ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ 66ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ

ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಖ್ಯಾತ ನಟ, ನಿರ್ದೇಶಕ, ವ್ಯಕ್ತಿತ್ವ ವಿಕಸನ ತರಬೇತುದಾರ ಪ್ರದೀಪ್ ಚಂದ್ರ ಕುತ್ಪಾಡಿ ಇವರು ‘ಕನ್ನಡದ ದೀಪವನ್ನು ಹಚ್ಚಿ’ ಆಶಯ ಮಾತುಗಳನ್ನಾಡುತ್ತಾ, “ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸುದೀರ್ಘವಾದ ಇತಿಹಾಸವಿದೆ.
ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳಿಂದ ಪುರಸ್ಕೃತವಾದ ಭಾಷೆಗಳಲ್ಲಿ ಕನ್ನಡವೂ ಒಂದು. ಭಾಷೆ ಕೇವಲ ಆಡುಮಾತಿಗೆ ಸೀಮಿತವಾಗಿರದೆ ಸಂಸ್ಕೃತಿಯ ಪ್ರತೀಕವಾಗಿರುತ್ತದೆ. ಒಂದು ಭಾಷೆಯನ್ನು ಅರಿತರೆ ಸಂಸ್ಕೃತಿಯನ್ನು ಅರಿತಂತೆ. ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಗ್ರಹಿಕೆಯ ಭಾಷೆ ಮಾತೃಭಾಷೆ ಯಾಗಿರುತ್ತದೆ. ಮಾತೃಭಾಷೆಯಲ್ಲಿಯೇ ಗ್ರಹಿಸಿ ನಮ್ಮ ಮೆದುಳು ತರ್ಜುಮೆಗೊಳಿಸಿ ಅನ್ಯಭಾಷಿಕರ ಜೊತೆಯಲ್ಲಿ ಸಂಭಾಷಿಸುತ್ತೇವೆ. ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ಯುವಜನರಲ್ಲಿ ವಿಶೇಷ ಪ್ರೀತಿ ಮತ್ತು ಅಭಿಮಾನ ವಿರಲಿ” ಎಂದು ಹೇಳಿದರು.
ಖ್ಯಾತ ಗಾಯಕರಾದ ಮಧೂರು ನಾರಾಯಣ ಸರಳಾಯರು ಶುಭಾಶಂಸಿಸಿ ಕನ್ನಡದ ನಾಡು, ನುಡಿ, ಸಂಸ್ಕೃತಿಗೆ ಸಂಬ೦ಧಿಸಿದ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಸುಕನ್ಯಾ ಮೇರಿ ಜೆ ಮಾತನಾಡಿ, “ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲಾದುದು.
ಮಾತೃಭೂಮಿಯ ಋಣ ಪ್ರತಿಯೊಬ್ಬರೂ ತೀರಿಸಬೇಕು. ಕನ್ನಡಿಗರಾಗಿ ಪ್ರತಿಯೊಬ್ಬರೂ ಕನ್ನಡ ರಾಜ್ಯೋತ್ಸವದಲ್ಲಿ ಸಂಭ್ರಮದಿ೦ದ ಭಾಗವಹಿಸಬೇಕು” ಎಂದು ಹೇಳಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ, ಕನ್ನಡ ಉಪನ್ಯಾಸಕ ರಮಾನಂದ ರಾವ್ ಕಾರ್ಯಕ್ರಮವನ್ನು ಆಯೋಜಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. 
ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಪ್ರಜ್ಞಾ ಮಾರ್ಪಳ್ಳಿ ಅತಿಥಿ ಅಭ್ಯಾಗತರನ್ನು ಪರಿಚಯಿಸಿದರು. ಯೋಜನಾಧಿಕಾರಿ ಶ್ರೀಲತಾ ಆಚಾರ್ಯ ವಂದಿಸಿದರು. ಸ್ವಯಂಸೇವಕಿ ಕುಮಾರಿ ಶ್ರೀನಿತ್ಯ ನಿರೂಪಿಸಿದರು. ಕುಮಾರಿ ಅಚಲಾ ಹಾಗೂ ಅಖಿಲಾ ಪ್ರಾರ್ಥಿಸಿದರು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
 
 
 
 
 
 
 
 
 
 
 

Leave a Reply