ್ರಶಸ್ತಿ ಪುರಸ್ಕಾರದಲ್ಲಿ, ಕಾರ್ಕಳ ತಾಲೂಕಿನ ನಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬ್ರಹ್ಮಾವರದ ಚೇತನಾ ಪ್ರೌಢಶಾಲೆ, ಹಂಗಾರಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆವರ್ಸೆಯ ಹಿರಿಯ ಪ್ರಾಥಮಿಕ ಶಾಲೆ,
ನಿಟ್ಟೂರಿನ ಜಿ.ಎಂ.ವಿದ್ಯಾನಿಕೇತನ ಶಾಲೆ, ಕುಂದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡುವಳತ್ತೂರು ಕಾರ್ವಾಡಿ ಶಾಲೆ, ನೇತಾಜಿ ಹಿರಿಯ ಪ್ರಾಥಮಿಕ ಶಾಲೆ ಹಳ್ನಾಡು, ಉಡುಪಿಯ ಸೈಂಟ್ ಸಿಸಿಲಿಸ್ ಶಾಲೆಗಳಿಗೆ ಸಮಗ್ರ ಪ್ರಶಸ್ತಿ ಹಾಗೂ 30 ಶಾಲೆಗಳಿಗೆ
ಇತರೆ ಪ್ರಶಸ್ತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಡಿಡಿಪಿಐ ಗೋವಿಂದ ಮಡಿವಾಳ ಹಾಗೂ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಚಂದ್ರಾ ನಾಯಕ್ ಸ್ವಾಗತಿಸಿ , ವಂದಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!