ಶಾಶ್ವತ ಯೋಜನೆಗಳಿಂದ ಅನುಕರಣೀಯ ಅಭಿನಂದನೆ~ ಕೆ ರಘುಪತಿ ಭಟ್

‘ಪ್ರತಿಫಲನ’ ಮಲ್ಲಿಕಾದೇವಿ ಟೀಚರ್ ಅಭಿನಂದನಾ ಕಾರ್ಯಕ್ರಮ
ಉಡುಪಿ: ಮುಂದೆ ನಿವೃತ್ತರಾಗುವ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹೇಗೆ ಮಾಡಬೇಕು ಎಂಬುದಕ್ಕೆ ಶಾಶ್ವತ ಯೋಜನೆಗಳ ಮೂಲಕ ಮಲ್ಲಿಕಾದೇವಿ ಟೀಚರ್ ಅವರ ಶಿಷ್ಯರು ತೋರಿಸಿ ಕೊಟ್ಟಿದ್ದಾರೆ. ಇದು ಎಲ್ಲರಿಗೂ ಮಾದರಿ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಕೊಡವೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕಿ ಮಲ್ಲಿಕಾ ಟೀಚರ್ ಅವರಿಗೆ ಅವರ ಹಳೇ ವಿದ್ಯಾರ್ಥಿಗಳು, ಊರವರು ಸೇರಿ ಭಾನುವಾರ ಹಮ್ಮಿಕೊಂಡಿದ್ದ ‘ಪ್ರತಿಫಲನ’ ಅಭಿನಂದನಾ
ಕಾರ್ಯಕ್ರಮದಲ್ಲಿ ಕೊಡವೂರಿನಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಷ್ಯರು ಯೋಚನೆ ಮಾಡಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅಂಥ ಒಳ್ಳೆಯ ಯೋಚನೆ ಬರುವಂಥ ಶಿಕ್ಷಣವನ್ನು ಮಲ್ಲಿಕಾ ಟೀಚರ್ ನೀಡಿದ್ದಾರೆ. ಹಾಗಾಗಿ ಶಿಷ್ಯರು ಮತ್ತು ಟೀಚರ್ ಇಬ್ಬರೂ ಅಭಿನಂದ ನೆಗೆ ಅರ್ಹರು ಎಂದು ಶ್ಲಾಘಿಸಿದರು. ಶಿಕ್ಷಕರಾಗಿರುವ ಬಹುತೇಕರು ಅದನ್ನು ಸೇವೆ ಎಂದೇ ಪರಿಗಣಿಸಿ ಕೆಲಸ ಮಾಡುತ್ತಾರೆ.
ತಾವು ಕಾರ್ಯನಿರ್ವಹಿಸುವ ಪ್ರದೇಶಗಳಲ್ಲಿ ಉತ್ತಮ ಕೆಲಸ ಮಾಡಿರುತ್ತಾರೆ. ಮಲ್ಲಿಕಾ ಟೀಚರ್ ಕ್ರೀಡೆಗೆ ಸೀಮಿತವಾಗದೇ ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಹಲವರು ಪೊಲೀಸ್ ಇಲಾಖೆಗೆ ಸೇರಲು ಅವರ ದೈಹಿಕ ಕ್ಷಮತೆಗೆ ಬೇಕಾದ ತರಬೇತಿಯನ್ನು ಕೂಡ ಮಲ್ಲಿಕಾ ಟೀಚರ್ ನೀಡಿದ್ದಾರೆ ಎಂದು ನೆನಪಿಸಿಕೊಂಡರು.
