ದೇಶ ಕಟ್ಟುವ ಕಾಯಕದಲ್ಲಿ ನೀರೆಯರ ಕೊಡುಗೆ~ ಪೂರ್ಣಿಮಾ ಜನಾರ್ದನ್

ಯಾ ದೇವಿ ಸರ್ವಭೂತೇಶು ಶಕ್ತಿ ರೂಪೇಣ ಸಂಸ್ಥಿತ ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋನಮಃ . ಸರ್ವಜೀವಿಗಳಲ್ಲೂ ಶಕ್ತಿ ತುಂಬುವ ಜಗನ್ಮಾತೆಯನ್ನು ಸ್ಮರಿಸುತ್ತಾ ಎಲ್ಲಾ  ಮಹಿಳೆಯರಿಗೆ ಹಾಗು  ಮಹಿಳೆಯರನ್ನು ಗೌರವಿಸುವ  ಮಹನೀಯರಿಗೆ ವಿಶ್ವ ಮಹಿಳಾ ದಿನದ ಶುಭಾಶಯಗಳು.

ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂದು ರಾಮಾಯಣದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಉಲ್ಲೇಖಿಸಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ನಮ್ಮನ್ನು ಹೆತ್ತ ತಾಯಿ ಹೊತ್ತ ಭವ್ಯ  ಭಾರತ ಮಾತೆಯ ಚರಣಗಳಿಗೆ ವಂದಿಸುತ್ತಾ ಆಶ್ರಯ ನೀಡಿದ  ತಾಯಿ ಭುವನೇಶ್ವರಿಗೆ, ತುಳು ಅಪ್ಪೆಗೆ ನಮಿಸುತ್ತಾ ದೇಶದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಅಗಾಧ. ಸ್ತ್ರೀಯರನ್ನು ಗೌರವಿಸುವ ಪೂಜಿಸುವ ಸಂಸ್ಕೃತಿ ನಮ್ಮದು .

ಮನೆಯೇ ಮೊದಲ ಪಾಠಶಾಲೆ  ಜನನಿ ತಾನೇ ಮೊದಲ ಗುರು ಎಂದು ನಂಬಿಕೊಂಡು ಬಂದವರು.  ಗರ್ಭದಲ್ಲಿ ಪುಟ್ಟ ಜೀವ ಅಂಕುರಿಸಿದಾಗ ತಾಯಿ   ನಮ್ಮ ಸನಾತನ ಧರ್ಮ ಸಂಸ್ಕೃತಿ ಆಚಾರ ವಿಚಾರ ಆ ನಡವಳಿಕೆ ಆಚಾರ ವಿಚಾರ ಆಚರಣೆಗಳನ್ನು ಆ ಮಗುವಿನ ಮನದಲ್ಲಿ ಹಾಸು ಹೊಕ್ಕಾಗುವಂತೆ ಮನನ ಮಾಡುತ್ತಾ ಅದಕ್ಕೆ ಪೂರಕವಾದ ವಿಷಯಗಳನ್ನು ಚಿಂತಿಸುತ್ತಾ ಮಗುವಿನ ಮನದ ತುಂಬ ಧನಾತ್ಮಕ ಉದಾತ್ತ ಭಾವನೆಗಳನ್ನು ಬಿತ್ತಿದಾಗ ಆ ಮಗುವಿನ ಮನಸ್ಸು ಸಾತ್ವಿಕವಾಗಿ ರೂಪುಗೊಳ್ಳುತ್ತದೆ ಎಂದು ನಾವು ಪುರಾಣ ಇತಿಹಾಸದ ಕಾಲದಿಂದಲೂ ಕೇಳಿ ಬಲ್ಲವರು.

