ಪತ್ರಕರ್ತ ಯು.ಎಸ್ ಶೆಣೈಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ

ಬ್ರಹ್ಮಾವರ : ದೇಶದ ಭ್ರಷ್ಟಾಚಾರದಲ್ಲಿ ಸಾವಿರ, ಲಕ್ಷ, ಕೋಟಿ ಹೀಗೆ ವರ್ಷದಿಂದ ವರ್ಷಕ್ಕೆ ಸೊನ್ನೆಗಳ ಸಂಖ್ಯೆ ಹೆಚ್ಚಿ, ವ್ಯಕ್ತಿಯ ಜೀವನದಿಂದ ಮಾನವೀಯತೆ, ತೃಪ್ತಿ ದೂರವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದರು.

ಬ್ರಹ್ಮಾವರ ಬಂಟರ ಭವನದಲ್ಲಿ ಭಾನುವಾರ ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಪ್ರತಿವರ್ಷ

ನೀಡುವ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ತೃಪ್ತಿ, ಮಾನವೀಯತೆ ಗುಣದಿಂದ ನಮ್ಮಲ್ಲಿನ‌ ದುರಾಸೆಯನ್ನು ದೂರಮಾಡಿಕೊಳ್ಳಬಹುದು.ವ್ಯಕ್ತಿಗೆ ಪ್ರೋತ್ಸಾಹ ನೀಡದೇ ಸಮಾಜಕ್ಕೆ ಪ್ರೋತ್ಸಾಹ ನೀಡುವ ಮನೋಭಾವನೆಯನ್ನು ನಾವು ಬೆಳೆಸಿಕೊಳ್ಳಬೇಕು. ಮೌಲ್ಯಯುತವಾದ ಸಮಾಜ ದುರಾಸೆಯಿಂದ ಹಾಳಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆಯ

ರಾಜಕೀಯ ಇಂದು ನಮಗೆ ಕಾಣಲು ಸಿಗುತ್ತಿಲ್ಲ. ರಾಜಕೀಯ ವೃತ್ತಿಯಾಗದೇ ಸೇವೆ ಆಗಬೆಕು ಎಂದು ಹೇಳಿದರು.

ಸಮಾಜ ಇಂದು ಬದಲಾಗಿದೆ. ಜೈಲಿಗೆ ಹೋಗಿ ಬಂದ ವ್ಯಕ್ತಿಯನ್ನು ಅದ್ದೂರಿಯಿಂದ ಸ್ವಾಗತಿಸುವ ಪರಿಸ್ಥಿತಿ ನಮ್ಮಲ್ಲಿ ಬಂದಿದೆ. ಇದರಿಂದ ಶಾಂತಿ, ಸೌಹಾರ್ಧತೆ ನೆಲೆಸಲು ಸಾಧ್ಯವಿಲ್ಲ ಎಂದರು.

ಕೋಟ ಅಮೃತೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಆನಂದ್  ಸಿ ಕುಂದರ್  ಮಾತನಾಡಿ ಹಿಂದುಳಿದ ವರ್ಗದ ಜನರ ಅಭಿವೃದ್ಧಿಗೆ ಹೋರಾಟ ನಡೆಸಿದ್ದ ವಡ್ಡರ್ಸೆ ಅವರು ಸಮಾಜದ ಒರೆ ಕೋರೆ ಗಳನ್ನು ತಿದ್ದಿದ್ದರೂ,ನಿಷ್ಟುರವಾದಿಗಳಾದರು ಎಂದು ಹೇಳಿದರು.

ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರು ಕುಂದಾಪುರದ ವಾರಪತ್ರಿಕೆ ಕುಂದಪ್ರಭದ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ಯು.ಎಸ್ ಶೆಣೈ ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿದರು.

 ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರಮೂರ್ತಿ, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ನಝೀರ್ ಪೊಲ್ಯ,ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು.

 ಕಾರ್ಯಕ್ರಮದ ಸಂಚಾಲಕ ವಸಂತ ಗಿಳಿಯಾರ್‌ ಪ್ರಾಸ್ತಾವಿಕ ಮಾತನಾಡಿ, ಸಂಘದ ಕಾರ್ಯದರ್ಶಿ ರಾಜೇಶ್‌ ಅಚ್ಲಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿ,ಕೋಶಾಧಿಕಾರಿ ಮೋಹನ್‌ ಉಡುಪ ವಂದಿಸಿದರು.

 
 
 
 
 
 
 
 
 
 
 

Leave a Reply