ಬಸವರಾಜ ಬೊಮ್ಮಾಯಿ ಕರ್ನಾಟಕ ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಬಸವರಾಜ ಬೊಮ್ಮಾಯಿ ಕರ್ನಾಟಕ ರಾಜ್ಯದ 30ನೇ ನೂತನ ಮುಖ್ಯಮಂತ್ರಿಯಾಗಿ ಬೆಂಗಳೂರಿನ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬಸವರಾಜ ಬೊಮ್ಮಾಯಿಯವರಿಗೆ ಪ್ರಮಾಣ ವಚನ ಭೋದಿಸಿದ್ದಾರೆ. ಈ ಸಮಾರಂಭಕ್ಕೆ ಬಸವರಾಜ ಬೊಮ್ಮಾಯಿ ಕುಟುಂಬಸ್ಥರಾದ ಪತ್ನಿ ಚನ್ನಮ್ಮ, ಪುತ್ರ ಭರತ್, ಪುತ್ರಿ ಆದಿತಿ ಸಾಕ್ಷಿಯಾಗಿದ್ದಾರೆ.

ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಚಿವ ಅರ್. ವಿ. ದೇಶಪಾಂಡೆ, ಸೇರಿದಂತೆ ಹಿಂದಿನ ಸಚಿವ ಸಂಪುಟದ ಬಹುತೇಕ ಸಚಿವರು, ಅನೇಕ ಬಿಜೆಪಿ ಶಾಸಕರು, ಬಿಜೆಪಿ ಮುಖಂಡರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಇನ್ನು ರಾಜ ಭವನದ ಹೊರಗೆ ಬೆಂಬಲಿಗರು, ಕಾರ್ಯಕರ್ತರು ಘೋಷಣೆ ಕೂಗಿ ಶುಭ ಹಾರೈಸಿದ್ದಾರೆ. ಮತ್ತೊಂದು ಕಡೆ ಹುಬ್ಬಳ್ಳಿಯ ಮಾರುತಿ ದೇವಾಲಯದಲ್ಲಿ ಬೊಮ್ಮಾಯಿ ಸಹೋದರಿ ಉಮಾ ಪಾಟೀಲ್‌ ಬೊಮ್ಮಾಯಿ ಹೆಸರಿನಲ್ಲಿ ವಿಶೇಷ ಪೂಜೆ, ಅರ್ಚನೆ ಮಾಡಿಸಿ ಟಿವಿ ಮೂಲಕ ಪ್ರಮಾಣ ವಚನ ಕಾರ್ಯಕ್ರಮ ವೀಕ್ಷಿಸಿದ್ದಾರೆ.

ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಅನೇಕ ಗಣ್ಯರಿಂದ ನೂತನ ಮುಖ್ಯಮಂತ್ರಿ ಬೊಮ್ಮಾಯಿ ಶುಭಾಶಯಗಳನ್ನು ಸ್ವೀಕರಿಸಿದರು. ಆ ಬಳಿಕ ವಿಧಾನಸೌಧದತ್ತ ತೆರಳಿದ ಬಸವರಾಜ ಬೊಮ್ಮಾಯಿ ಅವರು ಅಲ್ಲಿ 3ನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕೊಠಡಿಗೆ ಪ್ರವೇಶ ಮಾಡಲಿದ್ದಾರೆ. CM ಕೊಠಡಿ ಪ್ರವೇಶಿಸಿದ ಬಳಿಕ ನೂತನ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ರವಿಕುಮಾರ್ ನೇತೃತ್ವದಲ್ಲಿ ಔಪಚಾರಿಕ ಸಂಪುಟ ಸಭೆ ನಡೆಸಲಿದ್ದಾರೆ. ಸಂಪುಟ ಸಭೆ ಬಳಿಕ ಉನ್ನತ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ.

 
 
 
 
 
 
 
 
 
 
 

Leave a Reply