ಹುಟ್ಟಿದ ಕಂದನಿಗೆ ತೊಟ್ಟಿಲು ತೂಗುತ್ತಾ  ತಾಯಿ  ಹಾಡುವ ಲಾಲಿ ಹಾಡು,ಬೆಳೆಯುತ್ತಾ ಬಂದಂತೆ  ಭಜಿಸುವ ದೇವರ ನಾಮಗಳು, ಜಾನಪದ ಇತಿಹಾಸ ಬಿತ್ತರಿಸುವ ಪಾರ್ದನ, ಸಾಂಪ್ರದಾಯಿಕ ಹಾಡುಗಳು, ಸಮಯ ಸಿಕ್ಕಾಗೆಲ್ಲಾ ಹೇಳುವ ಧೀರ ಯೋಧರ ಕತೆಗಳು, ಸಾತ್ವಿಕ ರಾಜರ ಇತಿಹಾಸ, ರಾಮಾಯಣ ಮಹಾಭಾರತ ಪಂಚ ತಂತ್ರದ ಕಥೆಗಳು, ಪುರಾಣದಲ್ಲಿ ಬಂದು ಹೋದ ವೀರ ಬಾಲಕ ಬಾಲಕಿಯರ ಕಥನ, ಪ್ರಾತ: ಸ್ಮರಣೀಯ ನಾಯಕರ ಜೀವನ ಚರಿತ್ರೆ  ಇವೆಲ್ಲವನ್ನೂ ಬಾಲ್ಯದಿಂದಲೇ ಮಕ್ಕಳಿಗೆ ತಿಳಿಹೇಳಿ ಅವರಲ್ಲಿ ನಮ್ಮ ಭಾರತೀಯ ಸಂಸ್ಕೃತಿ ಆಚಾರ ವಿಚಾರಗಳ‌ ಬಗ್ಗೆ ಆಸಕ್ತಿ ಹಾಗು ಗೌರವ ಮೂಡಿಸುವುದು ಪ್ರತಿಯೊಬ್ಬ ಮಹಿಳೆಯ ಆದ್ಯ ಕರ್ತವ್ಯ.

ನಮ್ಮ ದೇಶ ಧರ್ಮಗಳ ರಕ್ಷಕ ಛತ್ರಪತಿ ಶಿವಾಜಿಯ ವೀರ ಮಾತೆ ಜೀಜಾಬಾಯಿಎಳೆಯ ವಯಸ್ಸಿನಿಂದಲೇ ಅವನ ಮನಸ್ಸನ್ನು ರೂಪಿಸಿದ ಮಾರ್ಗದರ್ಶಕಳು, ವೀರ ಪುತ್ರನಿಗೆ ಸ್ಪೂರ್ತಿಯಾದ ಮಹಾ ಮಾತೆ‌. ಶಿವಾಜಿಯಂತಹ ಮಹಾ ಪುರುಷನ ಜೀವನಕ್ಕೆ ಆಧಾರರೂಪವಾಗಿ ಸಂಸ್ಕಾರ ಕೊಟ್ಟು ತ್ಯಾಗ ಮಾಡಿ ವೀರತ್ವವನ್ನು ಜಾಗ್ರತಗೊಳಿಸಿ ಇತಿಹಾಸ ನಿರ್ಮಾಣ ಮಾಡುವ ಕಾರ್ಯದಲ್ಲಿ ಅತ್ಯಂತ ಹಿರಿದಾದ  ಪಾತ್ರ ವಹಿಸಿ ಇಡೀ ಸ್ತ್ರೀ ಸಂಕುಲಕ್ಕೆ ಆದರ್ಶ ವನಿತೆಯಾಗಿ ಮೆರೆದ ವೀರ ಮಹಿಳೆ  ಜೀಜಾ ಬಾಯಿ.

ಮಹಿಳೆ ಮಾನವೀಯತೆಯ ಶಕ್ತಿಯಾಗಿ ಸಮಾಜದ ಕನ್ನಡಿಯಾಗಿ ಆಡಳಿತ ಚತುರೆಯಾಗಿ ಅಗತ್ಯ ಬಂದಾಗ ದೇಶದ ನೆಲದ ರಕ್ಷಕಿಯಾಗಿ ದೇಶ ರಕ್ಷಣೆಯಲ್ಲಿ ಹಿಂದೆ ಬಿದ್ದಿಲ್ಲ ಎಂದು ತೋರಿಸಿಕೊಟ್ಟವಳು. ಅಂದು ಇಂದು ಎಂದೆಂದೂ ತಾನು ಕೇವಲ ನಾಲ್ಕು ಗೋಡೆಯ ಮಧ್ಯ ಇದ್ದ ಕಾಲದಲ್ಲಿ ಕೂಡ ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡಿದ ಮಹಿಳೆಯರು ತೊಟ್ಟಿಲು ತೂಗುವ ಕೈ ದೇಶದ ಆಳ್ವಿಕೆಗೂ ಸೈ ಎಂದು ಸಾಬೀತುಪಡಿಸಿದವರು. ಸ್ವಾತಂತ್ರ್ಯಕ್ಕಾಗಿ ನಮ್ಮ ನೆಲ ಸಂಸ್ಕೃತಿಯನ್ನು ಉಳಿಸಲು ಉಸಿರಿರುವವರಿಗೆ ಹೋರಾಡಿದ  ಉಳ್ಳಾಲದ ರಾಣಿ ಅಬ್ಬಕ್ಕ ,ಸ್ವಾತಂತ್ರ್ಯ ಪ್ರೇಮ ಮತ್ತು ಸ್ವಾಭಿಮಾನದ ಪ್ರತೀಕ ಕಿತ್ತೂರು ರಾಣಿ ಚೆನ್ನಮ್ಮ ,ಒನಕೆಯಿಂದ ವೈರಿ ಪಡೆಯ ಸದೆ ಬಡಿದ ಒನಕೆ ಓಬವ್ವ, ಔರಂಗಜೇಬನಿಗೆ ಹೆದರದೆ ದುರ್ಗಿಯಂತೆ ಹೋರಾಡಿ ಶತ್ರುಗಳನ್ನು ಗೆದ್ದ ಕೆಳದಿ ಚನ್ನಮ್ಮ, ತನ್ನ ರಾಜ್ಯದ ಉಳಿವಿಗಾಗಿ ಕೆಚ್ಚದೆಯಿಂದ ಹೋರಾಡಿ ಅಮರಳಾದ ಬೆಳವಡಿ ಮಲ್ಲಮ್ಮ, ಸ್ವಾತಂತ್ರ್ಯದ ಜ್ವಾಲೆ ಅಮರಗೊಳಿಸಿದ ವೀರ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹೀಗೆ  ಭಾರತಮಾತೆಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಪೂರ್ವ ಸ್ತ್ರೀ ರತ್ನಗಳು ನಮ್ಮ ದೇಶದ ರಕ್ಷಣೆಗೆ  ನೀಡಿದ ಕೊಡುಗೆ ಅಪಾರ.

ನಾವೆಲ್ಲ ಗೌರವಿಸುವ ಸ್ವಾಮಿ ವಿವೇಕಾನಂದರ  ಗುರು ರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕ  ಸಾಧನೆಗೆ ಮಾತೆ ಶಾರದಾದೇವಿಯ ಪಾತ್ರ ಕೂಡ ಬಹುಮುಖ್ಯ .ಅಲ್ಲದೆ ರಾಷ್ಟ್ರಪ್ರಜ್ಞೆಯ ಉದ್ದೀಪಕಳಾಗಿ ಸೋದರಿ ನಿವೇದಿತ ತ್ಯಾಗ ರಾಷ್ಟ್ರ ಪ್ರೇಮಗಳೆಂಬ  ಉದಾತ್ತ ಧ್ಯೇಯಗಳನ್ನು ನೀಡಿದ  ಸ್ವಾಮಿ ವಿವೇಕಾನಂದರ ಪ್ರಮುಖ ಅನುಯಾಯಿಯಾದ ಆಕೆಯ ದೇಶ ಸೇವೆ ಸ್ಮರಣೀಯ. ಹೆಣ್ಣೊಂದು‌ ಕಲಿತರೆ ಶಾಲೆಯೊಂದು ತೆರೆದಂತೆ ಶಿಕ್ಷಣದ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಿದ ಮಹಿಳೆಯರ ಸಂಖ್ಯೆ ಅಪಾರ.ಕಲಿತ ಹೆಣ್ಣು ಮನೆಯ ಕಣ್ಣು ಎಂಬುದರಲ್ಲಿ ಎರಡು ಮಾತಿಲ್ಲ. ಅಕ್ಷರ ಕಲಿತ ನಾರಿ ದೇಶದ ಪ್ರಗತಿಗೆ ದಾರಿ ಎಂಬ ಮಾತಿನಂತೆ ಶೈಕ್ಷಣಿಕ ಕ್ರಾಂತಿ‌ಮಾಡಿದ ಸಾವಿತ್ರಿ ಭಾಪುಲೆ,ವಿಜಯಲಕ್ಷ್ಮಿ ಪಂಡಿತ್, ಸುಚೇತಾ ಕೃಪಲಾನಿ, ದುರ್ಗಾ ಬಾಯಿ ದೇಶ್ ಮುಖ್ ,ಮಾತಂಗಿನಿ ಹಜ್ರಾ ,ಸರೋಜಿನಿ ನಾಯ್ಡು. ಅಬ್ಬಾ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಅದರಲ್ಲೂ ಆ ಕಾಲದಲ್ಲಿ ಶಿಕ್ಷಣ ಪಡೆದ  ಸುಮಾರು ಹದಿನೈದು ಮಹಿಳೆಯರು ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ಸಂವಿಧಾನ ರೂಪಿಸುವ  ಪ್ರಕ್ರಿಯೆಯಲ್ಲಿ ಹಲವು ಉಪ ಸಮಿತಿಗಳಲ್ಲಿ ಮಹಿಳಾ ರಾಜಕಾರಣಿ ಗಳಾಗಿ ದೇಶದ ಅಭಿವೃದ್ಧಿಗೆ  ತಮ್ಮ ವಿಶೇಷ ಕೊಡುಗೆ ನೀಡಿದ್ದನ್ನು ಸ್ಮರಿಸಿಕೊಳ್ಳಬಹುದು. ವಿವಿಧ ಕ್ಷೇತ್ರಗಳಲ್ಲಿನ ತಮ್ಮ ಸಾ಼ಧನೆಯ ಮೂಲಕ ನಮ್ಮ   ದೇಶವನ್ನು ಜಗತ್ತಿನಾದ್ಯಂತ ಗುರುತಿಸಿದ ಸೇವೆಗಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಇಂದಿರಾಗಾಂಧಿ,ಮದರ್ ತೆರೇಸಾ,ಅರುಣಾ ಆಸೀಫ್ ಅಲಿ,ಎಮ್ ಎಸ್ ಸುಬ್ಬಲಕ್ಷಮಿ,ಲತಾ ಮಂಗೇಶ್ಕರ್ ಇವರೆಲ್ಲರ ಕೊಡುಗೆ ಅಪಾರ.

ಅಲ್ಲದೆ ಆಧುನಿಕ ತಂತ್ರಜ್ಞಾನದ ಮೂಲಕ ತಮ್ಮದೇ ಸಂಸ್ಥೆ ಮೂಲಕ ಮನೆ ಮಾತಾದ ಇನ್ಫೋಸಿಸ್ ಒಡತಿ ಸುಧಾ ಮೂರ್ತಿ, ಉದ್ಯಮಿ ಕಿರಣ್ ಮುಜಮ್ ದಾರ್, ಐಪಿಎಸ್ ಕಿರಣ್ ಬೇಡಿ, ಉದ್ಯಮಿ ಇಂದಿರಾ ನೂಯಿ, ಮಾಜಿ ರಾಷ್ಟ್ರಪತಿ ಸುಷ್ಮಾ ಸ್ವರಾಜ್, ಪ್ರತಿಭಾ ಪಾಟೀಲ್,ಮಾಜಿ ಮುಖ್ಯ ಮಂತ್ರಿ ಜಯಲಲಿತಾ,  ಸಿನೆಮಾ ಕ್ಷೇತ್ರದಲ್ಲಿ ಮಿಂಚಿದ ಹಲವಾರು ನಟಿಯರು, ರಂಗಭೂಮಿ ಕಲಾವಿದರು, ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಮಹಿಳಾ ವೈದ್ಯರು, ದಾದಿಯರು, ರಕ್ಷಣಾ ಸಚಿವಾಲಯದಲ್ಲಿ ಜವಾಬ್ದಾರಿ ಸ್ಥಾನ ಹೊತ್ತ ವನಿತೆಯರು , ಕ್ರೀಡಾ ಕ್ಷೇತ್ರದಲ್ಲಿ ಮಿಂಚಿದ ಸಾಧಕಿಯರು ,ಧಾರ್ಮಿಕ ಅನುಯಾಯಿಗಳು, ಸಾಂಸ್ಕ್ರತಿಕ ಕ್ಷೇತ್ರ ಹಾಗು ಮಾಡೆಲಿಂಗ್, ಚಲನ ಚಿತ್ರ ಕ್ಷೇತ್ರದಲ್ಲಿ  ತಮ್ಮದೇ. ಛಾಪು ಹೊತ್ತ ಮಹಿಳೆಯರು,.ಸಾರಸ್ವತ ಲೋಕಕ್ಕೆ ಲಗ್ಗೆ ಇಟ್ಟು ಸಾಹಿತ್ಯ ಕ್ರಾಂತಿ ಮಾಡಿದ ಮಹಿಳಾ ಸಾಹಿತಿಗಳು ಹೀಗೆ ಸಾಮಾಜಿಕ, ಸಾಂಸ್ಕ್ರತಿಕ , ಧಾರ್ಮಿಕ ಔದ್ಯೋಗಿಕ ಹಾಗು ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ದೇಶದ ಅಭಿವೃದ್ಧಿಯ ಪಥದಲ್ಲಿ ಸಾಗಿದವರು ಅನೇಕರು.ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಾಷ್ಟ್ರಪತಿ ದ್ರೌಪದಿ‌ ಮುರ್ಮು ಇವರು ದೇಶದ ಸ್ತ್ರೀಯರಿಗೆ ಮಹಿಳಾಶಕ್ತಿಗೆ ಮಾದರಿಯಾದವರು.