ಬೇರೆ ಎಲ್ಲರೂ ಮಾಜಿಗಳಾಗುತ್ತಾರೆ. ಶಿಕ್ಷಕರು ಎಂದೂ ಮಾಜಿ ಆಗುವುದಿಲ್ಲ. ಅವರು ವಯೋ ನಿವೃತ್ತಿಯಷ್ಟೇ ಪಡೆದಿರುತ್ತಾರೆ. ಮಲ್ಲಿಕಾ ಟೀಚರ್ ಅವರ ಅನುಭವ ಶಿಕ್ಷಣ ಕ್ಷೇತ್ರಕ್ಕೆ ಮುಂದೆಯೂ ಬಳಕೆಯಾಗಲಿ ಎಂದು ಹಾರೈಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಮಲ್ಲಿಕಾ ಟೀಚರ್ ಅವರ ಸೇವೆ ಮುಕ್ತಾಯ ವಾದರೂ ಅವರ ನೆನಪು ಶಾಶ್ವತವಾಗಿರಬೇಕು ಎಂದು ಅಭಿನಂದನಾ ಸಮಿತಿಯವರು ಉತ್ತಮ ಕಾರ್ಯ ಹಮ್ಮಿಕೊಂಡಿದ್ದಾರೆ. ಕುಡಿಯುವ ನೀರು ಪೂರೈಕೆಗಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ. ಅಂಥ ಕೆಲಸವನ್ನು ಕೊಡವೂರಿನಲ್ಲಿ ಮಾಡಿದ್ದಾರೆ. ನಿವೃತ್ತರಿಗೆ ಸನ್ಮಾನ ಎಂದರೆ ಹಾರ, ಹಣ್ಣು ಗಳನ್ನು ನೀಡುವುದಕ್ಕೆ ಎಲ್ಲ ಕಡೆ ಸೀಮಿತವಾಗಿರುತ್ತದೆ. ಇಲ್ಲಿ ಅದಕ್ಕಿಂತ ಭಿನ್ನವಾಗಿ ಶಾಶ್ವತ ಕೆಲಸಗಳ ಮೂಲಕ ಅಭಿನಂದಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಕರು ಪಾಠ ಚೆನ್ನಾಗಿಯೇ ಮಾಡುತ್ತಾರೆ. ಆದರೆ ಚುನಾವಣೆಯ ಕೆಲಸಗಳನ್ನು ನೀಡಿದಾಗ ಹಿಂಜರಿಯುತ್ತಾರೆ. ಮಲ್ಲಿಕಾ ಟೀಚರ್ ನಮ್ಮ ಬೂತ್‌ನ ಬಿಎಲ್‌ಒ ಆಗಿದ್ದರು. ಅವರು ಶೇ ೧೦೦ರಷ್ಟು ಶ್ರದ್ಧೆಯಿಂದ ಆ ಕೆಲಸ ಕೂಡ ಮಾಡುವುದನ್ನು ನಾನು ನೋಡಿದ್ದೇನೆ. ಸರಕಾರ ಸಂಬಳ ನೀಡಿದ ಮೇಲೆ ಅವರ ನೀಡಿದ ಕೆಲಸವನ್ನು ಪ್ರಾಮಾಣಿಕತೆಯಿಂದ, ಬದ್ಧತೆ ಯಿಂದ ಮಾಡಬೇಕು ಎಂದು ನಂಬಿದವರು ಮಲ್ಲಿಕಾ ಟೀಚರ್ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಭಾಷಣೆ ಸ್ಪರ್ಧೆ, ವಿದ್ಯಾರ್ಥಿಗಳ ದತ್ತು ಸ್ವೀಕಾರ, ಮಲ್ಲಿಕಾ ದೇವಿ ಶಿಕ್ಷಕಿಗೆ ಅಭಿನಂದನಾ ಗ್ರಂಥ ಅರ್ಪಣೆ, ಗೌರವಾರ್ಪಣೆ ಮುಂತಾದ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಉಡುಪಿ ನಗರಾಭವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ,  ನಿವೃತ್ತ ಶಿಕ್ಷಕಿ ಮಲ್ಲಿಕಾ ಟೀಚರ್, ಉದ್ಯಮಿಗಳಾದ ಆನಂದ್ ಪಿ ಸುವರ್ಣ, ಸಾಧು ಸಾಲ್ಯಾನ್, ನಾಗರಾಜ್ ಸುವರ್ಣ,
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಬಲ್ಲಾಳ್, ಸ್ಥಳೀಯ ನಗರಸಭಾ ಸದಸ್ಯರುಗಳಾದ ಶ್ರೀಶ ಭಟ್ ಮೂಡುಬೆಟ್ಟು, ವಿಜಯ ಕೊಡವೂರು, ಉಪನ್ಯಾಸಕಿ ಅರ್ಪಿತಾ ಶೆಟ್ಟಿ, ಅಭಿನಂದನಾ ಸಮಿತಿ ಸಂಚಾಲಕರುಗಳಾದ ಅರುಣ್ ಕುಮಾರ್, ಮೊಹಮ್ಮದ್ ಶರೀಫ್, ಬಾಲಕೃಷ್ಣ ಕೊಡವೂರು, ಸತೀಶ್ ಕೊಡವೂರು, ಪ್ರವೀಣ್ ಜಿ.ಕೊಡವೂರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply