ವ್ಯಕ್ತಿತ್ವ ವಿಕಸನದ ರಹದಾರಿ ಎನ್.ಎಸ್.ಎಸ್ ಗೂ ಕೊರೊನ ಕಂಟಕ~ರಾಘವೇಂದ್ರ ಜಿ.ಜಿ

ನಿಮ್ಮ ಜೀವನದಲ್ಲಿ ಯಾವ ವರ್ಷ ಡಿಲಿಟ್ ಮಾಡುವಿರಿ ಎಂಬ ಪ್ರಶ್ನೆ ಯಾರಾದ್ರೂ ಕೇಳಿದ್ರೆ ಎಲ್ಲಾ ಸರಿ ಸುಮಾರಾಗಿ ಹೇಳೋ ಮಾತು ಆಪತ್ತು-ವಿಪತ್ತುಗಳಿಂದ ಕೂಡಿದ್ದ ಈ ಇಪ್ಪತ್ತು-ಇಪ್ಪತ್ತು(2020) ವರ್ಷ ಎಂದು. ಕಾರಣ ನಿಮಗೆ ತಿಳಿದೇ ಇದೆ ಈ ವರ್ಷ ಯಾರಿಗೆ ಮಾರಕ-ಪೂರಕ ಎಂದು ನಾ ಹೇಳಲು ಹೊರಟಿಲ್ಲ, ಆದರೆ ಇದು ವಿದ್ಯಾರ್ಥಿಗಳ ನೆಲೆಯಲ್ಲಿ ಯೋಚಿಸುವುದಾದರೆ ಅವರ ಜೀವಮಾನದ ಸುಖ, ಸಂತೋಷದ ಮತ್ತು ಸಂತಸದ ಕ್ಷಣ ಒಂದೊಮ್ಮೆ ಕಸಿದುಕೊಂಡಿದೆ ಎಂದು ಇಲ್ಲಿ ನೂರಕ್ಕೆ ನೂರರಷ್ಟು ತಿಳಿಸಬಹುದು.

ಕಾರಣ ನಾನೊಬ್ಬ ಪದವಿ ಕಾಲೇಜಿನ ಉಪನ್ಯಾಸಕನಾಗಿ ಹೇಳೋದಾದರೆ ಈ ಮೂರು ವರ್ಷಗಳ ಪದವಿ ವ್ಯಾಸಂಗ ಹೇಗೆ ಎಂಟು, ಒಂಬತ್ತು, ಹತ್ತನೇ ತರಗತಿ ಹೈಸ್ಕೂಲ್ ಲಿ ಇರುತ್ತೋ ಹಾಗೆ, ಕಾರಣ ಆ ಪ್ರೌಢಾವಸ್ಥೆಯಲ್ಲಿ ನಮ್ಮ ಮನಸಿನ ಭಾವನೆಗೆ ತಕ್ಕಂತೆ ತಿಳಿಸೋ ಅಧ್ಯಾಪಕರುಗಳು ಇರೋವಾಗ, ಈ ಪದವಿಯ ಮೂರು ವರ್ಷ ಅದೇ ವಿದ್ಯಾರ್ಥಿಗಳ ‘ವ್ಯಕ್ತಿತ್ವ ವಿಕಸನ’ ಮಾಡಲು ಅವಕಾಶಗಳನ್ನು ನೀಡಿ ಪ್ರೋತ್ಸಾಹನೀಡುವ ಉಪನ್ಯಾಸಕರು ಇರುತ್ತಾರೆ.

ಕೇವಲ ಐವತ್ತು ಅಂಕಗಳಿಗೆ ಮಾತ್ರ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳ ಒಂದು ಭಾಗವಾಗಿನಿಲ್ಲದೆ ನಮ್ಮ ಸರ್ವಾಂಗೀಣ ಅಭಿವೃದ್ಧಿಗೆ ಈ ರಾಷ್ಟ್ರೀಯ ಸೇವಾ ಯೋಜನೆ ಎಂಬ ನ್ಯಾಷನಲ್ ಸರ್ವಿಸ್ ಸ್ಕೀಮ್ ವಿದ್ಯಾರ್ಥಿಗಳ ಆಂತರಿಕ ಶಕ್ತಿಯನ್ನು ಗುರುತಿಸಿ, ಪೋಷಿಸಿ, ಹಾರೈಸುವ ಕೆಲಸವನ್ನು ಮಾಡುತ್ತದೆ.

ಎಲ್ಲಾ ವಿದ್ಯಾರ್ಥಿಗಳೂ ಎನ್.ಎಸ್.ಎಸ್ ಸೇರುವುದಿಲ್ಲ ಆದರೆ ಎನ್.ಎಸ್.ಎಸ್ ಸೇರಿದ ಎಲ್ಲಾ ವಿದ್ಯಾರ್ಥಿಗಳು ಒಂದೇ ತರವಾಗಿ ರೂಪಿತರಾಗಿ ಅವರ ಮುಂದಿನ ಭವಿಷ್ಯ ನಿರ್ಮಾಣಕ್ಕೆ ಪೂರಕವಾಗುವ ರೀತಿಯಲ್ಲಿ ಎನ್.ಎಸ್.ಎಸ್ ಅವರನ್ನ ಆ ಮಟ್ಟಕ್ಕೆ ಬೆಳೆಯುವಂತೆ ಮಾಡುತ್ತದೆ.

ಸರಿ ಹಾಗಾದ್ರೆ ನಾನು ಎನ್.ಎಸ್.ಎಸ್ ಶಿಬಿರಗಳ ಬಗ್ಗೆ ಹೇಳಲೇಬೇಕು ಕಾರಣ ನಾನು ಒಬ್ಬ ಎನ್.ಎಸ್.ಎಸ್ ಸ್ವಯಂ ಸೇವಕ ಆದ್ದರಿಂದ ನನ್ನ ಮಾತಿನ ಮತ್ತು ಬರವಣಿಗೆಯ ಕಲೆ ರೂಪುಗೊಂಡಿದ್ದು ಇದೇ ಶಿಬಿರದಿಂದ ಅದು ಶಿಬಿರಾಧಿಕಾರಿಗಳಾದ ರಾಜಾರಾಮ್ ಸರ್ ಮತ್ತು ವಸುಮತಿ ಮೇಡಂ ಕೊಟ್ಟ ಅವಕಾಶಗಳಿಂದ, ಅದು ಆ ಕಾಲದ ಹತ್ತುದಿನಗಳ ಕ್ಯಾಂಪ್ ಅಂದ್ರೆ ಒಮ್ಮೆಲೆ ಕಳೆದೇ ಹೋಗುತ್ತೇವೆ ಅಷ್ಟು ಸೊಗಸಾದ ಸುಂದರ ನೆನಪು ಮಾಡಿದ ಶ್ರಮದ ತ್ಯಾಗ ‘ನನಗಲ್ಲ ನಿನಗೆ’ ಎಂಬಂತೆ ಆ ದಿನಗಳು ಇಂದಿಗೂ ಮನದಲ್ಲಿದೆ‌.

ಹಾಗೆಯೇ ಈಗಲೂ ಅಂದರೆ ನಮ್ಮ ಕಾಲೇಜಿನ ಕಳೆದ ಸಾಲಿನ ಕ್ಯಾಂಪ್ 2019-20 ಸಾಲಿನದ್ದು ಮೂಡು ಬೆಟ್ಟು ಶಾಲೆಯ ಪರಿಸರದಲ್ಲಿ ನಡೆದಿತ್ತು, ಹೀಗೆ ಪ್ರತೀ ವರ್ಷವೂ ಕ್ಯಾಂಪ್ ಯಶಸ್ವಿಯಾಗಿ ನಡೆಯಲು ವಿಶ್ವವಿದ್ಯಾಲಯ, ಕಾಲೇಜು ಆಡಳಿತ ಮಂಡಳಿಯ ಸಹಕಾರ, ಪ್ರಾಚಾರ್ಯರ ಮಾರ್ಗದರ್ಶನ, ಸಹೋದ್ಯೋಗಿ ಗಳ ಮತ್ತು ಊರಿನ ಸಹಕಾರ, ದಾನಿಗಳ ಸಹಕಾರ, ಶ್ರೀ ಕೃಷ್ಣಮಠದ ಸಹಕಾರ, ಅಂಬಲಪಾಡಿ ಮತ್ತು ಕಡಿಯಾಳಿ ದೇವಸ್ಥಾನದ ಸಹಕಾರ ಹೀಗೆ ಒಂದಷ್ಟು ಹಿತೈಷಿಗಳ ಸಹಕಾರ ಅಂದರೆ ತನು-ಮನ-ಧನದ ರೂಪದಲ್ಲಿ ಆಯಾಯಾ ಊರಿಗೆ ಏಳು ದಿನಗಳ ಕಾಲ ವ್ಯಕ್ತಿತ್ವ ವಿಕಸನದ ಜೊತೆಜೊತೆಗೆ ಒಂದಷ್ಟು ಶ್ರಮದಾನ, ಸ್ವಚ್ಚತಾ ಅರಿವು, ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಬಂದಿರುವ ಕಾಲೇಜಿನ ವಿದ್ಯಾರ್ಥಿಗಳನ್ನು ಬರ ಮಾಡಿಕೊಳ್ಳುವುದರಿಂದ ಹಿಡಿದು ಬೀಳ್ಕೊಡುಗೆ ತನಕ ನಿಗವಹಿಸುವ ಊರಿನ ಜನತೆ ಮತ್ತು ಶಿಬಿರಾಧಿಕಾರಿಗಳ ಜವಾಬ್ದಾರಿ ಅಷ್ಟಿಷ್ಟಲ್ಲ.

ಎನ್.ಎಸ್.ಎಸ್ ಏನು ಕಲಿಸುತ್ತದೆ ಎಂದು ಅನಿಸೋರಿಗೆ ಅದೊಂದು ಜೀವನದ ಕಲೆ, ಕೂಡಿ ಬಾಳುವಿಕೆ, ನಿಸ್ವಾರ್ಥ ಸೇವೆ, ಪರಸ್ಪರ ಹಂಚಿಕೊಳ್ಳುವಿಕೆ, ಸಹಕಾರ, ಸಹ ಭೋಜನ, ಮಾತಿನ ಕಲೆ, ಸಭಾ ಕಂಪನದಿಂದ ಮುಕ್ತಿ, ಅಭಿನಯ ಕಲೆ, ಹಾಡುಗಾರಿಕೆ, ನಿರ್ದೇಶನ, ನಾಯಕತ್ವಗುಣಗಳನ್ನು ಸಹ ಪರಿಚಯಿಸುತ್ತದೆ, ಕ್ಯಾಂಪ್ ನ ಮೊದಲು ಮತ್ತು ನಂತರ ಒಬ್ಬೊಬ್ಬ ವಿದ್ಯಾರ್ಥಿಯ ಸ್ವಂತ ಅನುಭವವನ್ನು ಕೇಳೋವಾಗ ಹೇಳೊ ಮಾತು ಈ ತರದ ಹೊಸ ಅನುಭವ ಸದಾ ನೆನಪಿನಲ್ಲಿ ಉಳಿಯುತ್ತದೆ, ಏಳುದಿನ ಸಾಕಾಗೋಲ್ಲ ದಯವಿಟ್ಟು ಮತ್ತೆರೆಡುದಿನ ಮುಂದುವರಿಸಿ ಎಂಬುದಾಗಿ.

ಹೀಗಿರುವಾಗ ಏನು ಕೋವಿಡ್-19 ಎಂಬ ಮಾರಿ ಈ ವರ್ಷದ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದ್ದು ಈ ಎನ್.ಎಸ್.ಎಸ್ ಕ್ಯಾಂಪ್ ಗೆ ಕೊಡಲಿ ಏಟನ್ನು ನೀಡಿದೆ, ಈ ಡಿಸೆಂಬರ್ ತಿಂಗಳು ಎಂದರೆ ಎಲ್ಲಾ ಪೇಪರ್ ಗಳಲ್ಲು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನೆ, ಸಮಾರೋಪದ ವಿಷಯಗಳೇ ಇರ್ತಾ ಇತ್ತು ಆದರೆ ಈ ವರ್ಷ ತುಂಬಾ ನೀರಸವಾಗಿ ಪರಿಣಮಿಸಿ ಈ ಮಹಾಮಾರಿಯಿಂದ ಎಲ್ಲಾವರ್ಗಕ್ಕೂ ತೊಡಕು ಆಗಿದ್ದು ಒಂದೆಡೆಯಾದರೆ, ಪಾಪ ವಿದ್ಯಾರ್ಥಿಗಳ ಗೋಲ್ಡನ್ ಲೈಫ್ ಎನ್ನುವ ಈ ಸಮಯಕ್ಕೆ ಮಹಾಕಂಟಕವಾಗಿದ್ದಂತೂ ಖಂಡಿತ, ಇವಕ್ಕೆಲ್ಲ ಎಂದು ಕೊನೆ..?!

ಶ್ರಮದಿಂದ ವಿದ್ಯೆ, ಶ್ರಮದಿಂದ ವಿನಯ, ಶ್ರಮದಿಂದ ಜಯ, ಶ್ರಮದಿಂದ ಗುಣ, ಶ್ರಮದಿಂದ ನಿರ್ಭಯ, ಶ್ರಮದಿಂದ ಸಕಲಸಂಪದವು… ಶ್ರಮ ಏವ ಜಯತೇ..

 
 
 
 
 
 
 
 
 
 
 

Leave a Reply