.ಇಂದಿನ ಮಕ್ಕಳು ನಾವು ಏನು ಹೇಳಿದ್ದೇವೋ ಅದನ್ನು ಅನುಕರಣೆ ಮಾಡುವುದಕ್ಕಿಂತ ಹೆಚ್ಚಾಗಿ ನಾವು ಏನು‌ ಮಾಡುತ್ತೇವೋ ಅದನ್ನು ಅನುಕರಿಸುವುದನ್ನು ನಾವೆಲ್ಲಾ ಈಗಾಗಲೇ ಕಂಡುಕೊಂಡಿದ್ದೇವೆ. ನೂಲಿನಂತೆ ಸೀರೆ ತಾಯಿಯಂತೆ ಮಗಳು ಅಂದರೆ  ಮಕ್ಕಳು ಎಂದು ಹಾಗಾಗಿ ನಾವು ಮನೆಯ ಗೃಹಿಣಿ ಗೃಹ ಲಕ್ಷ್ಮಿ  ಮೊದಲು ದೇಶಪ್ರೇಮಿಗಳಾಗಿ, ನಮ್ಮ ಆಚಾರ ವಿಚಾರ, ಸಂಸ್ಕ್ರತಿ ಸಂಪ್ರದಾಯಗಳಿಗೆ ಪ್ರಾಮುಖ್ಯತೆ ನೀಡೋಣ, ಭಾರತ ಮಾತೆಯನ್ನು ಗೌರವಿಸೋಣ, ತಾಯಿ ಭಾರತಿಯ ರಕ್ಷಣೆಗೆ ಕಟಿ ಬದ್ಧರಾಗೋಣ, ಆದಷ್ಟು ನಮ್ಮ ಮಕ್ಕಳಲ್ಲಿ  ಎಳವೆಯಿಂದಲೇ ದೇಶ ಪ್ರೇಮ ಜಾಗೃತ ಗೊಳಿಸೋಣ, ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆಯ ಹಣತೆಯ ಬೆಳಗೋಣ. ವಸುದೈವ ಕುಟುಂಬದ ಕಲ್ಪನೆಯನ್ನು ಸಾಕಾರಗೊಳಿಸೋಣ. ಸಮೃದ್ಧ ಸಮರ್ಥ ಸದೃಢ ಸಮಗ್ರ ಭಾರತದ ನಿರ್ಮಾಣಕ್ಜೆ ನಾಂದಿ ಹಾಡೋಣ ಎಂದು ಆಶಿಸುತ್ತಾ ಸ್ತ್ರೀ ಅಂದರೆ ಕುಟುಂಬದ ಆಧಾರ ಸ್ತಂಭವಾಗಿ ದೇಶದ ಅಭಿವೃದ್ಧಿಗೆ ಪೂರಕವಾಗಿ ಜಗತ್ತಿಗೇ ಜಯಮಾಲೆಯಾದವಳು ಎಂಬ ಮಾತನ್ನು ಸಾರ್ಥಕ ಪಡಿಸೋಣ .
~ಪೂರ್ಣಿಮಾ ಜನಾರ್ದನ್

~~~~~~~~~~~~~~~~~~~~~~~~~~~~~~~~~

 

 
 
 
 
 
 
 
 
 
 
 

Leave a Reply